|ಕೀರ್ತಿನಾರಾಯಣ ಸಿ.ಬೆಂಗಳೂರು
ಅಂತರ ಜಿಲ್ಲೆ ಹಾಗೂ ಅಂತರ ವಲಯ ವರ್ಗಾವಣೆಗಿರುವ ನಿರ್ಬಂಧ ಸಡಿಲಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸರ್ಕಾರದ ಅನುಮೋದನೆ ಸಿಕ್ಕ ನಂತರ ಕೋರಿಕೆ ಮೇರೆಗೆ ಪೊಲೀಸರಿಗೆ ಸ್ವಂತ ಜಿಲ್ಲೆ ಅಥವಾ ವಲಯದಲ್ಲೇ ಕೆಲಸ ಮಾಡುವ ಯೋಗ ದೊರೆಯಲಿದೆ. ವಿವಿಧ ಕಾರಣಗಳಿಂದ ಕುಟುಂಬದಿಂದ ದೂರವಿರುವ, ವಯಸ್ಸಾದ ತಂದೆ-ತಾಯಿಗೆ ಅನಾರೋಗ್ಯವಿದ್ದರೂ ಜತೆಯಲ್ಲಿದ್ದು ನೋಡಿಕೊಳ್ಳಲಾಗುತ್ತಿಲ್ಲ ಎಂದು ಕೊರಗುವ ಪೊಲೀಸರ ಮನೋಸ್ಥೈರ್ಯಕ್ಕೆ ಇದರಿಂದ ಬೂಸ್ಟರ್ ಡೋಸ್ ಸಿಗಲಿದೆ.
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ) ಮರು ಜಾರಿಗೆ ಅನುಮತಿ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಸ್ತಾವನೆ ಪರಿಶೀಲಿಸಿರುವ ಸರ್ಕಾರ, ಅನುಮೋದನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಹೊರಡಿಸಿದ ನಂತರ ಅಂತರ ಜಿಲ್ಲಾ ವರ್ಗಾವಣೆ ಮಾಡಲು ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ಸಿಗಲಿದೆ. ಈ ಮೂಲಕ ವೈಯಕ್ತಿಕ ಸಮಸ್ಯೆ ಎದುರಿಸುತ್ತಿರುವ ಕೆಳಹಂತದ ಸಿಬ್ಬಂದಿ ಕಷ್ಟಕ್ಕೆ ಆಯಾ ಘಟಕಗಳ ಮುಖ್ಯಸ್ಥರೇ ಸ್ಪಂದಿಸಬಹುದಾಗಿದೆ. 1977ರಿಂದಲೂ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಇತ್ತು. ಆದರೆ, 2021ರಲ್ಲಿ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ ನಿಯಮ 16 (ಎ) ಅನ್ನು ತೆಗೆದು ಹಾಕಿತ್ತು.
ಈಗ ಮತ್ತೆ 16 (ಎ) ನಿಯಮ ಜಾರಿಯಾದರೆ ಕೋರಿಕೆ ಮೇರೆಗೆ ಕಾನ್​ಸ್ಟೆಬಲ್, ಹೆಡ್ ಕಾನ್​ಸ್ಟೆಬಲ್, ಸಹಾಯಕ ಸಬ್ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ ಗ್ರೂಪ್ ಸಿ ಮತ್ತು ಡಿ (3 ಮತ್ತು 4ನೇ ವರ್ಗ) ವೃಂದಕ್ಕೆ ಸೇರಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಂದು ಕಮಿಷನರೇಟ್ ಘಟಕದಿಂದ ಇನ್ನೊಂದು ಕಮಿಷನರೇಟ್ ಘಟಕಕ್ಕೆ ವರ್ಗಾವಣೆ ಮಾಡಬಹುದಾಗಿದೆ.
ಕಾನ್​ಸ್ಟೆಬಲ್ ಮತ್ತು ಗ್ರೂಪ್ ಸಿ-ಡಿ ವೃಂದದ ಸಿಬ್ಬಂದಿ ಜ್ಯೇಷ್ಠತೆಯನ್ನು ಆಯಾ ನೇಮಕಾತಿ ಘಟಕಗಳಲ್ಲೇ ನಿರ್ವಹಣೆ ಮಾಡಲಾಗುತ್ತಿದೆ. ಆಯಾ ಘಟಕಗಳ ಅಧಿಕಾರಿಗಳೇ ನೇಮಕಾತಿ ಪ್ರಾಧಿಕಾರಿಗಳಾಗಿರುವುದರಿಂದ ಆಯಾ ಘಟಕದಲ್ಲೇ ಮುಂಬಡ್ತಿ ನೀಡಲಾಗುತ್ತದೆ. ಸೇವಾ ಜ್ಯೇಷ್ಠತೆ ಬಿಟ್ಟುಕೊಟ್ಟು ವರ್ಗಾವಣೆಯಾಗುವುದರಿಂದ ಜ್ಯೇಷ್ಠತೆ ಮತ್ತು ಮುಂಬಡ್ತಿ ಸಂಬಂಧ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆ ಹೇಳೋದೇನು?:ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡುವ ರೀತಿಯಲ್ಲಿಯೇ ಇಲಾಖೆಯ ಪಿಎಸ್​ಐ ಮತ್ತು ಇತರೆ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಮತ್ತು ವಲಯ ವರ್ಗಾವಣೆ ಮಾಡುವುದು ಸೂಕ್ತ ಎಂದು ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದೆ.
ಡಿಜಿಪಿಗಿದೆ ಅಧಿಕಾರ:ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸುವ ಅಧಿಕಾರ ಈಗ ಡಿಜಿಪಿಗೆ ಇದೆ. ಆದರೆ, ಇಲಾಖೆಯಲ್ಲಿ 90 ಸಾವಿರ ಸಿಬ್ಬಂದಿಯಿದ್ದಾರೆ. ವರ್ಗಾವಣೆ ಕೋರಿ ಅಧಿಕಾರಿ ಮತ್ತು ಸಿಬ್ಬಂದಿ ಸಲ್ಲಿಸುವ ಎಲ್ಲ ಅರ್ಜಿಗಳನ್ನೂ ಡಿಜಿಪಿ ಪರಿಶೀಲಿಸಲು ಸಾಧ್ಯವಿಲ್ಲ. ಮೊದಲಿನಂತೆ ಆಯಾ ಘಟಕದ ಮುಖ್ಯಸ್ಥರಿಗೆ ವರ್ಗಾವಣೆ ಅರ್ಜಿ ಪರಿಶೀಲಿಸಿ, ಪರಿಗಣಿಸುವ ಅಧಿಕಾರ ಕೊಟ್ಟರೆ ಸೂಕ್ತ.
ಒತ್ತಡದಲ್ಲೇ ಕೆಲಸ:ಕಾನೂನು ಸುವ್ಯವಸ್ಥೆಯ ಜತೆಗೆ ಅಪರಾಧ ನಿಯಂತ್ರಣ, ಸಂಚಾರ ಸುಗಮ ನಿರ್ವಹಣೆ, ತನಿಖಾ ಕಾರ್ಯ, ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಾರೆ. ನಿರಂತರವಾಗಿ ಮಾನಸಿಕ/ದೈಹಿಕ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ಕರ್ತವ್ಯದ ಜತೆಗೆ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳಬೇಕಾದ ಅನಿವಾರ್ಯತೆ ಪೊಲೀಸರ ಮೇಲಿದೆ.
ಪತಿ-ಪತ್ನಿ ಕೇಸಲ್ಲಿ ಸೇವಾವಧಿ ವಿನಾಯ್ತಿ:ಸ್ವಂತ ಕೋರಿಕೆ ವರ್ಗಾವಣೆಗೆ 7 ವರ್ಷ ಸೇವಾವಧಿ ನಿಗದಿಪಡಿಸಲಾಗಿದೆ. ಆದರೆ, ಪತಿ-ಪತ್ನಿ ಪ್ರಕರಣಗಳಲ್ಲಿ ಸೇವಾವಧಿಗೆ ವಿನಾಯಿತಿ ಇದೆ. ವರ್ಗಾವಣೆ ಮಾರ್ಗಸೂಚಿ ಪ್ರಕಾರ ಪತಿ-ಪತ್ನಿ ಪ್ರಕರಣಗಳಲ್ಲಿ ರಿಕ್ತ ಹುದ್ದೆಗಳಿದ್ದಲ್ಲಿ ಅವಧಿಪೂರ್ವ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twenty =
Remember me
