ಸಾಧ್ಯಪಡದಾರಿಗಂ ನರಭಾಲಪಟ್ಟವನು|ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು||ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ|ಬುದ್ಧಿನುಡಿ ಸೈರಣೆಯೆ-ಮಂಕುತಿಮ್ಮ||633||
ಯಾರಿಗೂ ಹಳೆಯದೆಲ್ಲವನ್ನೂ ತೊಡೆದು ಮನುಷ್ಯನ ಹಣೆಬರೆಹ ವನ್ನು ಶುದ್ಧ ಪಡಿಸಲು ಸಾಧ್ಯವಿಲ್ಲ. ಕರ್ಮಶೇಷದ ಹೊದಿಕೆಯನ್ನು ಹೊದ್ದುಕೊಳ್ಳಲೇಬೇಕು. ಹೀಗೆ ಹೊದ್ದುಕೊಂಡೆ ಅದು ಸವೆಯಬೇಕು, ಹರಿಯಬೇಕು. ಅಲ್ಲಿಯವರೆಗೆ ಸಂಯಮದಿಂದ ಇರಬೇಕು ಎನ್ನುವುದೆ ಬುದ್ಧಿಮಾತು ಎನ್ನುತ್ತದೆ ಈ ಕಗ್ಗ.
ಪ್ರತಿಯೊಬ್ಬರೂ ಸುಖ-ನೆಮ್ಮದಿಯಿಂದ ಬದುಕಲು ಹಂಬಲಿಸು ತ್ತಾರೆ. ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಸುಖ- ದುಃಖಗಳು ಬಿಸಿಲು- ನೆರಳಿನ ಹಾಗೆ ಬಂದು ಹೋಗುತ್ತಿರುತ್ತವೆ. ಮನುಷ್ಯ ಮನಸ್ಸು ಶೋಕವನ್ನು ಮತ್ತೆಮತ್ತೆ ಮೆಲುಕು ಹಾಕುತ್ತಾ ಸುಖದ ಸಂದರ್ಭಗಳನ್ನು ಗಮನಿಸದೆಯೇ ಉಳಿಯುತ್ತದೆ. ಹೀಗೆ ಭಾವವಶವಾಗುವ ಮನಸ್ಸನ್ನು ಇನ್ನಷ್ಟೂ ಹದಗೆಡಿಸುವ ಘಟನೆಗಳೂ ಬಾಳಿನಲ್ಲಿ ಘಟಿಸುವುದಿದೆ. ಸತ್ಯ ಮತ್ತು ಪ್ರಾಮಾಣಿಕತೆಯಿಂದಿದ್ದರೂ ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಅಪವಾದಕ್ಕೆ ಈಡಾಗುವುದು, ಸುಖವಾಗಿ ಬದುಕಬಹುದಾಗಿದ್ದ ಕುಟುಂಬದಲ್ಲಿ ಒಬ್ಬ ವ್ಯಕ್ತಿಯಿಂದಾಗಿ ಎಲ್ಲರೂ ನೋವನ್ನನುಭವಿಸುವುದು, ಆರೋಗ್ಯದ ಬಗೆಗೆ ನಿಗಾ ವಹಿಸಿದ್ದರೂ ವಾಸಿಯಾಗದ ಖಾಯಿಲೆಗೆ ತುತ್ತಾಗುವುದು ಹೀಗೆ ಹತ್ತು ಹಲವು ಅನಿರೀಕ್ಷಿತ ಆಘಾತಗಳು, ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದ ಸಂದರ್ಭಗಳು ಬದುಕಿನಲ್ಲಿ ಸಂಭವಿಸುತ್ತವೆ. ಬಗೆದಂತಿಲ್ಲದ ಬದುಕಿನಲ್ಲಿ ಮನುಷ್ಯ ಪ್ರಯತ್ನವನ್ನೂ ಮೀರಿ ಏನೇನೋ ನಡೆಯುತ್ತವೆ. ಭಾವ-ಬುದ್ಧಿಗಳನ್ನು ಉಪಯೋಗಿಸಿ ಅದ್ವಿತೀಯವಾದ ಸಾಧನೆಗಳನ್ನುಮಾಡಬಲ್ಲ ಧೀಮಂತನಾದ ಮನುಜನ ಜೀವನವು ಮಾತ್ರ ಅವನ ಅಧೀನದಲ್ಲಿಲ್ಲ. ಅವನ ಸಾಧನೆಗಳ ಹಿಂದಿನ ನಿರ್ಣಯವು ಅವನದೊಬ್ಬನದೆ ಅಲ್ಲ.
ಪ್ರಕೃತಿಯಲ್ಲಿರುವ ಪ್ರತಿಯೊಂದು ಪ್ರಾಣಿಯೂ ದೇಹ ಮತ್ತು ಆತ್ಮ ಎಂಬ ಎರಡು ಅಂಶಗಳನ್ನು ಪಡೆದಿದೆ. ಜಡವಾದ ದೇಹದೊಳಗೆ ಚೈತನ್ಯ ಸ್ವರೂಪವಾದ ಆತ್ಮವಿದೆ. ಮನುಷ್ಯನಾದರೋ ಬೇರೆಬೇರೆ ಅಂಗಾಗಗಳು, ಬುದ್ಧಿ, ಮನಸ್ಸು ಮುಂತಾದವುಗಳೊಂದಿಗೆ ಜನುಮ
ಜನುಮಾನಂತರಗಳಿಂದ ಹೊತ್ತೊಯ್ಯುತ್ತಿರುವ ಪೂರ್ವಾರ್ಜಿತ ಕರ್ಮದೋಷಗಳು, ಋಣಶೇಷಗಳ ಒಟ್ಟು ರೂಪವೇ ಆಗಿದ್ದಾನೆ. ಆತನಲ್ಲಿ ನಿಲದುಕ್ಕುವ ಆಸೆಯ ಬುಗ್ಗೆಯಿದೆ, ಕಾಮ, ಕ್ರೋಧ, ಮೋಹಗಳೆಂಬ ಆರುಬಗೆಯ ಹಗೆಗಳು ಸದ್ದಿಲ್ಲದೆ ಬುಸುಗುಡುತ್ತಿರುತ್ತವೆ, ಸತ್ತ್ವ, ರಜೋ, ತಮೋ ಗುಣಗಳೆಂಬ ನಿಸರ್ಗದತ್ತ ತ್ರಿಗುಣಗಳ ಮೇಲಾಟವಿದೆ. ಇಷ್ಟಲ್ಲದೆ ಪ್ರಕೃತಿಯು ಹಲವು ಬಗೆಯ ಆಕರ್ಷಣೆಗಳನ್ನು ಎದುರಿಗಿಟ್ಟು ಮರುಳುಗೊಳಿಸುವ, ದುರ್ಬಲನನ್ನಾಗಿಸುವ ಯತ್ನವನ್ನು ಸದಾ ಮಾಡುತ್ತಿರುತ್ತದೆ. ವ್ಯಕ್ತಿ ಇರುವ ಪರಿಸರ, ಅವನು ಪಡೆದ ಜ್ಞಾನ ಮುಂತಾದವು ಕೂಡಾ ಮನುಷ್ಯನ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತವೆ. ಇವೆಲ್ಲವನ್ನೂ ನಿಭಾಯಿಸುತ್ತಾ ಮನುಷ್ಯನು ಸುಖ ಜೀವನವನ್ನು ಹೊಂದಲು ಪ್ರಯತ್ನಿಸುತ್ತಿರುತ್ತಾನೆ. ವ್ಯಕ್ತಿಯು ಲೌಕಿಕ ಬದುಕಿನ ಯಶಸ್ಸಿಗಾಗಿ ಪ್ರಯತ್ನಶೀಲ ನಾಗಬಹುದೆ ಹೊರತು ತಾನು ಬಯಸಿದಂತೆಯೇ ಬದುಕಲು ಸಾಧ್ಯವಿಲ್ಲ. ನಿಯಾಮಕ ಶಕ್ತಿಯು ವಿಧಿಸಿ ದಂತೆಯೇ ಬದುಕಿನ ಗತಿ. ಮನುಜನ ಲಲಾಟದಲ್ಲಿ ವಿಧಿಯು ಬರೆದ
ಲಿಖಿತವನ್ನು ಓದಲು, ತಿದ್ದಲು ಅಥವಾ ಅಳಿಸಲು ಸಾಧ್ಯವಿಲ್ಲ. ಜನುಮ ಜನುಮಗಳಿಂದ ಜೊತೆಗೂಡಿ ಬಂದ ಕರ್ಮದೋಷ, ಋಣ ಶೇಷಗಳಿಗೆ ಅನುಗುಣವಾಗಿ ಜೀವನದ ಸ್ಥಿತಿ-ಗತಿ. ಹೀಗೆ ಸಂಗ್ರಹಿತವಾಗುತ್ತಾ ಬಂದ ಕರ್ಮಶೇಷಗಳು ಸಂಚಿತ ಕರ್ಮಗಳಾಗಿ ಕಾಡುತ್ತವೆ. ಇನ್ನು ಕೆಲವು ತಮ್ಮ ಸರದಿಗಾಗಿ ಕಾಯುತ್ತಿರುವ ಆಗಾಮಿ ಕರ್ಮಗಳಾಗಿರುತ್ತವೆ. ಮತ್ತೊಂದಷ್ಟು ಈಗಾಗಲೆ ಫಲ ಕೊಡುವುದಕ್ಕೆ ತೊಡಗಿರುವ ಪ್ರಾರಬ್ಧ ಕರ್ಮಗಳು. ಮೊಳಕೆ ಬರಲು ನೀರಿನಲ್ಲಿ ನೆನೆಸಿಟ್ಟ ಕಾಳುಗಳೆಲ್ಲವೂ ಒಮ್ಮೆಲೆ ಮೊಳಕೆ ಒಡೆಯುವುದಿಲ್ಲ. ಅಂತೆಯೇ ಈ ಕರ್ಮಶೇಷಗಳು ಆತ್ಮದ ಯಾನದಲ್ಲಿ ಜನುಮಜನುಮಗಳ ವರೆಗೂ ಕಾಡುತ್ತವೆ. ಇವುಗಳ ಲೆಕ್ಕಾಚಾರದಲ್ಲಿ ವಿಧಿಯು ಬರೆದ ಹಣೆಬರೆಹವನ್ನು ಬದಲಾಯಿಸಲು ಅಥವಾ ಒರೆಸಿ ಶುದ್ಧಿಗೊಳಿಸಲು ಸಾಧ್ಯವಿಲ್ಲ. ಕರ್ಮದೋಷಗಳ ಹೊದಿಕೆಯನ್ನು ಹೊದ್ದುಕೊಂಡು ಮುನ್ನಡೆಯಲೇಬೇಕು. ಅವುಗಳು ಹೊದ್ದು ಹರಿಯುವವರೆಗೆ ತಾಳ್ಮೆಯಿಂದ ಕಾಯಬೇಕು. ಅನಿರೀಕ್ಷಿತ ಘಟನೆಗಳು, ಆಕಸ್ಮಿಕ ಆಘಾತಗಳು ಸಂಭವಿಸುವುದು, ಸಂದರ್ಭಗಳು ಕೈಮೀರಿ ಹೋಗುವುದು ಇವೆಲ್ಲವೂ ವಿಧಿ ನಿಯಮ. ಹಾಗಾಗಿಯೇ ಬದುಕೆಂದರೆ ಹೋರಾಟ. ಬಯಸುವುದು ಒಂದು ಆಗುವುದು ಇನ್ನೊಂದು. ಹಾಗೆಂದು ನಿರಾಶರಾಗುವುದಲ್ಲ. ಸಂಯಮದಿಂದ ಎಲ್ಲ ವನ್ನೂ ಸಹಿಸಿಕೊಳ್ಳುವ ಮತ್ತು ಸಮಸ್ಯೆ-ಸಂಕಷ್ಟಗಳಿಂದ ಹೊರಬರಲು ಶಕ್ತಿಮೀರಿ ಪ್ರಯತ್ನಿಸಿದಾಗ ಜೀವನವು ಸಾರ್ಥಕವೆನ್ನಿಸುತ್ತದೆ. ದೌರ್ಬಲ್ಯ
ಗಳನ್ನು ಕಳಚಿಕೊಂಡು ಮನಸ್ಸು ಹದವಾಗುತ್ತದೆ, ವಿಶಾಲವಾಗಿ ಯೋಚಿಸುತ್ತದೆ. ಹಾಗಾಗಿ ಬದುಕಿನ ಪ್ರತಿಯೊಂದು ಸಂದರ್ಭಗಳಲ್ಲೂ ಇರುವ ಜೀವನ ಪಾಠವನ್ನು ವ್ಯಕ್ತಿಯು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು. ಎಲ್ಲವನ್ನೂ ಅನುಭವದ ನೆಲೆಯಲ್ಲಿ ನೋಡುತ್ತ, ಸಹನೆಯಿಂದ ಸಂಕಲ್ಪಗಳನ್ನು ಈಡೇರಿಸುವುದಕ್ಕೆ ಶ್ರಮಿಸಿದರೆ ಜೀವೋತ್ಕರ್ಷವು ಸುಲಭ ಸಾಧ್ಯ.


ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಕೇಸ್​: ನಟ ಧ್ರುವ ಸರ್ಜಾ ಸರ್ಕಾರಕ್ಕೆ ಹೇಳಿದ ಕಿವಿ ಮಾತೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
