ಬೆಂಗಳೂರು:ಚುನಾವಣೆ ಕಾವಿನ ನಡುವೆಯೇ ದೇಶಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೇ ಏರುತ್ತಿದ್ದು, ಕರ್ನಾಟಕದಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ತಲುಪಿದೆ. ಸೋಮವಾರ 235 ಹೊಸ ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,904 ಆಗಿದೆ. ಭಾನುವಾರ ಈ ಸಂಖ್ಯೆ 2,076 ರಷ್ಟಿತ್ತು.
ಸೋಂಕು ಏರಿಕೆ ಹಿನ್ನೆಲೆಯಲ್ಲಿ ಆರೋಗ ಇಲಾಖೆ ದಿನದ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಪರೀಕ್ಷೆ ಸಂಖ್ಯೆ ಹೆಚ್ಚಳವಾಗಿಲ್ಲ. ಆದಾಗಿಯೂ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚು ವರದಿಯಾಗುತ್ತಿದ್ದು, ಸೋಮವಾರಕ್ಕೆ ದಿನದ ಸೋಂಕು ಪ್ರಮಾಣ ದರ ಶೇ. 8.92 ತಲುಪಿತ್ತು.
ರಾಜ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯೊಂದಿಗೆ ಸಾವಿನ ಸಂಖ್ಯೆಯೂ ವರದಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕಲಬುರಗಿಯ 58 ವರ್ಷದ ವ್ಯಕ್ತಿ ಸೋಂಕಿನ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 40,294ಕ್ಕೆ ಏರಿಕೆ ಆಗಿದೆ.
ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಲಸಿಕೆ ಪಡೆಯುವಲ್ಲಿ ಜನರು ನಿರಾಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ 14 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಎಂದು ತಿಳಿಸಿರುವ ರಾಷ್ಟ್ರೀಯ ಆರೋಗ್ಯ ಮಿಷನ್, ಸೋಂಕು ತಡೆಗಟ್ಟಲು ಎಲ್ಲರೂ ಲಸಿಕೆ ಪಡೆಯುವ ಅಗತ್ಯವಿದೆ. 60 ವರ್ಷ ಮೇಲ್ಪಟ್ಟವರು, ನಾನಾ ಆರೋಗ್ಯ ಸಮಸ್ಯೆ ಹೊಂದಿರುವವರು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವುದು ಸೂಕ್ತ. ಆದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 1.15 ಕೋಟಿ ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡಿದ್ದು, ಇನ್ನೂ ಲಕ್ಷಾಂತರ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದೆ.
ಇದನ್ನೂ ಓದಿ:ಗುಜರಾತ್​ ಗೃಹ ಸಚಿವರ ಕುರಿತು ಅವಹೇಳನ; ಎಎಪಿ ನಾಯಕ ಗೋಪಾಲ್​ ಇಟಾಲಿಯಾ ಬಂಧನ
ರಾಜ್ಯದಲ್ಲಿ ಸದ್ಯ ಕೋವಿಡ್ ಲಸಿಕೆ ಕೊರತೆ ಎದುರಾಗಿದ್ದು, ಯಾವ ಸರ್ಕಾರಿ ಆಸ್ಪತ್ರೆಯಲ್ಲೂ ಲಸಿಕೆ ಲಭ್ಯವಿಲ್ಲ. ಖಾಸಗಿಯಲ್ಲಿ ಕೆಲವೇ ಕೆಲ ಆಸ್ಪತ್ರೆಗಳಲ್ಲಿ ಇದ್ದು, ಅದನ್ನು ಪಡೆಯಲು ಜನರು ಆಸಕ್ತಿ ತೋರುತ್ತಿಲ್ಲ. ಆದಾಗಿಯೂ ಕೋವಿಡ್ ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಅಗತ್ಯ ಕೋವಿಡ್ ಲಸಿಕೆ ಪೂರೈಕೆಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಈ ಸಂಬಂಧ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಲಭ್ಯತೆ ಹಾಗೂ ಲಾನುಭವಿಗಳನ್ನು ಆಧರಿಸಿ ಸಾರ್ವತ್ರಿಕ ಲಸಿಕಾ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ.
ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ರಾಜ್ಯದಲ್ಲಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗಿದ್ದು, ಕೋವಿಡ್ ಪ್ರಕರಣಗಳು ಒಮ್ಮೆಗೆ ಏರಿಕೆಯಾದಲ್ಲಿ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಗಳು ಸಜ್ಜಾಗುತ್ತಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಹಾಸಿಗೆ ಮೀಸಲಿಡುವುದರ ಜೊತೆಗೆ ಔಷಧಿ ದಾಸ್ತಾನುಗಳನ್ನು ಮಾಡಿಕೊಳ್ಳುತ್ತಿವೆ.
ಈ ನಿಟ್ಟಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ‘ಎಚ್ ಬ್ಲಾಕ್’ ನಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 50 ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ಇದರಲ್ಲಿ 8 ಐಸಿಯು ಹಾಗೂ 4 ಎಚ್‌ಡಿಯು ಹಾಸಿಗೆಗಳಾಗಿವೆ. ಆಸ್ಪತ್ರೆಯಲ್ಲಿ ಮೂರು ಆಕ್ಸಿಜನ್ ಜನರೇಟರ್ ಟ್ಯಾಕ್‌ಗಳಿದ್ದು, ಅಗತ್ಯ ಸಿಲಿಂಡರ್‌ಗಳ ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
