ಬೆಂಗಳೂರು:ಕರೊನಾ ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲುರಾತ್ರಿ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಈ ಕಾರ್ಯದ ಹಿಂದಿನ ಶ್ರಮ ಮನಕರಗಿಸುವಂತಿದೆ. ಸೋಂಕಿತರು ಮತ್ತು ಶಂಕಿತರ ಆರೈಕೆಗಾಗಿ ಗಂಟೆಗಟ್ಟಲೆ ನೀರೂ ಕುಡಿಯದೆ ಕಾರ್ಯನಿರ್ವಹಿಸುವ ಇವರಲ್ಲಿ ಬಹುತೇಕರು ಕುಟುಂಬದವರನ್ನು ಕಂಡು ಅದೆಷ್ಟೋ ದಿನಗಳಾಗಿವೆ. ಈ ಸಂಕಷ್ಟ, ಮಾನಸಿಕ ಒತ್ತಡಗಳ ನಡುವೆಯೇ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿರುವ ತಮ್ಮ ಶ್ರಮದ ಬಗ್ಗೆ ಅವರಿಗೆಲ್ಲ ಹೆಮ್ಮೆಯಿದೆ. ಇವರಲ್ಲಿ ಕೆಲವರು ವಿಜಯವಾಣಿಯೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಎಂಟು ತಾಸು ನೀರೂ ಕುಡಿಯುವಂತಿಲ್ಲ
ಕೆಲಸ ನಿರ್ವಹಿಸುವಾಗ ವೈದ್ಯರು ಹಾಗೂ ಸಿಬ್ಬಂದಿ 8 ತಾಸು ನೀರನ್ನೂ ಕುಡಿಯುವಂತಿಲ್ಲ. ಇದಕ್ಕೆ ಕಾರಣ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್​ವೆುಂಟ್ ಸೂಟ್. ಇದನ್ನು ಧರಿಸುವಾಗ ಬಹಳಷ್ಟು ಎಚ್ಚರಿಕೆ ಕ್ರಮ ಅನುಸರಿಸಬೇಕು. ಮೂರು ಸುತ್ತು ಮಾಸ್ಕ್, ಗ್ಲೌಸ್, ಸಾಕ್ಸ್ ಹಾಗೂ ಅದರ ಮೇಲೆ ಬಟ್ಟೆ ಧರಿಸಬೇಕು. ಪದೇಪದೆ ಇವುಗಳನ್ನು ತೆಗೆಯಲು ಸಾಧ್ಯವಿಲ್ಲ. ಶೌಚಗೃಹಕ್ಕೂ ತೆರಳಲು ಸಾಧ್ಯವಾಗದ ಕಾರಣಕ್ಕೆ ಈ ಸಮಯದಲ್ಲಿ ನೀರು ಕುಡಿಯುವಂತಿಲ್ಲ. ಹೆಚ್ಚು ಮಾತನಾಡಿದರೆ ಗಂಟಲು ಒಣಗುತ್ತದೆ, ಗಂಟಲು ಒಣಗಿದರೆ ನೀರು ಕುಡಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಮಾತು ಬಹಳ ಕಡಿಮೆ. ಫೋನ್​ನಿಂದ ದೂರವೇ ಇರುವ ಕಾರಣ ಈ ಅವಧಿಯಲ್ಲಿ ಕುಟುಂಬದೊಂದಿಗೆ ಸಂಪರ್ಕವೂ ಸಾಧ್ಯವಿಲ್ಲ. ಮನೆಯವರು, ಮಕ್ಕಳು ಸ್ನೇಹಿತರು ಯಾರೊಂದಿಗೂ ಮಾತನಾಡಲು ಸಾಧ್ಯವಿಲ್ಲ. ಇದೆಲ್ಲದರಿಂದಾಗಿ ದೈಹಿಕದ ಜತೆಗೆ ಮಾನಸಿಕವಾಗಿಯೂ ಅನೇಕ ಒತ್ತಡಗಳಿರುತ್ತವೆ ಎಂದು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ರಾಜೀವ್​ಗಾಂಧಿ ಆಸ್ಪತ್ರೆ ವೈದ್ಯರೊಬ್ಬರು ಅನುಭವ ಹಂಚಿಕೊಂಡಿದ್ದಾರೆ.
ಮನೆಗೆ ಹೋಗಲು ಭಯ, ಆಸ್ಪತ್ರೆ ವಾಸ!
ಎಷ್ಟೇ ಎಚ್ಚರಿಕೆ ವಹಿಸಿದರೂ ಮನೆಯವರು ಹಾಗೂ ನೆರೆಹೊರೆಯವರು ನಮ್ಮನ್ನು ನೋಡುವ ರೀತಿಯೇ ಬೇರೆಯಾಗಿದೆ. ಇದರಿಂದ ಮನೆಗೆ ಹೋಗಲೂ ಭಯವಾಗುತ್ತಿದೆ ಎನ್ನುತ್ತಾರೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ. ಕುಟುಂಬದವರಿಗೆ, ನೆರೆಹೊರೆಯವರಿಗೆ ಮಾನಸಿಕ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮನೆಗೇ ಹೋಗುತ್ತಿಲ್ಲ. ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದು ಪುನಃ ಕೆಲಸ ನಿರ್ವಹಿಸುತ್ತಿದ್ದೇವೆ. ಸೋಂಕಿತರ ಆರೈಕೆಗೆ ನಿರಂತರ ಕೆಲಸ ಮಾಡುತ್ತಿದ್ದೇವೆ. ಕೆಲಸದ ಅವಧಿ ಮುಗಿದ ಮೇಲೆ ಮನೆಗೆ ಹೋಗುವಂತಿಲ್ಲ. ನಾವೂ 14 ದಿನಗಳ ನಿಗಾದಲ್ಲಿ ಇರಬೇಕಾಗುತ್ತದೆ. ನಂತರವಷ್ಟೇ ಮನೆಗೆ ಹೋಗಬೇಕು. ಇದೆಲ್ಲ ಒತ್ತಡಗಳ ನಡುವೆ ಸಮಾಜದ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿದು ಮುಂದೆ ಸಾಗುತ್ತಿದ್ದೇವೆ ಎನ್ನುತ್ತಾರೆ ಜಯನಗರ ಜನರಲ್ ಆಸ್ಪತ್ರೆ ವೈದ್ಯರು.
ಆಶಾ ಕಾರ್ಯಕರ್ತೆಯರ ಶ್ರಮ:ಕರೊನಾ ವೈರಸ್ ಹರಡದಂತೆ ನಿಗಾವಹಿಸಲು ಶ್ರಮಿಸುತ್ತಿರುವ ಎನ್​ಜಿಒ ಸ್ವಯಂಸೇವಕರು, ಆಶಾ ಕಾರ್ಯಕರ್ತರಿಗೆ ಸುರಕ್ಷಿತ ಉತ್ಪನ್ನ ನೀಡುವ ಜತೆಗೆ ಆರ್ಥಿಕ ಸಹಾಯವನ್ನೂ ಸರ್ಕಾರ ಮಾಡಬೇಕು. ಏಕೆಂದರೆ, ವೈದ್ಯರು ಮತ್ತು ನರ್ಸ್​ಗಳ ಜತೆಗೆ ಎನ್​ಜಿಒಗಳ ಸ್ವಯಂಸೇವಕರು ಮತ್ತು ಆಶಾ ಕಾರ್ಯಕರ್ತರು ಹಳ್ಳಿಗಳಿಗೆ ಹೋಗಿ ಜನರಿಗೆ ಕರೊನಾ ವೈರಸ್ ಹರಡದಂತೆ ತಡೆಗಟ್ಟಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಹೇಳುತ್ತಿದ್ದಾರೆ. ಅಲ್ಲದೆ, ಕೆಲವು ಪ್ರಮುಖ ರಸ್ತೆಗಳಲ್ಲಿ ಜನರ ಆರೋಗ್ಯ ತಪಾಸಣೆಯನ್ನೂ ಮಾಡುತ್ತಿದ್ದಾರೆ. ಇವರಿಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್​ಗಳನ್ನು ನೀಡಬೇಕಿದೆ. ಜತೆಗೆ, ಜೀವದ ಹಂಗು ತೊರೆದು ಕೆಲಸ ಮಾಡುವ ಇವರಿಗೆ ಆರ್ಥಿಕ ಸಹಾಯವನ್ನು ಸರ್ಕಾರ ಮಾಡಬೇಕಿದೆ.
ಹಾಲಿ ಹೋಮ್ ಕ್ವಾರಂಟೈನ್​ನಲ್ಲಿರುವವರ ಮನೆಗೆ ಬೀಗ ಜಡಿದು ಅವರು ಹೊರಗೆ ಬಾರದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಕರೊನಾ 4ನೇ ಹಂತಕ್ಕೆ ತಲುಪುವುದು ಖಚಿತ. ಜನರು ನಿರ್ಲಕ್ಷ್ಯವನ್ನು ಮೊದಲು ಬಿಡಬೇಕು. ಅಮೆರಿಕ ಮತ್ತು ಇಟಲಿಯಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಕರೊನಾ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ, ನಮ್ಮಂತಹ ದೇಶದ ಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಉಷ್ಣಾಂಶ ಹೆಚ್ಚಿದ್ದರೆ ಕರೊನಾ ಬರೊಲ್ಲ ಎಂಬ ಮನೋಭಾವ ಬಿಟ್ಟು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕು. ಕರೊನಾ ತಡೆಯಲು ಹೋಮ್ ಗಾರ್ಡ್ಸ್, ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಸಹ ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ವೈದ್ಯ ಡಾ.ಧನಂಜಯ್.
ರೋಗಿ ಆರೈಕೆಯಷ್ಟೇ ಗುರಿ
ರೋಗಿಯ ಆರೈಕೆಯಷ್ಟೇ ನಮ್ಮ ಗುರಿ ಆಗಿರುತ್ತದೆ. ಹೀಗಾಗಿ ನನ್ನ ಪತಿ ಹಾಗೂ ಮಗುವಿಗೆ ಸಮಯ ನೀಡಲು ಆಗುತ್ತಿಲ್ಲ. ಅವರಿಗೆ ನನ್ನ ಕೆಲಸ ಹಾಗೂ ಪರಿಣಾಮಗಳ ಬಗ್ಗೆ ವಿವರಿಸಿದ್ದೇನೆ. ಮಗನನ್ನು ಮಾನಸಿಕವಾಗಿ ಬಲಗೊಳಿಸಿದ್ದೇನೆ. ಮನೆಯಲ್ಲಿ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದೇನೆ. ನಮ್ಮ ಈ ಸೇವೆಗೆ ಜನರಿಂದ ಬಯಸುವುದು ಇಷ್ಟೆ, ‘ಮನೆಯ ಒಳಗೆ ಇರಿ, ಸಾರ್ವಜನಿಕವಾಗಿ ಅಂತರ ಕಾಯ್ದುಕೊಳ್ಳಿ’ ಎನ್ನುತ್ತಾರೆ ಕೆ.ಸಿ.ಜನರಲ್ ಆಸ್ಪತ್ರೆ ನರ್ಸಿಂಗ್ ಆಫೀಸರ್ ಗೀತಾ.
2019ರಲ್ಲಿ ಈ ಬಾಲಕ ಹೇಳಿದ್ದ ಭವಿಷ್ಯ ನಿಜವಾಯಿತೇ? ಅಭಿಗ್ಯನ ಊಹೆಯೇ ಸತ್ಯವಾಗುವುದಾದರೆ ಕರೊನಾದಿಂದ ಮುಕ್ತಿ ಪಡೆಯಲು ಮೇ 29ರವರೆಗೆ ಕಾಯಲೇಬೇಕು… !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
