’ನಿಮ್ಮದು ಕನ್ನಡ ಮೀಡಿಯಮ್ಮಾ…’, ’ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸ್ತಿದ್ದಾರಾ?…, ’ಫ್ಯೂಚರ್‌ ಬ್ರೈಟ್‌ ಆಗಬೇಕೆಂದ್ರೆ ಈ ಕಾಂಪಿಟೇಷನ್‌ ಯುಗದಲ್ಲಿ ಇಂಗ್ಲಿಷ್‌ ಮೀಡಿಯಂ ಬೇಕೇ ಬೇಕಪ್ಪಾ… ’
ಹೀಗೆ ಹೇಳುವವರಿಗೇನೂ ಕಮ್ಮಿ ಇಲ್ಲ. ಆದರೆ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆ ಎಂದರೆ ಅಸಡ್ಡೆ ಪಡೆಯುವವರಿಗೆ ಸೆಡ್ಡು ಹೊಡೆದು ಪ್ರತಿವರ್ಷವೂ ಟಾಪರ್‌ ಸ್ಥಾನದಲ್ಲಿ ನಿಲ್ಲುವವರು ಇದೇ ಸರ್ಕಾರಿ ಶಾಲೆಯವರು, ಇದೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ಇಂದು ಟಾಪ್‌ಮೋಸ್ಟ್‌ ಹುದ್ದೆಗಳನ್ನು ಅಲಂಕರಿಸಿರುವ, ಮಹಾ ಸಾಧನೆಗಳನ್ನು ಮಾಡಿರುವವರ ಹಿನ್ನೆಲೆ ನೋಡಿದಾಗ ಬಹುತೇಕರು ಕಲಿತಿರುವುದು ಸರ್ಕಾರಿ ಶಾಲೆಗಳಲ್ಲಿಯೇ ಎನ್ನುವುದೂ ಅಷ್ಟೇ ದಿಟ.
ಅಂಥದ್ದೇ ಒಬ್ಬ ದಿಟ್ಟ, ದಕ್ಷ ಪೊಲೀಸ್‌ ಅಧಿಕಾರಿಯೆಂದು ಹೆಸರು ಪಡೆದಿರುವವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರವಿ ನಾಯ್ಕ. ಸದ್ಯ ಶಿರಸಿಯಲ್ಲಿ ಡಿವೈಎಸ್‌ಪಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತದ್ದು ಮಾತ್ರವಲ್ಲದೇ, ಅನೇಕ ಕಡೆಗಳಲ್ಲಿ ನೌಕರಿ ಮಾಡುತ್ತಲೇ ಬಿ.ಎ, ಎಂ.ಎ ಮಾತ್ರವಲ್ಲದೇ ಎಂಬಿಎ ಪದವಿಯನ್ನೂ ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಇದೇ ಪದವಿಯಿಂದಾಗಿ ಇವರನ್ನು ಅನೇಕ ಉನ್ನತ ಕಂಪೆನಿಗಳ ನೌಕರಿಗಳು ಅರಸಿಬಂದವು. ಆದರೆ ಅವ್ಯಾವನ್ನೂ ಆಯ್ಕೆ ಮಾಡಿಕೊಳ್ಳದೇ ಪೊಲೀಸ್‌ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುವ ಆಸೆಯಿಂದ ತಮ್ಮ ಗುರಿಯನ್ನು ತಲುಪಿಸಿರುವ ರವಿಯವರು ಇದೀಗ ದಕ್ಷ, ಪ್ರಾಮಾಣಿಕ ಸೇವೆಯಿಂದಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ ರವಿ ನಾಯ್ಕ. ಕೇಂದ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ನಿವೃತ್ತಿ ಪಡೆದು ಪೊಲೀಸ್‌ ಇಲಾಖೆಯಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ ಇವರು.ಶಿರಸಿಯಲ್ಲಿ ಹೈಸ್ಕೂಲ್‌ವರೆಗೆ ಓದಿ, ವಿಜ್ಞಾನ ಪದವಿ ಪಡೆಯುವ ಹೊತ್ತಿಗೆ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತರು. ಅವರಿಗೆ ಏರ್‌ಫೋರ್ಸ್‌ನಲ್ಲಿ ಟೆಕ್ನೀಷಿಯನ್‌ ಆಗಿ ನೌಕರಿ ಸಿಕ್ಕಿತು. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಚಂಡೀಗಢದಲ್ಲಿ ಕರ್ತವ್ಯ ನಿರ್ವಹಿಸಿದರು. ಈ ಸಮಯದಲ್ಲಿಯೇ ಬಿ.ಎ, ಎಂ.ಎ ಅಷ್ಟೇ ಅಲ್ಲದೇ ಎಂಬಿಎ ಪದವಿಯನ್ನೂ ಪೂರೈಸಿದರು.
ಇಷ್ಟೆಲ್ಲಾ ಪದವಿಗಳನ್ನು ಪಡೆದಿರುವ ರವಿಯವರು ಯುವಜನರಿಗೆ ಹೇಳುವ ಮಾತು ಒಂದೇ. ಪದವಿ ಬೇಕು ನಿಜ. ಆದರೆ ಅದೇ ಬದುಕಿನ ಸರ್ವಸ್ವ ಆಗಬಾರದು. ಅದು ಅರ್ಹತೆಗಾಗಿ ಇರಲಿ. ಆದರೆ ಜೀವನದಲ್ಲಿ ಮುಂದೆ ಬರಬೇಕು, ಏನಾದರೊಂದು ಸಾಧನೆ ಮಾಡಬೇಕು ಎಂದು ಗುರಿಯಿಟ್ಟುಕೊಂಡರೆ ಆಗ ಪದವಿಗಿಂತಲೂ ಮಿಗಿಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ. ಶಾಲಾ- ಕಾಲೇಜಿನ ಓದು ಎಲ್ಲವೂ ಸರಿ. ಆದರೆ ಅದಷ್ಟಕ್ಕೇ ಜೀವನವನ್ನು ಸೀಮಿತ ಮಾಡಿಕೊಳ್ಳದೇ ನಿಮ್ಮ ಸುತ್ತಮುತ್ತಲಿನ ವಿದ್ಯಮಾನ, ಆಗುಹೋಗುಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಶಾಲಾ-ಕಾಲೇಜಿನ ಪುಸ್ತಕಕ್ಕಿಂತಲೂ ಮಿಗಿಲಾಗಿ ಸಾಮಾನ್ಯ ಜ್ಞಾನಗಳ ಪುಸ್ತಕಗಳ ಮೊರೆ ಹೋಗಿ. ಹಾಗೆಯೇ ಜೀವನಕ್ಕೊಂದು ನಿರ್ದಿಷ್ಟ ಗುರಿಯಿರಲಿ. ಆಗ ನಿಮ್ಮ ಜೀವನಕ್ಕೊಂದು ಅರ್ಥಬರುತ್ತದೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಿ, ಉನ್ನತ ಸ್ಥಾನಕ್ಕೇರಲು ಇದೇ ಸಹಾಯವಾಗುತ್ತದೆ ಎನ್ನುತ್ತಾರೆ ರವಿ.
ಇದು ಕೇವಲ ಅವರ ಮಾತಲ್ಲ, ಬದಲಿಗೆ ಅವರು ನಡೆದುಬಂದ ದಾರಿ ಕೂಡ. ಏಕೆಂದರೆ ಇವರ ಓದಿಗೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಐದು ವರ್ಷ ಕೆಲಸ ಮಾಡಿದರೂ ಮನಸ್ಸು ಪೊಲೀಸ್‌ ಇಲಾಖೆಯತ್ತ ಹರಿದಾಡುತ್ತಿತ್ತು. ಈ ನಡುವೆಯೇ ಇಂಧನ ಇಲಾಖೆ, ಪಿಡಿಓ, ಬೆಂಗಳೂರು ಮೆಟ್ರೋ, ಇಸ್ರೋದಲ್ಲಿ ಕೂಡ ಕೆಲಸ ಸಿಕ್ಕಿತು.
ಆದರೆ ಕೆಎಎಸ್‌ ಅಧಿಕಾರಿಯಾಗಬೇಕೆಂದು ಅದರ ಅಧ್ಯಯನದಲ್ಲಿ ತೊಡಗಿ 2014ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಕಮಿಷನರೇಟ್‌ ಆಗಿ ನೇಮಕಗೊಂಡರು. ಅಲ್ಲಿ ಹಲವಾರು ಅಪರಾಧ ಪ್ರಕರಣಗಳನ್ನು ಭೇದಿಸಿ ಭೇಷ್‌ ಎನಿಸಿಕೊಂಡಿರುವ ರವಿ ಅವರನ್ನು ಶಿರಸಿಗೆ ವರ್ಗಾವಣೆ ಮಾಡಲಾಯಿತು. ಇಲ್ಲಿಯೂ ಜನರ ಮನಸ್ಸನ್ನು ಗೆದ್ದಿರುವ ರವಿಯವರಿಗೆ ಚಿನ್ನದ ಪದಕ ಅರಸಿ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
