ಬೆಂಗಳೂರು:ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ಅಂಗಡಿ ಮಾಲೀಕರ ಬಳಿ ಕೆಲಸ ಮಾಡುವ ಇಬ್ಬರನ್ನು ಬೆದರಿಸಿ ನಗದು ಸೇರಿ ೧.೧೨ ಕೋಟಿ ರೂ.ಮೌಲ್ಯದ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿರುವ ಪ್ರಕರಣ ನಡೆದಿದ್ದು, ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.೧೧ ರಂದು ರಾತ್ರಿ ೧೧ ಗಂಟೆ ಸುಮಾರಿಗೆ ಆನಂದರಾವ್ ವೃತ್ತದ ಗ್ರೀನ್ ಲೈನ್ ಟ್ರಾವೆಲ್ಸ್ ಕಚೇರಿ ಬಳಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರಾಯಚೂರು ಮೂಲದ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಎಂಬುವವರಿಂದ ೧೯ ಸಾವಿರ ರೂ. ನಗದು, ತಲಾ ಒಂದು ಕೆ.ಜಿ. ತೂಕದ ಚಿನ್ನದ ಬಿಸ್ಕತ್ ಹಾಗೂ ೨೦೦ ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಅಬ್ದುಲ್ ರಜಾಕ್ ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಅಬ್ದುಲ್ ರಜಾಕ್ ರಾಯಚೂರಿನ ನೇತಾಜಿನಗರದ ಶರಫ್ ಬಜಾರ್‌ನ ಚಿನ್ನಾಭರಣ ವ್ಯಾಪಾರಿ ಮಹಮ್ಮದ್ ಖಾದೀರ್ ಪಾಷಾ ಅವರ ಕಾರು ಚಾಲಕನಾಗಿದ್ದಾರೆ. ಮಾ.೧೦ರಂದು ಮಾಲೀಕ ಖಾದೀರ್ ಪಾಷಾ ಅವರು, ಅಬ್ದುಲ್ ರಜಾಕ್‌ಗೆ ೫೬ ಲಕ್ಷ ರೂ. ನಗದು ಹಣ ನೀಡಿ, ಬೆಂಗಳೂರಿನ ರಾಜಾ ಮಾರ್ಕೆಟ್‌ನ ಬಾಪೂ ಭಾಯ್ ಮತ್ತು ಅಜಯ್-ವಿಜಯ್‌ಎಂಬುವವರ ಬಳಿ ಚಿನ್ನದ ಗಟ್ಟಿ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಅದರಂತೆ ಅಬ್ದುಲ್ ರಜಾಕ್ ಅಂದು ರಾತ್ರಿಯೇ ಹೊರಟು ಖಾಸಗಿ ಬಸ್ಸಿನಲ್ಲಿ ಮಾ.೧೧ರ ಮುಂಜಾನೆ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ಅಕ್ಕಿಪೇಟೆಯಲ್ಲಿರುವ ಬಾಪೂ ಭಾಯ್ ಅವರ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.
ಇದನ್ನೂ ಓದಿ:ಮಾಜಿ ಶಾಸಕರ ಪುತ್ರನ ಮೇಲೆ ನಾನ್ ಬೇಲೆಬಲ್ ವಾರೆಂಟ್ ಜಾರಿ!
ಈ ನಡುವೆ ರಾಯಚೂರು ಮೂಲದ ಚಿನ್ನಾಭರಣ ವ್ಯಾಪಾರಿ ಜಿ.ಮಲ್ಲಿಕಾರ್ಜುನ್ ತನ್ನ ಬಳಿ ಸಹಾಯಕ ಮಲ್ಲಯ್ಯಗೆ ೬೦ ಲಕ್ಷ ರೂ. ಹಣ ಕೊಟ್ಟು ಬೆಂಗಳೂರಿನ ಬಾಪೂ ಭಾಯ್ ಮತ್ತು ಅಜಯ್-ವಿಜಯ್ ಎಂಬುವವರ ಬಳಿ ಚಿನ್ನದ ಗಟ್ಟಿ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಅಂತೆಯೆ ರಾಯಚೂರಿನ ಚಿನ್ನಾಭರಣ ವ್ಯಾಪಾರಿ ದಿನೇಶ್ ಅವರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮಲ್ಲಯ್ಯನ ಮಗ ಸುನೀಲ್‌ಗೆ ಮಾಲೀಕ ೭೫ ಲಕ್ಷ ರೂ. ಹಣ ಕೊಟ್ಟು ಬೆಂಗಳೂರಿನ ಮನೀಶ್ ಎಂಬುವವರ ಬಳಿ ಚಿನ್ನದ ಗಟ್ಟಿ ತರಲು ಸೂಚಿಸಿದ್ದಾರೆ. ಅದರಂತೆ ತಂದೆ-ಮಗ ಮಲ್ಲಯ್ಯ ಮತ್ತು ಸುನೀಲ್ ಕುಮಾರ್ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ರೂಮ್ ಬಾಡಿಗೆ ಪಡೆದು ತಂಗಿದ್ದರು.
ಮಲ್ಲಯ್ಯ ಮಾ.೧೧ರಂದು ಬೆಳಗ್ಗೆ ೧೧.೩೦ಕ್ಕೆ ಅಬ್ದುಲ್ ರಜಾಕ್‌ಗೆ ಕರೆ ಮಾಡಿ ತಾನು ಮತ್ತು ತನ್ನ ಮಗ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದು, ಲಾಡ್ಜ್‌ನಲ್ಲಿ ಉಳಿದುಕೊಂಡಿರುವ ವಿಚಾರ ತಿಳಿಸಿದ್ದಾನೆ. ಅಲ್ಲಿಗೆ ಬರುವಂತೆ ಕರೆದಿದ್ದಾನೆ. ಅದರಂತೆ ಅಬ್ದುಲ್ ರಜಾಕ್ ಲಾಡ್ಜ್‌ಗೆ ಬಂದಿದ್ದು, ಬಳಿಕ ಮೂವರು ಸೇರಿ ತಿಂಡಿ ತಿಂದು ಬಳಿಕ ಚಿನ್ನದ ಗಟ್ಟಿ ಖರೀದಿಗೆ ತೆರಳಿದ್ದಾರೆ. ಸಂಜೆ ಏಳು ಗಂಟೆಗೆ ಮೂವರು ಚಿನ್ನದ ಗಟ್ಟಿ ಖರೀದಿಸಿಕೊಂಡು ವಾಪಾಸ್ ಲಾಡ್ಜ್‌ಗೆ ಬಂದಿದ್ದಾರೆ. ಬಳಿಕ ಅಂದೇ ರಾತ್ರಿ ೧೧ ಗಂಟೆಗೆ ಹೊರಡಲಿದ್ದ ಗ್ರೀನ್ ಲೈನ್ ಟ್ರಾವೆಲ್ಸ್‌ನ ಬಸ್ಸಿನಲ್ಲಿ ರಾಯಚೂರಿಗೆ ತೆರಳಲು ರಾತ್ರಿ ೧೦.೪೫ಕ್ಕೆ ಆನಂದರಾವ್ ವೃತ್ತದ ಗ್ರೀನ್ ಲೈನ್ ಟ್ರಾವೆಲ್ಸ್‌ನ ಕಚೇರಿ ಬಳಿ ಬಂದಿದ್ದಾರೆ. ಈ ವೇಳೆ ಸುನೀಲ್ ಕುಮಾರ್‌ನನ್ನು ಗ್ರೀನ್ ಲೈನ್ ಟ್ರಾವೆಲ್ಸ್‌ನ ಕಚೇರಿಯಲ್ಲಿ ಕೂರಿಸಿ, ಮಲ್ಲಯ್ಯ ಮತ್ತು ಅಬ್ದುಲ್ ರಜಾಕ್ ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ತೆರಳಲು ಹೋಗುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಎದುರಾಗಿದ್ದಾರೆ. ‘ನಾವು ಪೊಲೀಸರು. ನಿಮ್ಮ ಮೇಲೆ ಕಳೆದ ಮೂರು ತಿಂಗಳಿಂದ ನಿಗಾವಹಿಸಿದ್ದೇವೆ’ ಎಂದು ಮಲ್ಲಯ್ಯ ಮತ್ತು ಅಬ್ದುಲ್ ರಜಾಕ್‌ನನ್ನು ಬೆದರಿಸಿ ಅವರ ಬಳಿಯಿದ್ದ ಚಿನ್ನದಗಟ್ಟಿ ಹಾಗೂ ಚಿನ್ನಾಭರಣಗಳಿದ್ದ ಬ್ಯಾಗ್ ಕಸಿದುಕೊಂಡಿದ್ದಾರೆ. ಮಲ್ಲಯ್ಯನ ಬಳಿಯಿದ್ದ ೧೯ ಸಾವಿರ ರೂ. ನಗದು ಕಿತ್ತುಕೊಂಡಿದ್ದಾರೆ.
ಇದನ್ನೂ ಓದಿ:ಆಸ್ಕರ್​ನಲ್ಲಿ ಮಲಾಲಾ ಯೂಸುಫ್​ಝಾಯ್​ ಪ್ರತ್ಯಕ್ಷರಾಗಿದ್ದು ಯಾಕೆ?

ದುಷ್ಕರ್ಮಿಗಳು ಒಂದು ಆಟೋ ರಿಕ್ಷಾ ಕರೆದು ಇಬ್ಬರನ್ನು ಆಟೋದಲ್ಲಿ ಹತ್ತಿಸಿಕೊಂಡು ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿಗೆ ತೆರಳಿದ್ದಾರೆ. ಅಲ್ಲಿ ಮಲ್ಲಯ್ಯನನ್ನು ಕೆಳಗೆ ಇಳಿಸಿ ಬಳಿಕ ಮುಂದೆ ಸಾಗಿ ನೆಹರೂ ತಾರಾಲಯದ ಬಳಿ ಇರುವ ಚೌಡಯ್ಯ ರಸ್ತೆಯಲ್ಲಿ ಅಬ್ದುಲ್ ರಜಾಕ್‌ನನ್ನು ಇಳಿಸಿದ್ದಾರೆ. ಈ ವೇಳೆ ಇಬ್ಬರೂ ಡಿಸಿ ಕಚೇರಿ ಬಳಿ ಬನ್ನಿ ಎಂದು ಹೇಳಿ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
