ಇಂದಿನ ಕಾಲದಲ್ಲಿ ಭೌತಿಕ ವಿಲಾಸವಾದವೇ ಎಲ್ಲೆಡೆಯಲ್ಲಿ ವಿಜೃಂಭಿಸುತ್ತಿದ್ದು, ಮಾನವ ಜೀವನದ ಉದ್ದೇಶವೇ ಪಲ್ಲಟಗೊಂಡಿದೆ. ಜೀವನದಲ್ಲಿ, ಆರ್ಥಿಕ ಸಂಪತ್ತಿನ ಗಳಿಕೆಯೇ ಪ್ರಮುಖ ಸ್ಥಾನವನ್ನು ಪಡೆದಿದ್ದು, ಆಧ್ಯಾತ್ಮಿಕ ಪ್ರಗತಿ ಹಾಗೂ ಆತ್ಮಸಾಕ್ಷಾತ್ಕಾರಗಳು ದೂರದ ಮಾತುಗಳಾಗಿವೆ. ದೇವರನ್ನು ಒಬ್ಬ ಕಠಿಣ, ನಿಷ್ಕರುಣಿ ನ್ಯಾಯಾಧೀಶನ ಸ್ಥಾನದಲ್ಲಿ ನಿಲ್ಲಿಸಲಾಗಿದೆ.
aಆಧುನಿಕ ಕಾಲದಲ್ಲಿ ಮಾನವೀಯತೆ ಹಲವು ವಿರೋಧಾಭಾಸಗಳ ನಡುವೆ ಬದುಕುತ್ತಿದೆ. ಆಧ್ಯಾತ್ಮಿಕತೆ ಬಗ್ಗೆ ಯಾವುದೇ ಆಸಕ್ತಿಯಿಲ್ಲದೆ, ಕೇವಲ ಭೌತಿಕ ಅಭಿವೃದ್ಧಿಯಷ್ಟೇ ಜೀವನವೆಂದು ಭಾವಿಸುವವರು ಒಂದು ವೈಪರೀತ್ಯವಾದರೆ, ಎಲ್ಲ ಕರ್ಮಗಳನ್ನು ತ್ಯಜಿಸಿ, ಏನನ್ನೂ ಮಾಡದೆ ಸುಮ್ಮನಿರುವುದೇ ಆಧ್ಯಾತ್ಮಿಕತೆಯೆಂದು ಜೀವಿಸುವವರು ಇನ್ನೊಂದು ವೈಪರೀತ್ಯ! ಹೀಗೆ, ಜಗತ್ತು ಭೌತಿಕವಾಗಿ ಮಾತ್ರವಲ್ಲದೆ, ಆಧ್ಯಾತ್ಮಿಕವಾಗಿಯೂ, ‘ಉಳ್ಳವರು’ ಹಾಗೂ ‘ಇಲ್ಲದವರು’ ಎಂದು ವಿಭಜಿತವಾಗಿರುವ ಇಂದಿನ ಕಾಲದಲ್ಲಿ, ಮಾನವರಿಗೆ ಮುಕ್ತಿಪಥ ಯಾವುದು?
ಈ ಕುರಿತಾಗಿ ನಮ್ಮ ಧರ್ಮಗ್ರಂಥಗಳಲ್ಲಿ ಕಂಡುಬರುವ ಕೆಲವು ಜೀವನಸೂತ್ರಗಳನ್ನು ಪರಿಶೀಲಿಸೋಣ:
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಾರಿರುವಂತೆ,ಯಜ್ಞದಾನತಪಃ ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |ಯಜ್ಞೋ ದಾನಂ ತಪಶೈ ್ಚ ಪಾವನಾನಿ ಮನೀಷಿಣಾಮ್ || (18.5)
‘ಯಜ್ಞ, ದಾನ, ತಪಸ್ಸುಗಳನ್ನು ಎಂದಿಗೂ ಬಿಡದೆ ಆಚರಿಸಬೇಕು. ಏಕೆಂದರೆ, ಯಜ್ಞ, ದಾನ, ತಪಸ್ಸುಗಳು ವಿದ್ವಾಂಸರನ್ನೂ ಪುನೀತರನ್ನಾಗಿಸುತ್ತವೆ’.
‘ಆತ್ಮಸಾಕ್ಷಾತ್ಕಾರ’ ಸಾಧನೆಗೆ ಚಿತ್ತಶುದ್ಧಿಯು ಪ್ರಮುಖ ಅರ್ಹತೆಯಾಗಿದೆ. ಯಜ್ಞ, ದಾನ ಮತ್ತು ತಪಸ್ಸುಗಳು ಚಿತ್ತಶುದ್ಧಿಯ ಸಾಧನಗಳಾಗಿವೆಯೆಂದು ಸನಾತನ ಧರ್ಮವು ಘೊಷಿಸುತ್ತದೆ.
ನಮ್ಮ ಇತಿಹಾಸ-ಪುರಾಣಗಳ ಅಧ್ಯಯನದಿಂದ ಕಂಡುಬರುವ ಒಂದು ಮುಖ್ಯ ವಿಷಯವೆಂದರೆ, ಕೃತಯುಗದಲ್ಲಿ ವಿವಿಧ ರೀತಿಯ ಕಠಿಣ ತಪಸ್ಸುಗಳನ್ನು ಆಚರಿಸುವ ಮೂಲಕ ಜನರು ಭಗವಂತನನ್ನು ಪಡೆಯುತ್ತಿದ್ದರು. ತ್ರೇತಾಯುಗದಲ್ಲಿ ಯಜ್ಞ-ಯಾಗಾದಿಗಳ ಮೂಲಕ ದೇವತೆಗಳಿಗೆ, ಅವರಿಗೆ ಪ್ರಿಯವಾದ ಹವಿಸ್ಸನ್ನು ಯಜ್ಞಕುಂಡಕ್ಕೆ ಸಮರ್ಪಿಸಿ, ಅವರ ಅನುಗ್ರಹವನ್ನು ಹೊಂದುತ್ತಿದ್ದರು. ದ್ವಾಪರಯುಗದಲ್ಲಿ ಆತ್ಮಸಾಕ್ಷಾತ್ಕಾರವನ್ನು ಪಡೆಯುವ ವಿಧಾನಗಳ ಪೈಕಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿತ್ತು. ಆದರೆ, ಕಲಿಯುಗದಲ್ಲಿ ಆತ್ಮಸಾಕ್ಷಾತ್ಕಾರವನ್ನು ಹೊಂದಲು ಈ ಮೂರನ್ನೂ ಆಚರಿಸಬೇಕೆಂದು ಶ್ರೀಕೃಷ್ಣನು ಗೀತೆಯಲ್ಲಿ ಸಾರಿದ್ದಾನೆ.
ತಪಸ್ಸೆಂದರೆ ಗೃಹ-ಕುಟುಂಬಗಳನ್ನು ತೊರೆದು, ಅರಣ್ಯಕ್ಕೆ ಹೋಗಿ ಕಠಿಣ ಜೀವನವನ್ನು ಆಶ್ರಯಿಸುವುದಲ್ಲ; ಬದಲಾಗಿ, ಸಮಾಜದಲ್ಲೇ ಇದ್ದು, ಸ್ವಇಚ್ಛೆಯಿಂದ ಆಧ್ಯಾತ್ಮಿಕ ಸಾಧನೆಗೆ ಸಹಾಯಕವಾಗುವ ಸರಳ ಜೀವನವನ್ನು ನಡೆಸುವುದು. ಜೀವನವನ್ನು ಜಟಿಲಗೊಳಿಸುವ ಅನಗತ್ಯ ವಸ್ತು-ಸಾಮಗ್ರಿಗಳನ್ನು, ಅವುಗಳ ಅಗತ್ಯವಿರುವವರಿಗೆ ನೀಡುವುದೇ ದಾನ. ನಮಗಾಗಿ ಅಥವಾ ಇತರರಿಗಾಗಿ ನಾವು ಮಾಡುವ ಸರ್ವಕರ್ಮಗಳನ್ನೂ ಭಗವಂತನಿಗೆ ಸಮರ್ಪಿಸುವುದೇ ನಾವು ಮಾಡಬೇಕಾದ ಯಜ್ಞ.
ಈ ಕ್ರಿಯೆಗಳು ನಮ್ಮನ್ನು ಹೇಗೆ ಆಧ್ಯಾತ್ಮಿಕ ಸಾಧನೆಗೆ ಪ್ರಮುಖ ಅರ್ಹತೆಯಾದ ಚಿತ್ತಶುದ್ಧಿಯೆಡೆಗೆ ಕೊಂಡೊಯ್ಯುತ್ತವೆ?
ಯಜ್ಞ-ಮನೋಭಾವದಿಂದ ಭಗವಂತನಿಗೆ ಸಮರ್ಪಿಸಿ, ನಾವು ಮಾಡುವ ಕರ್ಮಗಳು ನಮ್ಮನ್ನು ಕರ್ತೃತ್ವಭಾವ ಹಾಗೂ ಭೋಕ ೃ ್ತ್ವಭಾವಗಳಿಂದ ಬಿಡುಗಡೆ ಮಾಡುತ್ತವೆ. ಕೇವಲ ಭಗವಂತನನ್ನು ಮೆಚ್ಚಿಸುವ ಉದ್ದೇಶದಿಂದ, ವಿನೀತ ಮತ್ತು ಸೇವಾ ಭಾವದಿಂದ ಯಾವುದೇ ನಿರೀಕ್ಷೆಯಿಲ್ಲದೆ ಕರ್ಮಗಳನ್ನು ಮಾಡಿ, ಅವುಗಳ ಫಲಾಫಲಗಳನ್ನು ಕೂಡ ಅವನಿಗೇ ಸಮರ್ಪಿಸಬೇಕು. ಇದನ್ನೇ ಶ್ರೀಕೃಷ್ಣನು ‘ಯಜ್ಞಃ ಕರ್ಮಸಮುದ್ಭವಃ’ ಎಂದರೆ, ಭಗವತ್ಪಿ ›ೕತ್ಯರ್ಥವಾಗಿ ನಾವು ಮಾಡುವ ಎಲ್ಲ ಕರ್ಮಗಳು ಯಜ್ಞವಾಗಿ ಪರಿವರ್ತಿತವಾಗುತ್ತವೆಯೆಂದು ತಿಳಿಸಿದ್ದಾನೆ.
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ || (9.27)
‘ಕೌಂತೇಯ! ನೀನು ಮಾಡುವ ಎಲ್ಲ ಕರ್ಮಗಳನ್ನೂ, ಸೇವಿಸುವ ಆಹಾರ-ಪಾನೀಯಗಳನ್ನೂ, ಆಚರಿಸುವ ಹೋಮ-ಹವನಗಳನ್ನೂ, ನೀಡುವ ದಾನಗಳನ್ನೂ, ಕೈಗೊಳ್ಳುವ ತಪಗಳನ್ನೂ, ನನಗೆ ಸಮರ್ಪಿಸು’.
ಈ ರೀತಿಯಲ್ಲಿ ನಾವು ಭಗವಂತನಿಗೆ ಪರಿಪೂರ್ಣ ಸಂತೃಪ್ತಿಯಾಗುವಂತೆ ಮಾಡುವ ಕರ್ಮಗಳು ಸಾರ್ಥಕವಾಗಿ, ಪರಿಪೂರ್ಣತೆಯನ್ನು ಪಡೆಯುತ್ತವೆ. ಇದನ್ನೇ ‘ಯೋಗಃ ಕರ್ಮಸು ಕೌಶಲಮ್ ಎಂದು ಗೀತೆಯಲ್ಲಿ ಹೇಳಲಾಗಿದೆ. ಅಪರಿಪೂರ್ಣ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಲು ಹೇಗೆ ಸಾಧ್ಯ? ಅಲ್ಲದೆ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದ ಕರ್ಮಗಳು ನಮಗೆ ಜಯಾಪಜಯಗಳಲ್ಲಿ ಸಮತ್ವದ ಸ್ಥಿತಿಯನ್ನು ನೀಡುತ್ತವೆ: ‘ಸಮತ್ವಂ ಯೋಗ ಉಚ್ಯತೇ’- ಸಮತ್ವವೇ ಯೋಗ.
ತಪಸ್ಸೆಂದರೆ ಕಠಿಣ ಅನುಷ್ಠಾನಗಳನ್ನೊಳಗೊಂಡ ದಿನಚರಿಯಲ್ಲ; ಬದಲಾಗಿ, ಆತ್ಮಸಾಕ್ಷಾತ್ಕಾರದೆಡೆಗಿನ ತುಡಿತವಾಗಿದೆ. ಕೂದಲಿಗೆ ಬೆಂಕಿ ತಗುಲಿದಾಗ, ನೀರಿಗಾಗಿ ನಾವು ಎಷ್ಟು ತುಡಿಯುತ್ತೇವೆಯೋ, ಅಂತಹ ತುಡಿತ ಅದಾಗಿರಬೇಕು.
ಆತ್ಮಸಾಕ್ಷಾತ್ಕಾರವೇ ಮಾನವ ಜೀವನದ ಪರಮೋದ್ದೇಶವೆಂಬ ಶಾಸ್ತ್ರವಾಕ್ಯದಲ್ಲಿ, ನಮ್ಮಲ್ಲಿರುವ ಸಂಪೂರ್ಣ ಶ್ರದ್ಧೆ ಹಾಗೂ ವಿಶ್ವಾಸಗಳೇ ಅಂತಹ ತೀವ್ರ ತುಡಿತಕ್ಕೆ ಅಡಿಪಾಯವಾಗಿದೆ. ಸಮಾನ ಮನಸ್ಕರ ಸಂಗವು ಇಂತಹ ತುಡಿತವು ನಮ್ಮಲ್ಲಿ ಸ್ಥಿರವಾಗಿರುವಂತೆ ಮಾಡುತ್ತದೆ ಹಾಗೂ ಗುರುವಿನ ಸಾನ್ನಿಧ್ಯ-ಮಾರ್ಗದರ್ಶನಗಳು ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ತ್ವರಿತಗೊಳಿಸುತ್ತವೆ.
ದೈಹಿಕ, ವಾಚಿಕ ಹಾಗೂ ಮಾನಸಿಕ ಸಂಯಮಗಳೆಂಬ ಮೂರು ರೀತಿಯ ತಪಗಳ ಕುರಿತಾಗಿ ಭಗವದ್ಗೀತೆಯು ಬೋಧಿಸಿದೆ. ಇವುಗಳನ್ನು ನಾವು ಸಂಪೂರ್ಣ ಶ್ರದ್ಧೆ-ಪ್ರಾಮಾಣಿಕತೆಗಳೊಂದಿಗೆ ಆಚರಿಸಿದಾಗ, ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶುದ್ಧಿಗಳನ್ನು ಸಾಧಿಸಬಹುದು.
ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜಮ್ |ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ || (17.14)
‘ಶುಚಿತ್ವ, ಪ್ರಾಮಾಣಿಕತೆ, ಬ್ರಹ್ಮಚರ್ಯ ಹಾಗೂ ಅಹಿಂಸೆಯನ್ನು ಪಾಲಿಸುತ್ತ, ನಾವು ಮಾಡುವ ದೇವರ, ಬ್ರಾಹ್ಮಣರ, ಗುರುಗಳ, ಜ್ಞಾನಿಗಳ ಹಾಗೂ ಹಿರಿಯರ ಸೇವೆಯೇ ಶಾರೀರಿಕ ತಪಸ್ಸೆಂದೆನಿಸಿಕೊಳ್ಳುತ್ತದೆ’.
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |ಸ್ವಾಧ್ಯಾಯಾಭ್ಯಸನಂ ಚೈವ ವಾšಯಂ ತಪ ಉಚ್ಯತೇ || (17.15)
‘ಸತ್ಯವೂ, ಇತರರಿಗೆ ಪ್ರಿಯವೂ ಹಾಗೂ ಹಿತವೂ ಆದ ವಿಷಯಗಳನ್ನು ಉದ್ವೇಗರಹಿತವಾಗಿ ಮಾತನಾಡುವುದು ಮತ್ತು ಪ್ರತಿದಿನ ಆಧ್ಯಾತ್ಮಿಕ ಶಾಸ್ತ್ರಗಳ ಅಧ್ಯಯನ ಮಾಡುವುದನ್ನು ವಾಚಿಕ ತಪಸ್ಸೆಂದು ಕರೆಯುತ್ತಾರೆ’.
ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ |ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ || (17.16)
‘ಮನಸ್ಸಿನಲ್ಲಿ ಸದಾ ಪ್ರಸನ್ನತೆ ಮತ್ತು ಭಾವಶುದ್ಧಿ, ಆಚಾರದಲ್ಲಿ ಸೌಮ್ಯತೆ, ಮೌನ, ಆತ್ಮನಿಗ್ರಹ- ಇವುಗಳ ಅಭ್ಯಾಸವನ್ನೇ ಮಾನಸಿಕ ತಪಸ್ಸೆಂದು ಹೇಳಲಾಗುತ್ತದೆ’.
ದಾನವೆಂದರೆ, ಇತರರ ಅವಶ್ಯಕತೆಗಳನ್ನು ದಯಾಭಾವದಿಂದ ಅರ್ಥಮಾಡಿಕೊಂಡು, ನಮ್ಮ ಸಂಪನ್ಮೂಲಗಳನ್ನು ಅವರೊಂದಿಗೆ ಹಂಚಿಕೊಳ್ಳುವುದೇ ಆಗಿದೆ. ದಾನವು ಭೌತಿಕ ವಸ್ತುಗಳಿಗೆ ಸೀಮಿತವಲ್ಲ. ಜ್ಞಾನದಾನ ಹಾಗೂ ಶ್ರಮದಾನಗಳೂ ದಾನವೇ. ‘ನಮ್ಮ ಜೀವನದಲ್ಲಿ ಎಷ್ಟು ಸಮಯ ಹಾಗೂ ಸಂಪನ್ಮೂಲಗಳು ದಾನಕ್ಕೆ ವಿನಿಯೋಗಿಸಬೇಕು?’ ಎಂಬ ಪ್ರಶ್ನೆಯನ್ನು ನನ್ನಲ್ಲಿ ಹಲವರು ಕೇಳಿದ್ದಾರೆ. ಅದಕ್ಕೆ ನಾನು ನೀಡಿದ ಸರಳ ಸೂತ್ರ: ‘ನಿಮ್ಮ ವಯಸ್ಸಿಗೆ ಸಮನಾದ ಶೇಕಡವಾರು ಸಮಯ-ಸಂಪನ್ಮೂಲಗಳನ್ನು ನೀವು ದಾನ ಅಥವಾ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಡಬೇಕು!’ ಉದಾಹರಣೆಗೆ, ನಿಮಗೆ 25 ವರ್ಷ ವಯಸ್ಸಾಗಿದ್ದರೆ, ನಿಮ್ಮ ದಿನದ ಶೇಕಡ 25ರಷ್ಟು ಸಮಯ, ಸಂಪತ್ತು, ದೇಹಶಕ್ತಿ ಮತ್ತು ಮನೋಸಾಮರ್ಥ್ಯಗಳನ್ನು ಇತರರ ಸೇವೆಗಾಗಿ ಮುಡಿಪಾಗಿಡಬೇಕು. ಅದೇ ರೀತಿ, 50 ವರ್ಷ ವಯಸ್ಸಿನವರು ತಮ್ಮ ಜೀವನ ಸಂಪನ್ಮೂಲಗಳಲ್ಲಿ ಅರ್ಧದಷ್ಟನ್ನು, 75 ವರ್ಷ ವಯಸ್ಸಿನವರು ಶೇ.75ರಷ್ಟನ್ನು ಮುಡಿಪಾಗಿಡಲು ಸಾಧ್ಯವಾಗಬೇಕು. ಹೀಗೆ ನಿಸ್ವಾರ್ಥ ಹಾಗೂ ಸರಳ ಜೀವನವನ್ನು ನಡೆಸಿದರೆ, ಅಂತ್ಯದಲ್ಲಿ ತಮ್ಮ ಸರ್ವಸ್ವವನ್ನೂ ಇತರರಿಗಾಗಿ ವಿನಿಯೋಗಿಸುವ ಸಾಮರ್ಥ್ಯವು ನಮ್ಮದಾಗುತ್ತದೆ. ಇದರಿಂದ ಜೀವನದ ಪರಮೋದ್ದೇಶ ಸಾಧಿಸಲು ನಮಗೆ ಸುಲಭಸಾಧ್ಯ. ಭವಿಷ್ಯಜೀವನದ ಬಗ್ಗೆ ಅಭದ್ರತಾಭಾವನೆಯೇ, ನಾವು ದಾನ ಮಾಡಲು ಅಡ್ಡಿಯಾಗುವ ಪ್ರಮುಖ ಕಾರಣವಾಗಿದೆ. ಆದರೆ, ಯಾರು ಭಗವಂತನಲ್ಲಿ ಪೂರ್ಣವಿಶ್ವಾಸ ಹೊಂದಿದ್ದು, ‘ಮೋಕ್ಷಸಾಧನೆಯೇ ಜೀವನದ ಪರಮೋದ್ದೇಶ ಹಾಗೂ ನಾವು ಜೀವನದಲ್ಲಿ ಸಾಧಿಸುವ ಧರ್ಮ, ಅರ್ಥ, ಕಾಮ ಇವುಗಳೆಲ್ಲವೂ ಆ ಪರಮೋದ್ದೇಶವನ್ನು ಸಾಧಿಸಲು ಪೂರಕವಾಗಿರಬೇಕು’ ಎಂಬ ಶಾಸ್ತ್ರವಾಕ್ಯದಲ್ಲಿ ಸಂಪೂರ್ಣ ಶ್ರದ್ಧೆ-ವಿಶ್ವಾಸಗಳನ್ನು ಪಡೆದಿರುತ್ತಾರೆಯೋ ಅವರಿಗೆ ಭವಿಷ್ಯಜೀವನದ ಬಗ್ಗೆ ಯಾವುದೇ ಭಯವಿರುವುದಿಲ್ಲ. ಅವರು ಸಹಜವಾಗಿ ದಾನಶೀಲರಾಗಿರುತ್ತಾರೆ.
ನಮ್ಮ ಪೂರ್ವಜರು, ಮೋಕ್ಷ ಸಾಧನೆಯೇ ಜೀವನದ ಪರಮ ಉದ್ದೇಶವೆಂದು ಅರಿತು, ನಂಬಿ ಅದಕ್ಕಾಗಿಯೇ ಬಾಳುತ್ತಿದ್ದರು. ತಾವು ಯೋಚಿಸುವ ಯೋಚನೆಗಳು, ಆಡುವ ಮಾತುಗಳು ಮತ್ತು ಮಾಡುವ ಕರ್ಮಗಳೆಲ್ಲವೂ ಆ ಗುರಿಯನ್ನು ಸಾಧಿಸಲು ಪೂರಕವಾಗಿಯೇ ಇರಬೇಕೇಂಬ ಸ್ಪಷ್ಟತೆಯನ್ನು ಅವರು ಹೊಂದಿದ್ದರು. ಆ ಸ್ಪಷ್ಟತೆಯೇ ಅವರನ್ನು ಆಧ್ಯಾತ್ಮಿಕ ಪಥದಲ್ಲಿ ಎಲ್ಲಿಯೂ ವಿಚಲಿತರಾಗದಂತೆ ನಡೆಸುತ್ತಿತ್ತು. ಅಲ್ಲದೆ, ಅವರು ಮುಂದಿನ ಪೀಳಿಗೆಗೆ ಅದೇ ಮಾರ್ಗದರ್ಶನ ನೀಡುತ್ತಿದ್ದರು ಹಾಗೂ ಯುವಜನರಿಗೆ ಸ್ಪೂರ್ತಿದಾಯಕವಾಗಿ ನಡೆದುಕೊಳ್ಳುತ್ತಿದ್ದರು.
ಆದರೆ, ಇಂದಿನ ಕಾಲದಲ್ಲಿ ಭೌತಿಕ ವಿಲಾಸವಾದವೇ ಎಲ್ಲೆಡೆಯಲ್ಲಿ ವಿಜೃಂಭಿಸುತ್ತಿದ್ದು, ಮಾನವ ಜೀವನದ ಉದ್ದೇಶವೇ ಪಲ್ಲಟಗೊಂಡಿದೆ. ಜೀವನದಲ್ಲಿ, ಆರ್ಥಿಕ ಸಂಪತ್ತಿನ ಗಳಿಕೆಯೇ ಪ್ರಮುಖ ಸ್ಥಾನವನ್ನು ಪಡೆದಿದ್ದು, ಆಧ್ಯಾತ್ಮಿಕ ಪ್ರಗತಿ ಹಾಗೂ ಆತ್ಮಸಾಕ್ಷಾತ್ಕಾರಗಳು ದೂರದ ಮಾತುಗಳಾಗಿವೆ. ಧರ್ಮವೆಂದರೆ ಕೇವಲ ಪೂಜೆ-ಪುನಸ್ಕಾರ ಅಥವಾ ಕಂದಾಚಾರಗಳಿಗೆ ಸೀಮಿತವಾಗಿದ್ದು, ದೇವರನ್ನು ಒಬ್ಬ ಕಠಿಣ, ನಿಷ್ಕರುಣಿ ನ್ಯಾಯಾಧೀಶನ ಸ್ಥಾನದಲ್ಲಿ ನಿಲ್ಲಿಸಲಾಗಿದೆ.
ಆಧ್ಯಾತ್ಮಿಕತೆಯೆಂಬುದು ನಿಷ ್ಪ ್ರೊಜಕ ಗೊಡ್ಡು ತತ್ವವೆಂದೂ, ಲೌಕಿಕ ಭೋಗ-ಭಾಗ್ಯಗಳ ಸಂಪಾದನೆಯೇ ಸರಿಯಾದ ಬದುಕುವ ರೀತಿಯೆಂದೂ ಪರಿಗಣಿಸಲಾಗಿದೆ. ಜೀವನದ ಯಶಸ್ಸನ್ನು ಕೇವಲ ಧನಸಂಪಾದನೆಯ ಮಾಪನದಿಂದಲೇ ಅಳೆಯಲಾಗುತ್ತಿದೆ. ಮುಂದಿನ ಪೀಳಿಗೆಗೂ ಇದೇ ಆದರ್ಶವನ್ನು ಹಾಕಿಕೊಡಲಾಗುತ್ತಿದೆ. ಇದರಿಂದಾಗಿ ಇಂದಿನ ಯುವಜನರು ನಮ್ಮ ದೇಶದ ಆಧ್ಯಾತ್ಮಿಕ ಶ್ರೀಮಂತಿಕೆಯ ಆಗರಗಳಾದ ಧರ್ಮಗ್ರಂಥಗಳಿಂದ ದೂರವಾಗುತ್ತಿದ್ದಾರೆ. ಇದು ಇಂದು ನಮ್ಮ ದೇಶದ ಮಹಾದುರಂತವಾಗಿದೆ.
ಇಂದು ನಾವು ಮಾಡಲೇಬೇಕಾದ ಅತ್ಯಗತ್ಯ ಕಾರ್ಯವೆಂದರೆ, ಮಾನವರಲ್ಲಿ ಜೀವನದ ಪರಮೊದ್ದೇಶವಾದ ಆತ್ಮಸಾಕ್ಷಾತ್ಕಾರದ ಕುರಿತಾಗಿ ಇಂದಿನ ವೈಜ್ಞಾನಿಕ-ರ್ತಾಕ ಭಾಷೆಯಲ್ಲಿ ತಿಳಿಸಿಕೊಡುವುದು ಹಾಗೂ ಅದನ್ನು ಸಾಧಿಸಲು, ಭಗವದ್ಗೀತೆಯಲ್ಲಿ ಸಾರಿರುವ ಸರಳ ಸಾಧನೆಗಳಾದ ಯಜ್ಞ, ದಾನ ಮತ್ತು ತಪಸ್ಸುಗಳನ್ನು ಇಂದಿನ ಕಾಲಕ್ಕೆ ಅನ್ವಯವಾಗುವಂತೆ ಅರ್ಥೈಸಿ ಅವುಗಳನ್ನು ಕೈಗೊಳ್ಳುವಂತೆ, ನಮ್ಮ ಪ್ರತ್ಯಕ್ಷ ನಿದರ್ಶನದೊಂದಿಗೆ ಪ್ರೋತ್ಸಾಹಿಸುವುದು. ಇದನ್ನು ನಾವು ಆಚರಣೆಗೆ ತಂದರೆ, ಆಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಸರ್ವರಿಗೂ ಶ್ರೇಯಸ್ಸು ಲಭಿಸುವುದರಲ್ಲಿ ಸಂಶಯವೇ ಇಲ್ಲ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ಮುಡಾ ಹಗರಣದಲ್ಲಿ ಮೊದಲ ತಲೆದಂಡ: ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
