ರಾಘವ ಶರ್ಮ ನಿಡ್ಲೆ ನವದೆಹಲಿಲೋಕಸಭೆ ಚುನಾವಣೆಯ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಮಾರ್ಚ್ 8ರಂದು ಮತ್ತೊಂದು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಪಕ್ಷದ ಹಿರಿಯ ಮುಖಂಡರೊಂದಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ಹಂತಹಂತವಾಗಿ ಸಭೆ ನಡೆಸಿದ್ದಾರೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕೆಲವು ಸ್ಥಾನಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ್, ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಪಕ್ಷದ ಮುಖಂಡರಾದ ಆರ್. ಅಶೋಕ್, ಕೋಟಾ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜತೆಗೆ ವರಿಷ್ಠರು ಸಭೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ರ್ಚಚಿಸಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರಲ್ಲಿ ಬೀದರ್​ನಲ್ಲಿ ಭಗವಂತ್ ಖೂಬಾಗೆ ಸ್ಥಳೀಯ ಮುಖಂಡರಿಂದಲೇ ಭಾರಿ ವಿರೋಧ ಇರುವು ದರಿಂದ, ಅವರು ಗೆಲ್ಲುವ ಬಗ್ಗೆ ರಾಜ್ಯ ಮುಖಂಡರಿಗೆ ಅನುಮಾನಗಳಿವೆ. ಹೀಗಾಗಿ, ಖೂಬಾ ಹೆಸರಿನ ಜತೆಗೆ ಶಿಫಾರಸು ಮಾಡಿರುವ ಗುರುನಾಥ್ ಕೊಳ್ಳೂರು ಅಥವಾ ಚಂದು ಪಾಟೀಲ್​ಗೆ ಟಿಕೆಟ್ ನಿಶ್ಚಿತ ಎಂದು ಹೇಳಲಾಗಿದೆ. ಚಿತ್ರದುರ್ಗದಿಂದ ಸಚಿವ ನಾರಾಯಣ ಸ್ವಾಮಿ ಟಿಕೆಟ್ ಬಗ್ಗೆ ಖಾತರಿ ಇಲ್ಲದಿದ್ದರೂ, ಜಾತಿ ಸಮೀಕರಣಗಳು ನಾರಾಯಣಸ್ವಾಮಿಗೆ ನೆರವಾಗುವುದೇ ಕಾದುನೋಡಬೇಕು. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳೀಯ ಮಟ್ಟದಲ್ಲಿ ಭಾರಿ ವಿರೋಧ ಕಂಡುಬಂದಿದ್ದರೂ, ರಾಜ್ಯ ಘಟಕ ಶೋಭಾ ಬೆನ್ನಿಗೆ ನಿಂತಿದೆ. ವರಿಷ್ಠ ವಲಯದಲ್ಲೂ ಶೋಭಾ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಧಾರವಾಡ-ಹುಬ್ಬಳ್ಳಿ ಸಂಸದ ಪ್ರಲ್ಹಾದ್ ಜೋಶಿಗೆ ಟಿಕೆಟ್ ಬಹುತೇಕ ನಿಶ್ಚಿತವಾಗಿದ್ದರೂ, ಇತ್ತೀಚೆಗಷ್ಟೇ ಬಿಜೆಪಿಗೆ ವಾಪಸಾಗಿರುವ ಜಗದೀಶ ಶೆಟ್ಟರ್ ಹೆಸರನ್ನು ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳಿಗೆ ಶಿಫಾರಸು ಮಾಡಲಾಗಿದೆ. ಬೆಳಗಾವಿಗೆ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್ ಹೆಸರೂ ಕೇಳಿಬಂದಿದೆ.
ದಕ್ಷಿಣ ಕನ್ನಡ ಕ್ಷೇತ್ರ ರಾಜ್ಯ ಬಿಜೆಪಿ ಮತ್ತು ವರಿಷ್ಠರಿಗೆ ತಲೆನೋವು ತಂದಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾ ಗಿದೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್​ಗೆ ಕ್ಷೇತ್ರದ ಕಾರ್ಯಕರ್ತ ವರ್ಗದಿಂದಲೇ ಭಾರೀ ವಿರೋಧವಿದೆ. ಬೃಜೇಶ್ ಚೌಟ ಹೆಸರಿಗೆ ಮಹತ್ವ ಬಂದಿದೆ. ಬೃಜೇಶ್ ಹೆಸರನ್ನೂ ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ. ಕಟೀಲ್​ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬೆಂಬಲವಿದೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಕೇಳುತ್ತಿದೆ. ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಹೆಸರೂ ಹೈಕಮಾಂಡ್ ಅಂಗಳಕ್ಕೆ ಬಂದಿದೆ ಎನ್ನಲಾಗಿದೆ.
ಹಾವೇರಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ್ ಹೆಸರು ವರಿಷ್ಠರ ಮುಂದಿದೆ. ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕಾರಣಿಗಳ ಕ್ರಿಮಿನಲ್ ಕೇಸುಗಳಲ್ಲಿ ವಕೀಲರಾಗಿ ಕೆಲಸ ಮಾಡಿರುವ ಸಂದೀಪ್ ಪಾಟೀಲ್ ಹಾವೇರಿ ಟಿಕೆಟ್​ಗಾಗಿ ಲಾಬಿ ಮಾಡಿದ್ದಾರೆ. ಪ್ರಭಾವಿಗಳ ಮಧ್ಯೆ ಸಂದೀಪ್​ಗೆ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ.
ಮೈಸೂರಿಗೆ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಹೆಸರನ್ನು ನೀಡಲಾಗಿದೆ. ಪ್ರತಾಪ್​ಗೆ ಸ್ಥಳೀಯ ನಾಯಕರ ವಿರೋಧದ ಮಧ್ಯೆ ಟಿಕೆಟ್ ಸಿಗುವುದೇ ಎನ್ನುವುದು ಕುತೂಹಲಕರ. ಬೆಂಗಳೂರು ಉತ್ತರಕ್ಕೆ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮತ್ತು ಮಾಜಿ ಸಚಿವ ಸಿಟಿ ರವಿ ಹೆಸರು ಚರ್ಚೆಯಾಗಿದೆ. ಆದರೆ, ಜೆಡಿಎಸ್​ನಿಂದ ಡಾ. ಸಿಎನ್ ಮಂಜುನಾಥ್ ಅವರೂ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಒಲವು ಹೊಂದಿದ್ದಾರೆ.
ತುಮಕೂರು ಕ್ಷೇತ್ರದಿಂದ ಮಾಜಿ ಸಚಿವರಾದ ವಿ. ಸೋಮಣ್ಣ ಮತ್ತು ಮಾಧುಸ್ವಾಮಿ ಹೆಸರು ಚರ್ಚೆಯಲ್ಲಿದೆ. ಸೋಮಣ್ಣಗೆ ಲೋಕಸಭೆ ಸ್ಪರ್ಧೆ ಇಷ್ಟವಿರಲಿಲ್ಲ. ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಸಭೆಗೆ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪರ್ಧೆ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ, ತುಮಕೂರು ಟಿಕೆಟ್​ಗಾಗಿ ಒಳಗೊಳಗೇ ಲಾಬಿ ಮುಂದುವರಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಹೆಸರು ಬಿಟ್ಟು ಬೇರೆ ಯಾವ ಹೆಸರನ್ನೂ ಶಿಫಾರಸು ಮಾಡಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಜೈ ಶಂಕರ್ ಇಲ್ಲಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಗಳಿದ್ದವು. ಆದರೆ, ಲೋಕಸಭೆ ಸ್ಪರ್ಧೆ ಬಗ್ಗೆಯೇ ಜೈಶಂಕರ್​ಗೆ ಆಸಕ್ತಿ ಇಲ್ಲ ಎಂಬ ಮಾಹಿತಿ ಇದೆ.
ಉತ್ತರ ಕನ್ನಡ ಕ್ಷೇತ್ರಕ್ಕೆ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ, ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಮತ್ತು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ದಿಲ್ಲಿಗೆ ಬಂದಿದೆ. ಅನಂತ್​ಕುಮಾರ್ ಹೆಗಡೆ ಬಗ್ಗೆ ರಾಜ್ಯ ಘಟಕದಲ್ಲೇ ಪೂರಕ ಅಭಿಪ್ರಾಯಗಳಿಲ್ಲ. ಹೀಗಾಗಿ, ಪತ್ರಿಕೋದ್ಯಮ ಬಿಟ್ಟು ರಾಜಕಾರಣಕ್ಕೆ ಸೇರಿ, ಬಿಜೆಪಿ ವಕ್ತಾರ ಆಗಿರುವ ಹರಿಪ್ರಕಾಶ್​ಗೆ ಅದೃಷ್ಟದ ಬಾಗಿಲು ತೆರೆಯುವುದೇ ಎನ್ನುವುದು ಕುತೂಹಲ ಸೃಷ್ಟಿಸಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಂಸದ ಬಚ್ಚೇಗೌಡರ ಬದಲು ಮಾಜಿ ಸಚಿವ ಡಾ. ಸುಧಾಕರ್ ಮತ್ತು ಶಾಸಕ ಎಸ್. ಆರ್. ವಿಶ್ವನಾಥ್ ಪುತ್ರ ಅಶೋಕ್ ವಿಶ್ವನಾಥ್ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿದೆ. ಸುಧಾಕರ್ ಲಾಬಿ ಮತ್ತು ಅಶೋಕ್ ಪ್ರಭಾವದ ಮಧ್ಯೆ ವರಿಷ್ಠರ ಆಯ್ಕೆ ಕುತೂಹಲ ಕೆರಳಿಸಿದೆ. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಾಸನ, ಮಂಡ್ಯ ಸೀಟುಗಳ ಬಗ್ಗೆ ತೀರ್ವನವನ್ನು ನೀವೇ ತೆಗೆದುಕೊಳ್ಳಿ ಎಂದು ರಾಜ್ಯ ನಾಯಕರು ವರಿಷ್ಠರಿಗೆ ತಿಳಿಸಿದ್ದಾರೆನ್ನಲಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಬಿಜೆಪಿ ವರಿಷ್ಠ ನಾಯಕರಾದ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ರಾಜ್ಯ ಉಸ್ತುವಾರಿ ಅರುಣ್ ಉಪಸ್ಥಿತರಿದ್ದರು.
ರಾಜ್ಯ ಬಿಜೆಪಿ ಶಿಫಾರಸೇನು?:ರಾಜ್ಯ ಬಿಜೆಪಿ ನಾಯಕರು ತಾವು ನೀಡಿರುವ ಪಟ್ಟಿಯಲ್ಲಿ ಕೆಲ ಕ್ಷೇತ್ರಗಳಿಗೆ 3-4 ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿದ್ದರೆ, ಮತ್ತೆ ಕೆಲ ಕ್ಷೇತ್ರಗಳಿಗೆ 1-2 ಹೆಸರನ್ನು ಸೂಚಿಸಿದ್ದಾರೆ. ಬಹುಪಾಲು ಕ್ಷೇತ್ರಗಳಿಗೆ ಹಾಲಿ ಸಂಸದರ ಹೆಸರನ್ನು ಶಿಫಾರಸು ಮಾಡಿದ್ದರೂ, ಹಲವರಿಗೆ ಟಿಕೆಟ್ ತಪ್ಪುವುದು ಖಚಿತ ಎನ್ನಲಾಗುತ್ತಿದೆ.
ಕೈ ಅಭ್ಯರ್ಥಿ ಸಭೆ ಮುಂದಕ್ಕೆ:ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಎಐಸಿಸಿ ಗುರುವಾರ ದೆಹಲಿಯಲ್ಲಿ ಕರೆದಿದ್ದ ಸಭೆ ಮುಂದೂಡಿಕೆ ಆಗಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಂಬಂಧ ಸಂಭಾವ್ಯ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತೆರಳಬೇಕಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹೀಗಾಗಿ ಸಿಎಂ, ಡಿಸಿಎಂ ಪ್ರವಾಸ ಮುಂದೂಡಲ್ಪಟ್ಟಿದೆ. ಮೂರು ದಿನಗಳ ಹಿಂದಷ್ಟೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ 28 ಲೋಕಸಭೆ ಕ್ಷೇತ್ರಕ್ಕೂ ಯಾರು ಅಭ್ಯರ್ಥಿಯಾಗಬೇಕೆಂದು ಸಿಎಂ ಹಾಗೂ ಡಿಸಿಎಂ ಅವರ ಅಭಿಪ್ರಾಯ ಪಡೆದು ಮಾ.7ರಂದು ದೆಹಲಿಗೆ ಬರುವಂತೆ ಸೂಚಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
