ಪಂಕಜ ಕೆ.ಎಂ. ಬೆಂಗಳೂರು
ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮೇಲ್ವಿಚಾರಣೆಗೆ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ (ಆರ್‌ಜಿಐಸಿಡಿ) 40 ಲಕ್ಷ ರೂ. ವೆಚ್ಚದಲ್ಲಿ ‘ರೋಬೋ ಡಾಕ್ಟರ್’ ಅಳವಡಿಸಲಾಗಿದೆ. ಈ ಮೂಲಕ ಈ ಸೌಲಭ್ಯ ಅಳವಡಿಸಿಕೊಂಡಿರುವ ರಾಜ್ಯದ ಮೊದಲ ಸರ್ಕಾರಿ ಆಸ್ಪತ್ರೆ ಎನಿಸಿದೆ.
ರೋಬೋ ಡಾಕ್ಟರ್ ಅನ್ನು ಆಸ್ಪತ್ರೆಯ ಟೆಲಿ ಕಮಾಂಡ್ ಸೆಂಟರ್ ಮೂಲಕವೇ ನಿಯಂತ್ರಿಸಲಾಗುತ್ತದೆ. ವೈದ್ಯರ ಸೂಚನೆ ಮೇರೆಗೆ ರೋಬೋ ಡಾಕ್ಟರ್ ಐಸಿಯುನಲ್ಲಿರುವ ರೋಗಿಯ ಬಳಿ ಹೋಗಿ ಅವರ ರಕ್ತದೊತ್ತಡ, ಆಮ್ಲಜನಕದ ಮಟ್ಟ, ವೆಂಟಿಲೇಟರ್ ರೆಕಾರ್ಡ್ ಸೇರಿ ಹಲವು ಮಾಹಿತಿ ರವಾನಿಸಲಿದೆ. ಇದರಿಂದಾಗಿ ವೈದ್ಯರು ಪದೇಪದೆ ರೋಗಿಯ ಬಳಿ ಹೋಗುವ ಅಗತ್ಯವಿಲ್ಲ. ಬದಲಿಗೆ ಕಮಾಂಡ್ ಸೆಂಟರ್‌ನಲ್ಲಿ ಕುಳಿತೇ ಮಾನಿಟರ್ ಮೂಲಕವೇ ತಿಳಿದು, ಶುಶ್ರೂಷಕರಿಗೆ ಸೂಚನೆಗಳನ್ನು ನೀಡಬಹುದು.
ಸೋಂಕುಮುಕ್ತ ಸೇವೆ:ಐಸಿಯುನಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ರೋಗಿಯ ಸಂಬಂಧಿಕರು ಪದೇಪದೆ ಹೋಗುವುದರಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ರೋಬೋ ಡಾಕ್ಟರ್ ಸೇವೆ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಅಗತ್ಯವಿದ್ದ ಸಂದರ್ಭದಲ್ಲಿ ಮಾತ್ರವೇ ಶುಶ್ರೂಷಕರು ಐಸಿಯುಗೆ ಹೋಗಲು ಅವಕಾಶವಿದ್ದು, ಉಳಿದಂತೆ ಕಮಾಂಡ್ ಸೆಂಟರ್‌ನಿಂದ ವೈದ್ಯರು ನಿರಂತರ ನಿಗಾ ವಹಿಸಲಿದ್ದಾರೆ. ರೋಗಿಯ ಸಂಬಂಧಿಕರು ಮಾನಿಟರ್ ಮೂಲಕವೇ ಆರೋಗ್ಯ ಸ್ಥಿತಿ, ಚಿಕಿತ್ಸೆಯ ಮಾಹಿತಿ ಪಡೆಯಬಹುದು, ಮಾತುಕತೆ ನಡೆಸಬಹುದಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್.
ಕೋವಿಡ್ ಸಂದರ್ಭದಲ್ಲಿ ಬಳಕೆ: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂಸ್ಥೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೋಷಿಸಿ, ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಆ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಪ್ರಾಯೋಗಿಕವಾಗಿ ಈ ರೋಬೋ ಡಾಕ್ಟರ್ ಸೇವೆ ಬಳಸಿಕೊಳ್ಳಲಾಗಿತ್ತು. ಉತ್ತಮ ಫಲಿತಾಂಶ ದೊರೆತ ಪರಿಣಾಮ ಈಗ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಡಾ.ಸಿ. ನಾಗರಾಜ್ ಹೇಳಿದರು. ಸಂಸ್ಥೆಯಲ್ಲಿ 56 ಐಸಿಯು ಬೆಡ್‌ಗಳಿವೆ. ಇಲ್ಲಿ ರೋಗಿಗಳ ನಿರ್ವಹಣೆ ಮಾಡಲು ರೋಬೋ ಡಾಕ್ಟರ್ ಅನ್ನು ಒಂದು ಬೆಡ್‌ನಿಂದ ಇನ್ನೊಂದು ಬೆಡ್‌ಗೆ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರೋಬಾಟ್ ಮೇಲೆ ನಿಗಾ ಇರಿಸಲು ಹಾಗೂ ಐಸಿಯುನ ರೋಗಿಗಳ ಆರೋಗ್ಯ ಸ್ಥಿತಿ ಅರಿಯಲು ನಿಯಂತ್ರಣ ಕೊಠಡಿಯಲ್ಲಿ ಬೃಹತ್ ಪರದೆ ಅಳವಡಿಸಲಾಗಿದೆ. ಇದರ ಮೂಲಕ ರೋಬೋ ಡಾಕ್ಟರ್ ಕಾರ್ಯವಿಧಾನ ವೀಕ್ಷಿಸುತ್ತ, ಸೂಚನೆಗಳನ್ನು ನೀಡಲು ಹಾಗೂ ರೋಗಿಯ ದತ್ತಾಂಶ ಸಂಗ್ರಹಿಸಲು ಸಹಕಾರಿಯಾಗಿದೆ ಎಂದರು.
ಹೆಚ್ಚುತ್ತಿದೆ ಶ್ವಾಸಕೋಶ ಸಮಸ್ಯೆ:ವಾಯುಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿದ್ದು, ಇಂತಹ ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆಯ ಅಗತ್ಯತೆ ಹೆಚ್ಚಿದೆ. ಆದರೆ ಖಾಸಗಿಯಲ್ಲಿ ಇದಕ್ಕೆ ಚಿಕಿತ್ಸೆ ಪಡೆಯಲು ಬಡ ರೋಗಿಗಳಿಗೆ ಕಷ್ಟಸಾಧ್ಯ. ಇದನ್ನು ಮನಗೊಂಡು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆಯು ಸೇವೆ, ಸೌಲಭ್ಯ ಹಾಗೂ ಸ್ವಚ್ಛತೆಗಾಗಿ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ. ಬಡ ರೋಗಿಗಳು ಇಲ್ಲಿ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆ ಹಾಗೂ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಕೋವಿಡ್ ಸಂದರ್ಭದಲ್ಲಿ ರೋಬಾಟ್ ಬಳಸಿಕೊಳ್ಳಲಾಗಿತ್ತು. ಅದು ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದರಿಂದಾಗಿ ಇತರ ರೋಗಿಗಳ ನಿಗಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇತರೆ ಆರೋಗ್ಯ ಸಂಸ್ಥೆಗಳು ಸಹ ಈ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಐಸಿಯುನಲ್ಲಿರುವ ರೋಗಿಗಳಿಗೆ ಸೋಂಕುಮುಕ್ತ ಚಿಕಿತ್ಸೆ ನೀಡಬಹುದಾಗಿದೆ.-ಡಾ.ಸಿ. ನಾಗರಾಜ್, ಆರ್‌ಜಿಐಸಿಡಿ ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
