ಮಂಗಳೂರು:ಚಾರ್ಮಾಡಿ ಘಾಟಿ ಸಹಿತ ಪಶ್ಚಿಮ ಘಟ್ಟಪ್ರದೇಶ ಮತ್ತು ತಪ್ಪಲಿನ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಮತ್ತು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಮಂಗಳೂರು ಸಹಿತ ದ.ಕ. ಜಿಲ್ಲಾದ್ಯಂತ ಶನಿವಾರ ಧಾರಾಕಾರ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈ ಭಾಗದಲ್ಲಿ ಹರಿಯುವ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಕ್ಕಿ ಹರಿದು ನದಿತೀರದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿ ತೋಟಗಳೂ ಜಲಾವೃತಗೊಂಡಿವೆ. ಬಂಟ್ವಾಳದಲ್ಲಿ ನೇತ್ರಾವತಿ ನದಿನೀರಿನ ಅಪಾಯದ ಮಟ್ಟ 8.5 ಮೀ. ಆಗಿದ್ದು, ಶನಿವಾರ ಮಧ್ಯಾಹ್ನದ ಹೊತ್ತಿಗೆ 9.9 ಮೀ. ತಲುಪಿತ್ತು. ಬಳಿಕ ಇಳಿಕೆಯಾಗಿದ್ದು, ಸಂಜೆಯ ಹೊತ್ತಿಗೆ 9.3 ಮಿ.ಮೀ.ಗೆ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನಘಟ್ಟ ನಾಲ್ಕೈದು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲೇ ಮುಂದುವರಿದಿದೆ. ನೀರು ನುಗ್ಗಿದ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿಯಲ್ಲೂ ಉತ್ತಮ ಮಳೆಯಾಗಿದೆ.
ತುಂಗಭದ್ರಾ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ ಒಳಹರಿವು
ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆ ಒಳಹರಿವು ಶನಿವಾರ ಒಂದು ಲಕ್ಷ ಕ್ಯೂಸೆಕ್​ಗೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಜಲಾಶಯಕ್ಕೆ 14 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಟಿಬಿ ಡ್ಯಾಂ 100.855 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 54.521 ಟಿಎಂಸಿ ಅಡಿ ನೀರಿದೆ. ತುಂಗಾ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಜಿಲ್ಲೆಯ ಹರಪನಹಳ್ಳಿ, ಹೂವಿನ ಹಡಗಲಿ, ಸಿರಗುಪ್ಪ, ಹೊಸಪೇಟೆ ಹಾಗೂ ಕಂಪ್ಲಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಹಳೇ ಮೈಸೂರಲ್ಲಿ ಮಳೆ ಕ್ಷೀಣ
ಕೊಡಗಿನಲ್ಲಿ ಕಳೆದ 5 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ತನ್ನ ಅಬ್ಬರ ತಗ್ಗಿದೆ. ಲಕ್ಷ್ಮಣತೀರ್ಥ ನದಿ, ಭಾಗಮಂಡಲದ ತ್ರಿವೇಣಿ ಸಂಗಮ, ಕಾವೇರಿ, ಬಲಮುರಿ ನದಿಗಳಲ್ಲಿ ನೀರು ಕೊಂಚ ಇಳಿಮುಖಗೊಂಡಿದೆ. ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದ ಕೆಲ ರಸ್ತೆಗಳು ಕಡಿತಗೊಂಡಿದ್ದು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹಾಸನದಲ್ಲೂ ಮಳೆ ಬಿಡುವು ನೀಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಚಿಕ್ಕಮಗಳೂರಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್​ಗೆ ಹೆಚ್ಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಸಂಜೆ 7 ರಿಂದ ಶನಿವಾರ ಬೆಳಗ್ಗೆ 9ರವರೆಗೆ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 26 ಟಿಎಂಸಿ ನೀರಿದೆ.
ಆನಂದತೀರ್ಥ ಸ್ವಾಮೀಜಿ ಮೃತದೇಹ ಪತ್ತೆ
ಮಡಿಕೇರಿ: ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿರುವ ಗಜಗಿರಿ ಬೆಟ್ಟ ಕುಸಿದು ಭೂಸಮಾಧಿಯಾಗಿರುವ ಐವರ ಪೈಕಿ ಆನಂದತೀರ್ಥ ಸ್ವಾಮೀಜಿ (86) ಮೃತದೇಹ ಶನಿವಾರ ಪತ್ತೆಯಾಗಿದೆ. ಬೆಳಗ್ಗೆ 11 ಗಂಟೆಗೆ ಎನ್​ಡಿಆರ್​ಎಫ್ ತಂಡದವರು ಅಗ್ನಿಶಾಮಕದಳದೊಂದಿಗೆ ಶೋಧಕಾರ್ಯ ಪ್ರಾರಂಭಿಸಿದರು. ಮನೆ ಇದ್ದ ಸ್ಥಳದಿಂದ ಹತ್ತು ಅಡಿ ದೂರದಲ್ಲಿ, ನಾಲ್ಕು ಅಡಿ ಆಳದಲ್ಲಿ ಮಣ್ಣಿನೊಳಗೆ ಆನಂದತೀರ್ಥ ಅವರ ದೇಹ ಪತ್ತೆಯಾಯಿತು. ಅವಘಡ ಸಂಭವಿಸಿ ಮೂರು ದಿನ ಕಳೆದಿರುವುದರಿಂದ ದೇಹದಿಂದ ವಾಸನೆ ಬರುತ್ತಿತ್ತು. ಇದರೊಂದಿಗೆ 1 ಚೀಲದಲ್ಲಿದ್ದ ಕಾಯಿನ್ ಪತ್ತೆಯಾಗಿದೆ. ಬಳಿಕ ಮೊದಲ ದಿನದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಹಿರಿಯ ಸಹೋದರ ಆನಂದತೀರ್ಥ ಅವರ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ತಲಕಾವೇರಿ ಕ್ಷೇತ್ರದಿಂದ 2 ಕಿ.ಮೀ. ದೂರದಲ್ಲಿರುವ ಬಟ್ಟೆಕಾಡು ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಭೂ ಸಮಾಧಿಯಾಗಿರುವ ಟಿ.ಎಸ್. ನಾರಾಯಣಾಚಾರ್, ಅವರ ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ರವಿಕಿರಣ್, ಶ್ರೀನಿವಾಸ್ ಪತ್ತೆ ಕಾರ್ಯ ಭಾನುವಾರ ಮುಂದುವರಿಯಲಿದೆ. ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಶನಿವಾರ ಕರೊನಾ ಪರೀಕ್ಷೆ ನಡೆಸಿದ್ದು, ಭಾನುವಾರ ಭಾರತಕ್ಕೆ ಆಗಮಿಸಲಿದ್ದಾರೆ. ಸಹೋದರಿ ಸುಶೀಲಾ ಮಂಗಳೂರಿನಿಂದ ಆಗಮಿಸಿದ್ದು, ಸಹೋದರ ಆನಂದತೀರ್ಥ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ನಿತ್ಯ ಪೂಜೆ ಸ್ಥಗಿತ:ನಾರಾಯಾಣಾಚಾರ್ ಸೇರಿ ಐವರು ಭೂಸಮಾಧಿಯಾಗಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ತಲಕಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ನಿತ್ಯಪೂಜೆ ಸ್ಥಗಿತಗೊಂಡಿದೆ.
ತಲಾ 7 ಲಕ್ಷ ರೂ. ಪರಿಹಾರ:ಅರ್ಚಕರ ಕುಟುಂಬಸ್ಥರಿಗೆ ತಲಾ 7 ಲಕ್ಷ ರೂ. ಪರಿಹಾರ ನೀಡಲಾಗುವುದೆಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಘೊಷಿಸಿದ್ದಾರೆ.
ಕೃಷ್ಣಾ ನೀರಿನಲ್ಲಿ ಏರಿಳಿತ
ಬಾಗಲಕೋಟೆ/ವಿಜಯಪುರ: ಕೃಷ್ಣೆಯ ನೀರಿನ ಪ್ರಮಾಣದಲ್ಲಿ ಶನಿವಾರ ತಗ್ಗಿದ್ದರಿಂದ ಸಂಜೆ ವೇಳೆಗೆ ಆಲಮಟ್ಟಿ ಜಲಾಶಯದಿಂದ ನದಿಗೆ ಹರಿಬಿಡಲಾಗುತ್ತಿದ್ದ ನೀರಿನ ಪ್ರಮಾಣದಲ್ಲೂ ಕಡಿಮೆ ಮಾಡಲಾಗಿದೆ. ಶನಿವಾರ ಬೆಳಗ್ಗೆ 1,51,598ಕ್ಯೂಸೆಕ್ ಇದ್ದ ನೀರಿನ ಪ್ರಮಾಣ ಸಂಜೆ ವೇಳೆಗೆ 1,41,000 ಕ್ಯೂಸೆಕ್​ಗೆ ಇಳಿದಿದ್ದು, ಅಣೆಕಟ್ಟೆ ಮೂಲಕ ನದಿಗೆ 1,80,000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಡ್ಯಾಂಗೆ 1,75,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಮಲಪ್ರಭೆ ಅಬ್ಬರ ತಗ್ಗಿದೆ. ಘಟಪ್ರಭೆ ಅಬ್ಬರ ಮುಂದವರಿದು ರಸ್ತೆ ಸಂಪರ್ಕದ ಸೇತುವೆ ಮುಳುಗಿವೆ.
ಕೊಡಗಿನಲ್ಲಿ ದೇಶದಲ್ಲೇ ಅತ್ಯಧಿಕ ಮಳೆ!
ದೇಶದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಆ. 7ರಂದು ಶುಕ್ರವಾರ 235 ಮಿ.ಮೀ. ಮಳೆ ಕೊಡಗಿನಲ್ಲಿ ದಾಖಲಾಗಿದ್ದು, ಇದು ದೇಶದಲ್ಲಿಯೇ ಅತ್ಯಧಿಕ ಮಳೆ ಪ್ರಮಾಣವಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮಹಾರಾಷ್ಟ್ರದ ಮಹಬಲೇಶ್ವರ, ಮೆರಥೆರಾನ್ ವ್ಯಾಪ್ತಿ ಕೊಡಗಿನ ನಂತರ ಅತ್ಯಧಿಕ ಮಳೆ ಬಿದ್ದ ಪ್ರದೇಶಗಳಾಗಿದೆ. ದೇಶದಲ್ಲಿ ಕರ್ನಾಟಕ ರಾಜ್ಯ ಅತ್ಯಧಿಕ ಮಳೆಯಾದ ರಾಜ್ಯವಾಗಿದೆ. ಆ.8 ಮತ್ತು 9 ರಂದು ಕೊಡಗಿನಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆಯಿದೆಯಾದರೂ 10, 11 ಮತ್ತು 12ರಂದು ಮತ್ತೆ ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೆಆರ್​ಎಸ್ ಭರ್ತಿಗೆ 6 ಅಡಿ ಬಾಕಿ
ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಕೆಆರ್​ಎಸ್ ಅಣೆಕಟ್ಟೆಯಲ್ಲಿ ಮೂರೇ ದಿನದಲ್ಲಿ 13 ಅಡಿ(11 ಟಿಎಂಸಿ) ನೀರು ಸಂಗ್ರಹವಾಗಿದೆ. ಒಳಹರಿವು 86, 270 ಕ್ಯೂಸೆಕ್ ಇದ್ದು, 74,642 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಸಂಗ್ರಹದ ಅಣೆಕಟ್ಟೆಯಲ್ಲಿ ಶನಿವಾರ 118.35 ಅಡಿ ನೀರಿದೆ.
ಮಲೆನಾಡಿನಲ್ಲಿ ತಗ್ಗಿದ ಮಳೆ
ಶಿವಮೊಗ್ಗ: ಮಲೆನಾಡಿನಲ್ಲಿ ಶನಿವಾರ ಮಳೆ ಆರ್ಭಟ ತುಸು ತಗ್ಗಿದರೂ ನದಿಗಳು ತುಂಬಿ ಹರಿಯುತ್ತಿವೆ. ನಾಲ್ಕು ದಿನಗಳ ವರ್ಷಧಾರೆಯ ಹಾನಿ ಈಗ ಗೋಚರವಾಗುತ್ತಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಮುಂದುವರಿದಿದೆ. ಜಲಾಶಯಗಳಿಗೆ ಜೀವಕಳೆ: ಲಿಂಗನಮಕ್ಕಿ ಅಣೆಕಟ್ಟೆಯ ನೀರಿನ ಮಟ್ಟ 1,788 (ಗರಿಷ್ಠ 1,819 ಅಡಿ)ಕ್ಕೆ ಏರಿಕೆಯಾಗಿದ್ದು 56,956 ಕ್ಯೂಸೆಕ್ ನೀರು ಬರುತ್ತಿದೆ. ಲಕ್ಕವಳ್ಳಿ ಭದ್ರಾ ಡ್ಯಾಂ ಮಟ್ಟ 168.7 (ಗರಿಷ್ಠ 186 ಅಡಿ) ತಲುಪಿದ್ದು 51,720 ಕ್ಯೂಸೆಕ್ ಒಳಹರಿವಿದೆ. ಗಾಜನೂರು ತುಂಗಾ ಜಲಾಶಯಕ್ಕೆ (588.24 ಮೀಟರ್) 71,517 ಕ್ಯೂಸೆಕ್ ನೀರು ಬರುತ್ತಿದ್ದು ಎಲ್ಲ ನೀರನ್ನೂ ಹೊಸಪೇಟೆ ತುಂಗಭದ್ರಾ ಡ್ಯಾಂಗೆ ಹರಿಸಲಾಗುತ್ತಿದೆ.
ಅತಿವೃಷ್ಟಿಸಂದರ್ಭ ಅನುಮತಿ ಅಗತ್ಯವಿಲ್ಲ
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕೆ ತುರ್ತು ನಿರ್ಧಾರಗಳನ್ನು ಕೈಗೊಳ್ಳಲು ಅನುಮತಿಗಾಗಿ ಕಾಯಬೇಡಿ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಮಳೆ ಹಾನಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆರವಾಗಲು ನನ್ನ ಒಪ್ಪಿಗೆ ಕಾಯದೆ ತುರ್ತು ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಮುಖ್ಯ ಕಾರ್ಯದರ್ಶಿಗೆ ಸಿಎಂ ದೂರವಾಣಿಯಲ್ಲಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸೂಚನೆ ಬೆನ್ನಲ್ಲೇ ಮಳೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಕರೆ ಮಾಡಿ ರ್ಚಚಿಸಿದ್ದಾರೆ. ಸೋಮವಾರ ಪ್ರಧಾನ ಮಂತ್ರಿ ಜತೆಗಿನ ವಿಡಿಯೋ ಸಂವಾದ ವೇಳೆ ಮಾಹಿತಿ ನೀಡಲು ಅಗತ್ಯ ಮಾಹಿತಿ ಬೇಕಾಗಿದೆ ಎಂದು ಡಿಸಿಗಳಿಗೆ ಸೂಚನೆ ನೀಡಿದ್ದು, ಭಾನುವಾರ ಮಧ್ಯಾಹ್ನದೊಳಗೆ ನಷ್ಟದ ಪ್ರಾಥಮಿಕ ಅಂದಾಜು ಸಲ್ಲಿಸುವಂತೆ ಸೂಚಿಸಿದ್ದಾರೆ.
ಕಪಿಲಾ ನದಿಯಲ್ಲಿ ಪ್ರವಾಹ
ನಂಜನಗೂಡು ಕಪಿಲಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ಪಟ್ಟಣದಲ್ಲಿನ ನದಿ ಪಾತ್ರದ ದೇವಾಲಯಗಳು, ನೂರಾರು ಮನೆಗಳು ಜಲಾವೃತವಾಗಿವೆ. ಮಲ್ಲನಮೂಲೆ ಗುರುಕಂಬಳೀಶ್ವರ ಮಠದ ಬಳಿ ಮೈಸೂರು- ನಂಜನಗೂಡು ರಾಷ್ಟ್ರೀಯ ಹೆದ್ದಾರಿಗೂ ನೀರು ನುಗ್ಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದ ಬಳಿ ಪ್ರವಾಹ ನೀರು ಚಾಚಿ ನಿಂತಿದೆ.
ಜಲಾಶಯಗಳು ಭರ್ತಿ
ಮೈಸೂರು: ಎಚ್.ಡಿ.ಕೋಟೆಯ ಕಬಿನಿ ಮತ್ತು ನುಗು ಜಲಾಶಯ ಬಹುತೇಕ ಭರ್ತಿಯಾಗಿದ್ದು, ಈ ಎರಡೂ ಜಲಾಶಯಗಳಿಂದ ಶನಿವಾರ 80 ಸಾವಿರ ಕ್ಯೂಸೆಕ್​ಗೂ ಅಧಿಕ ನೀರನ್ನು ನದಿಗೆ ಬಿಡಲಾಗಿದೆ. ಕಬಿನಿ ಜಲಾಶಯಕ್ಕೆ 64,454 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸಂಜೆ ಜಲಾಶಯದಿಂದ 60 ಸಾವಿರ ಕ್ಯೂಸೆಕ್​ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿದೆ. ಪ್ರಸ್ತುತ 2277.54 ಅಡಿ ನೀರಿದೆ(ಗರಿಷ್ಠ 2284)ಜಲಾಶಯ ಮುಂಭಾಗದಲ್ಲಿ ಬರುವ ಬೀಚನಹಳ್ಳಿ, ಮಾಗುಡಿಲು, ನೇರಳೆ, ತುಂಬಸೋಗೆ, ಕೆ.ಬೆಳ್ತೂರು, ಮಾದಪುರ, ಹೊಮ್ಮರಗಳ್ಳಿ, ಹಂಪಾಪುರ ಗ್ರಾಮಗಳ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
