ಬೆಂಗಳೂರು:ರಕ್ತದಾನದಿಂದ 48 ಗಂಟೆಗಳಲ್ಲಿ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಇದರಿಂದ ಆರೋಗ್ಯ, ಜ್ಞಾಪಕಶಕ್ತಿ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುತ್ತದೆ, ರಕ್ತದೊತ್ತಡ- ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಅಗತ್ಯವಿದ್ದರೂ ಲಭ್ಯವಿರುವುದು ಬರೀ 2.5 ಕೋಟಿ ಯೂನಿಟ್. ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಬರುತ್ತದೆ. ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನೂರಾರು ಬಾರಿ ರಕ್ತದಾನ ಮಾಡಿ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿರುವ ಕೆಲವರ ಮಾಹಿತಿ ಇಲ್ಲಿದೆ.
ವಿನಾಯಕ ದೇಸಾಯಿ:ಬೆಳಗಾವಿಯ ಅನಗೋಳದ ವಿನಾಯಕ ಮಾರುತಿ ದೇಸಾಯಿ 176 ಬಾರಿ ರಕ್ತದಾನ ಮಾಡಿದ್ದಾರೆ. 57 ವರ್ಷದ ಅವರು 38 ವರ್ಷದಿಂದ ರಕ್ತದಾನ ಕಾರ್ಯದಲ್ಲಿ ತೊಡಗಿದ್ದು, ಈವರೆಗೆ ಹಲವಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.
ಪ್ರಭು:ಒಮ್ಮೆ ಸ್ನೇಹಿತನಿಗೆ ರಸ್ತೆ ಅಪಘಾತವಾದಾಗ ಎಷ್ಟು ಸುತ್ತಿದರೂ ರಕ್ತ-ರಕ್ತದಾನಿಗಳು ಸಕಾಲಕ್ಕೆ ಸಿಗಲಿಲ್ಲ. ಕಡೆಗೆ ಆಸ್ಪತ್ರೆ ವೈದ್ಯರೇ ರಕ್ತದಾನ ಮಾಡಿದರು. ಅಂದಿನ ಆ ಸಂಕಷ್ಟದ ಸ್ಥಿತಿ ನನಗೆ ರಕ್ತದಾನ ಮಾಡಲು ಉತ್ತೇಜನ ನೀಡಿತು. ಅಂದಿನಿಂದ ಇಲ್ಲಿವರೆಗೆ 89 ಬಾರಿ ರಕ್ತದಾನ ಮಾಡಿದ್ದೇನೆ ಎನ್ನುತ್ತಾರೆ ಪ್ರಭು. ಇವರು ಕೆಎಸ್​ಆರ್​ಟಿಸಿ ಭದ್ರತಾ ವಿಭಾಗದ ಪೇದೆ.
ಶ್ರೀಧರ್ :ಒಮ್ಮೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ ನಂತರ ನನ್ನದು ಅಪರೂಪದ ಬಾಂಬೆ ಬ್ಲಡ್ ಗುಂಪಿನ ರಕ್ತ ಎಂದು ತಿಳಿಯಿತು. ಈವರೆಗೆ 55 ಬಾರಿ ರಕ್ತದಾನ ಮಾಡಿದ್ದೇನೆ. ಲಯನ್ಸ್ ರಕ್ತ ನಿಧಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೇನೆ. ಸಂಕಲ್ಪ್ ಫೌಂಡೇಷನ್​ನಿಂದ ಕರೆ ಬಂದಾಗಲೂ ಹೋಗಿ ರಕ್ತದಾನ ಮಾಡಿದ್ದೇನೆ. ಲಾಕ್​ಡೌನ್ ಸಂದರ್ಭದಲ್ಲೂ ರಕ್ತದಾನ ಮಾಡಿದ್ದೆ ಎನ್ನುತ್ತಾರೆ ಶ್ರೀಧರ್. 60ನೇ ವಯಸ್ಸಲ್ಲೂ ಆರೋಗ್ಯ ಕಾಪಾಡಿಕೊಂಡಿದ್ದಾರೆ.
ಡಾ. ಸಂಜಯ:ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮಗೋಳ, 20 ವರ್ಷಗಳಲ್ಲಿ 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದಾರೆ. ಕರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ತಮ್ಮ ತಂಡದ ಜತೆ ನಿರಂತರವಾಗಿ ಶ್ರಮಿಸುತ್ತಿದ್ದರೂ, ಹೋದಲ್ಲೆಲ್ಲ ರಕ್ತದಾನ ಮಾಡುವಂತೆ ಪ್ರೇರಣೆ ತುಂಬುತ್ತಿದ್ದಾರೆ ಸಹೋದ್ಯೋಗಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದಾರೆ.
ಬಿ.ಕೆ. ವಿನೋದ್ ಕುಮಾರ್:ಬೆಂಗಳೂರಿನ ಉತ್ತರಹಳ್ಳಿಯ ಬಿ.ಕೆ. ವಿನೋದ್ ಕುಮಾರ್ 118 ಸಲ ರಕ್ತದಾನ ಮಾಡಿದ್ದಾರೆ. 20ನೇ ವಯಸ್ಸಲ್ಲೇ ರಕ್ತದಾನಕ್ಕೆ ಮುಂದಾಗಿದ್ದ ಇವರು, ಮೊದಲ ಸಲ ಸ್ನೇಹಿತರ ಪಕ್ಕದ ಮನೆಯಲ್ಲಿ ಅಪರೂಪದ ರೋಗದಿಂದ ಬಳಲುತ್ತಿದ್ದ ಬಾಲಕನಿಗೆ ರಕ್ತದಾನ ಮಾಡಿದ್ದರು. ಆತನಲ್ಲಿ ಸಹಜವಾಗಿ ರಕ್ತ ಉತ್ಪತ್ತಿ ಆಗಲ್ಲ ಎಂದು ತಿಳಿದ ಮೇಲೆ ತಿಂಗಳಿಗೆ 2-3 ಬಾರಿ ನೀಡಲು ನಿರ್ಧರಿಸಿದರು.
ರಕ್ತ ನೀಡಿ, ಜಗತ್ತನ್ನು ಆರೋಗ್ಯಕರ ತಾಣ ಮಾಡಿ
ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ರಕ್ತದಾನಿಗಳಿಗೆ ಧನ್ಯವಾದ ಅರ್ಪಿಸಲು ಪ್ರತಿ ವರ್ಷ ಜೂ. 14ರಂದು ವಿಶ್ವಾದ್ಯಂತ ರಕ್ತದಾನಿಗಳ ದಿನ ಅಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಆರೋಗ್ಯ ಸಂಸ್ಥೆ ‘ರಕ್ತ ನೀಡಿ ಜಗತ್ತನ್ನು ಆರೋಗ್ಯಕರ ತಾಣವನ್ನಾಗಿ ಮಾಡಿ’ ಎಂಬ ಘೋಷವಾಕ್ಯದೊಂದಿಗೆ ರಕ್ತದಾನಿಗಳ ದಿನ ಆಚರಿಸುತ್ತಿದೆ.
ಕೆ.ವಿ. ಚಂದ್ರಕಾಂತ್ ಆಚಾರ್ಯ:ಬೆಂಗಳೂರಿನ ಕೆ.ವಿ. ಚಂದ್ರಕಾಂತ್ ಆಚಾರ್ಯ ಕಳೆದ 38 ವರ್ಷಗಳಲ್ಲಿ 174 ಬಾರಿ ರಕ್ತದಾನ ಮಾಡಿದ್ದಾರೆ. 19ನೇ ವಯಸ್ಸಿನಿಂದಲೂ ನಿರಂತರವಾಗಿ ರಕ್ತದಾನ ಮಾಡುತ್ತ ಬಂದಿದ್ದಾರೆ. ಈವರೆಗೆ 111 ಬಾರಿ ಪ್ಲೇಟ್​ಲೆಟ್ಸ್, 60 ಬಾರಿ ಪೂರ್ಣ ರಕ್ತದಾನ, 2 ಸಲ ವೈಟ್ ಬ್ಲಡ್ ಸೆಲ್ಸ್ ಹಾಗೂ ಒಂದು ಬಾರಿ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ 5 ವರ್ಷದ ಬಾಲಕಿಗೆ ಆಕರಕೋಶ (ಸ್ಟೆಮ್ೆಲ್ಸ್) ದಾನ ಮಾಡಿದ್ದಾರೆ. ಜಂಕ್​ಫುಡ್ ಹಾಗೂ ದುಶ್ಚಟಗಳಿಂದ ದೂರವಿರುವ ಇವರು ನಿತ್ಯ 10 ಕಿ.ಮೀ. ಸೈಕಲ್ ತುಳಿಯುತ್ತಾರೆ. ಈಗ 55ನೇ ವಯಸ್ಸಿನಲ್ಲಿಯೂ ಉತ್ತಮ ಆರೋಗ್ಯ ಹೊಂದಿರುವ ಆಚಾರ್ಯ ರಕ್ತದಾನ ಕಾರ್ಯ ಮುಂದುವರಿಸಿದ್ದಾರೆ.
ಲಕ್ಷ್ಮಣ ರಾವ್ ಯಕ್ಕುಂಡಿ:ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ 41 ಬಾರಿ ರಕ್ತದಾನ ಮಾಡಿದ್ದಾರೆ. ಶಾಲೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತ ಬಂದಿದ್ದಾರೆ. ಅತ್ಯುತ್ತಮ ಶಿಕ್ಷಕ, ಸವೋತ್ತಮ ಸೇವಾ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.
ಬದುಕು ಮೊಟಕಾಗದಿರಲಿ
ಕರೊನಾದಿಂದ ರಕ್ತದಾನ ಶಿಬಿರ ನಡೆಸಲಾಗದೆ ರಕ್ತದ ಅಭಾವ ಎದುರಾದ್ದರಿಂದ ಕರೊನಾ ರಹಿತ ಗಂಭೀರ ಸ್ವರೂಪದ ರೋಗಿಗಳೂ ತೊಂದರೆಗೆ ಸಿಲುಕಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ರಕ್ತದ ಕೊರತೆ ಅಪಾಯದ ಮಟ್ಟ ತಲುಪುವ ಸಂಭವ ಇದೆ ಎಂದು ವೈದ್ಯರು ಮತ್ತು ರಕ್ತನಿಧಿ ಸಿಬ್ಬಂದಿ ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ರಕ್ತದಾನಿಯಿಂದ ಮೂವರ ಜೀವ ಉಳಿಸಬಹುದು. ಆದರೆ, ಸದ್ಯದ ಸ್ಥಿತಿಯಲ್ಲಿ ದಾನಿಗಳು ಮುಂದೆ ಬರುತ್ತಿಲ್ಲ. ಜತೆಗೆ ರಕ್ತ ಪಡೆಯಲು ಕೆಲ ರಕ್ತನಿಧಿಗಳೂ ಹಿಂಜರಿಯುತ್ತಿವೆ. ಸದ್ಯ ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಗುಣಮುರಾದವರ ರಕ್ತದಲ್ಲಿನ ಪ್ಲಾಸ್ಮಾದಿಂದ ಚಿಕಿತ್ಸೆ ನೀಡುವ ಪ್ರಯೋಗವೂ ನಡೆಯುತ್ತಿದೆ. ಹೀಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕಿದೆ ಎಂಬುದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನವಿಯೂ ಆಗಿದೆ. ರಾಜ್ಯದಲ್ಲಿ 43 ಸರ್ಕಾರಿ, 230 ಖಾಸಗಿ ರಕ್ತ ನಿಧಿ ಕೇಂದ್ರಗಳಿದ್ದರೂ ಸಮಯಕ್ಕೆ ಸರಿಯಾಗಿ ರಕ್ತ ಸಿಗುತ್ತಿಲ್ಲ.ಕರೊನಾಗೆ ಚಿಕಿತ್ಸೆ/ಲಸಿಕೆ ಕಂಡು ಹಿಡಿಯುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಪರಿಸ್ಥಿತಿ ಅರಿತು ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆ ಮೇರೆಗೆ ಲಾಭ-ನಷ್ಟ ಚಿಂತಿಸದೇ ಸೇವೆ ನೀಡುತ್ತಿದ್ದು, ಜನರೂ ಸಹಕರಿಸಬೇಕಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು.
| ಎ.ಬಿ. ಶೆಟ್ಟಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ರಾಜ್ಯಪಾಲರ ನಾಮನಿರ್ದೇಶಿತ ಮಂಡಳಿ ಸದಸ್ಯ
ಸೆಲೆಬ್ರಿಟಿಗಳ ಕಿಚನ್ ​ಕರಾಮತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
