ಬೆಂಗಳೂರು:ಪತಿ-ಪತ್ನಿ ಪ್ರಕರಣಗಳಲ್ಲಿ ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಲೋಕಸಭೆ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನವೇ ಅರ್ಹ ಪೊಲೀಸರ ವರ್ಗಾವಣೆ ಪ್ರಸ್ತಾವನೆಗಳ ಬಗ್ಗೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದೆ. ಈ ಬಾರಿ ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ ಲಿಖಿತ ರೂಪದಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್​ಗೆ ಸೂಚನೆ ಕೊಟ್ಟಿರುವುದರಿಂದ ಅಂತರ್ ಜಿಲ್ಲಾ ವರ್ಗಾವಣೆ ಭಾಗ್ಯ ‘ಗ್ಯಾರಂಟಿ’ ಸಿಗಲಿದೆ ಎಂಬ ಆಶಾಭಾವನೆ ಪೊಲೀಸರಲ್ಲಿ ಮೂಡಿದೆ.
ವರ್ಗಾವಣೆ ಮಾಡುವುದಾಗಿ ಪದೇಪದೆ ಭರವಸೆ ಕೊಟ್ಟು ‘ಕೈ’ ಕೊಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪೊಲೀಸ್ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ವರ್ಗಾವಣೆ ಮಾಡಿ ಇಲ್ಲವೇ ದಯಾಮರಣ ಕೊಡಿ ಎಂದು ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿದ್ದ ಸಿಬ್ಬಂದಿ, ಸಹಿ ಸಂಗ್ರಹ ಆರಂಭಿಸಿದ್ದರು. ಈ ಬಗ್ಗೆ ಶುಕ್ರವಾರ (ಫೆ.23) ವಿಜಯವಾಣಿ ಮುಖಪುಟದಲ್ಲಿ ‘ಭುಗಿಲೆದ್ದ ಪೊಲೀಸರ ಆಕ್ರೋಶ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಒಟ್ಟಿಗೆ ಬಾಳಲಾಗದೆ ದಂಪತಿ ಅನುಭವಿಸುತ್ತಿರುವ ಕಷ್ಟಗಳ ಕುರಿತು ಅವರ ಮಾತುಗಳಲ್ಲೇ ವಿವರಿಸಲಾಗಿತ್ತು. ವಿಜಯವಾಣಿ ವರದಿ ಸಂಚಲನ ಮೂಡಿಸಿತ್ತು. ದಯಾಮರಣ ಕೋರಿ ಪತ್ರ ಬರೆಯಲು ಪೊಲೀಸರು ಸಿದ್ಧತೆ ನಡೆಸಿರುವುದು ಗಂಭೀರವಾಗಿರುವುದರಿಂದ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಎಚ್ಚೆತ್ತುಕೊಂಡು ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆಗೆ ಕ್ರಮ ತೆಗೆದುಕೊಳ್ಳುವಂತೆ ಡಿಜಿಪಿಗೆ ಸೂಚನೆ ನೀಡಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ವರ್ಗಾವಣೆ ಪ್ರಸ್ತಾವನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಹೇಳಿರುವುದರಿಂದ ಶೀಘ್ರದಲ್ಲೇ ಟ್ರಾನ್ಸ್​ಫರ್ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ.
ಟ್ರಾನ್ಸ್​ಫರ್ ಮಾಡಿದ್ರೆ ಸಮಸ್ಯೆ ಆಗಲ್ಲ:ಪತಿ-ಪತ್ನಿ ಪ್ರಕರಣಗಳಲ್ಲಿ ನಿಯಮದನ್ವಯ ಅರ್ಹತೆಇರುವ 100 ರಿಂದ 150 ಮಂದಿಯಷ್ಟೇ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಡಿಮೆ ಸಿಬ್ಬಂದಿ ಇರುವುದರಿಂದ ವರ್ಗಾವಣೆ ಮಾಡಬಹುದು ಎನ್ನುವುದು ಸಿಬ್ಬಂದಿ ಅಭಿಪ್ರಾಯ.
ಡಿಜಿಪಿಗೆ ಗೃಹ ಸಚಿವರ ಕರೆ:ಡಿಜಿಪಿಗೆ ಗೃಹ ಸಚಿವರ ಕರೆ ಸೋಮವಾರ ಬೆಳಗ್ಗೆ ಡಿಜಿಪಿ ಡಾ. ಅಲೋಕ್ ಮೋಹನ್​ಗೆ ಕರೆ ಮಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರದ ವಿಚಾರ ಪ್ರಸ್ತಾಪಿಸಿದ್ದಾರೆ. ಪೊಲೀಸ್ ದಂಪತಿ ವರ್ಗಾವಣೆ ಪ್ರಕ್ರಿಯೆ ಆದಷ್ಟು ಬೇಗ ಅದನ್ನು ಕ್ಲಿಯರ್ ಮಾಡಿ. ಸುಖಾಸುಮ್ಮನೆ ಆ ವಿಚಾರ ಚರ್ಚೆಯ ಸ್ವರೂಪ ಪಡೆಯುತ್ತಿದೆ ಎಂದು ಹೇಳಿದ್ದಾಗಿ ವಿಶ್ವಸನೀಯ ಮೂಲಗಳು ‘ವಿಜಯವಾಣಿ’ಗೆ ಮಾಹಿತಿ ನೀಡಿವೆ.
545 ಸಬ್​ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಸೇವಾನಿರತ (ಇನ್​ಸರ್ವೀಸ್) ಮೀಸಲಾತಿ ಬಯಸಿರುವ 48 ಸೇವಾನಿರತ ಕಾನ್​ಸ್ಟೆಬಲ್​ಗಳ ವಿಚಾರ ಗೃಹ ಇಲಾಖೆ ಅಂಗಳ ತಲುಪಿದೆ. ಮೀಸಲಾತಿಗಾಗಿ ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಯಾವುದರಡಿ ಪರಿಗಣಿಸಬೇಕು ಎಂಬ ನಿರ್ಧಾರವನ್ನು ಗೃಹ ಇಲಾಖೆಯೇ ತೆಗೆದುಕೊಳ್ಳಲಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನುಣುಚಿಕೊಂಡಿದೆ.
545 ಎಸ್​ಐ ಹುದ್ದೆಗಳ ನೇಮಕಾತಿಗೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಈ ವೇಳೆ ಪ್ರವೇಶಪತ್ರದಲ್ಲಿ ಗೊಂದಲ ಸೃಷ್ಟಿಯಾಗಿ ಸೇವಾನಿರತ ಕಾನ್​ಸ್ಟೆಬಲ್​ಗಳಿಗೆ ಅನ್ಯಾಯವಾಗಿತ್ತು. ಹೀಗಾಗಿ ಮುಂದಿನ 402 ಎಸ್​ಐ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಪರೀಕ್ಷೆ ವೇಳೆ ಇನ್​ಸರ್ವೀಸ್ ಕರೆಪತ್ರ ನೀಡಬೇಕೆಂದು ಅಭ್ಯರ್ಥಿಗಳು ಮನವಿ ಮಾಡಿದ್ದರು. ಈ ಬಗ್ಗೆ ‘ವಿಜಯವಾಣಿ’ ಫೆ.26ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್​ಗೆ ಪತ್ರ ಬರೆದು ಗೊಂದಲ ಸರಿಪಡಿಸಲು ಸೂಚಿಸಿದ್ದರು.
ಗೃಹಸಚಿವರ ಪತ್ರದ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿ ವಿಭಾಗ, ಕೆಇಎಗೆ ಪತ್ರ ಬರೆದು ಪಿಎಸ್​ಐ ನೇಮಕಾತಿಯಲ್ಲಿ ಇನ್​ಸರ್ವೀಸ್ ಅಭ್ಯರ್ಥಿಗಳ ಮಾಹಿತಿ ಕೋರಿತ್ತು. ಈ ಹಿನ್ನೆಲೆಯಲ್ಲಿ ಕೆಇಎ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ 48 ಅಭ್ಯರ್ಥಿಗಳ ಮಾಹಿತಿಯನ್ನು ಗೃಹ ಇಲಾಖೆಗೆ ಕೊಟ್ಟಿದೆ. ಇದರಲ್ಲಿ ಅಭ್ಯರ್ಥಿಯನ್ನು ಯಾವ ಅರ್ಜಿಯ ಅನ್ವಯ ಪರಿಗಣಿಸಬೇಕೆಂಬ ಅಂತಿಮ ನಿರ್ಧಾರವನ್ನು ಗೃಹ ಇಲಾಖೆಗೆ ಬಿಟ್ಟಿದೆ. ಈಗ ಸೇವಾನಿರತ ಅಭ್ಯರ್ಥಿಗಳ ಪ್ರವೇಶಪತ್ರಗಳ ಗೊಂದಲ ಬಗೆಹರಿಸುವ ಜವಾಬ್ದಾರಿ ಪೊಲೀಸ್ ನೇಮಕಾತಿ ವಿಭಾಗದ ಹೆಗಲಿಗೆ ಬಂದಿದೆ.
ಬೇಗ ಪರೀಕ್ಷೆ ಮಾಡಿ: ಮೂರು ವರ್ಷದಿಂದ ಬಾಕಿ ಇರುವ 402 ಎಸ್​ಐ ಹುದ್ದೆಗಳ ನೇಮಕಾತಿಗೆ ಶೀಘ್ರ ಪರೀಕ್ಷೆ ನಡೆಸಬೇಕು. ಎರಡು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇನ್​ಸರ್ವೀಸ್ ಮೀಸಲಿನಡಿಯಲ್ಲಿ ಪ್ರವೇಶಪತ್ರ ನೀಡಬೇಕು ಎಂಬುದು ಕಾನ್​ಸ್ಟೆಬಲ್​ಗಳ ಒತ್ತಾಯ.
ಪರೀಕ್ಷಾ ಪ್ರಾಧಿಕಾರ ಹೇಳೋದೇನು?:ಗೃಹ ಇಲಾಖೆಯಿಂದ ದತ್ತಾಂಶ ಪಡೆಯಲಾಗಿತ್ತು. ಅದರಲ್ಲಿ ಕೆಲವೇ ಅಭ್ಯರ್ಥಿಗಳು ಎರಡು ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಒಂದು ಪರೀಕ್ಷೆಗೆ ಒಂದು ಪ್ರವೇಶಪತ್ರ ಬಿಡುಗಡೆಗಷ್ಟೇ ಅವಕಾಶ ಇದೆ. ಹೀಗಾಗಿ ಒಂದೇ ಪ್ರವೇಶಪತ್ರ ವಿತರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವವರ ಪಟ್ಟಿಯನ್ನು ಕೆಇಎ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಯನ್ನು ಯಾವ ಅರ್ಜಿಯಡಿ ಪರಿಗಣಿಸಬೇಕೆಂಬ ತೀರ್ಮಾನ ಗೃಹ ಇಲಾಖೆಗೆ ಒಳಪಟ್ಟ ವಿಷಯ ವಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಭರವಸೆ ಈಡೇರುತ್ತಾ…?:ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡುವಂತೆ ಗೃಹ ಸಚಿವರ ಮನೆ ಬಾಗಿಲಿಗೆ 30 ಬಾರಿ ಭೇಟಿ ಕೊಟ್ಟು ಮನವಿ ಕೊಟ್ಟಿದೇವೆ. ಪ್ರತಿಬಾರಿಯೂ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. ಆದರೆ, ಮಾಡಿಲ್ಲ. ಈಗ ಕ್ರಮ ತೆಗೆದುಕೊಳ್ಳುವಂತೆ ಡಿಜಿ-ಐಜಿ ಸಾಹೇಬರಿಗೆ ಸೂಚಿಸಿರುವುದು ಗೊತ್ತಾಗಿದೆ. ಭರವಸೆ ಈಡೇರಬಹುದು ಎಂಬ ಆಶಾಭಾವನೆ ಮೂಡಿದ್ದು, ಕಾದು ನೋಡಬೇಕು ಎಂದು ಸಿಬ್ಬಂದಿ ಹೇಳಿದ್ದಾರೆ.
ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸಿಪಿಐ ಅನ್ನಿ ರಾಜಾ ಕಣಕ್ಕೆ: ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
