ಬೆಂಗಳೂರು:‘ಬಿಜೆಪಿ ಸರ್ಕಾರ ಜಿಎಸ್​ಟಿ ಮೂಲಕ ಜೀವಂತವಾಗಿರುವಾಗಲೇ ಜನರಿಗೆ ವಿಷ ಕೊಟ್ಟು ಸಾಯಿಸಲು ಮುಂದಾಗಿದೆ. ಇದರ ವಿರುದ್ಧ ತಾಲೂಕು ಹಾಗೂ ಹೊಬಳಿ ಮಟ್ಟದಲ್ಲಿ ಪಕ್ಷ ಹೋರಾಟ ಮಾಡಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರ ಜತೆ ಬುಧವಾರ ಮಾತನಾಡಿದರು. ‘ಸರ್ಕಾರ ಇರುವುದು ಜನ ಸಂತೋಷವಾಗಿರುವಂತೆ ನೋಡಿಕೊಳ್ಳಲು. ಆದರೆ ಸರ್ಕಾರಿ ಉದ್ಯೋಗಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಆದಾಯ ಹೆಚ್ಚು ಮಾಡದೆ, ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಅವರನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ. ಜಿಎಸ್ ಟಿ ಹಾಕಿ ಜನರನ್ನು ಜೀವಂತವಾಗಿ ಸಾಯಿಸುತ್ತಿದೆ. ಪೆಟ್ರೋಲ್, ಡೀಸೆಲ್, ಹಾಲು ಮೊಸರು ಎಲ್ಲವೂ ದುಬಾರಿಯಾಗಿದೆ. ಇದರ ಹೊರೆಯನ್ನು ಜನರು ಹೇಗೆ ಹೊರುತ್ತಾರೆ.
ಹಾಲು ಉತ್ಪಾದನೆ ಮಾಡುವ ರೈತರಿಗೆ ಪ್ರತಿ ಲೀಟರ್ ಗೆ 28 ರೂ. ನೀಡುತ್ತಿದ್ದಾರೆ. ಹಾಲಿಗೆ 5 ರೂ. ಹೆಚ್ಚು ಮಾಡಲಿಲ್ಲ. ಆದರೆ ಹಸುಗಳಿಗೆ ಹಾಕುವ ಮೇವು, ನೀಡುವ ಚಿಕಿತ್ಸೆ ಬೆಲೆ ಹೆಚ್ಚಿದೆ. ರೈತ ಪಶುಸಂಗೋಪನೆ ಮೂಲಕ ತಾನೇ ಉದ್ಯೋಗ ಸೃಷ್ಟಿಸಿಕೊಂಡು ಬದುಕುತ್ತಿದ್ದರೂ ಈ ಸರ್ಕಾರ ಆತನ ಬಗ್ಗೆ ಯೋಚಿಸುತ್ತಿಲ್ಲ. ಸಹಕಾರಿ ಸಂಸ್ಥೆಗಳು ಎಂದರೆ ಅದು ರೈತರ ಸಂಸ್ಥೆ. ಸರ್ಕಾರದ ಈ ತೀರ್ಮಾನದಿಂದ ಜನ ಮುಂದೆ ಯಾವುದೇ ಪ್ಯಾಕೇಜ್ ಮಾಡುವಂತಿಲ್ಲ. ಕಳ್ಳ ದಾರಿಯಲ್ಲಿ ವ್ಯಾಪಾರ ಮಾಡಲಿ ಎಂದು ಈ ರೀತಿ ಮಾಡುತ್ತಿದೆಯೆ ಎಂದು ಪ್ರಶ್ನಿಸಿದರು.
ಆಸ್ಪತ್ರೆ ಕೊಠಡಿಯಲ್ಲಿ 5 ಸಾವಿರಕ್ಕಿಂತ ಕಡಿಮೆ ಇದ್ದರೆ ಶೇ.5ರಷ್ಟು ತೆರಿಗೆ, ಹೊಟೇಲ್ ಕೊಠಡಿ 1000 ರೂ. ಮೇಲಿದ್ದರೆ ಅದಕ್ಕೆ ಶೇ.12 ರಷ್ಟು ಜಿಎಸ್ ಟಿ ಹಾಕಲಾಗಿದೆ. ಹಳ್ಳಿ ಹಾಗೂ ಟೌನ್ ಗಳಲ್ಲಿ ಸಣ್ಣ ಪುಟ್ಟ ಹೊಟೇಲ್ ನಡೆಸುವವರು ಸಾವಿರ ರೂ ಮೊತ್ತದ ಕೊಠಡಿ ಇಟ್ಟುಕೊಂಡಿರುತ್ತಾರೆ. ಅವರಿಗೆ ಈ ರೀತಿ ತೆರಿಗೆ ಬರೆ ಹಾಕುವುದೇ ಎಂದು ಪ್ರಶ್ನಿಸಿದ ಡಿಕೆಶಿ, ಬ್ಯಾಂಕ್ ಚೆಕ್ ಬುಕ್ ತೆಗೆದುಕೊಳ್ಳಲು 18% ಜಿಎಸ್ ಟಿ ಹಾಕಲಾಗಿದೆ. ಆ ಮೂಲಕ ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ತೆರಿಗೆ ನೀಡಬೇಕು. ರೈತರ ಪಂಪ್, ಮೋಟರ್ ಗಳಿಗೆ ಶೇ.18 ರಷ್ಟು, ಮಕ್ಕಳ ಕಲಿಕೆ ಸಾಮಾಗ್ರಿಗಳಾದ ನಕ್ಷೆ, ಪೆನ್ಸಿಲ್, ಶಾರ್ಪನರ್ ಸೇರಿದಂತೆ ಇತರೆ ವಸ್ತುಗಳ ಮೇಲೆ ಶೇ.12ರಷ್ಟು ತೆರಿಗೆ ಹಾಕಲಾಗಿದೆ ಎಂದರು.
ಶವ ಸುಡಲು ತೆರಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ನಲ್ಲಿ ಯಾರಿಗೂ ಪರಿಹಾರ ನೀಡಲಿಲ್ಲ. ಹೊರ ದೇಶಗಳಲ್ಲಿ ಜನರು ಸಾಯುವ ಮುನ್ನವೇ ಹಣ ಕಟ್ಟಬೇಕು ಎಂದು ಕೇಳಿದ್ದೆ. ಈಗ ಇಲ್ಲೂ ಶವಸಂಸ್ಕಾರಕ್ಕೂ ತೆರಿಗೆ ವಸೂಲಿ ಮಾಡುತ್ತಿದ್ದೀರಿ. ಜನರಿಗೆ ಇಷ್ಟು ಕಿರುಕುಳ ನೀಡುತ್ತಿರುವುದು ಸರಿಯೇ? ಮುಖ್ಯಮಂತ್ರಿಗಳೂ ಇಂದೇ ಸಭೆ ಕರೆದು, ಸರ್ಕಾರದಿಂದಲೇ ಈ ತೆರಿಗೆ ಭರಿಸಿ ಈ ಹೊರೆಯನ್ನು ಜನರಿಗೆ ಹಾಕದಂತೆ ತಡೆಯಬೇಕು. ಆ ಮೂಲಕ ಬಡವರ ಪಿಕ್ ಪಾಕೆಟ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ಈಗಾಗಲೇ ಭ್ರಷ್ಟ ಸರ್ಕಾರ ಎಂದು ಹೆಸರು ಪಡೆದುಕೊಂಡಿದೆ ಎಂದರು.
ಒಕ್ಕಲಿಗರ ಬೆಂಬಲ ಕೇಳುವುದರಲ್ಲಿ ತಪ್ಪೇನಿದೆ?:
ಒಕ್ಕಲಿಗರು ಜೆಡಿಎಸ್ ಪರವಾಗಿ ನಿಲ್ಲಬೇಕು ಎಂದು ಶಿವಕುಮಾರ್ ಅವರು ಹೇಳಿರುವ ಬಗ್ಗೆ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿರುವ ಬಗ್ಗೆ ಕೇಳಿದಾಗ, ‘ಅವರು ಕನಸು ಕಾಣಲಿ, ಅದರಲ್ಲಿ ತಪ್ಪೇನಿದೆ. ನನಗೆ ನನ್ನ ಪಕ್ಷ ಮುಖ್ಯ. ಬೇರೆ ಪಕ್ಷದ ವಿಚಾರ ನಮಗೆ ಬೇಡ. ನಾನು ಒಂದು ಸಮುದಾಯದ ಪ್ರತಿನಿಧಿಯಾಗಿದ್ದು, ಸೋನಿಯಾ ಗಾಂಧಿ ಅವರು ನನಗೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. 20 ವರ್ಷಗಳ ನಂತರ ಈ ಸಮುದಾಯದವರಿಗೆ ಉನ್ನತ ಜವಾಬ್ದಾರಿ ನೀಡಿದ್ದಾರೆ. ಈ ಅವಕಾಶ ಕಳೆದುಕೊಳ್ಳಬೇಡಿ. ಎಲ್ಲರಿಗೂ ನೀವು ಒಂದು ಅವಕಾಶ ನೀಡಿದ್ದೀರಿ. ನನಗೂ ಒಂದು ಅವಕಾಶ ನೀಡಿ ಎಂದು ಕೇಳಿದ್ದೇನೆ. ಎಲ್ಲರಿಗೂ ಅವರದೇ ಆದ ಸ್ವಾಭಿಮಾನ ಇರುತ್ತದೆಯಲ್ಲವೇ? ದಲಿತರು ಎಲ್ಲರೂ ಒಟ್ಟಾಗಿ ದಲಿತ ಸಿಎಂ ಆಗಬೇಕು ಎನ್ನುತ್ತಾರೆ ಅದರಲ್ಲಿ ತಪ್ಪೇನಿದೆ? ಅದೇ ರೀತಿ ನಮ್ಮ ಸಮುದಾಯದವರೂ ಒಂದಾಗಲಿ ಎಂದು ನಾನು ಹೇಳಿದ್ದೇನೆ’ ಎಂದು ತಿಳಿಸಿದರು.
ಒಕ್ಕಲಿಗ ಸಮಾಜಕ್ಕೆ ಶಿವಕುಮಾರ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಅವರ ಪ್ರಶ್ನೆ ವಿಚಾರವಾಗಿ ಕೇಳಿದಾಗ, ‘ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ. ರಾಜ್ಯದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಇದೆ. ನಾನು ಕೊಡುತ್ತೇನೆ. ಜನ ನನ್ನನ್ನು ಸುಮ್ಮನೆ 7 ಬಾರಿ ಗೆಲ್ಲಿಸಿದ್ದಾರಾ? ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ತಮ್ಮನನ್ನು ನಿಲ್ಲಿಸಿದ್ದೆ. ಎರಡೂ ಪಕ್ಷ ಆಗ ಒಂದಾಗಿತ್ತಲ್ಲ, ಆಗ ಜನ ನಮ್ಮನ್ನು ಸುಮ್ಮನೆ ಗೆಲ್ಲಿಸಿದರಾ? ಕುಮಾರಣ್ಣ ಸಂಸದರಾಗಿದ್ದಾಗ ನನ್ನ ವಿರುದ್ಧ ಸ್ಪರ್ಧಿಸಿದ್ದರು. ನಾನು ಕೊಡುಗೆ ನೀಡಿದ್ದಕ್ಕೆ, ಅವರಿಗಿಂತ ನಾನು ಉತ್ತಮ ಎಂಬ ಕಾರಣಕ್ಕೆ ಅಲ್ಲವೇ ಜನ ನನ್ನನ್ನು ಗೆಲ್ಲಿಸಿದ್ದು’ ಎಂದರು.
ನೂರು ಜನ ಶಿವಕುಮಾರ್ ಬಂದರೂ ನಾನು ಹೆದರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ನನಗೆ ಹೆದರುತ್ತಾರೆ ಎಂದು ನಾನು ಹೇಳಿದ್ದೀನಾ? ಕೇವಲ ನೂರಲ್ಲ ಸಾವಿರ ಜನಕ್ಕೂ ಅವರು ಹೆದರುವುದಿಲ್ಲ’ ಎಂದರು.
ರಾಮನಗರ ಅಭ್ಯರ್ಥಿ ಯಾರು? ಸಂಸದ ಸುರೇಶ್ ಅವರು ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, ‘ಈ ವಿಚಾರವಾಗಿ ಸೋನಿಯಾ ಗಾಂಧಿ ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಪಕ್ಷ ತೀರ್ಮಾನ ಮಾಡಿದಾಗ ತಿಳಿಯುತ್ತದೆ’ ಎಂದು ಉತ್ತರಿಸಿದರು.
ಶಿವಕುಮಾರ್ ಅವರೇ ರಾಮನಗರಕ್ಕೆ ಬರಲಿ ಎಂದು ಕುಮಾರಸ್ವಾಮಿ ಅವರ ಸವಾಲಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನ್ನ ಹಾಗೂ ಅವರ ಮಧ್ಯೆ ದೊಡ್ಡ ಕುಸ್ತಿಗಳೇ ಆಗಿವೆ. ನಾನು ಅವರ ವಿರುದ್ಧ ಇನ್ನು ಎಷ್ಟು ಕುಸ್ತಿ ಮಾಡಲಿ. ಅವರ ವಿರುದ್ಧ ಕುಸ್ತಿ ಮಾಡಿಯೂ ಆಗಿದೆ, ಅವರ ಜತೆಯಲ್ಲಿ ಕೈ ಹಿಡಿದು ಸರ್ಕಾರ ಮಾಡಿದ್ದೂ ಆಗಿದೆ. ಮಾಧ್ಯಮಗಳು ನಮ್ಮ ಕುಸ್ತಿ ಮಾಡಿಸಲು ಸಿದ್ಧರಿದ್ದೀರಿ. ಅವರಿಗೆ ಇಚ್ಛೆ ಇಲ್ಲದಿದ್ದರೂ ನೀವೇ ಮಾಡಿಸುತ್ತಿದ್ದೀರಿ’ ಎಂದರು.
10 ಸಾವಿರ ಕೋಟಿ ರೂ. ವ್ಯಯಿಸಿದರೂ ಗ್ರಾಮೀಣ ಸೇವೆಗೆ ಮುಂದಾಗದ ವೈದ್ಯರು: ಸಚಿವ ಅಶ್ವತ್ಥನಾರಾಯಣ ವಿಷಾದ

40% ಹಾಜರ್​! ಮುಂಗಾರು ಅಧಿವೇಶನದಲ್ಲಿ ಸ್ಮೃತಿ ಇರಾನಿ ವಾಗ್ದಾಳಿಗೆ ಸುಸ್ತಾದ ರಾಹುಲ್​ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
