ಬೆಂಗಳೂರು:ಹಾವೇರಿಯಲ್ಲಿ ಸೆ.23, 24, 25ಕ್ಕೆ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿದ್ದು, ಒಟ್ಟು 19 ಸಮಿತಿಗಳನ್ನು ರಚಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.
ಹಿಂದಿನ ಸಮ್ಮೇಳನಗಳಲ್ಲಿ ಪ್ರಧಾನ ವೇದಿಕೆಯೊಂದಿಗೆ ಕನಿಷ್ಠ 2 ಸಮಾನಾಂತರ ವೇದಿಕೆಗಳನ್ನು ನಿರ್ವಿುಸಿ ಗೋಷ್ಠಿ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಆದರೆ, ಗೋಷ್ಠಿಗಳ ಸಂಖ್ಯೆ ಹೆಚ್ಚಾಗುವುದಕ್ಕಿಂತ ಗುಣಮಟ್ಟದ ಚರ್ಚೆ ನಡೆಯಬೇಕು. ನಿಗದಿತ ಸಮಯದಲ್ಲಿ ಆರಂಭಿಸಿ, ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸುವುದು ಸೂಕ್ತ. ಈ ಕಾರಣಕ್ಕೆ ಪ್ರಧಾನ ವೇದಿಕೆಯಲ್ಲಿಯೇ ಎಲ್ಲ ಕಾರ್ಯಕ್ರಮ ನಡೆಯಲಿ ಎಂಬ ಒತ್ತಾಸೆ ಕೇಳಿ ಬಂದಿದೆ. ಹೀಗಾಗಿ ಹಾವೇರಿಯಲ್ಲಿ ಮುಖ್ಯ ವೇದಿಕೆಯಲ್ಲೇ ಎಲ್ಲ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಕ್ಷಗಾನ ಸಾಹಿತ್ಯ, ವೈದ್ಯಕೀಯ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಚಲನಚಿತ್ರ ಸೇರಿ ಎಲ್ಲ ಪ್ರಕಾರದ ಸಾಹಿತ್ಯಗಳನ್ನು ಒಳಗೊಳ್ಳಲಾಗುತ್ತದೆ ಎಂದು ಜೋಶಿ ಹೇಳಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದ್ದು, 86ನೇ ಸಮ್ಮೇಳನದ ನೆನಪಿಗಾಗಿ 86 ಕೃತಿಗಳನ್ನು ಹೊರತರಲಾಗುವುದು. ಇದರಲ್ಲಿ ಹಾವೇರಿ ಜಿಲ್ಲೆಗೆ ಸಂಬಂಧಿಸಿದ 30 ಪುಸ್ತಕಗಳು ಇರಲಿವೆ. ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಉಪಸ್ಥಿತರಿದ್ದರು.
ಮೈಸೂರು ದಸರಾದ ಅದ್ದೂರಿತನ:ಸಿಎಂ ತವರು ಜಿಲ್ಲೆ ಹಾಗೂ ಕಸಾಪ ಅಧ್ಯಕ್ಷರ ತವರು ಜಿಲ್ಲೆಯಾಗಿರುವುದರಿಂದ ಈ ಬಾರಿ ಸಮ್ಮೇಳನ ಅದ್ದೂರಿಯಿಂದ ಕೂಡಿರಲಿದೆ. ಹಿಂದಿನ ಎರಡು ಸಮ್ಮೇಳನಗಳಿಗೆ ತಲಾ 9.41 ಹಾಗೂ 10 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದರೆ, ಈ ಬಾರಿ 20 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತಿದೆ. ಜತೆಗೆ, ಸರ್ಕಾರಿ ನೌಕರರ ಒಂದು ದಿನದ ಸಂಬಳ, ಇತರ ದಾನಿಗಳ ನೆರವು ಹಾಗೂ ಪ್ರತಿನಿಧಿ ಶುಲ್ಕ ಸೇರಿದಲ್ಲಿ ಈ ಮೊತ್ತ ಇನ್ನೂ ಹೆಚ್ಚಾಗಲಿದೆ. ಸಮ್ಮೇಳನವನ್ನು ಮೈಸೂರು ದಸರಾದಂತೆ ವೈಭವಯುತವಾಗಿ ನಡೆಸಲು ಚಿಂತಿಸಲಾಗಿದೆ ಎಂದು ಜೋಶಿ ಹೇಳಿದರು.
ಸಾರ್ವಜನಿಕರ ಜತೆ ಸಿಎಂ ಚರ್ಚೆ:ಪ್ರತಿ ಬಾರಿ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳು ಅನುಷ್ಠಾನಕ್ಕೆ ಬರುತ್ತವೆಯೇ ಎಂಬುದು ಎಲ್ಲರೂ ಕೇಳುವ ಪ್ರಶ್ನೆಯೇ ಆಗಿದೆ. ಇದಕ್ಕೆ ಸರ್ಕಾರವನ್ನೇ ಉತ್ತರದಾಯಿಯಾಗಿಸಲು, ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಲು ‘ಸಾರ್ವಜನಿಕರೊಂದಿಗೆ ಸಿಎಂ ಚರ್ಚೆ’ ಕಾರ್ಯಕ್ರಮವನ್ನು ಆಯೋಜಿಸುವುದು ಕಸಾಪ ಉದ್ದೇಶವಾಗಿದೆ ಎಂದು ಜೋಶಿ ಹೇಳಿದರು. ಜತೆಗೆ, ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಅನುಷ್ಠಾನ ಸಮಿತಿಯನ್ನೂ ರಚಿಸಲಾಗುವುದು ಎಂದು ಹೇಳಿದರು.
ಪ್ರತಿನಿಧಿ ಶುಲ್ಕ ಹೆಚ್ಚಳ:ಕಳೆದೆರಡು ಸಮ್ಮೇಳನಗಳಲ್ಲಿ 250 ರೂ.ಗಳನ್ನು ಪ್ರತಿನಿಧಿ ಶುಲ್ಕವಾಗಿ ಪಡೆಯಲಾಗುತ್ತಿತ್ತು. ಈ ಬಾರಿ ಈ ಮೊತ್ತವನ್ನು ಇದನ್ನು 500 ರೂ.ಗಳಿಗೆ ಹೆಚ್ಚಿಸುವ ಚಿಂತನೆ ನಡೆದಿದೆ. ಈ ಬಾರಿ ಮೂರು ದಿನಗಳಲ್ಲಿ ಐದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ದಿನಕ್ಕೆ 1.50 ಲಕ್ಷ ಜನರಿಗೆ ಊಟದ ವ್ಯವಸ್ಥೆ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.
ಕನ್ನಡ ಪುಸ್ತಕಗಳಷ್ಟೇ ಮಾರಾಟ:ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟಕ್ಕಷ್ಟೇ ಅವಕಾಶ ಇರಲಿದೆ. ಕನ್ನಡ ಬರಹಗಾರರ ಪುಸ್ತಕಗಳು ಬೇರೆ ಭಾಷೆಗಳಲ್ಲಿ ಪ್ರಕಟವಾಗಿದ್ದರೆ ಅಂಥವುಗಳನ್ನು ಮಾರಾಟ ಮಾಡಬಹುದು.
ವಸತಿಗೆ ಜರ್ಮನ್ ಟೆಂಟ್:ಸಮ್ಮೇಳನಕ್ಕೆ ಆಗಮಿಸುವ ಐದು ಸಾವಿರ ಗಣ್ಯರಿಗೆ ವಸತಿ ಕಲ್ಪಿಸಲಾಗುವುದು. ಇದಕ್ಕೆ ಹಾವೇರಿ ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿ ಸ್ವಯಂಪ್ರೇರಣೆಯಿಂದ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ‘ಮನೆ ಮನೆ ಅತಿಥಿ’ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ, ಹಾವೇರಿಯಲ್ಲಿ ವಸತಿ ವ್ಯವಸ್ಥೆ ಸವಾಲಾಗಿರುವುದರಿಂದ ಸುಸಜ್ಜಿತ ಸೌಲಭ್ಯವುಳ್ಳ ಜರ್ಮನ್ ಟೆಂಟ್​ಗಳನ್ನು ಅಳವಡಿಸಲಾಗುತ್ತಿದೆ.
ಆನ್​ಲೈನ್ ನೋಂದಣಿ:ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿಯೂ ಸೇರಿ ಸ್ವಯಂಸೇವಾ ಕಾರ್ಯಕರ್ತರೊಂದಿಗೆ ಸಂವಹನ ಮಾಡಲು ಅನುಕೂಲವಾಗುವಂತೆ ಆನ್​ಲೈನ್ ನೋಂದಣಿ ಮಾಡಲಾಗುವುದು ಜತೆಗೆ, ಆಪ್ ರೂಪಿಸಿ ಮಾಹಿತಿ ರವಾನೆ ಮಾಡಲಾಗುತ್ತದೆ.
ಸದಸ್ಯರಿಗೆ ಸ್ಮಾರ್ಟ್​ಕಾರ್ಡ್:ಸದಸ್ಯತ್ವ ಪ್ರಕ್ರಿಯೆ ಆನ್​ಲೈನ್ ಆಗಲಿದ್ದು, ಹೊಸದಾಗಿ ಸದಸ್ಯರಾದವರಿಗೆ ಹಾಗೂ ಈಗಿರುವ ಸದಸ್ಯರಿಗೂ ಸ್ಮಾರ್ಟ್ ಕಾರ್ಡ್​ಗಳನ್ನು ನೀಡಲಾಗುತ್ತದೆ. ಸದಸ್ಯರು ಅಪರಾಧಿಕ ಕೃತ್ಯಗಳಲ್ಲಿ ಪಾಲ್ಗೊಂಡರೆ, ನ್ಯಾಯಾಲಯದ ವಿಚಾರಣೆಗೆ ಗುರಿಯಾಗಿದ್ದರೆ ಅಂಥವರನ್ನು ಸದಸ್ಯತ್ವದಿಂದ ಕೈಬಿಡಲು ಅವಕಾಶವಿರಲಿದೆ. ಕನ್ನಡ- ಕನ್ನಡಿಗ- ಕರ್ನಾಟಕ ಎಂಬುದು ಪರಿಷತ್ತಿನ ಧ್ಯೇಯವಾಗಿರಲಿದ್ದು, ಕನ್ನಡ ಅಸ್ಮಿತೆಯ ಪ್ರತೀಕವಾಗಿರಲಿದೆ. ಕನ್ನಡ ಶಾಲೆಗಳ ಪುನಶ್ಚೇತನದ ಹೊಣೆಗಾರಿಕೆಯನ್ನು ಕಸಾಪ ನಿರ್ವಹಿಸಲಿದ್ದು, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶ್ರಮಿಸಲಿದೆ.
ಪರಿಷತ್ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ:ಕನಕದಾಸರ ಕರ್ಮಭೂಮಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮೇ 1ರಂದು ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಹಾಗೂ 2020-21ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸರ್ವ ಸದಸ್ಯರ ವಿಶೇಷ ಸಭೆಯನ್ನು ಕರೆಯಲಾಗಿದೆ. ಕಸಾಪ ಬೈಲಾಗೆ ಆಮೂಲಾಗ್ರ ಬದಲಾವಣೆ ತರಲಾಗುತ್ತಿದ್ದು, ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತಿದೆ. ಪರಿಷತ್​ನಲ್ಲಿ ಮುಂದುವರಿದ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕಿದ್ದು, 1913ರ ಬೈಲಾಗೆ ತಿದ್ದುಪಡಿಗಳನ್ನು ಸೂಚಿಸಲು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿಯನ್ವಯ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ. ಮುಖ್ಯವಾಗಿ ಸದಸ್ಯತ್ವ ನೋಂದಣಿಯನ್ನು ಆನ್​ಲೈನ್ ಮೂಲಕವೇ ಮಾಡಿಕೊಳ್ಳಬಹುದು. ಸದಸ್ಯತ್ವ ಶುಲ್ಕವನ್ನು 500 ರೂ.ಗಳಿಂದ 250ಕ್ಕೆ ಇಳಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಜನರನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twelve =
Remember me
