| ಮೃತ್ಯುಂಜಯ ಕಪಗಲ್ ಬೆಂಗಳೂರು
ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯು ರಾಜ್ಯ ಸರ್ಕಾರದ ಬೇಗುದಿ ಹೆಚ್ಚಿಸಿದೆ. ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಹಲವು ಸಮುದಾಯಗಳು ಬಿಗಿಪಟ್ಟು ಹಿಡಿದಿವೆ. ಎಚ್. ಕಾಂತರಾಜು ವರದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತಳೆದಿರುವ ದೃಢನಿಲುವು ನ್ಯಾ.ಸದಾಶಿವ ಆಯೋಗ ವರದಿಗೆ ಏಕಿಲ್ಲ ಎಂದು ಪ್ರಶ್ನಿಸಲಾಗುತ್ತಿದೆ.
ಎಸ್​ಸಿ ಒಳಮೀಸಲು ಹಂಚಿಕೆಗೆ ಸಂಬಂಧಿಸಿದ ವ್ಯಾಜ್ಯವು ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಾರಿಗೆ ಜ.17ಕ್ಕೆ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಸದಸ್ಯರನ್ನು ಒಳಗೊಂಡ ವಿಸõತ ಪೀಠವು ಪಂಜಾಬ್ ಸರ್ಕಾರ ವರ್ಸಸ್ ದೇವಿಂದರ್​ಸಿಂಗ್ ದಾವೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಶೋಷಿತ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ವರ್ಗೀಕರಣವಾಗಲಿ ಎಂದು ಕೇಂದ್ರ ಸರ್ಕಾರ ಸಕಾರಾತ್ಮಕ ಅಭಿಪ್ರಾಯ ಹೊಂದಿದೆ.
ಹೆಚ್ಚಿದ ಆಂತರಿಕ ಒತ್ತಡ: ‘ನುಡಿದಂತೆ ನಡೆಯಲು’ ಕಾಂಗ್ರೆಸ್ ಮೇಲೆ ಆಂತರಿಕ ಒತ್ತಡ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಎಸ್​ಸಿ ಮೀಸಲು ವರ್ಗೀಕರಿಸಿತ್ತು. ಆದರೆ ನ್ಯಾ.ಸದಾಶಿವ ಆಯೋಗದ ವರದಿ ಬದಿಗಿಟ್ಟಿದೆ ಎಂಬ ಕಾರಣ ಮುಂದಿಟ್ಟು ಕಾಂಗ್ರೆಸ್​ಗೆ ಅನುಕೂಲ ಮಾಡಿಕೊಟ್ಟಿತ್ತು. ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ನ್ಯಾ.ಸದಾಶಿವ ಆಯೋಗದ ವರದಿ ಮಂಡಿಸಿ, ಅಂಗೀಕಾರ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಮೂರ್ನಾಲ್ಕು ಅಧಿವೇಶನಗಳಾದವು. ಮತ್ತೊಂದು ಬಜೆಟ್ ಅಧಿವೇಶನಕ್ಕೂ ದಿನಗಣನೆ ಶುರುವಾಗಿದ್ದು, ಸರ್ಕಾರದ ನಿಗೂಢ ಮೌನ ಎಸ್​ಸಿ ಸಮುದಾಯಗಳ ಸಹನೆ ಪರೀಕ್ಷಿಸುತ್ತಿದೆ. ಪಂಚ ಗ್ಯಾರಂಟಿಗಳ ಅನುಷ್ಠಾನದ ಉದ್ದೇಶದಿಂದ ವಿನಾಯಿತಿ ನೀಡಿದ್ದೆವು. ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಸುಮ್ಮನಿರಲಾಗದು ಎಂಬ ಎಚ್ಚರಿಕೆ ಸಂದೇಶ ರವಾನಿಸಿವೆ.
ಸಚಿವ, ಶಾಸಕರ ಜತೆಗೆ ಚರ್ಚೆ:ನ್ಯಾ.ಸದಾಶಿವ ವರದಿ ಮಂಡನೆ ಪರವಿರುವ ಪಕ್ಷದ ಶಾಸಕರು, ಮುಖಂಡರು, ಹೊರಗಿನ ಕೆಲವು ಸಂಘಟನೆಗಳ ಒತ್ತಡಕ್ಕೆ ಸಿಎಂ ಸಿದ್ದರಾಮಯ್ಯ ಮಣಿದು, ತೆರೆಮರೆಯಲ್ಲಿ ಮಾತುಕತೆ ನಡೆಸಿದ್ದಾರೆ. ಸದನದಲ್ಲಿ ವರದಿ ಮಂಡಿಸುವುದು ಕಷ್ಟ ಸಾಧ್ಯ. ಮೊದಲನೇ ಪುಟದಿಂದ…
ಆದರೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತಾತ್ವಿಕವಾಗಿ ಒಪ್ಪಿದ್ದಾರೆ. ಕಾಂಗ್ರೆಸ್​ನ ಆಂತರಿಕ ಸಮಸ್ಯೆಯನ್ನು ಅರಿತ ಸಂಘಟನೆಗಳು ಸಮ್ಮತಿಸಿವೆ. ಸಿದ್ದರಾಮಯ್ಯ ಅವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಸಚಿವ-ಶಾಸಕರ ಜತೆಗೆ ರ್ಚಚಿಸಿದ್ದಾರೆ. ವಾಸ್ತವಾಂಶ ತಿಳಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಗೆ ಒಪ್ಪಿಸಿದ್ದಾರೆ. ಕಳೆದ ಸಚಿವ ಸಂಪುಟ ಸಭೆಗೆ ಮುನ್ನ ಹಿರಿಯ ನಾಯಕರೊಬ್ಬರು ಅಡ್ಡಗಾಲಾಗಿದ್ದರಿಂದ ವಿಷಯ ಮಂಡನೆಯಾಗದೆ ಮತ್ತೆ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಹಿಂದಿನ ಸಭೆಯಲ್ಲಿ ವರದಿ ಪ್ರಸ್ತಾಪವಾಗಲಿಲ್ಲವೇಕೆ ? ಎಂದು ಕೆಲವರು ಶೋಧಿಸಿದಾಗ ಮರ್ಮ ತಿಳಿದು, ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.
ಸರ್ಕಾರಕ್ಕೆ ಸವಾಲುಗಳೇನು?
2. ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ವಿಶ್ವಾಸ ಮೂಡಿಸುವುದು
3. ಸ್ಪಶ್ಯ ಸಮುದಾಯಗಳ ಜನಪ್ರತಿನಿಧಿಗಳ, ಮುಖಂಡರ ಮನವೊಲಿಕೆ
4. ಬಲಗೈನ ಕೆಲ ಅರೆಮನಸ್ಕ ಸಮುದಾಯಗಳ ಅಪನಂಬಿಕೆ ನಿವಾರಣೆ
5. ಎಸ್​ಸಿ ಪಟ್ಟಿಗೆ ಇನ್ನಷ್ಟು ಸಮುದಾಯಗಳ ಸೇರ್ಪಡೆಗೆ ಪರ-ವಿರೋಧ ಒತ್ತಡ
ಈಗಾಗಲೇ ನೀಡಿದ ಆಶ್ವಾಸನೆಯಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ, ಸಂವಿಧಾನದ 341ನೇ ಕಲಂಗೆ ತಿದ್ದುಪಡಿ ತಂದು ಎಸ್​ಸಿ ಮೀಸಲು ವರ್ಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ತ್ವರಿತವಾಗಿ ಶಿಫಾರಸು ಮಾಡಬೇಕು.
| ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ.
ಮೂರು ದಶಕಗಳ ಒಳಮೀಸಲಾತಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ರ್ತಾಕ ಅಂತ್ಯಕಾಣಿಸುವ ನಿರೀಕ್ಷೆಯಿದೆ. ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿ, ವ್ಯಾಜ್ಯ ತ್ವರಿತ ವಿಲೇವಾರಿಗೆ ಸುಪ್ರೀಂ ಕೋರ್ಟ್​ನಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು.
| ಅಂಬಣ್ಣ ಅರೋಲಿಕರ್ ಎಸ್​ಸಿ ಒಳ ಮೀಸಲಾತಿ ಹೋರಾಟಗಾರ
ಬೊಮ್ಮಾಯಿ ಸರ್ಕಾರದ ಮೀಸಲು ವರ್ಗೀಕರಣಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊನೆಯ ಅವಧಿಯಲ್ಲಿ ಎಸ್​ಸಿ ಮೀಸಲು ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಜತೆಗೆ ನ್ಯಾ. ಸದಾಶಿವ ಆಯೋಗದ ವರದಿ ಕೈಬಿಟ್ಟು, ಸಚಿವ ಸಂಪುಟದ ಉಪಸಮಿತಿ ಶಿಫಾರಸಿನಂತೆ ಎಸ್​ಸಿಯಡಿ ಬರುವ 101 ಸಮುದಾಯಗಳನ್ನು ಸಂವಿಧಾನದ ಪರಿಚ್ಛೇದ 341 (2)ರ ಅನ್ವಯ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಒಳ ಮೀಸಲು ಕಲ್ಪಿಸಿತ್ತು. ಜನಸಂಖ್ಯೆ ಆಧರಿಸಿ ಎಡಗೈಗೆ (ಮಾದಿಗ ಇತ್ಯಾದಿ) ಶೇ.6, ಬಲಗೈ (ಛಲವಾದಿ ಇತ್ಯಾದಿ) ಶೇ.5.5, ಸ್ಪಶ್ಯ ಸಮುದಾಯಗಳಿಗೆ (ಬಂಜಾರ, ಭೋವಿ ಇತ್ಯಾದಿ) ಶೇ.4,5, ಇತರರಿಗೆ ಶೇ.1ರಷ್ಟು ಮೀಸಲು ಹಂಚಿಕೆ ಮಾಡಿತ್ತು.
ತೆಲಂಗಾಣದ ಅಳುಕುತೆಲಂಗಾಣ ಚುನಾವಣೆ ವೇಳೆ ಹೈದರಾಬಾದ್​ನಲ್ಲಿ ನಡೆದ ‘ಮಾದಿಗ ವಿಶ್ವರೂಪಂ’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತು, ಮಂದಕೃಷ್ಣ ಮಾದಿಗ ಸಾಥ್ ನೀಡಿದ್ದು ನಿರೀಕ್ಷೆಗೆ ಮೀರಿದ ಫಲ ನೀಡಿದೆ. ಮೂರು ದಶಕಗಳಿಂದ ಮೀಸಲು ವರ್ಗೀಕರಣ ನನೆಗುದಿಗೆ ಬಿದ್ದಿದೆ. ಅದೇನೇ ಅಡ್ಡಿ ಎದುರಾದರೂ ನಾನು ನಿಮಗೆ ನೈಜ ಮೀಸಲು ದೊರಕಿಸಿ ಕೊಡುತ್ತೇನೆ ಎಂದು ಮೋದಿ ವಾಗ್ದಾನ ನೀಡಿದ್ದರು. ಇದರಿಂದಾಗಿ ಬಿಜೆಪಿ ಸಂಖ್ಯಾಬಲ 2018ರಲ್ಲಿ ಒಂದು ಇದ್ದದ್ದು ಎಂಟಕ್ಕೆ ಜಿಗಿದಿದೆ. ಮತಗಳಿಕೆ ಪ್ರಮಾಣ ಶೇ.6.10 ರಿಂದ ಶೇ.14ಕ್ಕೆ ಹೆಚ್ಚಳವಾಗಿದೆ. ಮೀಸಲು ವರ್ಗೀಕರಣದ ಭರವಸೆ, ಮಂದಕೃಷ್ಣ ಮಾದಿಗ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಿದ್ದರ ಎಫೆಕ್ಟ್ ಎನ್ನುವುದು ಕಾಂಗ್ರೆಸ್​ಗೆ ಗೊತ್ತಾಗಿದೆ. ಈ ಅಲೆ ಲೋಕಸಭೆ ಚುನಾವಣೆಗೂ ವ್ಯಾಪಿಸೀತು ಎನ್ನುವ ಅಳುಕು ಕೈನಾಯಕರನ್ನು ಬಾಧಿಸುತ್ತಿದೆ.
18ರಂದು ಮಂಡನೆ ಸಾಧ್ಯತೆಜ.18ರ ಸಂಪುಟ ಸಭೆಯಲ್ಲಿ ನ್ಯಾ.ಸದಾಶಿವ ವರದಿ ಮಂಡನೆಯಾಗುವ ಸಾಧ್ಯತೆಗಳಿವೆ. ಸದನದಲ್ಲಿ ಅಲ್ಲದಿದ್ದರೂ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಸುಪ್ರೀಂ ಕೋರ್ಟ್​ನಲ್ಲಿ ವರ್ಗೀಕರಣ ಪರ ವಾದಕ್ಕೆ ಬಲ ತುಂಬುತ್ತದೆ. ಒಳಮೀಸಲಿಗೆ ಈಗಾಗಲೇ 13 ರಾಜ್ಯಗಳು ಸೇರಿವೆ. ರಾಜ್ಯ ಸರ್ಕಾರ ಶಿಫಾರಸು ಕಳುಹಿಸುವುದಕ್ಕೆ ವಿಳಂಬ ಮಾಡಿದರೆ ವಿರೋಧದ ಸಂದೇಶ ರವಾನಿಸಲಿದೆ ಎಂಬ ಆತಂಕ ಕೆಲವರನ್ನು ಕಾಡುತ್ತಿದೆ. 18ರಂದು ಮಂಡನೆ ಸಾಧ್ಯತೆ ಪ್ರಮುಖವಾಗಿ ಸಂಘ ಪರಿವಾರದ ತಂತ್ರಕ್ಕೆ ಪ್ರತಿತಂತ್ರ ಹೂಡುವ ಅನಿವಾರ್ಯತೆ ಆಡಳಿತ ಪಕ್ಷಕ್ಕೆ ಎದುರಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಒಳ ಮೀಸಲು ಸಂಬಂಧ ಕೈಗೊಂಡ ನಿರ್ಧಾರವನ್ನು ಬಳಸಿಕೊಂಡು ಹಾಗೂ ಕಾಂಗ್ರೆಸ್ ಉದಾಸೀನ ಮಾಡುತ್ತಿರುವ ವಿಚಾರವನ್ನು ಸಮುದಾಯದ ಮಧ್ಯೆ ಬಿತ್ತಲಾಗುತ್ತಿದೆ. ಅಂತ್ಯೋದಯ ಪರಿಕಲ್ಪನೆಯಡಿ ಶೋಷಿತ ಸಮುದಾಯಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಬಿಜೆಪಿ ಪರ ವಾಲಿಸಲು ಕಸರತ್ತು ನಡೆದಿದೆ. ಇದು ಕಾಂಗ್ರೆಸ್​ಗೆ ನುಂಗಲಾರದ ಬೆಳವಣಿಗೆಯಾಗಿದೆ.
39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 7 =
Remember me
