ರೋಗಿಗೆ ಪ್ರೀತಿ-ಮಮತೆ, ಆಸರೆ ಜತೆಗೆ ಸಾಂತ್ವನ ನೀಡಿ ಉಪಚರಿಸುವ ತಾಯಿಯೇ ನರ್ಸ್/ ದಾದಿ. ಇಂಥ ಉದಾತ್ತ ವೃತ್ತಿ ಒಂದು ಕಾಲದಲ್ಲಿ ಕಡೆಗಣಿಸಲ್ಪಟ್ಟಿತ್ತು. ಈ ವೃತ್ತಿ ತಿರಸ್ಕಾರಕ್ಕೆ ಒಳಗಾಗಿದ್ದಂಥ ಸಮಯದಲ್ಲಿ ನರ್ಸಿಂಗ್​ಗೆ ಗೌರವ-ಘನತೆ ತಂದು ಕೊಟ್ಟವರು ಫ್ಲಾರೆನ್ಸ್ ನೈಟಿಂಗೇಲ್. ಇಟಲಿಯ ಶ್ರೀಮಂತ ಕುಟುಂಬದಲ್ಲಿ 1820, ಮೇ 12ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟುಹಬ್ಬ ಸ್ಮರಣಾರ್ಥ ‘ವಿಶ್ವ ದಾದಿಯರ ದಿನ’ ಆಚರಿಸಲಾಗುತ್ತದೆ. ಇಂದು ಅವರ 200ನೇ ಹುಟ್ಟುಹಬ್ಬ ಕೂಡ. ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ‘ವಿಜಯವಾಣಿ’ ಕರೆನೀಡಿದ ಆಹ್ವಾನಕ್ಕೆ ಸ್ಪಂದಿಸಿದ ಸಾವಿರಾರು ಓದುಗರು, ತಮ್ಮ ಬದುಕಿನ ಯಾತನೆಯ ದಿನಗಳಲ್ಲಿ ಶುಶ್ರೂಷೆ ನೀಡಿ ಮರುಜನ್ಮ ಕಲ್ಪಿಸಿದ ‘ವಿಶೇಷ ದಾದಿ’ಯರ ಮಾಹಿತಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸಲಾಗಿದೆ.
ನಿಸ್ವಾರ್ಥ ಸೇವೆಗೆ ನನ್ನದೊಂದು ಹ್ಯಾಟ್ಸಾಫ್
ಮೂರು ವರ್ಷಗಳ ಹಿಂದೆ ಡೆಂಘಯಿಂದಾಗಿ 15 ದಿನ ಆಸ್ಪತ್ರೆಯಲ್ಲಿರಬೇಕಾಗಿತ್ತು. ಆಗ ಹಗಲು-ರಾತ್ರಿ ಎನ್ನದೆ ರೋಗಿಗಳ ಶುಶ್ರೂಷೆ ಮಾಡುವ ದಾದಿಯರ ನಿಸ್ವಾರ್ಥ ಸೇವೆ ನೋಡಿದ್ದೇನೆ. ಆಗ ನನಗೆ ದಿನಕ್ಕೆ 4-5 ಸಲ ಸಲೈನ್ ನೀಡಲಾಗುತ್ತಿತ್ತು. ರಾತ್ರಿ 9ಕ್ಕೆ ಸಲೈನ್ ಕೊಡಲು ಶುರು ಮಾಡಿದರೆ ಮುಗಿಯುತ್ತಿದ್ದುದು ರಾತ್ರಿ ಹನ್ನೆರಡೂವರೆ ಮೇಲೆನೇ. ಆಸ್ಪತ್ರೆಯ ದಾದಿ ಆ ಸಮಯದವರೆಗೂ ಎಚ್ಚರವಿದ್ದು ಸಲೈನ್ ಬಾಟಲ್ ತೆಗೆಯುತ್ತಿದ್ದರು. ಕೆಲವೊಮ್ಮೆ ನಾನು ನಿದ್ರಿಸಿರುತ್ತಿದ್ದರಿಂದ ಬಂದು ಹೋಗಿದ್ದೂ ಗೊತ್ತಿರುತ್ತಿರಲಿಲ್ಲ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ಮರೆಯದೇ ಕೊಡುತ್ತಿದ್ದರು. ಸಹಾಯಕ್ಕೆ ಕರೆದಾಗ ಯಾವತ್ತೂ ಬೇಸರ ಮಾಡಿಕೊಂಡಿರಲಿಲ್ಲ. ರೋಗಿಗಳ ಕಂಡು ಅಸಹ್ಯಪಟ್ಟುಕೊಳ್ಳುತ್ತಿರಲಿಲ್ಲ. ಸರ್ಕಾರಿ ರಜೆ, ರವಿವಾರ ಎಂದೆಲ್ಲ ನೋಡದೆ ನಿತ್ಯ ಹನ್ನೆರಡು ಗಂಟೆ ಕೆಲಸ ಮಾಡುವ ದಾದಿಯರ ನಿಸ್ವಾರ್ಥ ಸೇವೆಗೆ ಹ್ಯಾಟ್ಸಾಫ್ ಹೇಳಲೇಬೇಕು.
| ಶ್ರೀರಂಗ ಪುರಾಣಿಕ ವಿಜಯಪುರ
ಇದನ್ನೂ ಓದಿಸಲಾಂ ಸಿಸ್ಟರ್​ : ಇಂದು ದಾದಿಯರ ದಿನ
ನನ್ನ ಶಿಷ್ಯ ಸೇವೆ ಮಾಡುವನೆಂಬ ಹೆಮ್ಮೆ
ಒಮ್ಮೆ ರಾತ್ರಿ 2 ಗಂಟೆ ಸುಮಾರಿಗೆ ವಿಪರೀತ ಕಿವಿನೋವು ಬಂದಿತ್ತು. ನಿದ್ದೆ ಬರುತ್ತಿರಲಿಲ್ಲ, ನೋವು ಸಹಿಸಲಾಗುತ್ತಿರಲಿಲ್ಲ. ಏನು ಮಾಡಬೇಕೋ ತೋಚುತ್ತಿರಲಿಲ್ಲ. ಆಗ ನೆನಪಾದದ್ದು ನಮ್ಮೂರಿನ ಬಾಳೇಶ. ಕರೆ ಮಾಡಿದ ತಕ್ಷಣ ಬಂದೇ ಬಿಟ್ಟರು. ಔಷಧ ಕೊಟ್ಟ ಕೆಲವೇ ಕ್ಷಣದಲ್ಲಿ ನಿದ್ದೆ ಬಂತು, ಅಚ್ಚರಿ ಎಂದರೆ ಅಷ್ಟರಿಂದಲೇ ಕಿವಿನೋವು ಮಾಯ. ಇನ್ನೊಮ್ಮೆ ನಮ್ಮ ಹಳ್ಳಿಯಲ್ಲಿ ಹಿರಿಯರೊಬ್ಬರಿಗೆ ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞೆ ತಪ್ಪಿತು. ವಿಷಯ ತಿಳಿದ ಬಾಳೇಶ ತಕ್ಷಣ ಆಂಬುಲೆನ್ಸ್ ಕರೆಸಿ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಆರೖಕೆ ಮಾಡಿ ಜೀವ ಉಳಿಸಿದರು. ಹೀಗೆ ನೂರಾರು ರೋಗಿಗಳ ಸೇವೆ ಮಾಡಿದ, ಹತ್ತಾರು ಜನರ ಜೀವ ಉಳಿಸಿದ ಬಾಳೇಶ ಕೋಲಕಾರ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ತುರ್ತಚಿಕಿತ್ಸಾ ವಿಭಾಗದಲ್ಲಿ ಶುಶ್ರೂಷಕರಾಗಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ‘ರೋಗಿಗಳ ಸೇವೆಯೇ ದೇವರ ಸೇವೆ’ ಎನ್ನುತ್ತ ಯಾವಾಗ ಕರೆದರೂ ಹಾಜರಾಗುವ ಬಾಳೇಶ ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ.
| ಎ.ಎ.ಸನದಿ, ನಿವೃತ್ತ ಶಿಕ್ಷಕ, ಬೆಳಗಾವಿ
ನಾವಿದ್ದೇವಲ್ಲ.. ಚಿಂತಿಸಬೇಡಿ..!
ನನ್ನ ಶ್ರೀಮತಿ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೋಸ್ಕರ ದಾಖಲಾಗಿದ್ದಳು. ಆಕೆಯ ರಕ್ತದ ಗುಂಪು ಒ ನೆಗೆಟಿವ್. ಒಂದೆರಡು ಬಾಟಲಿ ರಕ್ತ ಬೇಕಾಗಬಹುದು, ದಾನಿಗಳಿಗೆ ವ್ಯವಸ್ಥೆ ಮಾಡಿ ಎಂದಿದ್ದರು. ಇಬ್ಬರು ದಾನಿಗಳನ್ನು ಗುರುತಿಸಿದ್ದೆ. ಶಸ್ತ್ರಚಿಕಿತ್ಸೆ ದಿನ ಬೆಳಗ್ಗೆ 8ಕ್ಕೆ ಬಂದರೆ ಸಾಕೆಂದು ತಿಳಿಸಿದ್ದರು. ಬೆಳಗ್ಗೆ ಶ್ರೀಮತಿಯನ್ನು ಆಪರೇಷನ್ ರೂಮ್ ಗೆ ಕರೆದೊಯ್ಯುವ ಏರ್ಪಾಡಾಗುತ್ತಿತ್ತು. ನಾನು ರಕ್ತದಾನಿಗಳನ್ನು ಕಾಯುತ್ತಿದ್ದೆ. 8 ಗಂಟೆಗೆ ಬರೀ 5 ನಿಮಿಷಗಳಿದ್ದವು. ಬ್ಲಡ್​ಬ್ಯಾಂಕ್​ನ ಕವಿತಾ ಅವರು 2 ಸಲ ನನ್ನ ಬಳಿ ಬಂದು ದಾನಿಗಳ ಬಗ್ಗೆ ವಿಚಾರಿಸಿದ್ದರು. ಆದರೆ ದಾನಿಗಳ ಸುಳಿವಿರದ್ದರಿಂದ ನನ್ನ ಆತಂಕ ಹೆಚ್ಚುತ್ತಿತ್ತು. ಅವರ ಮೊಬೈಲ್​ಫೋನ್​ಗೆ ಕರೆ ಮಾಡಿದರೆ ನಾಟ್ ರೀಚಬಲ್ ಆಗಿತ್ತು. ನನ್ನ ಚಡಪಡಿಕೆ ಗಮನಿಸಿದ ಕವಿತಾ, ‘ಚಿಂತಿಸಬೇಡಿ.. ನನ್ನದು ಸಹ ಅದೇ ಗ್ರೂಪ್. ನನ್ನ ಸ್ನೇಹಿತೆ ಸಹ ಅದೇ ಗ್ರೂಪ್​ನವಳು. ಹಾಗೇನಾದರೂ ಅವಶ್ಯ ಬಿದ್ದರೆ ನಾವಿದ್ದೇವಲ್ಲ..’ ಎಂದಾಗ ನನ್ನಲ್ಲಿ ಮಾತೇ ಹೊರಡಲಿಲ್ಲ.
| ರಾಜೀವ್ ಎನ್. ಮಾಗಲ್ ಶ್ರೀಸಾಯಿ ಸಿರಿ ಎಸ್ಟೇಟ್, ಸಕಲೇಶಪುರ
ದೇವತಾ ಸ್ವರೂಪಿ ‘ಭುವನೇಶ್ವರಿ’
ನನಗೆ ಕರೊನಾ ಪಾಸಿಟಿವ್ ಎಂದಾಗ ಹೆದರಿದೆ. ವೆನ್ಲಾಕ್​ನ ಕೋವಿಡ್ ಆಸ್ಪತ್ರೆಯಲ್ಲಿದ್ದ ನನ್ನ ಆರೈಕೆಗೆ ಮನೆಯವರು, ಸ್ನೇಹಿತರು, ಬಂಧುಗಳು ಯಾರೂ ಬರುವಂತಿರಲಿಲ್ಲ. ಆಗ ಸುಳ್ಯ ಮಡಪ್ಪಾಡಿಯ ದಾದಿ ಭುವನೇಶ್ವರಿ(ವಿದ್ಯಾ) ಅವರು ವಹಿಸಿದ ಕಾಳಜಿ ಅಭೂತಪೂರ್ವ. ಅವರು ಕೇವಲ ದಾದಿಯಾಗಿ ಸೀಮಿತ ಕೆಲಸ ನಿರ್ವಹಿಸಿಲ್ಲ. ವೈರಸ್ ಹರಡುವ ಭಯದ ನಡುವೆಯೂ ಜೀವದ ಹಂಗುತೊರೆದು ಮಾತೆಯಂತೆ ಆರೈಕೆ ಮಾಡಿದರು. ಅವರು ಹಾಗೂ ಅಲ್ಲಿನ ಇತರ ದಾದಿಯರು, ವೈದ್ಯರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
| ಕರೊನಾದಿಂದ ಗುಣಮುಖರಾದ ವ್ಯಕ್ತಿ ತೊಕ್ಕೊಟ್ಟು
ದೊಡ್ಡಮ್ಮನೇ ನನ್ನ ದಾದಿ
ನನ್ನ ದೊಡ್ಡಮ್ಮನೇ ನನ್ನ ದಾದಿ. ನನ್ನ ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ತಕ್ಷಣದಲ್ಲಿ ಅದಕ್ಕೊಂದು ಮದ್ದನ್ನು ಸೂಚಿಸಿ, ನನ್ನಂತಹ ಎಷೊ್ಟೕ ಜನರ ಆರೋಗ್ಯವನ್ನು ಕಾಪಾಡುವ ವಾರಿಯರ್ ಎಂದರೆ ತಪ್ಪಾಗಲಾರದು.
| ಸುಜಿತ್ ಕಾಮತ್ ಕೇರಳಾಪುರ, ಹಾಸನ
ನನಗೆ ತಾಯಿಯಷ್ಟೇ ಪ್ರೀತಿಪಾತ್ರರು
ಕಳೆದ ವರ್ಷ ನನ್ನ ಅಕ್ಕನ ಹೆರಿಗೆ ಸಮಯದಲ್ಲಿ ಎದೆಹಾಲು ಬಾರದೇ ಇದ್ದ ಒಂದು ವಾರದ ಸಮಯದವರೆಗೂ ತನ್ನ ಎದೆಹಾಲು ಉಣಿಸಿದ ಆ ಮಹಾತಾಯಿಯ ನೆನೆಯದಿದ್ದರೆ ತಪ್ಪಾದೀತು. ಕೆಲಸವನ್ನು ಹಣದ ರೂಪದಲ್ಲಿ ಅಳೆಯುವ ಜನರ ನಡುವೆ ಇಂಥ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಷೊ್ಟೕ ದಾದಿಯರು ಬಂದಿರುತ್ತಾರೆ, ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಕರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿರುವ ಎಲ್ಲ ದಾದಿಯರಿಗೂ ನನ್ನ ಸಲಾಂ.
| ಮಲ್ಲೇಶ ಕೊಪ್ಪದ ಗೆದಗೇರಿ ಯಲಬುರ್ಗಾ
ಇದನ್ನೂ ಓದಿ80 ವರ್ಷ ಮೇಲ್ಪಟ್ಟವರು ವಿಮಾನದಲ್ಲಿ ಸಂಚರಿಸುವಂತಿಲ್ಲ!
ಸದಾ ನೆನಪಾಗುವ ನಬೀಸಾ
ನರ್ಸ್ ಅಥವಾ ಸಿಸ್ಟರ್ ಎಂದ ಕೂಡಲೇ ನನಗೆ ನೆನಪಾಗೋದು, ‘ನಬೀಸಾ’ ಸಿಸ್ಟರ್. ಹತ್ತು ವರ್ಷಗಳ ಹಿಂದೆ ಅಮ್ಮನಿಗೆ ಸೀರಿಯಸ್ ಆಗಿ ಬೆಂಗಳೂರಿನ ಖಾಸಗಿ ನರ್ಸಿಂಗ್ ಹೋಮ್ೆ ಸೇರಿಸಿದ್ವಿ. ಬದುಕುಳಿಯುವ ಸ್ಥಿತಿಯಲ್ಲಿ ಇರದ ಅಮ್ಮನನ್ನು ಅವತ್ತೇ ಐಸಿಯುಗೆ ದಾಖಲಿಸಬೇಕಾಯಿತು. ಅಲ್ಲಿನ ಡಾಕ್ಟರ್ ತೆಗೆದುಕೊಂಡ ಮುತುವರ್ಜಿ, ಜತೆಗೆ ನಬೀಸಾ ಸಿಸ್ಟರ್ ಅವರ ಕಾಳಜಿ-ಆರೖಕೆಯಿಂದ ಅಮ್ಮನಿಗೆ ಮರುಜನ್ಮ ಸಿಕ್ಕಿತ್ತು. ಅಮ್ಮ ಆಸ್ಪತ್ರೆಯಲ್ಲಿ ಇದ್ದಿದ್ದು ಬರೋಬ್ಬರಿ 2 ತಿಂಗಳು, ಅವರ ಆರೋಗ್ಯ ತೀರ ಹದಗೆಟ್ಟಿದ್ದರಿಂದ ನಾವು ರಾತ್ರಿ ನಿದ್ರಿಸಲೂ ಸಾಧ್ಯವಾಗುತ್ತಿರಲಿಲ್ಲ, ಆವಾಗೆಲ್ಲ ನಮಗೆ ಸಹಾಯ ಮಾಡಿದ್ದು ಈ ಸಿಸ್ಟರ್, ಅವರ ಸೇವೆಗೆ ನಾವು ಜನ್ಮಪೂರ್ತಿ ಆಭಾರಿ. ಈಗಲೂ ನಾನು ಅವರ ಸಂಪರ್ಕದಲ್ಲಿದ್ದೇನೆ. ವರ್ಷಕ್ಕೆರಡು ಬಾರಿಯಾದರೂ ಅವರನ್ನು ಭೇಟಿ ಮಾಡುತ್ತೇನೆ. ಈಗ ಅವರು ನನ್ನ ಉತ್ತಮ ಸ್ನೇಹಿತೆ ಕೂಡ.. ನಿಮಗಿದೋ ನನ್ನ ಸಲಾಂ.
| ವಿಜಯಾ ಲೋಕೇಶ್ ತುಮಕೂರು
ನಡು ನೋವು ನಿವಾರಿಸಿದ ದಾದಿ
ಐದು ವರ್ಷಗಳ ಹಿಂದೆ ಬೆಳಗಾವಿಗೆ ಹೋಗಿದ್ದಾಗ ಕಿತ್ತೂರಿನ ದೋಸ್ತ, ಬೇಡವೆಂದರೂ ಬಿಡದೆ ಮೋಟರ್ ಬೈಕ್ ಮೇಲೆ ಕೂರಿಸಿಕೊಂಡು ಊರಿಗೆ ಹೊರಟೇ ಬಿಟ್ಟ. ಮೊದಲೇ ಅವನದು 100 ಕಿ.ಮೀ. ಸ್ಪೀಡ್. ಮಾತಿನ ನಡುವೆ ಹಿಂದಕ್ಕೆ ತಿರುಗುತ್ತಿದ್ದ ಆತ, ಸ್ವಲ್ಪ ಸಮಯದಲ್ಲೇ ಬೈಕ್ ಹಳ್ಳಕ್ಕೆ ಹರಿಯಬಿಟ್ಟ. ತತ್ಪರಿಣಾಮ, ಉಳುಕಿತು ನನ್ನ ಸೊಂಟ. ರಾತ್ರಿ ಊಟ ಮಾಡಿ ಮಲಗುವ ತನಕ ಸೊಂಟದ ಸುತ್ತ ಸುತ್ತಾಡಿದ್ದ ನೋವು, ಮಧ್ಯರಾತ್ರಿ ಎಚ್ಚರವಾದಾಗ ನಂಜಿನಂತೆ ಶರೀರಪೂರ್ತಿ ಆವರಿಸಿತ್ತು. ಅದರಲ್ಲೂ, ಕತ್ತನ್ನು ಎತ್ತಲಾಗಲಿ, ತಿರುಗಿಸಲಾಗಲಿ ಆಗುತ್ತಲೇ ಇರಲಿಲ್ಲ. ಮುಂಜಾನೆ ಕಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ಹೋದರೆ, ಡಾಕ್ಟರ್ ಇರಲಿಲ್ಲ. ನನ್ನ ಗೋಳಾಟ ನೋಡಿದ ದಾದಿ ಸುಮಿತ್ರಾ, ಫೋನ್​ನಲ್ಲೇ ವೈದ್ಯರನ್ನು ಸಂರ್ಪಸಿ ಒಂದು ಇಂಜೆಕ್ಷನ್ ಕೊಟ್ಟರು. ಎಂಥ ಆಶ್ಚರ್ಯ, ಹತ್ತೇ ನಿಮಿಷದಲ್ಲಿ ನೋವೆಲ್ಲ ಮಾಯ. ಸಮಯಕ್ಕೆ ಸರಿಯಾಗಿ ದಾದಿ ಅಂದು ಚಿಕಿತ್ಸೆ ಕೊಡದಿದ್ದರೆ ನನ್ನ ಪರಿಸ್ಥಿತಿ ಏನಾಗಿರುತ್ತಿತ್ತೋ?! ಸಿಸ್ಟರ್ ಸುಮಿತ್ರಾ ನಿಮಗಿದೋ ದಾದಿಯರ ದಿನದ ಶುಭಾಶಯಗಳು.
| ಪೀಟರ್ ದಳವಾಯಿ ದೇಶನೂರ
ಗುಜರಾತ್​ನಲ್ಲಿ ಬಿಜೆಪಿಗೆ ಭಾರಿ ಶಾಕ್​; ಸಚಿವನ ಆಯ್ಕೆಯನ್ನೇ ಅಸಿಂಧುಗೊಳಿಸಿದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
