ಹುಬ್ಬಳ್ಳಿ:ರಾಜ್ಯದ ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ)ಗಳಲ್ಲಿ ಸಾರ್ವಜನಿಕರಿಗೆ ಸೇವೆ ವಿಳಂಬವಾಗಬಾರದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹಾಗೂ ಸರ್ವರ್​ಗಳನ್ನು ಈ ಕೂಡಲೇ ಚುರುಕುಗೊಳಿಸಬೇಕೆಂದು ಸರ್ಕಾರ ಸಾರಿಗೆ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
‘ವಿಜಯವಾಣಿ’ಯಲ್ಲಿ ಶನಿವಾರ (ಜ.4) ‘ಆರ್​ಟಿಒನಲ್ಲಿ ಆನ್​ಲೈನ್ ಕಿರಿಕ್’ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಸಾರಿಗೆ ಇಲಾಖೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ, ಇಲಾಖೆಯ ಪ್ರಾದೇಶಿಕ ಕಚೇರಿಗಳಲ್ಲಿ ಡಿಡಿ, ನಗದು ಸ್ವೀಕರಿಸಲೇಬಾರದು. ಡಿಜಿಟಲ್ ಪೇಮೆಂಟ್ ಸಿಸ್ಟಂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಬೇಕು. ಯಾವುದೇ ಕಾರಣಕ್ಕೂ ವಾಹನ ಮಾಲೀಕರು ಕಚೇರಿಗೆ ಅಲೆದಾಡುವಂತೆ ಆಗಬಾರದು. ಅಗತ್ಯ ವ್ಯವಸ್ಥೆ ರೂಪಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದರ ಪರಿಣಾಮವಾಗಿ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿಟಲೀಕರಣ ಚುರುಕುಗೊಂಡಿದ್ದು, ಆನ್​ಲೈನ್ ಪೇಮೆಂಟ್ ವ್ಯವಸ್ಥೆ ತೀವ್ರಗತಿಯಲ್ಲಿ ಸುಧಾರಿಸಿದೆ. ಸಚಿವರ ಸೂಚನೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಶನಿವಾರವೇ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಸಭೆ ನಡೆಸಿ ಆನ್​ಲೈನ್ ವ್ಯವಸ್ಥೆಯಲ್ಲಿಯ ಲೋಪದೋಷಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಜಗತ್ತು ಡಿಜಿಟಲೀಕರಣದತ್ತ ವೇಗವಾಗಿ ಹೊರಟಿರುವಾಗ ಸಾರಿಗೆ ಇಲಾಖೆಯಲ್ಲಿ ಡಿಜಿಟಲ್ ಪೇಮೆಂಟ್​ಗೆ
ನೆಟ್​ವರ್ಕ್, ಸರ್ವರ್ ಇಲ್ಲ ಎಂದು ಹೇಳುವುದು ಎಷ್ಟು ಸರಿ ಎಂಬುದನ್ನು ಮನಗಂಡ ಇಲಾಖೆ ಹಿರಿಯ ಅಧಿಕಾರಿಗಳು, ಕುಂದುಕೊರತೆಗಳನ್ನು ಪರಿಹರಿಸುವಂತೆ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇ- ಗವರ್ನನ್ಸ್ ಆಯುಕ್ತ ಶಿವರಾಜ ಪಾಟೀಲ ಹಾಗೂ ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ, ಇತರ ಅಧಿಕಾರಿಗಳು ಸಭೆ ನಡೆಸಿದ್ದು, ಸರ್ವರ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಸ್ಪೀಡ್​ಅಪ್ ಮಾಡಲು ಮಾರ್ಗದರ್ಶನ ಮಾಡಿದ್ದಾರೆ.
ಖಜಾನೆ-2 ಮೂಲಕ ಶುಲ್ಕ ಜಮಾ ಆಗುವಲ್ಲಿ ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿತ್ತು. ಗ್ರಾಹಕರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯೂ ಇತ್ತು. ಶನಿವಾರದಿಂದಲೇ ಆರ್​ಟಿಒ ಸರ್ವರ್ ಬ್ಯಾಂಕ್ ಸರ್ವರ್​ಗೆ ಸಂಪರ್ಕ ಹೊಂದಿ, ಅಲ್ಲಿಂದ ಖಜಾನೆಗೆ ಜಮಾ ಆಗುವಂತೆ ಮಾರ್ಪಡಿಸಿದ್ದು, ವಿಳಂಬಕ್ಕೆ ಅವಕಾಶ ಇಲ್ಲದಂತಾಗಿದೆ.
ಧಾರವಾಡ ಪೂರ್ವ ಆರ್​ಟಿಒದ ಹೆಸರು ಆನ್​ಲೈನ್​ನಲ್ಲಿ ಹುಬ್ಬಳ್ಳಿ ಎಂದು, ಕಚೇರಿ ಸೀಲ್​ನಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ಎಂದು ಬೇರೆ ಬೇರೆಯಾಗಿತ್ತು. ಇದರಿಂದ ತೊಂದರೆಯಾಗುತ್ತಿರುವ ಕುರಿತು ಸಹ ‘ವಿಜಯವಾಣಿ’ ಗಮನ ಸೆಳೆದಿತ್ತು. ಆನ್​ಲೈನ್ ಮತ್ತು ದಾಖಲೆಯಲ್ಲಿ ಒಂದೇ ರೀತಿ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದರು. ಇದು ದೆಹಲಿ ಸರ್ವರ್​ನಿಂದಲೇ ಆಗಬೇಕಿರುವುದರಿಂದ ಈ ಬಗ್ಗೆ ದೆಹಲಿ ಅಧಿಕಾರಿಗಳೊಂದಿಗೆ ಸಾರಿಗೆ ಆಯುಕ್ತರು ಮಾತುಕತೆ ನಡೆಸಿದ್ದಾರೆ. ಒಂದೆರಡು ದಿನದಲ್ಲಿ ಅದು ಬಗೆ ಹರಿಯಲಿದೆ ಎಂದೂ ತಿಳಿಸಲಾಗಿದೆ.
ಡಿಜಿಟಲ್ ವ್ಯವಸ್ಥೆಯಿಂದಾಗಿ ಈಗ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಾಗುತ್ತಿದೆ. ಅಂತಹ ತ್ವರಿತ ವ್ಯವಸ್ಥೆ ಆರ್​ಟಿಒ ಕಚೇರಿಯಲ್ಲೂ ಜಾರಿಯಾಗಬೇಕು. ಆದರೆ, ಕಳೆದ ಹಲವು ವರ್ಷಗಳಿಂದ ಧಾರವಾಡ ಸೇರಿ ವಿವಿಧ ಜಿಲ್ಲೆಯ ಆರ್​ಟಿಒ ಕಚೇರಿಗಳಲ್ಲಿ ಆನ್​ಲೈನ್ ಪೇಮೆಂಟ್ ಮೇಲಿಂದ ಮೇಲೆ ಫೇಲ್ ಆಗುತ್ತಿತ್ತು. ಈ ಬಗ್ಗೆ ಬೇಸತ್ತು ಹೋಗಿದ್ದ ವಾಹನ ಮಾಲೀಕರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ವ್ಯವಸ್ಥೆ ಸರಿಹೋಗಿರಲಿಲ್ಲ. ಜನರು ಕೆಲಸಕ್ಕಾಗಿ ತಮ್ಮ ಟೇಬಲ್​ಗೆ ಬರಬೇಕು ಎಂದು ಕೆಲ ಅಧಿಕಾರಿ-ಸಿಬ್ಬಂದಿ ಅಪೇಕ್ಷಿಸುತ್ತಿದ್ದರು. ಒಳ ವ್ಯವಹಾರ ನಡೆಯುವಂತೆ ನೋಡಿಕೊಳ್ಳುತ್ತಿದ್ದರು ಎಂಬ ಆರೋಪದ ಬಗ್ಗೆ ‘ವಿಜಯವಾಣಿ’ ಗಮನ ಸೆಳೆದಿತ್ತು.
ಆನ್​ಲೈನ್ ಪೇಮೆಂಟ್ ವ್ಯವಸ್ಥೆ ಸುಗಮಗೊಳಿಸ ಲಾಗಿದೆ. ಧಾರವಾಡ ಪೂರ್ವ ಆರ್​ಟಿಒ  ಆನ್​ಲೈನ್​ನಲ್ಲಿ ಹುಬ್ಬಳ್ಳಿ ಆರ್​ಟಿಒ ಎಂದಿದ್ದನ್ನು ಬದಲಿಸು ವಂತೆ ದೆಹಲಿ ಸರ್ವರ್ ನಿರ್ವಹಣೆ ಮಾಡುವವರ ಗಮನಕ್ಕೆ ತರಲಾಗಿದೆ. 1-2 ದಿನದಲ್ಲಿ ಅದು ಬದಲಾವಣೆಯಾಗಲಿದೆ.
| ಸಾಂಬ್ರಾಣಿ ಎಂ. ಜಂಟಿ ಸಾರಿಗೆ ಆಯುಕ್ತರು, ಧಾರವಾಡ
ಈ ತಿಂಗಳಿನಿಂದ ಸಾರಿಗೆ ಕಚೇರಿಗಳಲ್ಲಿ ಯಾವುದೇ ಸೇವೆ ವಿಳಂಬವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅದಕ್ಕೆ ತಾಂತ್ರಿಕ ಇಲಾಖೆ ಯಿಂದಲೂ ಭರವಸೆ ಸಿಕ್ಕಿದೆ. ಪೇಮೆಂಟ್ ವ್ಯವಸ್ಥೆ ಸರಿ ಹೋಗಿದ್ದು, ಕಾಯುವ ಪರಿಸ್ಥಿತಿ ದೂರವಾಗಿದೆ.
| ಅಪ್ಪಯ್ಯ ನಾಲತವಾಡ ಧಾರವಾಡ ಪೂರ್ವ ಆರ್​ಟಿಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 20 =
Remember me
