|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಪಂಚಾಯತ್​ರಾಜ್ ವ್ಯವಸ್ಥೆಯ ಅನುಷ್ಠಾನ, ಬಲವರ್ಧನೆ ಕಾರ್ಯದಲ್ಲಿ ಕೇರಳಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿರುವ ರಾಜ್ಯದಲ್ಲಿ ಇನ್ನಷ್ಟು ಕ್ರಾಂತಿಕಾರಕ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇರಿಸಿದೆ. ಪಂಚಾಯಿತಿಗಳೆಂದರೆ ಸ್ಥಳೀಯ ಸರ್ಕಾರಗಳೇ ಆಗಿರಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಅನೇಕ ನಿರ್ಧಾರ ಅನುಷ್ಠಾನವಾಗುತ್ತಿವೆ. 29 ಇಲಾಖೆಗಳ ಅಧಿಕಾರವನ್ನು ಪಂಚಾಯಿತಿಗಳಿಗೆ ನೀಡಲಾಗಿದೆ. ಪಂಚಾಯತ್​ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು; ಗ್ರಾಮ ಮಟ್ಟದಲ್ಲಿ ಜನರಿಗೆ ಕಣ್ಣೆದುರಿಗೆ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಆದರೆ ಮೂಲದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಬೇಕಾದ ಸಣ್ಣ ತಿದ್ದುಪಡಿಗಳಿಗೆ ಚರ್ಚೆ ಮಾಡಿದೆ. ಗ್ರಾಮ ಪಂಚಾಯಿತಿಗಳಲ್ಲಿ ಪಾರ ದರ್ಶಕ ಆಡಳಿತ ತರಲು ಇ-ಗ್ರಾಮ ಸ್ವರಾಜ್ ಜಾರಿ ಮಾಡಲು ಪಂಚತಂತ್ರ-2 ಸಾಫ್ಟ್​ವೇರ್ ಸಹ ಅಭಿವೃದ್ಧಿಯಾಗಿದೆ. ಅದರ ಮೂಲಕ ಯೋಜನೆಗಳ ನಿರ್ವಹಣೆಯ ನಿಗಾ, ಮನೆ ಬಾಗಿಲಿಗೆ ಆಡಳಿತ, ತೆರಿಗೆ ಸಂಗ್ರಹಣೆ ಹೆಚ್ಚಳಕ್ಕೂ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳುತ್ತವೆ. ಈಗ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಮೂಲಕ ಭ್ರಷ್ಟಾಚಾರದ ಮೂಲಕ್ಕೆ ಕೊಡಲಿ ಹಾಕಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ.
ಕೆಲ ಪಿಡಿಒಗಳ ನಿರಾಸಕ್ತಿ:ಸರ್ಕಾರ 29 ಇಲಾಖೆಗಳ ಅಧಿಕಾರ ನೀಡಿದ್ದರೂ ಕೆಲವು ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಅಧಿಕಾರ ಬಳಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ದೂರುಗಳು ಸರ್ಕಾರಕ್ಕೆ ಬಂದಿವೆ. ಸದ್ಯದಲ್ಲಿಯೇ ಜಿಪಂ ಸಿಇಒಗಳ ಮೂಲಕ ಎಚ್ಚರಿಕೆ ಕೊಡಿಸಲು ಸರ್ಕಾರ ತೀರ್ವನಿಸಿದೆ.
ಗ್ರಾಮಗಳಿಗೆ ಬೇಕಾದ ಯೋಜನೆ ತಳಮಟ್ಟದಲ್ಲಿಯೇ ರೂಪುಗೊಳ್ಳಬೇಕೆ ಹೊರತು ರಾಜ್ಯ ಮಟ್ಟದಲ್ಲಿ ಅಲ್ಲ ಎಂಬುದು ಮೊದಲಿನಿಂದಲೂ ನಡೆದಿರುವ ಚರ್ಚೆಯಾಗಿದೆ. ಅನುದಾನದಲ್ಲಿ ಶೇ.83 ರಾಜ್ಯ ವಲಯದಲ್ಲಿದ್ದರೆ, ಉಳಿದ ಶೇ.17 ಪಂಚಾಯಿತಿ ಮಟ್ಟದಲ್ಲಿದೆ. ಅನುದಾನದ ಸದ್ಬಳಕೆಗೆ ಯೋಜನೆ ರೂಪಿಸುವುದು ಅತ್ಯಂತ ಮುಖ್ಯ.
ಅದಕ್ಕಾಗಿಯೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿ (ಡಿಪಿಸಿ) ಗಳನ್ನು ರಚನೆ ಮಾಡಲಾಗುತ್ತಿದೆ. ಜಿಪಂ ಅಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು, ಗ್ರಾಪಂಗಳ ಇಬ್ಬರು ಸದಸ್ಯರು ಸಮಿತಿಯಲ್ಲಿರುತ್ತಾರೆ.
ಗ್ರಾಮಸಭೆಯ ಮೂಲಕ ಆಯಾ ಗ್ರಾಮಗಳಿಗೆ ಅಥವಾ ನಗರಕ್ಕೆ ಬೇಕಾದ ಯೋಜನೆ ರೂಪಿಸಿ ಅದನ್ನು ಪಂಚಾಯಿತಿಯಲ್ಲಿ ಅನುಮೋದಿಸಿ, ಜಿಲ್ಲಾ ಯೋಜನಾ ಸಮಿತಿಯಲ್ಲಿ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸುವುದು ಒಟ್ಟಾರೆ ಉದ್ದೇಶ. ಯೋಜನಾ ಸಮಿತಿಗಳು ಐದು ವರ್ಷದಲ್ಲಿ ಅಭಿವೃದ್ಧಿ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಿಕೊಡಬೇಕಾಗುತ್ತದೆ.
ಹಿಂದೆಯೂ ಜಿಲ್ಲಾ ಮಟ್ಟದಲ್ಲಿ ಯೋಜನಾ ಸಮಿತಿಗಳನ್ನು ಮಾಡಲಾಗಿತ್ತು. ಆದರೆ ಅವು ವಿಫಲವಾಗಿದ್ದವು. ಆದ್ದರಿಂದ ಈ ಬಾರಿ ವಿಶೇಷವಾಗಿ ಒಂದಷ್ಟು ಅಧಿಕಾರ ನೀಡಲಾಗುತ್ತಿದೆ. ಒಟ್ಟಾರೆ ಯೋಜನಾ ಸಮಿತಿಗಳ ಮೂಲಕ ಸ್ಥಳೀಯ ಸಂಸ್ಥೆಗಳು ಸರ್ವಾಂಗೀಣ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಮೂಲಗಳು ಹೇಳಿವೆ.
ಕಾಯ್ದೆಯಲ್ಲಿ ತಿದ್ದುಪಡಿ ಏಕೆ?:ಪಂಚಾಯಿತಿಗಳು ಭ್ರಷ್ಟಾಚಾರದ ಕೂಪಗಳಾಗುತ್ತಿವೆ. ಚುನಾವಣಾ ಪೂರ್ವದಲ್ಲಿಯೇ ಕೆಲ ಬದಲಾವಣೆ ತಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದೆಂದು ಚರ್ಚೆ ನಡೆದಿದೆ. ಅದಕ್ಕಾಗಿ ಪಂಚಾಯತ್​ರಾಜ್ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿ ಮಾಡಲು ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಮಾಡಿರುವ ಶಿಫಾರಸನ್ನು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
24 ತಾಸಿನಲ್ಲಿ ಅಧ್ಯಕ್ಷರು:ಚುನಾವಣೆ ಮುಗಿದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ತಿಂಗಳುಗಟ್ಟಲೆ ತಡವಾಗುತ್ತಿದೆ. ಇದರಿಂದ ಗೆದ್ದ ಸದಸ್ಯರ ಅಪಹರಣ, ರೆಸಾರ್ಟ್ ವಾಸ, ತೀರ್ಥಕ್ಷೇತ್ರಗಳ ಪ್ರವಾಸದಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದು ಒಂದು ರೀತಿ ಭ್ರಷ್ಟಾಚಾರಕ್ಕೆ ಎಡೆ ಮಾಡಿದಂತೆ ಆಗುತ್ತದೆ. ಆದ್ದರಿಂದ ಚುನಾವಣೆ ಮುಗಿದ 24 ಗಂಟೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸುವುದು ಉತ್ತಮವೆಂಬ ಸಲಹೆ ಸಮಿತಿಯಿಂದ ಹೋಗಿದೆ. ಆದ್ದರಿಂದಲೇ ಕಾಯ್ದೆಗೆ ತಿದ್ದುಪಡಿ ಅಗತ್ಯವಾಗಿದ್ದು, ಸರ್ಕಾರ ಸಮ್ಮತಿಸಿದೆ ಎಂದು ಮೂಲಗಳು ಹೇಳಿವೆ.
ಪಂಚಾಯಿತಿಗಳೆಂದರೆ ಸ್ಥಳೀಯ ಸರ್ಕಾರಗಳಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಇನ್ನಷ್ಟು ಸಲಹೆ ನೀಡಿದ್ದೇವೆ. ಅವುಗಳನ್ನೂ ಅನುಷ್ಠಾನ ಮಾಡಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತಳಮಟ್ಟದಲ್ಲಿ ಯೋಜನೆ ರೂಪಿಸುವ ಜಿಲ್ಲಾ ಯೋಜನಾ ಸಮಿತಿಗಳು ಮೇನಲ್ಲಿ ಆರಂಭವಾಗಲಿವೆ.
|ಪ್ರಮೋದ್ ಹೆಗಡೆಉಪಾಧ್ಯಕ್ಷ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ

ವಾರ್ಡ್​ಗೊಬ್ಬರೇ!:ಗ್ರಾಮ ಪಂಚಾಯಿತಿಗಳಲ್ಲಿ ವಾರ್ಡ್​ಗೆ ಮೂರು-ನಾಲ್ಕು ಸದಸ್ಯರಿರುತ್ತಾರೆ. ಸದಸ್ಯರ ಸಂಖ್ಯೆ ಹೆಚ್ಚಿದ್ದಾಗ ಅಭಿವೃದ್ಧಿ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುವುದಿಲ್ಲ. ಕಾಮಗಾರಿಗಳ ಹಂಚಿಕೆಗೆ ಜಗಳವಾಗಿ ತುಂಡುಗುತ್ತಿಗೆ ಹೆಚ್ಚಾಗುತ್ತದೆ. ವಾರ್ಡ್​ಗೆ ಒಬ್ಬರೇ ಸದಸ್ಯರಿರಬೇಕು. ಜನಸಂಖ್ಯೆ ಹೆಚ್ಚಾಗಿದ್ದರೆ ವಾರ್ಡ್ ಸಂಖ್ಯೆ ಹೆಚ್ಚಿಸಬೇಕೆಂದು ಚರ್ಚೆ ನಡೆದಿದೆ. ಪುನರ್ವಿಂಗಡಣೆ ಒಂದಷ್ಟು ಕಷ್ಟವಾಗುತ್ತದೆ. ಆದರೂ ಈ ರೀತಿ ಮಾಡುವುದು ಅನಿವಾರ್ಯವಾಗಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 8 =
Remember me
