ಬೆಂಗಳೂರು:ಬಹುನೀರಿಕ್ಷಿತ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.9 ಕಡಿಮೆ. ಈ ಬಾರಿ ಫಲಿತಾಂಶ ಕಡಿಮೆಯಾಗಲು ವಿದ್ಯಾರ್ಥಿಗಳಲ್ಲಿದ್ದ ಪರೀಕ್ಷೆ ಭಯವೇ ಕಾರಣ ಎನ್ನಲಾಗಿದೆ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ, ನಗರ-ಪಟ್ಟಣಗಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು (ಶೇ.77.18) ಅಧಿಕ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಜಿಲ್ಲಾವಾರು ರ‍್ಯಾಂಕಿಂಗ್ ಬದಲಾಗಿ ಶ್ರೇಣಿಕೃತ ರ‍್ಯಾಂಕಿಂಗ್ ನೀಡಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ ಪಡೆದಿದ್ದರೆ ಯಾದಗಿರಿ ಕೊನೇ ಸ್ಥಾನದಲ್ಲಿದೆ.
ಕರೊನಾ ಭೀತಿ ನಡುವೆ ಪರೀಕ್ಷೆ ನಡೆಸಿ, ಕರೊನಾ ಕಾಲದಲ್ಲೇ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಸೋಮವಾರ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕರೊನಾ ಲಾಕ್​ಡೌನ್ ಕಾರಣಕ್ಕಾಗಿ ಮಾರ್ಚ್-ಏಪ್ರಿಲ್​ನಲ್ಲಿ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂನ್-ಜುಲೈನಲ್ಲಿ ನಡೆಸಲಾಗಿತ್ತು. ಈ ವರ್ಷ 8,48,203 ಅಭ್ಯರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದರು. 8,11,050 ಹಾಜರಾಗಿದ್ದು, 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.71.80 ಫಲಿತಾಂಶ ಬಂದಿದ್ದು, ಕಳೆದ ವರ್ಷ 73.70 ಇತ್ತು ಎಂದು ವಿವರಿಸಿದರು.
19,086 ವಿದ್ಯಾರ್ಥಿಗಳು ಕನಿಷ್ಠ ಹಾಜರಾತಿ ಇಲ್ಲದೆ ಪರೀಕ್ಷೆ ಬರೆಯುವ ಅರ್ಹತೆ ಕಳೆದುಕೊಂಡಿದ್ದರು. 18,607 ವಿದ್ಯಾರ್ಥಿಗಳು ಕರೊನಾ ಕಾರಣದಿಂದ ಪೂರಕ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದರು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ನಡೆಯುತ್ತೋ.. ನಡೆಯು ವುದಿಲ್ಲವೋ ಎಂಬ ಆತಂಕ ಫಲಿತಾಂಶ ಕಡಿಮೆಗೆ ಕಾರಣವಾಗಿರಬಹುದು ಎಂದರು.
11 ದ್ವಿತೀಯ ರ್ಯಾಂಕ್:ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನಿರುದ್ಧ ಸುರೇಶ್ ಗುಟ್ಟಿಕಾರ್, ಬೆಂಗಳೂರು ಉತ್ತರ ವಿವಿಎಸ್ ಸರ್ದಾರ್ ಪಟೇಲ್ ಆಂಗ್ಲ ಮಾಧ್ಯಮ ಶಾಲೆಯ ಜಿ.ಕೆ.ಅಮೋಘ್ ಮತ್ತು ಪ್ರಣವ್ ವಿಜಯ್ ನಾಡಿಗೇರ್, ಬೆಂಗಳೂರು ಸದಾಶಿವನಗರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎಂ.ಡಿ.ವೀಣಾ ಹಾಗೂ ನಿಹಾರಿಕಾ ಸಂತೋಷ್ ಕುಲಕರ್ಣಿ, ಬೆಂಗಳೂರು ವಿಜಯನಗರದ ನ್ಯೂ ಕ್ರೇಂಬಿಡ್ಜ್ ಶಾಲೆಯ ಎ.ಎಸ್.ಸ್ಪೂರ್ತಿ, ತುಮಕೂರು ಜಿಲ್ಲೆಯ ಕುಣಿಗಲ್ ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯ ಜಿ.ಎಂ.ಮಹೇಶ, ಉಡುಪಿ ಬೈಂದೂರು ಕಿರಿಮಂಜೇಶ್ವರದ ಸಂದೀಪ್ನಾ ಆಂಗ್ಲ ಮಾಧ್ಯಮ ಶಾಲೆಯ ಸುರಭಿ ಎಸ್.ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀಸತ್ಯಸಾಯಿ ಲೋಕೇಶ್ವರ ಫ್ರೌಢಶಾಲೆಯ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ದಕ್ಷಿಣ ಕನ್ನಡದ ಮಂಗಳೂರು ಕೆನರಾ ಹೈಸ್ಕೂಲ್​ನ ನಿಧಿ ರಾವ್, ಶಿವಮೊಗ್ಗ ಜಿಲ್ಲೆ ಸಾಗರದ ಪ್ರಗತಿ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ಟಿ.ಎಸ್.ಅಬ್ರಾಹಂ 625ಕ್ಕೆ 624 ಅಂಕ ಗಳಿಸಿ ದ್ವಿತೀಯ ರ್ಯಾಂಕ್ ಹಂಚಿಕೊಂಡಿದ್ದಾರೆ.
ಅಂಗ್ಲಮಾಧ್ಯಮದ ಟಾಪರ್:ಮೊದಲ ಮತ್ತು ದ್ವಿತೀಯ ರ್ಯಾಂಕ್ ಪಡೆದಿರುವ ಒಟ್ಟಾರೆ 17 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದವ ರಾಗಿದ್ದಾರೆ. 3,4,5ನೇ ಸ್ಥಾನ ಗಳಿಸಿರುವ 12 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದವರು. ವಿಭಿನ್ನ ಸಾಮರ್ಥ್ಯವುಳ್ಳ 3,573 ವಿದ್ಯಾರ್ಥಿಗಳು ಹಾಜರಾಗಿದ್ದು, 2,409 ಮಕ್ಕಳು ಪಾಸ್ ಆಗಿದ್ದಾರೆ.
ಫಲಿತಾಂಶ ಕಡಿತಕ್ಕೆ ಪದ್ಧತಿ ಬದಲಾವಣೆ ಕಾರಣವೇ?:ಶಿಕ್ಷಣ ಇಲಾಖೆ ಇದೇ ಮೊದಲ ಸಲ ಪ್ರಶ್ನೆಗಳನ್ನು ಕೇಳುವ ಪದ್ಧತಿ ಬದಲಿಸಿದೆ. ಇಷ್ಟು ವರ್ಷ 1 ಅಂಕಗಳಿಗೆ ಬಹು ಆಯ್ಕೆ ಮಾದರಿಯಲ್ಲಿ ಕೇಳಲಾಗುತ್ತಿತ್ತು. ಇದನ್ನು ಕಡಿತಗೊಳಿಸಿ 2019- 20ನೇ ಸಾಲಿನಲ್ಲಿ ವಿಸ್ತಾರವಾಗಿ ಉತ್ತರ ಬರೆಯುವುದಕ್ಕೆ ಆದ್ಯತೆ ನೀಡಲಾಯಿತು. ಅಲ್ಲದೆ, ನೇರವಾಗಿ ಪ್ರಶ್ನೆ ಕೇಳುವ ಬದಲು ಅಪ್ಲಿಕೇಷನ್ ಮಾದರಿಯಲ್ಲಿ ಪ್ರಶ್ನೆ ಕೇಳಿರುವುದು ಗೊಂದಲ ಉಂಟುಮಾಡಿದ್ದು ಫಲಿತಾಂಶ ಕುಂಠಿತಕ್ಕೆ ಕಾರಣ ಎಂದು ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಪದ್ಧತಿ ಬದಲಿಸುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿತ್ತು. ಶಿಕ್ಷಣ ಸಚಿವರೇ ನಡೆಸಿದ ಫೋನ್-ಇನ್ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದು ಹಾಗೂ ಈ ಕುರಿತಾಗಿ ಸಾಕಷ್ಟು ಪ್ರಶ್ನೆಗಳು ಬಂದಿದ್ದೇ ಸಾಕ್ಷಿಯಾಗಿತ್ತು.
ರಾಜ್ಯ ಸರ್ಕಾರ ಜಿಲ್ಲಾವಾರು ಪಟ್ಟಿ ರೂಪಿಸುವುದರಲ್ಲಿ ಈ ವರ್ಷ ಬದಲು ಮಾಡಿದೆ. ರ್ಯಾಂಕ್ ಬದಲಾಗಿ ಶ್ರೇಣಿ ಪದ್ಧತಿ ಅಳವಡಿಸಿಕೊಂಡಿದೆ. 2019ರಲ್ಲೂ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರ ಎರಡು ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡಿತ್ತು. ಈ ಬಾರಿ ಶಿಕ್ಷಣ ಇಲಾಖೆಯು ಶ್ರೇಣಿವಾರು ಬಿಡುಗಡೆ ಮಾಡಿದೆ. ಆ ಪ್ರಕಾರವಾಗಿ ಎ-ಗ್ರೇಡ್​ನಲ್ಲಿ 10 ಜಿಲ್ಲೆಗಳು, ಬಿ-20, ಸಿ-4 ಜಿಲ್ಲೆಗಳಿವೆ. ಇಡೀ ಜಿಲ್ಲೆಯ ಒಟ್ಟು ಉತ್ತೀರ್ಣರಾದ ಮಕ್ಕಳ ಸಂಖ್ಯೆ (ಶೇ.40), ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳು ತೆಗೆದುಕೊಂಡ ಒಟ್ಟಾರೆ ಅಂಕಗಳು (ಶೇ.40), ಪ್ರಥಮ ಸ್ಥಾನ ಮತ್ತು ಅದರ ಮೇಲಿನ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ (ಶೇ.20) ಆಧರಿಸಿ ಗ್ರೇಡ್ ನೀಡಿದೆ. ಈ 3 ಅಂಶಗಳನ್ನು ಕ್ರೋಢಿಕರಿಸಿದಾಗ 85ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲೆಗೆ ‘ಎ’ ಶ್ರೇಣಿ, 60ರಿಂದ 85ರೊಳಗಿನ ಅಂಕದ ಜಿಲ್ಲೆಗೆ ‘ಬಿ’ ಶ್ರೇಣಿ ಹಾಗೂ 60ಕ್ಕಿಂತ ಕಡಿಮೆ ಅಂಕದ ಜಿಲ್ಲೆಗೆ ‘ಸಿ’ ಶ್ರೇಣಿ ನೀಡಲಾಗಿದೆ. ರ್ಯಾಂಕ್ ನೀಡುವುದರಿಂದ ಜಿಲ್ಲೆಗಳಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಸಮಗ್ರತೆ ಆಧಾರದಲ್ಲಿ ಶ್ರೇಣಿ ನೀಡುವ ಪದ್ಧತಿಯನ್ನು 2019-20ರಿಂದ ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಎ ಶ್ರೇಣಿ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ ಹಾಗೂ ಉತ್ತರ ಕನ್ನಡ.
ಬಿ ಶ್ರೇಣಿ: ಚಾಮರಾಜನಗರ, ಮಂಗಳೂರು, ಬಳ್ಳಾರಿ, ತುಮಕೂರು, ಶಿರಸಿ, ಬೆಂಗಳೂರು ಉತ್ತರ, ದಾವಣಗೆರೆ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಕೊಪ್ಪಳ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಬೆಂಗಳೂರು ದಕ್ಷಿಣ, ಚಿಕ್ಕೊಡಿ.
ಸಿ ಶ್ರೇಣಿ: ಬೆಳಗಾವಿ, ಗದಗ, ಹಾವೇರಿ ಮತ್ತು ಯಾದಗಿರಿ.
ಕೇಂದ್ರದ ಮಾರ್ಗಸೂಚಿ ಆಧರಿಸಿ ಶಾಲೆ ಆರಂಭ:ಬೆಂಗಳೂರು: ದೇಶಾದ್ಯಂತ ಆ.31ರ ವರೆಗೆ ಶಾಲಾ-ಕಾಲೇಜು ಆರಂಭಿಸದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿ ಆಧರಿಸಿ ಶಾಲೆಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಸಚಿವ ಸುರೇಶ್​ಕುಮಾರ್ ತಿಳಿಸಿದರು. ಸೆಪ್ಟೆಂಬರ್ ನಂತರ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಬಂದ ಬಳಿಕ ನಿರ್ಧರಿಸಲಾಗುತ್ತದೆ ಎಂದರು.
ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ:ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್​ಲೋಡ್ ಮಾಡಬೇಕಿದೆ.
ಇಂದಿನಿಂದ ಸ್ಕಾ್ಯನ್ ಪ್ರತಿಗೆ ಅರ್ಜಿ:ಸ್ಕಾ್ಯನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆನ್​ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಭೌತಿಕವಾಗಿ ಅರ್ಜಿ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಎಸ್​ಎಎಸ್​ಎಲ್​ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕಾ್ಯನ್ ಪ್ರತಿಯನ್ನು ಆ.11ರಿಂದ 20ರವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
