| ಲೇಖಕ ಈರಣ್ಣಾ ಬಡಿಗೇರ​ ಅವರ ಪುಸ್ತಕದ ಸಂಕ್ಷಿಪ್ತ ಪರಿಚಯ
ಮದುವೆಯಾಗದೇಜೋಡಿಗಳು ಒಟ್ಟಿಗೇ ಇರುವುದು ಮಾಮೂಲು ಎನ್ನುವಂಥ ಪರಿಸ್ಥಿತಿ ಈಗ ಇದೆ. ವಿದೇಶಗಳಲ್ಲಿ ಹಲವು ದಶಕಗಳಿಂದ ರೂಢಿಯಲ್ಲಿ ಇದ್ದ ಈ ಪದ್ಧತಿ ಭಾರತಕ್ಕೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಮದುವೆಯೆಂಬುದು ಬಂಧನ ಎಂಬ ವ್ಯಾಖ್ಯಾನ ನೀಡಿ, ಮದುವೆಯಾಗದೇ ಒಟ್ಟಿಗೆ ಇದ್ದು ಬಿಡಲು ಜೋಡಿಗಳು ನಿರ್ಧರಿಸುವುದೇ ಲಿವ್​ ಇನ್​ ರಿಲೇಶನ್​. ಆದರೆ ಅತಿಯಾದರೆ ಎಲ್ಲವೂ ವಿಷ ಎನ್ನುವಂತೆ, ತನಗೆ ಸಿಕ್ಕಿರುವ ಈ ಹಕ್ಕನ್ನು  ಸ್ವೇಚ್ಛಾ ಜೀವನವನ್ನಾಗಿಸಿಕೊಂಡರೆ ಏನಾಗುತ್ತದೆ? ಅದರಲ್ಲಿಯೂ ಹೆಣ್ಣೊಬ್ಬಳ ಬದುಕು ಹೇಗೆ ಸಾಗುತ್ತದೆ? ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ? ದಾಂಪತ್ಯವೆಂಬ ಕೊಂಡಿ ಹೇಗೆ ಕಳಚುತ್ತದೆ ಎಂಬುದನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿರುವ ಕೃತಿಯೇ ಲೇಖಕ ಈರಣ್ಣಾ ಬಡಿಗೇರ ಅವರ ‘ಲಿವಿಂಗ್​ ಟುಗೆದರ್​’.
ಲಿವಿಂಗ್​ ಟುಗೆದರ್​ ಪರಿಕಲ್ಪನೆಯಿಂದ ಹೊರಕ್ಕೆ ಬಂದು ದಾಂಪತ್ಯದ ತಳಹದಿಯನ್ನು ಗಟ್ಟಿ ಮಾಡುವುದು ಹೇಗೆ ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ. ಮುರಿದು ಬೀಳುತ್ತಿರುವ ದಾಂಪತ್ಯ ಭಾಗ್ಯವನ್ನು ಮತ್ತೆ ಮತ್ತೆ ಎತ್ತಿ ನಿಲ್ಲಿಸಲು ಯುವಜನರು ಈ ಪುಸ್ತಕವನ್ನು ಓದಬೇಕು. ದಾಂಪತ್ಯ ಸಮಸ್ಯೆಗೆ ಉತ್ತರ, ಪರಿಹಾರ ಇದರಲ್ಲಿ ಇದೆ. ಎಲ್ಲಿ ತಪ್ಪಿದ್ದೇವೆ, ಏಕೆ ತಪ್ಪಿದ್ದೇವೆ ಎಂದು ನಮ್ಮನ್ನು ನಾವು ಅರಿತುಕೊಳ್ಳಲು ಈ  ಕೃತಿ ನೆರವಾಗುತ್ತದೆ, ಗೋಜಲಿಗೆ ಸಿಲುಕಿದವರಿಗೆ ಸ್ಪಷ್ಟ ಬೆಳಕು ಕಾಣುತ್ತದೆ.

ಲಿವಿಂಗ್‌ ಟುಗೆದರ್‌ ಎಂಬ ಹೊಸ ಪರಿಕಲ್ಪನೆಯು ಕೌಟುಂಬಿಕ ವ್ಯವಸ್ಥೆಗೆ ಪರ್ಯಾಯವಲ್ಲ, ಬದಲಿಗೆ ಇದು ಸ್ವೇಚ್ಛಾ ಜೀವನವಷ್ಟೇ ಎಂಬ ಸಂದೇಶ ಈ ಪುಸ್ತಕದಲ್ಲಿದೆ. ಮಹಿಳೆ ಪುರುಷನಿಗೆ ತಾನು ಸರಿಸಮಾನ ಎಂದು ಪ್ರತಿಪಾದಿಸುತ್ತಿದ್ದರೂ, ಪುರುಷನಂತೆ ತನಗೆ ಸಮಾನ ಹಕ್ಕು ಸಿಗಬೇಕು ಎಂದು ಹೇಳುತ್ತಿದ್ದರೂ ಸಮಾನತೆ ಮತ್ತು ಸ್ವೇಚ್ಛಾಚಾರದ ಜೀವನದ ನಡುವೆ ಇರುವ ತೆಳು ಗೆರೆ ಏನು ಎಂಬುದನ್ನು ಈ ಪುಸ್ತಕ ವಿವರಿಸಿದೆ.
ಲೇಖಕರು ಈ ಪುಸ್ತಕದಲ್ಲಿ ಎರಡು ಘಟ್ಟಗಳನ್ನು ಮಾಡಿದ್ದಾರೆ. ಮೊದಲನೆಯದ್ದು, ಸ್ವಾತಂತ್ರ್ಯ ಸಿಕ್ಕ ಸಂದರ್ಭದ ದಿನಗಳು ಹಾಗೂ ಎರಡನೆಯದ್ದು ಈಗಿನ ದಿನಗಳು. ಈ ಎರಡೂ ಕಾಲಘಟ್ಟಗಳಲ್ಲಿನ ದಾಂಪತ್ಯ ಜೀವನದ ಕುರಿತು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ.
2000-2001ರಲ್ಲಿ ಶ್ರೀ ಹರಿ ಆಶ್ರಮದಲ್ಲಿ ನಡೆದ ಸಂಸಾರ ಸುಧಾರಣಾ ಕಾರ್ಯಾಗಾರದಲ್ಲಿ ಬೋಧಕರಾಗಿದ್ದ ಲೇಖಕ ಈರಣ್ಣಾ ಬಡಿಗೇರ್​ ಅವರು ತಮಗೆ ಅಲ್ಲಿನ ಅನುಭವವೇ ಈ ಕಾದಂಬರಿ ಬರೆಯಲು ಪ್ರೇರಣೆ ಎಂದಿದ್ದಾರೆ. ಮಹಿಳೆ ಮನೆಯೊಡತಿ, ಗಂಡಸಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಸಿಗಬೇಕು, ಆದರೆ ಸ್ವೇಚ್ಛೆ ಸುಳಿಯಬಾರದು, ಕಟ್ಟುಪಾಡು ಹಾಕಿಕೊಂಡು ನಡೆದರೆ ಕುಟುಂಬ ವ್ಯವಸ್ಥೆ ಮತ್ತಷ್ಟು ಬಲವಾಗಿ, ಸ್ಥಿರವಾಗಿ ಸಾಗುತ್ತದೆ ಎನ್ನುವುದು ಲೇಖಕರ ಅಭಿಮತ.

‘ಅಜ್ಜಿ, ಮೊಮ್ಮಗಳ ಮಾತುಕತೆಯಿಂದ ಆರಂಭವಾಗುವ ಈ ಕಾದಂಬರಿಯು ಅವರ ಮಧುರ ಬಾಂಧವ್ಯದ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಸ್ವೇಚ್ಛಾ ಪ್ರವೃತ್ತಿಯ ವಿದೇಶದಲ್ಲಿ ಅಜ್ಜಿಯ ಆಶ್ರಯದಲ್ಲಿದ್ದು ಬೆಳೆದಿದ್ದರೂ ಮಾಧುರಿಯಲ್ಲಿಯ ಸಂಸ್ಕಾರ ನಡೆ-ನುಡಿ ಯುವ ಜನಾಂಗಕ್ಕೆ ಮಾದರಿ. ಇಲ್ಲಿ ಮಾಧುರಿಯ ಪಾತ್ರ ಓದುಗರ ಮನಸ್ಸಿನಲ್ಲಿ ಅಭಿಮಾನದ ಪ್ರತಿರೂಪವಾಗಿ ಸ್ಥಿರವಾಗಿ ಉಳಿಯುತ್ತದೆ’ ಎಂದು ಮುನ್ನುಡಿ ಬರೆದಿರುವ ಬೆಂಗಳೂರಿನ ಬೃಂದಾವನ ಕಾಲೇಜ್​ ಆಫ್​ ಆರ್ಕಿಟೆಕ್ಚರ್​ನ ಸಹಾಯಕ ಪ್ರಾಧ್ಯಾಪಕರಾಗಿರುವ ರಜನಿ ಅಮರೇಶಕುಮಾರ್​ ಅಭಿಪ್ರಾಯ ಪಟ್ಟಿದ್ದಾರೆ.
ಯುವ ಜನರ ಮನೋ ನಿಗ್ರಹಕ್ಕೆ ಬೇಕಾದ ಪರಿಕರಗಳನ್ನು ಲೇಖಕರು ಈ ಕೃತಿಯಲ್ಲಿ ತುಂಬಿ ಕೊಟ್ಟಿದ್ದಾರೆ. ಓದಿ ತಮ್ಮ ದಾಂಪತ್ಯ ಬದುಕನ್ನು ತಿದ್ದಿಕೊಂಡರೆ, ಧನ್ಯತೆಯ ಬದುಕು ಖಂಡಿತ ತಮ್ಮದಾಗುತ್ತದೆ ಎನ್ನುತ್ತಾರೆ ರಜನಿ.
ಪುಸ್ತಕ: ಲಿವಿಂಗ್​ ಟುಗೆದರ್​ಲೇಖಕರು: ಈರಣ್ಣಾ ಬಡಿಗೇರಪುಟಗಳು: 244ಬೆಲೆ: 250 ರೂ.ಪ್ರಕಾಶಕರು: ಶ್ರೀ ಹರಿಪ್ರಕಾಶನ, 101/40, ಶ್ರೀ ಸಿದ್ದಲಿಂಗೇಶ್ವರ ಕಾಲೋನಿ, ವಿಕಾಸನಗರ, ಹುಬ್ಬಳ್ಳಿ- 580021.
ಸಂಪರ್ಕಕ್ಕೆ: 9844062244
ಡಿ.31ರಂದು ಈರಣ್ಣಾ ಬಡಿಗೇರ್​ ಅವರ ಎರಡು ಕೃತಿಗಳ ಬಿಡುಗಡೆ
ಈರಣ್ಣಾ ಬಡಿಗೇರ ಅವರ ‘ಲಿವಿಂಗ್​ ಟುಗೆದರ್​’ ಹಾಗೂ ‘ ಮತ್ತೆ ಬೇರಿನ ಕಡೆಗೆ ‘ ಕೃತಿಗಳು ಡಿ.31ರಂದು ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳಿಯ ಸಭಾಭವನ, ಕೋರ್ಟ್​ ಸರ್ಕಲ್​, ಎನ್​ಎಂಆರ್​ ಸ್ಕ್ಯಾನ್​ ಸೆಂಟರ್​ ಹತ್ತಿರ, ಕ್ಲಬ್​ ರಸ್ತೆ ಇಲ್ಲಿ ಬೆಳಗ್ಗೆ 11 ಗಂಟೆಗೆ ಬಿಡುಗಡೆಗೊಳ್ಳಲಿವೆ.ಈ ಕಾರ್ಯಕ್ರಮದಲ್ಲಿ ಹತ್ತಿಮತ್ತೂರ- ಕರ್ಜಗಿ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ ನಿಜಗುಣ ಶಿವಯೋಗಿಗಳು ಸಾನಿಧ್ಯ ವಹಿಸಲಿದ್ದು, ಪ್ರಾಧ್ಯಾಪಕ ಡಾ. ಎಂ.ಎಸ್​.ಹುಲ್ಲೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಮಹದೇವ ಬಿ. ಚಟ್ಟಿ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.ಪ್ರಾಧ್ಯಾಪಕ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಉಪನ್ಯಾಸಕರಾದ ಗಾಯತ್ರಿ ವಿ. ಹುದ್ದಾರ್​ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
