ಕಳೆದ ವರ್ಷ ಅನಾವೃಷ್ಟಿಯಿಂದ ತೀವ್ರ ತೊಂದರೆ ಅನುಭವಿಸಿದ್ದ ರಾಜ್ಯದ ಜನತೆ ಈಗ ಅತಿವೃಷ್ಟಿಯಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹವು ಸೃಷ್ಟಿಸಿರುವ ಹಾನಿ ಪ್ರಮಾಣ ಅಗಾಧ. ಅಲ್ಲದೆ, ಗುಡ್ಡಜರಿತ, ಮನೆಕುಸಿತ, ಜಮೀನುಗಳಿಗೆ ಮಳೆ ನೀರು ನುಗ್ಗಿ ಆಗಿರುವ ಅನಾಹುತಗಳು ಸಾಕಷ್ಟಿವೆ. ಈ ಬಗ್ಗೆ ಕೂಡಲೇ ಗಮನ ಹರಿಸಿ ಜನರ ತಾಪತ್ರಯಗಳಿಗೆ ನೇರವಾಗಿ ಸ್ಪಂದಿಸಬೇಕಾಗಿದ್ದ ಜನಪ್ರತಿನಿಧಿಗಳು ರಾಜಕೀಯ ಕಾರಣಗಳಿಗಾಗಿ ಆಯೋಜಿಸಿರುವ ಪಾದಯಾತ್ರೆ ಮತ್ತು ಜನಾಂದೋಲನಗಳಲ್ಲಿ ತೊಡಗಿಕೊಂಡು, ನೈಜ ಸಮಸ್ಯೆಗಳನ್ನು ಮರೆತಿದ್ದಾರೆ. ಇದಕ್ಕೆ ಆಡಳಿತ ಪಕ್ಷ-ವಿರೋಧ ಪಕ್ಷ ಎಂಬ ಭೇದವಿಲ್ಲ. ಎಲ್ಲ ಚುನಾಯಿತ ಜನಪ್ರತಿನಿಧಿಗಳೂ ತಮ್ಮ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆಯೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಪ್ರತಿಪಕ್ಷಗಳ ಜನಪ್ರತಿನಿಧಿಗಳು ಪಾದಯಾತ್ರೆಯ ನೆಪದಲ್ಲಿ ಸರ್ಕಾರದ ವಿರುದ್ಧ ಟೀಕೆಟಿಪ್ಪಣಿಯಲ್ಲಿ ತೊಡಗಿದ್ದರೆ, ಹಲವು ಸಚಿವರು ಜನಾಂದೋಲನ ಯಾತ್ರೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ಮುಗಿಬಿದ್ದಿದ್ದಾರೆ. ಈ ರಾಜಕೀಯ ಆಟಾಟೋಪದ ನಡುವೆ ಜನರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?
ಮೊದಲೆಲ್ಲ ರಾಜಕೀಯ ಚಟುವಟಿಕೆಗಳು, ಆರೋಪ- ಪ್ರತ್ಯಾರೋಪಗಳು ಚುನಾವಣೆಯ ಹೊತ್ತಿನಲ್ಲಿ ಮಾತ್ರ ತೀವ್ರ ಸ್ವರೂಪದಲ್ಲಿ ಇರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿದ್ಯಮಾನವನ್ನು ರಾಜಕೀಯ ಲಾಭದ ದೃಷ್ಟಿಯಿಂದ ನೋಡುವ ಕೆಟ್ಟ ಚಾಳಿ ಬೆಳೆದಿದೆ. ಗಂಭೀರ ವಿಷಯ, ಘಟನೆಯ ಬಗ್ಗೆಯೂ ಆಡಳಿತ ಪಕ್ಷ, ಪ್ರತಿಪಕ್ಷಗಳು ಪರಸ್ಪರ ಟೀಕೆಯಲ್ಲಿ ತೊಡಗುತ್ತವೆಯೇ ಹೊರತು ಪರಿಹಾರದ ದಾರಿಗಳನ್ನು ಶೋಧಿಸುವುದಿಲ್ಲ. ‘ಜನರ ಆಶೋತ್ತರಗಳಿಗೆ ಸ್ಪಂದಿಸುತ್ತೇವೆ. ಶ್ರೀಸಾಮಾನ್ಯರ ಜೀವನಸ್ತರವನ್ನು ಉನ್ನತೀಕರಿಸುತ್ತೇವೆ’ ಎಂದೆಲ್ಲ ಆಶ್ವಾಸನೆ ನೀಡಿ, ಗೆದ್ದುಬಂದ ಜನಪ್ರತಿನಿಧಿಗಳ ಪೈಕಿ ಎಷ್ಟು ಜನರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ? ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ? ಶೀಘ್ರ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಿದ್ದಾರಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನಿರಾಶಾಜನಕವಾಗಿದೆ ಎಂಬುದನ್ನು ಬೇಸರದಿಂದಲೇ ಹೇಳಬೇಕಾಗಿ ಬಂದಿದೆ.
ಸಚಿವರು ಮತ್ತು ಶಾಸಕರು ಈ ರೀತಿ ವರ್ತಿಸಿದರೆ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸಹಜವಾಗಿಯೇ ಸಾರ್ವಜನಿಕ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ರಾಜಕೀಯ ಮೇಲಾಟಗಳ ಮಧ್ಯೆ ಕಾರ್ಯಾಂಗ ನಿಷ್ಕ್ರಿಯವಾದರೆ ಸಾರ್ವಜನಿಕರ ದೈನಂದಿನ ಕೆಲಸಕಾರ್ಯಗಳಿಗೆ ಅಡ್ಡಿಯುಂಟಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಈ ಮಧ್ಯೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಒಂದು ತಿಂಗಳಲ್ಲಿ ಎಲ್ಲ ಬಾಕಿ ಕಡತಗಳನ್ನು ವಿಲೇವಾರಿ ಮಾಡುವಂತೆ ಸರ್ಕಾರಿ ಉದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ನಿಕಟವಾದ ನಿಗಾ ಇದ್ದರೆ ಮಾತ್ರ ಜನರ ಕೆಲಸಗಳು ತ್ವರಿತವಾಗಿ ಆಗಲು ಸಾಧ್ಯ ಎಂಬುದನ್ನು ಎಲ್ಲ ಜನಪ್ರತಿನಿಧಿಗಳು ಅರಿತುಕೊಳ್ಳುವುದು ಒಳಿತು. ಪ್ರವಾಹದ ಸಂಕಷ್ಟದ ಸಮಯದಲ್ಲಾದರೂ ರಾಜಕೀಯ ಮಹತ್ವಾಕಾಂಕ್ಷೆಯನ್ನು ಬದಿಗಿರಿಸಿ, ಜನರ ಸಮಸ್ಯೆಗಳನ್ನು ಪರಿಹರಿಸಲು, ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಜನಪ್ರತಿನಿಧಿಗಳು ಸ್ವಕ್ಷೇತ್ರದತ್ತ ಧಾವಿಸಲಿ.
ಸಿದ್ದರಾಮಯ್ಯ ಭಾವುಕ ವ್ಯಕ್ತಿ, ಸುಳ್ಳು ಆರೋಪ ಮಾನಸಿಕ ಹಿಂಸೆಯಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
