ಬೆಂಗಳೂರು:ರೈತರು, ಸಂಘಟನೆಗಳು, ಜನಪ್ರತಿನಿಧಿಗಳ ವಿರೋಧದಿಂದಾಗಿ ನೀರಾವರಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಸಂಪರ್ಕ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದಡಿ ಇಡುವ ಸಾಧ್ಯತೆಗಳಿವೆ. ರೈತರು ಪಂಪ್​ಸೆಟ್​ಗಳಿಗೆ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ, ಮೂಲಸೌಲಭ್ಯ ಕಲ್ಪಿಸಿಕೊಳ್ಳಬೇಕು ಎಂದು ಬರಗಾಲದಲ್ಲಿ ಹೊರಡಿಸಿದ ಆದೇಶ ಕಾಂಗ್ರೆಸ್ ಸರ್ಕಾರದ ಪಾಲಿಗೆ ಕಹಿಯಾಗಿದೆ.
ರೈತರು, ಸ್ವಪಕ್ಷದ ಶಾಸಕರ ಒತ್ತಡಕ್ಕೆ ಮಣಿದು ಕೃಷಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಕಡಿತ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ವಾಪಸ್ ಪಡೆದರು. ಎಂದಿನಂತೆ ಏಳು ತಾಸು ಮೂರು ಫೇಸ್ ವಿದ್ಯುತ್ ಸರಬರಾಜು ಮರು ಸ್ಥಾಪಿಸಿದರು. ಆದರೆ, ಐಪಿ ಸೆಟ್​ಗಳ ವಿದ್ಯುದ್ದೀಕರಣಕ್ಕೆ ತಗಲುವ ವೆಚ್ಚವನ್ನು ರೈತರೇ ಭರಿಸಬೇಕು ಎಂಬ ಆದೇಶದ ವಿರುದ್ಧ ತೀವ್ರ ವಿರೋಧ ತಲೆಎತ್ತಿದ್ದು, ಸರ್ಕಾರ ಮತ್ತೊಮ್ಮೆ ಒತ್ತಡದ ಸುಳಿಗೆ ಸಿಲುಕಿದೆ. ಆದೇಶ ವಾಪಸ್​ಗೆ ಆಗ್ರಹಿಸಿ ರೈತ ಸಮೂಹ ಎಸ್ಕಾಂಗಳಿಗೆ ಪತ್ರ ಚಳವಳಿ ಆರಂಭಿಸಿದೆ. ಹಲವೆಡೆ ರೈತ ಸಂಘಟನೆಗಳು ಪ್ರತಿರೋಧವೊಡ್ಡಿದ್ದು, ಪ್ರತಿಪಕ್ಷಗಳು ಧ್ವನಿಗೂಡಿಸಿವೆ. ಅದರಲ್ಲೂ, ನೀರಾವರಿ ಪಂಪ್​ಸೆಟ್ ಅವಲಂಬಿತ ಕೃಷಿಕರು ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೈಗೆ ದುಬಾರಿಯಾಗಲಿದೆ ಎಂದು ಸ್ವಪಕ್ಷದ ಶಾಸಕರು ಆತಂಕಕ್ಕೆ ಒಳಗಾಗಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಆದೇಶ ಹಿಂಪಡೆಯುವ ಗಂಭೀರ ಚಿಂತನೆ ನಡೆಸಿದೆ.
ಆದೇಶಕ್ಕೆ ಕಾರಣವೇನು ?2023ರ ಸೆ.22ಕ್ಕೆ ಅನ್ವಯಿಸುವಂತೆ ಕಳೆದ ಎಂಟು ವರ್ಷಗಳ ಅಕ್ರಮ ಐಪಿ ಸೆಟ್​ಗಳನ್ನು ಒಂದು ಬಾರಿಗೆ ಸಕ್ರಮಗೊಳಿಸಲಾಗುವುದು. ಇಂತಹ ಎರಡು ಲಕ್ಷ ಪಂಪ್​ಸೆಟ್​ಗಳ ವಿದ್ಯುದ್ದೀಕರಣಕ್ಕೆ ಎಸ್ಕಾಂಗಳು 6,999 ಕೋಟಿ ರೂ. ವೆಚ್ಚ ಮಾಡಿವೆ. ಇದನ್ನು ಎಸ್ಕಾಂಗಳಿಗೆ ಸರ್ಕಾರವೇ ತುಂಬಿಕೊಡಲಿದೆ. ಸೆ.22ಕ್ಕೆ ಕಟ್​ಆಫ್ ದಿನಾಂಕ ನಿಗದಿ ಮಾಡಿದ್ದು, ಅದಕ್ಕೂ ಮುನ್ನ ಸಲ್ಲಿಕೆಯಾದ ಅರ್ಜಿಗಳು, ನೋಂದಣಿಯಾದ ಐಪಿ ಸೆಟ್​ಗಳಿಗೆ ಮಾತ್ರ ಸರ್ಕಾರದ ವೆಚ್ಚದಲ್ಲಿ ವಿದ್ಯುತ್ ಸೌಕರ್ಯ ಒದಗಿಸಲಾಗುತ್ತದೆ.
ಹೊಸದಾಗಿ ಅರ್ಜಿ ಸಲ್ಲಿಕೆ, ನೋಂದಣಿ, ಐಪಿ ಸೆಟ್​ಗಳಿಗೆ ಬೇಕಾದ ವಿದ್ಯುತ್ ಕಂಬ, ತಂತಿ, ಪರಿವರ್ತಕ, ಸಾಗಣೆ ಮುಂತಾದ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಸೆ.22ರ ಸಚಿವ ಸಂಪುಟ ಸಭೆ ನಿರ್ಣಯಿಸಿತ್ತು. ಅದರಂತೆಯೇ ಇಂಧನ ಇಲಾಖೆ ಅ.10ರಂದು ಆದೇಶ ಹೊರಡಿಸಿತ್ತು.
ಸರ್ಕಾರ ಎಡವಿದ್ದೆಲ್ಲಿ ?
ಕುಸುಮ್​ಬಿ ಯೋಜನೆಯಡಿ ಸ್ವತಂತ್ರ ಸೌರ ವಿದ್ಯುತ್​ಚಾಲಿತ ಐಪಿ ಸೆಟ್​ಗಳನ್ನು ಸ್ಥಾಪಿಸುವ ರೈತರಿಗೆ ಶೇ.30ರಷ್ಟು ಸಹಾಯಧನ ಕೇಂದ್ರ ಸರ್ಕಾರ ನೀಡುತ್ತದೆ. 7.5 ಅಶ್ವಶಕ್ತಿಗಿಂತ ಅಧಿಕ ಸಾಮರ್ಥ್ಯದ ಐಪಿ ಸೆಟ್ ಅಳವಡಿಕೆಗೆ ಅವಕಾಶವಿದೆಯಾದರೂ ಸಬ್ಸಿಡಿ 7.5 ಎಚ್​ಪಿಗೆ ಸೀಮಿತ. ಉಳಿದ ವೆಚ್ಚದಲ್ಲಿ ರಾಜ್ಯ ಸರ್ಕಾರ ಶೇ.30, ಫಲಾನುಭವಿ ರೈತ ಶೇ.40ರಷ್ಟು ಭರಿಸಬೇಕು. ಆದರೆ, ಸೌರ ವಿದ್ಯುತ್ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ವೆಚ್ಚ ಶೇ.50ಕ್ಕೆ ಏರಿಸಿ, ರೈತರ ಪಾಲನ್ನು ಶೇ.20ಕ್ಕೆ ಇಳಿಸಿತು. ಸೌರಶಕ್ತಿ ಚಾಲಿತ ಪಂಪ್​ಸೆಟ್ ಬಳಸಿದ ನಂತರ ಹೆಚ್ಚುವರಿ ವಿದ್ಯುತ್ ಸರ್ಕಾರಕ್ಕೆ ಮಾರಾಟ ಮಾಡಲು ಅವಕಾಶವಿದೆ. ಜತೆಗೆ ಹೆಚ್ಚುವರಿ ಶೇ.20ರಷ್ಟು ಸಬ್ಸಿಡಿ ನೀಡಲಿದೆ ಎಂದು ಲೆಕ್ಕಾಚಾರ ಮಾಡಿತು. ಆದರೆ, ಪೂರ್ಣ ಪ್ರಮಾಣದಲ್ಲಿ ಐಪಿ ಸೆಟ್​ಗಳಿಗೆ ಸೌರ ವಿದ್ಯುತ್ ಅಳವಡಿಕೆ, ಹೆಚ್ಚುವರಿ ವಿದ್ಯುತ್ ಮಾರಾಟದಿಂದ ರೈತರ ಕೈಗೆ ಒಂದಿಷ್ಟು ಹಣ ಸೇರುವ ಮುನ್ನವೇ ‘ಸ್ವಂತ ವೆಚ್ಚ’ದ ಆದೇಶ ಹೊರಡಿಸಿ ಸರ್ಕಾರ ಎಡವಿದಂತಾಗಿದೆ.
ಸರ್ಕಾರವೇ 223 ತಾಲೂಕುಗಳು ಬರಪೀಡಿತವೆಂದು ಘೋಷಿಸಿದೆ. 33 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿ ಸೆಟ್​ಗಳಿಗೆ ವಿದ್ಯುತ್ ಸಂಪರ್ಕದ ವೆಚ್ಚ ರೈತರೇ ಭರಿಸಬೇಕು ಎನ್ನುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವೈಜ್ಞಾನಿಕ, ಅವಾಸ್ತವಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು.
| ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ
ರೈತರ ಒತ್ತಡಕ್ಕೆ ಸರ್ಕಾರ ಮತ್ತೊಮ್ಮೆ ಮಣೆ ?
* ಐಪಿ ಸೆಟ್​ಗಳಿಗೆ ಸ್ವಂತ ಖರ್ಚಿನಲ್ಲಿ ವಿದ್ಯುದ್ದೀಕರಣ ಕೈಬಿಡಲು ಚಿಂತನೆ
* ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ
* ಅನ್ನದಾತರ ತೀವ್ರ ವಿರೋಧ
ಸಂಪುಟ ಸಭೆಯಲ್ಲಿ ಇಂದು ಚರ್ಚೆಆದೇಶ ಹಿಂದಕ್ಕೆ ಪಡೆಯುವುದರಿಂದ ಉಂಟಾಗುವ ಸಾಧಕ-ಬಾಧಕ ಕುರಿತು ಗುರುವಾರ ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಹಲವೆಡೆ ಉಪವಾಸ, ಅನಿರ್ದಿಷ್ಟ ಧರಣಿ ಕುಳಿತವರಿಗೆ ಸಚಿವರು ಇದೇ ಭರವಸೆ ನೀಡಿದ್ದು, ಬರ ಪರಿಸ್ಥಿತಿಯಲ್ಲಿ ಆದೇಶ ವಾಪಸ್​ಗೆ ಮನವರಿಕೆ ಮಾಡಿಕೊಡುವ ಸಂಭವವಿದೆ. ಹೊಸ ಆದೇಶದಿಂದ ರೈತರು 3-4 ಲಕ್ಷ ರೂ.ವರೆಗೆ ವೆಚ್ಚ ಭರಿಸಬೇಕಾಗಿದೆ. ಹಿಂದಿನಂತೆ ನೋಂದಣಿ ಶುಲ್ಕ ಭರಿಸಿಕೊಂಡು ಎಸ್ಕಾಂಗಳಿಂದಲೇ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನು ಮುಂದುವರಿಸುವುದು ಸೂಕ್ತ. ಐಪಿ ಸೆಟ್​ಗಳಿಗೆ ಸೌರ ವಿದ್ಯುತ್ ಸಂಪರ್ಕ ಪಡೆಯಲು ಪ್ರೋತ್ಸಾಹ, ವೈಯಕ್ತಿಕ ಸೌರಶಕ್ತಿಚಾಲಿತ ಐಪಿ ಸೆಟ್​ಗಳ ಅಳವಡಿಕೆ, ಹೆಚ್ಚುವರಿ ವಿದ್ಯುತ್ ತಿರುಗಿ ಸರ್ಕಾರಕ್ಕೆ ಮಾರಾಟ ಮಾಡುವ ಹಂತಕ್ಕೆ ತಲುಪಲಿ. ನಂತರ ಬೇಕಿದ್ದರೆ ಸ್ವಂತ ವೆಚ್ಚದಲ್ಲಿ ವಿದ್ಯುದ್ದೀಕರಣ ಆದೇಶ ಹೊರಡಿಸಿದರೆ, ರೈತರಿಗೆ ಬಾಧಿಸುವುದಿಲ್ಲ ಎಂಬ ವಿಷಯ ಸಂಪುಟ ಸಭೆ ಮುಂದೆ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − fourteen =
Remember me
