ಪೊ. ಮಲ್ಲೇಪುರಂ ಜಿ. ವೆಂಕಟೇಶಶ್ರೀ ಮುಕುಂದೂರು ಸ್ವಾಮಿಗಳನ್ನು ಮೊದಲು ಲೋಕಕ್ಕೆ ಪರಿಚಯಿಸಿದವರು ಬೆಳೆಗೆರೆ ಕೃಷ್ಣಶಾಸ್ತ್ರಿಗಳು. ಅವರು ಸ್ವಾಮಿಗಳ ಜತೆ 18 ವರ್ಷಗಳ ಒಡನಾಟದ ನೆನಪುಗಳನ್ನು ‘ಯೇಗ್ದಾಗೆಲ್ಲಾ ಐತೆ’ ಕೃತಿಯಲ್ಲಿ ಬರೆದಿದ್ದಾರೆ. ಆದರೆ ಸ್ವಾಮಿಗಳು ಹುಟ್ಟಿದ್ದು ಎಲ್ಲಿ? ತಂದೆ-ತಾಯಿ ಯಾರು? ಸಾಧನೆ ಮಾಡಲು ದಾರಿ ತೋರಿಸಿದ ಗುರು ಯಾರು? ಈ ವಿಷಯಗಳು ಶಾಸ್ತ್ರಿಗಳು ಬರೆದ ಕೃತಿಯಲ್ಲಿ ಇಲ್ಲ. ಸ್ವಾಮಿಗಳ ಭೌತಿಕ ವಿವರಗಳನ್ನು ಈಗ ತಿಳಿಯೋಣ.
ಮುಕುಂದೂರು ಸ್ವಾಮಿಗಳು ಹುಟ್ಟಿದ್ದು ತಿಪಟೂರು ತಾಲ್ಲೂಕು ಸಿದ್ಧರಾಮನ ಪಾಳ್ಯ. ತಂದೆ ಸಿದ್ಧಲಿಂಗಯ್ಯ, ತಾಯಿ ಶಿವನಂಜಮ್ಮ. ಜನ್ಮನಾಮ ಬೋರಯ್ಯ. ಇವರಿಗೆ 12 ವರ್ಷವಿದ್ದಾಗ ತಂದೆ-ತಾಯಿ ನಿಧನರಾದರು. ಬಾಲಕ ಅನಾಥನಾದ. 18ರ ಪ್ರಾಯದಲ್ಲಿ ತುಮಕೂರು ಅರಸೀಕೆರೆ ರೈಲ್ವೆ ಹಳಿ ಕಾಮಗಾರಿಯಲ್ಲಿ ಕೂಲಿಕಾರ್ವಿುಕನಾಗಿ ಬೋರಯ್ಯ ದುಡಿಮೆ ಮಾಡಿದ. ಅದು 1854ರಲ್ಲಿ ಪೂರ್ಣಗೊಂಡಿತು. ಆಮೇಲೆ ಜಾವಗಲ್ ಮಂಡಿವರ್ತಕ ಶಂಕರನಹಳ್ಳಿ ಮಲ್ಲೇಗೌಡರ ಜಮೀನಿನಲ್ಲಿ ಕೃಷಿಕಾಯಕ ಮಾಡುತ್ತಿದ್ದಾಗ ಸಿಂಗನಹಳ್ಳಿ ಚನ್ನಬಸಪ್ಪನ ಮಗಳು ರಾಮಕ್ಕನ ಜತೆ ವಿವಾಹ ಆಯಿತು. ಬೋರಯ್ಯ-ರಾಮಕ್ಕ ದಂಪತಿಗೆ ಸಣ್ಣರಾಮಕ್ಕನೆಂಬ ಹೆಣ್ಣು ಮಗು ಹುಟ್ಟಿತು. ಬೋರಯ್ಯನಿಗೆ ನಾಟಕದ ಹುಚ್ಚು. ಆದರೆ, ಮಾವನಿಗೆ ಅಳಿಯ ನಾಟಕ ಆಡೋದು ಸರಿಬರಲಿಲ್ಲ. ಆಗ ಮಾವ ಚನ್ನಬಸಪ್ಪನ ವಾಕ್​ಪ್ರಹಾರದಿಂದ ಬೋರಯ್ಯನಿಗೆ ಸಂಸಾರದಲ್ಲಿ ವಿರಕ್ತಿ ಹುಟ್ಟಿಬಿಟ್ಟಿತು. ಅಲ್ಲಿಯೇ ಬಟ್ಟೆ-ಬರೆ ತೆಗೆದು ಹಾಕಿ ತುಂಡುಪಂಚೆ ಉಟ್ಟು ಊರಿನ ಉತ್ತರಕ್ಕಿದ್ದ ಕಣಿವೆ ರಾಮೇಶ್ವರನ ಸನ್ನಿಧಿಯಲ್ಲಿ ಪಾರಮಾರ್ಥಿಕ ಸಾಧನೆಗೆ ತೊಡಗಿಬಿಟ್ಟ.
ಸಾಧನಾಮಾರ್ಗ:ಬೋರಯ್ಯ ಲೋಕರಕ್ತಿಯಿಂದ ವಿರಕ್ತಿ ಕಡೆ ತಿರುಗಿದ. ಆ ಹೊತ್ತಿನಲ್ಲಿ ಅರಸಿಕೆರೆ ತಾಲ್ಲೂಕು ಹೊನ್ನುಡುಕೆ ಗ್ರಾಮದ ನಂಜುಂಡಾರಾಧ್ಯ ಶಿವಯೋಗಿಗಳ ಸಂಪರ್ಕ ಆಯಿತು. ಅವರ ಜತೆ ಅಂಗ-ಲಿಂಗ-ಸಂಗದಲ್ಲಿ ಐದಾರು ವರ್ಷ ಸೇವೆ ಮಾಡಿದ. ಅವರಿಂದ ಕುಂಡಲಿನೀಯೋಗದ ದೀಕ್ಷೆ ಪಡೆದು ‘ಬಸವಲಿಂಗ ಶಿವಯೋಗಿ’ ಎಂದು ಅಭಿಧಾನ ಪಡೆದ. ಗುರುವಿನ ಆದೇಶದಂತೆ ತೀರ್ಥಕ್ಷೇತ್ರಗಳ ಪರ್ಯಟನವೂ ಆಯಿತು. ಗುರು ತೋರಿದ ದಾರಿಯಲ್ಲಿ ಸಾಧನೆ. ಕೊನೆಗೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದೀತೀರದ ಮುಕುಂದೂರು ಮಲ್ಲಿಕಾರ್ಜುನ ಗಿರಿಯಲ್ಲಿ 22 ದಿನಗಳ ಕಾಲ ಹಗಲು-ರಾತ್ರಿ ಅಖಂಡ ಕುಂಡಲಿನಿ ಯೋಗದ ಸಾಧನೆ ಮಾಡಿ ಮುಕುಂದೂರು ಗಿರಿಯ 120 ಅಡಿ ಎತ್ತರದ ಕೋಡುಗಲ್ಲಿನ ಮೇಲೆ ನಿಂತು 9 ದಿವಸದವರೆಗೆ ಯೋಗಸಾಧನೆ ಮಾಡಿದ್ದು ಅವಿಸ್ಮರಣೀಯ. ಬಸವಲಿಂಗ ಶಿವಯೋಗಿಗಳು ಮುಕುಂದೂರು ಗಿರಿಯ ಗವಿಯೊಂದರಲ್ಲಿ ಇದ್ದುದರಿಂದ ಅವರನ್ನು ಜನರು ‘ಮುಕುಂದೂರು ಸ್ವಾಮಿಗಳು’ ಎಂದು ಕರೆಯತೊಡಗಿದರು. ಬಂದ ಭಕ್ತರಿಗೆ ಸ್ವಾಮಿಗಳು ಅನುಗ್ರಹ ಮಾಡತೊಡಗಿದರು. ಸುತ್ತಮುತ್ತಲಿದ್ದ ಹಳ್ಳಿಗಳಿಗೆ ದಿಢೀರನೆ ಹೋಗಿ ಜನರ ಜತೆ ಬೆರೆಯುತ್ತಿದ್ದರು. ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದರು. ಜನರ ರೋಗ-ರುಜಿನಗಳನ್ನು ವಾಸಿ ಮಾಡುತ್ತಿದ್ದರು. ಜನರಲ್ಲಿದ್ದ ಜಾತಿಭಾವನೆ ಕಿತ್ತು ಹಾಕುತ್ತಿದ್ದರು. ‘ನಾನು ಯಾರು?’ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರೆ ಅಧ್ಯಾತ್ಮದ ದಾರಿ ತೆರೆಯುತ್ತದೆಂದು ಜನರಿಗೆ ಹೇಳುತ್ತಿದ್ದರು. 1940ರವರೆಗೆ ಸಾಧನೆ ಮಾಡುತ್ತ ಮುಕುಂದೂರು ಗಿರಿಯಲ್ಲಿ ಅಣಿಮಾದಿ ಅಷ್ಟಸಿದ್ಧಿ ಗಳನ್ನು ಪಡೆದರು. ಮುಕುಂದೂರು ಸ್ವಾಮಿಗಳಿಗೆ 103 ವರ್ಷವಾಗಿದ್ದಾಗ ಬೆಟ್ಟ ಹತ್ತಿ ಇಳಿಯಲು ಕಷ್ಟವಾಗುತ್ತಿತ್ತು. ಆಗ ಮಾರನಗೊಂಡನ ಹಳ್ಳಿಯ ಇಬ್ಬರು ಭಕ್ತರು ತಮ್ಮೂರಿಗೆ 1943ರಲ್ಲಿ ಕರೆದುಕೊಂಡು ಹೋದರು. ಬಸವಲಿಂಗ ಶಿವಯೋಗಿಗಳು 1967ರ ಅ. 8ರಂದು ತಮ್ಮ 130ನೇ ವಯಸ್ಸಿನಲ್ಲಿ ಶಿವೈಕ್ಯರಾದರು.
(ಲೇಖಕರು ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
