ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಮ್ಮತಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಈ ತೀರ್ವನದನ್ವಯ ಆ.1ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ಕೈ ಸೇರಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ (ಬೇಸಿಕ್ ಪೇ) ಶೇಕಡ 27.50 ಹೆಚ್ಚಳ ಮಾಡುವಂತೆ ವೇತನ ಆಯೋಗ ನೀಡಿದ್ದ ಶಿಫಾರಸನ್ನು ಸರ್ಕಾರ ಒಪ್ಪಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಅಂಶ ಪ್ರಸ್ತಾಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಶೇ.17 (ಮಧ್ಯಂತರ) ವೇತನ ಹೆಚ್ಚಿಸಿ ಅನುಷ್ಠಾನಕ್ಕೆ ತಂದಿದ್ದರು. ಇದೀಗ ಉಳಿದ ಶೇ.10.5 ಪರಿಷ್ಕರಣೆ ಅನುಷ್ಠಾನವಾಗಲಿದೆ. ಈ ನಿರ್ಧಾರದಿಂದ ಐದು ಲಕ್ಷ ಸರ್ಕಾರಿ ನೌಕರರು, ಅಷ್ಟೇ ಸಂಖ್ಯೆಯ ಪಿಂಚಣಿದಾರರ ಮೇಲೆ ನೇರ ಪರಿಣಾಮಬೀರಲಿದೆ. ಲೋಕಸಭೆ ಚುನಾವಣೆಗೆ ಮುನ್ನ ವೇತನ ಆಯೋಗದ ಪೂರ್ಣ ವರದಿ ಸಲ್ಲಿಕೆಯಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಅನುಷ್ಠಾನ ಸಾಧ್ಯವಾಗಿರಲಿಲ್ಲ.
2022ರ ಜುಲೈನಲ್ಲೇ ಆರನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿತ್ತು. 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕೆಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿತ್ತು. ಹಾಗೂಹೀಗೂ 2024ರ ಮೇವರೆಗೂ ಎಳೆದಾಟವಾಗಿದ್ದು, 2023ರ ಜನವರಿಯಿಂದಲಾದರೂ ಅನ್ವಯವಾಗುವಂತೆ ಅನುಕೂಲ ಆಗಬೇಕೆಂಬುದು ನೌಕರರ ಸಂಘದ ಒತ್ತಾಯವಾಗಿತ್ತು. ಇನ್ನೊಂದೆಡೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ ಹೋರಾಟಕ್ಕೆ ಕರೆಕೊಟ್ಟಿದ್ದವು.
ಸಿಎಂ ನಿರ್ದೇಶನ:ಶೇ.10.5 ವೇತನ ಹೆಚ್ಚಳದಿಂದ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕ ನೇರವಾಗಿ 20,206 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳು ಕಳೆದಿರುವ ಕಾರಣ ಹೊರೆ ಅಷ್ಟಾಗಿ ಬಾಧಿಸದು. ಹಾಗೆಯೇ ಎನ್​ಪಿಎಸ್ ನೌಕರರ ಬೇಡಿಕೆ ಬಗ್ಗೆ ಸಂಪುಟದಲ್ಲಿ ಅನೌಪಚಾರಿಕ ಚರ್ಚೆ ನಡೆದಿದೆ. ಹಣಕಾಸು ಇಲಾಖೆ ಇನ್ನೂ ಕಡತ ಸಿದ್ಧಪಡಿಸಿರಲಿಲ್ಲ. ಬೇರೆ ಬೇರೆ ರಾಜ್ಯಗಳ ಮಾಹಿತಿ ಪಡೆದು ಮುಂದಿನ ಸಂಪುಟಕ್ಕೆ ಕಡತ ಮಂಡನೆಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲು:ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಸಭೆ ಸಮ್ಮತಿಸಿದೆ. ಇದರಲ್ಲಿ ಮ್ಯಾನೇಜ್​ವೆುಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್​ವೆುಂಟ್​ನ ಶೇ.75ರಷ್ಟು ಹುದ್ದೆ ಸ್ಥಳೀಯರಿಗೆ ಮೀಸಲಾಗಲಿದೆ. ಈ ಸಂಬಂಧ ವಿಜಯವಾಣಿ ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಭದ್ರತೆ ನೀಡುವ ಮಂಡಳಿ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ.
ವಾಲ್ಮೀಕಿ ಪ್ರಕರಣ ಬೆಂಬಲ ಕೋರಿದ ಸಿಎಂ:ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ. ಇದರಲ್ಲಿ ಸರ್ಕಾರದ ಪಾತ್ರವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಕರಣದ ಕುರಿತು ವಿವರವಾದ ಮಾಹಿತಿಯನ್ನು ಲಿಖಿತವಾಗಿ ಸಿದ್ಧಪಡಿಸಿಕೊಂಡಿದ್ದ ಸಿಎಂ, ಸಂಪುಟ ಸಹೋದ್ಯೋಗಿಗಳಿಗೆ ವಿತರಿಸಿ, ಒಟ್ಟಾಗಿ ನಿಲ್ಲುವಂತೆ ಕೋರಿದರು.
ಮಸೂದೆಗೆ ಸಂಪುಟ ಮುದ್ರೆ
| ಕರ್ನಾಟಕ (ತಿದ್ದುಪಡಿ) ಉಪಖನಿಜ ನಿಯಮಗಳು- 2024
| ಕರ್ನಾಟಕ ಸರಕು ಮತ್ತು ಸೇವೆಗಳು (ತಿದ್ದುಪಡಿ) ವಿಧೇಯಕ
| ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ
ಶಾಲಿನಿ ಮುಂದಿನ ಸಿಎಸ್ :ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್ ರಾಜ್ಯದ ಮುಂದಿನ ಮುಖ್ಯಕಾರ್ಯದರ್ಶಿಯಾಗಿ ನಿಯೋಜನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ಮುಖ್ಯಕಾರ್ಯದರ್ಶಿ ಯಾರಾಗಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಿಎಂಗೆ ನೀಡಲಾಯಿತು. ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರು ಮುಖ್ಯಕಾರ್ಯದರ್ಶಿ ರೇಸ್​ನಲ್ಲಿ ಇತ್ತಾದರೂ ಬಹುತೇಕ ಶಾಲಿನಿ ರಜನೀಶ್ ಅವರಿಗೆ ಅವಕಾಶ ಒಲಿಯುವುದು ನಿಚ್ಚಳವಾಗಿದೆ.
2. 10 ಕೋಟಿ ರೂ. ಅಂದಾಜು ಮೊತ್ತದಲ್ಲಿ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೊಗ್ರಾಫಿ ಯಂತ್ರ, 4 ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಲ್ಕಾಪಿ ಉಪಕರಣ ಖರೀದಿ
3. 2012ರಲ್ಲಿ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಸಿಬ್ಬಂದಿ, ವಕೀಲರು ಮತ್ತು ಮಾಧ್ಯಮದವರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಯ ಅಭಿಯೋಜನಾ ಮಂಜೂರಾತಿ ಕೋರಿಕೆ ತಿರಸ್ಕಾರ
4. ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಖನಿಜ ತೆಗೆದು ರಾಜಧನ ಪಾವತಿಸದೆ ಸಾಗಾಣಿಕೆ ಮಾಡಿರುವುದಕ್ಕೆ ದಂಡ ವಿಧಿಸುವುದು
5. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 2022-23ನೇ ಸಾಲಿನ 37ನೇ ಸಂಚಿತ ವಾರ್ಷಿಕ ವರದಿ ಅಂಗೀಕಾರ
6. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ 299 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ.
7. ತುಮಕೂರು ಜಿಲ್ಲೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ ನೀರನ್ನು 45 ಕೆರೆಗಳಿಗೆ ತುಂಬಿಸುವ ಕಾಮಗಾರಿಯ 302 ಕೋಟಿ ರೂ. ಮೊತ್ತದ ಅಂದಾಜಿಗೆ ಒಪ್ಪಿಗೆ.
ಸಿದ್ದರಾಮಯ್ಯ ನುಡಿದಂತೆ ವೇತನ ಆಯೋಗದ ಶಿಫಾರಸು ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ. ಸರ್ಕಾರ ಎನ್​ಪಿಎಸ್ ಸಹ ರದ್ದು ಮಾಡುವ ಬಗ್ಗೆಯೂ ಚರ್ಚೆ ಮಾಡಿರುವುದು ಭರವಸೆ ಹೆಚ್ಚಿಸಿದೆ.
-ಶಾಂತರಾಮ , ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಸರ್ಕಾರಿ ನೌಕರರಿಗೆ 1-7-22ರಿಂದ ಕಾಲ್ಪನಿಕವಾಗಿ ವೇತನ ನಿಗದಿ, 1-8-24 ರಿಂದ ಆರ್ಥಿಕ ಸೌಲಭ್ಯ ನೀಡಲು ಹಾಗೂ ವೇತನ ಆಯೋಗ ಶಿಫಾರಸು ಮಾಡಿದ ಶೇ.27.50 ವೇತನ ವೇತನ ನಿಗದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಸರ್ಕಾರಕ್ಕೆ ಅಭಿನಂದನೆಗಳು.
| ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರ ಸಂಘ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸುರೇಶ್‌ ಬಾಬು ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
