|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ನಿವೃತ್ತಿ ನಂತರವೂ ಪ್ರಭಾವ ಬಳಸಿ ಅದೇ ಹುದ್ದೆಯಲ್ಲಿ ಮುಂದುವರಿದು ದರ್ಬಾರ್ ನಡೆಸುವುದಕ್ಕೆ ಕೊನೆಗೂ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಖಾಲಿ ಹುದ್ದೆಗಳನ್ನು ಸರ್ಕಾರ ಕಾಲಕಾಲಕ್ಕೆ ಭರ್ತಿ ಮಾಡುತ್ತಿಲ್ಲ. ಆದರೆ, ನಿವೃತ್ತ ಅಧಿಕಾರಿ ಮತ್ತು ನೌಕರರಿಗೆ ಅವರ ಪ್ರಭಾವಕ್ಕೆ ತಕ್ಕಂತೆ ಹುದ್ದೆಗಳನ್ನು ದಯಪಾಲಿಸುತ್ತ ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಅವಕಾಶ ನೀಡುತ್ತಿದೆ ಎಂಬ ಆರೋಪಗಳಿದ್ದವು. ಇದೀಗ ಅಂತಹ ಎಲ್ಲ ಪ್ರಯತ್ನಗಳಿಗೆ ಕೊನೆ ಹಾಡಲು ಮುಖ್ಯ ಕಾರ್ಯದರ್ಶಿ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.
ಮುಖ್ಯಮಂತ್ರಿ ಮತ್ತು ಸಚಿವರ ಸಚಿವಾಲಯಗಳಲ್ಲಿ ನಿವೃತ್ತರನ್ನು ನೇಮಕ ಮಾಡಿಕೊಂಡಿರುವ ಅನೇಕ ಪ್ರಕರಣಗಳಿವೆ. ಆದರೆ, ಅದನ್ನು ಬಿಟ್ಟು ವಿವಿಧ ಇಲಾಖೆಗಳಲ್ಲೂ ನಿವೃತ್ತರು ವ್ಯಾಪಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳು ನಿವೃತ್ತರ ಸ್ವರ್ಗ ಎನಿಸಿಕೊಂಡಿವೆ.
ಎಷ್ಟು ಜನ ಇದ್ದಾರೆ?:ಲಭ್ಯ ಮಾಹಿತಿಯ ಪ್ರಕಾರ ಸರ್ಕಾರದ ಸಚಿವಾಲಯದಲ್ಲಿಯೇ ಅಂದಾಜು 40 ಜನ ವಿವಿಧ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿವೃತ್ತಿ ನಂತರವೂ ಅದೇ ಹುದ್ದೆ ಅಥವಾ ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದಾರೆ. ಕರ್ತವ್ಯದಲ್ಲಿದ್ದಾಗ 70 ಸಾವಿರ ರೂ. ವೇತನ ಪಡೆಯುತ್ತಿದ್ದವರು, ಗುತ್ತಿಗೆ ಆಧಾರದಲ್ಲಿ ಮರುನೇಮಕವಾದ ನಂತರ 80 ಸಾವಿರ ರೂ. ಭತ್ಯೆ ಪಡೆಯುತ್ತಿದ್ದಾರೆ. ಜತೆಗೆ, ನಿವೃತ್ತಿ ನಂತರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಮಿತವ್ಯಯಿ ಯೋಜನೆಗೆ ತಿಲಾಂಜಲಿ ನೀಡಿದಂತಾಗಿದೆ.
ನಿಯಮ ಉಲ್ಲಂಘನೆ:ರಾಜ್ಯ ಸರ್ಕಾರ 2016ರಲ್ಲಿ ಹೊರಡಿಸಿರುವ ಆದೇಶದ ಪ್ರಕಾರ ನಿವೃತ್ತರನ್ನು ನೇಮಕ ಮಾಡಬಾರದು. ಒಂದು ವೇಳೆ ಅನಿವಾರ್ಯವಾಗಿದ್ದರೆ ಸಚಿವ ಸಂಪುಟದ ಅನುಮೋದನೆ ಪಡೆಯ ಬೇಕು. ಕಾರ್ಯದರ್ಶಿ ಹುದ್ದೆಯಲ್ಲಿದ್ದವರಿಂದ ಡಿ ಗ್ರೂಪ್ ನೌಕರರ ತನಕ ನಿವೃತ್ತರ ಮರುನೇಮಕಗಳಾಗಿವೆ. ಅಂತಹ ಅನಿವಾರ್ಯತೆ ಏನು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ತರಲು ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದ ಆಯೋಗ ರಚನೆಯಾಗಿ ಕೆಲ ವರದಿ ನೀಡಿದೆ. ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿಯೂ ಇದೆ. ಇವು ನೀಡಿರುವ ವರದಿಗಳನ್ನು ಮರು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಆಡಳಿತ ಸುಧಾರಣೆ ಹೆಸರಿನಲ್ಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನ ಸೆಳೆಯಲಾಗಿದೆ. ಮುಂದೆ ನಿವೃತ್ತರನ್ನು ನೇಮಕ ಮಾಡದಂತೆ ಒತ್ತಾಯಿಸಲಾಗಿದೆ.
|ಪಿ. ಗುರುಸ್ವಾಮಿಸಚಿವಾಲಯ ನೌಕರರ ಸಂಘದ ಅಧ್ಯಕ್ಷ
ಗಮನಸೆಳೆದ ನೌಕರರ ಸಂಘ:ಇತ್ತೀಚೆಗೆ ಸಚಿವಾಲಯ ನೌಕರರ ಸಂಘದ ನಿಯೋಗ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿ ಅನೇಕ ಸಮಸ್ಯೆಗಳನ್ನು ವಿವರಿಸಿತ್ತು. ಅದರಲ್ಲಿ ಪ್ರಮುಖವಾಗಿ ನಿವೃತ್ತರ ದರ್ಬಾರ್ ಬಗ್ಗೆಯೂ ಮಾಹಿತಿ ನೀಡಿತ್ತು. ಹೀಗಾಗಿ ಮುಖ್ಯ ಕಾರ್ಯದರ್ಶಿಗಳು ಕ್ರಮವಹಿಸುವಂತೆ ಡಿಪಿಎಆರ್ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಿತವ್ಯಯಕ್ಕೆ ಅರ್ಥವಿಲ್ಲ:ಸರ್ಕಾರಕ್ಕೆ ಅಗತ್ಯವಾದ ಡಿ ಗ್ರೂಪ್ ಮತ್ತು ಚಾಲಕರನ್ನು ಗುತ್ತಿಗೆ ಮೇಲೆ ತೆಗೆದುಕೊಳ್ಳುವುದು ಆರ್ಥಿಕ ಮಿತವ್ಯಯ ಆಗುವುದಿಲ್ಲವೆಂದು ಸಚಿವಾಲಯ ನೌಕರರ ಸಂಘವು ಮುಖ್ಯ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. 50ಕ್ಕೂ ಹೆಚ್ಚು ಚಾಲಕರು ಸಾರಿಗೆ ನಿಗಮಗಳಿಂದ ನಿಯೋಜನೆ ಮೇಲೆ ಬಂದಿದ್ದಾರೆ. ಸರ್ಕಾರ ನೇಮಕ ಮಾಡಿಕೊಂಡರೆ ಚಾಲಕರಿಗೆ ತಿಂಗಳಿಗೆ 32 ಸಾವಿರ ರೂ. ಹಾಗೂ ಡಿ ಗ್ರೂಪ್ ನೌಕರರಿಗೆ 25 ಸಾವಿರ ರೂ. ವೇತನ ಆಗುತ್ತದೆ. ಗುತ್ತಿಗೆ ನೇಮಕದಿಂದ ಸರ್ಕಾರಕ್ಕೂ ಹೊರೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ.
ಅವೈಜ್ಞಾನಿಕ ವಿಲೀನ ಆರೋಪ:ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿರುವ ಇಲಾಖೆ ಗಳ ವಿಲೀನ ಮತ್ತು ಹುದ್ದೆಗಳ ಕಡಿತ ಅವೈಜ್ಞಾನಿಕ ವಾಗಿದ್ದು, ಈ ನಿರ್ಧಾರ ಬೇಡವೆಂದು ಸಚಿವಾಲಯ ನೌಕರರು ಮುಖ್ಯ ಕಾರ್ಯದರ್ಶಿಗೆ ಒತ್ತಡ ಹಾಕಿದ್ದಾರೆ.
ಎಂತಹವರ ನೇಮಕ?:ಸರ್ಕಾರಿ ಹುದ್ದೆಯಲ್ಲಿದ್ದವರು ಮಾತ್ರವಲ್ಲ, ಬ್ಯಾಂಕ್​ನ ನಿವೃತ್ತರೊಬ್ಬರೂ ನೇಮಕವಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಾಸಿಕ ಗೌರವಧನ ನಿಗದಿಯಾಗಿದೆ. ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಮೂರು ವರ್ಷಗಳಿಂದ ಒಂದಿಲ್ಲೊಂದು ಹುದ್ದೆಗೆ ನೇಮಕವಾಗುತ್ತಲೇ ಇದ್ದಾರೆ. ಅಧೀನ ಕಾರ್ಯದರ್ಶಿ, ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ಡಿ ಗ್ರೂಪ್ ನೌಕರರು ಮರುನೇಮಕವಾಗಿದ್ದಾರೆ.
18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
