| ರಾಜಗುರು ಬಿ.ಎಸ್. ದ್ವಾರಕಾನಾಥ್ಜಪಾಕುಸುಮ ಸಂಕಾಶಂಕಾಶ್ಯಪೇಯಂ ಮಹಾದ್ಯುತಿಂ |ತಮೋಘ್ನಂ ಸರ್ವಲೋಕಾನಾಂಪ್ರಣತೋಸ್ಮಿ ದಿವಾಕರಮ್ ||
ಕೆಂಪು ದಾಸವಾಳದ ಮೈಕಾಂತಿಯುಳ್ಳ, ಕಶ್ಯಪಮಹರ್ಷಿಗಳ ಮಗನಾದ ಮಹಾನ್ ತೇಜಸ್ವಿಯಾಗಿ, ಎಲ್ಲ ಲೋಕಗಳ ಕತ್ತಲೆಯನ್ನು ಹೊಡೆದೋಡಿಸುವ ದಿವಾಕರನಾದ ಸೂರ್ಯ ಭಗವಾನನಿಗೆ ನಮಸ್ಕಾರ.
ಭೂಮಿಯ ಮೇಲಿನ ಎಲ್ಲ ಜೀವರಾಶಿಗಳ ಉಳಿವಿಗೂ ಕಾರಣ ಸೂರ್ಯ. ಆತನ ಆರಾಧನೆ ಬಹುಮುಖ್ಯವಾದದ್ದು. ಮಕರ ಸಂಕ್ರಮಣದಲ್ಲಿ ಸೂರ್ಯನು ದಕ್ಷಿಣದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಿಸುತ್ತಾನೆ. ಉತ್ತರಾಯಣಕ್ಕೆ ಪುರಾಣ, ಶಾಸ್ತ್ರಗಳಲ್ಲಿ ಸಾಕಷ್ಟು ಪ್ರಾಮುಖ್ಯವಿದೆ. ಮಾಘ, ಫಾಲ್ಗುಣ, ಚೈತ್ರ, ವೈಷಾಖ ಹಾಗೂ ಜ್ಯೇಷ್ಠದವರೆಗಿನ ಉತ್ತರಾಯಣ ಕಾಲದಲ್ಲಿ ಅನೇಕ ಶುಭ ಕಾರ್ಯಗಳು ನಡೆಯುತ್ತವೆ.
2021ರ ಏಪ್ರಿಲ್ 15ರ ವೇಳೆಗೆ ಸೋಂಕು ನಿವಾರಣೆಯಾಗುತ್ತದೆ ಎಂದು ಇದೀಗ ಬಹುತೇಕ ಜ್ಯೋತಿಷಿಗಳೆಲ್ಲರೂ ಒಮ್ಮತಕ್ಕೆ ಬಂದಿದ್ದಾರೆ. ಸೂರ್ಯನ ಮಾಸದಲ್ಲಿ ಬಂದ ಸೋಂಕು, ಸೂರ್ಯನ ಶಾಖದಿಂದಲೇ ನಾಶವಾಗುತ್ತದೆ. ಇದೆಲ್ಲ ಶನಿಯ ಪ್ರಭಾವವೇ. ಧರ್ಮಮಾರ್ಗದಿಂದ ವಿಚಲಿತರಾದರೆ ಯಾವುದೇ ವಿಳಂಬವಿಲ್ಲದೆ ಆತಂಕ ಸೃಷ್ಟಿಸುತ್ತಾನೆ.
ಜನವರಿ 14ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಸಂಕ್ರಮಣವಿರುತ್ತದೆ. ಶ್ರವಣ ನಕ್ಷತ್ರದಲ್ಲಿ ಪುಷ್ಯ ಶುದ್ಧ ಪಾಡ್ಯ ಉಪರಿಯಲ್ಲಿ ಅಂದರೆ ಚಂದ್ರನ ನಕ್ಷತ್ರದಲ್ಲಿ ಸೂರ್ಯನ ಪ್ರವೇಶವಾಗುತ್ತದೆ. ಈ ಸಮಯದಲ್ಲಿ ಎಳ್ಳಿನ ಸ್ನಾನ, ಎಳ್ಳಿನ ಉಂಡೆ ನೈವೇದ್ಯ, ಎಳ್ಳು ದಾನ, ಎಳ್ಳು ಬೆಲ್ಲದ ಮಿಶ್ರಣ ಹಂಚಿದರೆ ಉತ್ತಮ ಫಲಗಳು ಲಭಿಸುತ್ತವೆ. ತಾಮ್ರದ ತಂಬಿಗೆಯಲ್ಲಿಟ್ಟು ಎಳ್ಳು ದಾನ ಮಾಡಿದರೆ ಮತ್ತೂ ಶ್ರೇಷ್ಠ. ಜ.25ರಂದು ಬುಧ, ಶುಕ್ರ, ಗುರು, ಸೂರ್ಯ ಹಾಗೂ ಶನಿ ಒಟ್ಟಾಗುತ್ತಾರೆ. ಐದು ಗ್ರಹಗಳ ಸೇರ್ಪಡೆಯಿಂದ ಕೆಲವು ಸಂಕಷ್ಟಗಳು ಎದುರಾಗಬಹುದು. ದೇಶ ಸುಭಿಕ್ಷ ಹಾಗೂ ಸುರಕ್ಷಿತವಾಗಿರಲು ರೈತರು ಹಾಗೂ ಸೈನಿಕರ ಯೋಗಕ್ಷೇಮ ಅಗತ್ಯ. ದೇಶದ ಎಲ್ಲ ಜನರೂ ಈ ನಿಟ್ಟಿನಲ್ಲಿ ದೇವರಲ್ಲಿ ಪ್ರಾರ್ಥಿಸೋಣ. ರೈತರು ಹಾಗೂ ಸೈನಿಕರ ಆದಾಯ, ವೇತನ ಹೆಚ್ಚಿಸುವ ನಿಟ್ಟಿನಲ್ಲಿ ಸದೃಢ ಹೆಜ್ಜೆಗಳನ್ನು ಇರಿಸಬೇಕು.
ಸಂಕ್ರಮಣ ದೇವಿಯ ಸಂಚಾರ: ಸಂಕ್ರಮಣ ದೇವಿ ಭೂತ ಜಾತಿಯ, ವಿಕಾರರೂಪದಲ್ಲಿದ್ದಾಳೆ. ಹಳದಿ ವಸ್ತ್ರ ಉಟ್ಟು, ಎಲೆಗಳ ಕುಪ್ಪಸ ತೊಟ್ಟು, ಮಲ್ಲಿಗೆ ಮಾಲೆ ಮುಡಿದು, ಮುತ್ತಿನಮಾಲೆ ಧರಿಸಿ, ಬೆಳ್ಳಿಪಾತ್ರೆಯಲ್ಲಿ ಪಾಯಸ ಹಿಡಿದಿದ್ದಾಳೆ. ಕೌಮಾರಾವಸ್ಥೆಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ನಡೆಯುತ್ತಿದ್ದಾಳೆ, ಆದರೆ ದೃಷ್ಟಿ ಈಶಾನ್ಯದೆಡೆಗಿದೆ. ಆಕೆ ನೋಡುವ ಹಾಗೂ ಹೋಗುವ ದಿಕ್ಕುಗಳಲ್ಲಿ ಹೆಚ್ಚು ಸಂಕಷ್ಟಗಳು ಎದುರಾಗುತ್ತವೆ. ಈಶಾನ್ಯ ರಾಜ್ಯಗಳಲ್ಲಿ ಜಲವೃಷ್ಟಿಯಾಗಿ ಜನಜೀವನ ಸಂಕಟ ಎದುರಿಸುತ್ತದೆ. ಅರುಣಾಚಲಕ್ಕೆ ಚೀನಾದಿಂದ ಆತಂಕವಿದೆ. ಪಶ್ಚಿಮ ಬಂಗಾಳದಲ್ಲೂ ರಾಜಕೀಯ ಹಿಂಸಾಚಾರಗಳು ನಡೆಯಲಿವೆ. ಪಶ್ಚಿಮದ ರಾಜ್ಯಗಳಲ್ಲಿ ಭೂಕಂಪನ, ಭಯೋತ್ಪಾದನಾ ದಾಳಿಗಳು, ಪ್ರವಾಹದ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಗಡಿಗಳನ್ನು ಭದ್ರಪಡಿಸಬೇಕು.
ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ ಮತಾಂತರ ವಿಚಾರದಲ್ಲಿ ಗಲಾಟೆಗಳಾಗುತ್ತವೆ. ತಮಿಳುನಾಡಿನಲ್ಲಿ ಚುನಾವಣೆ ಸಂಬಂಧ ಹೊಡೆದಾಟಗಳಾಗುತ್ತವೆ. ಕೇರಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಅಶಾಂತಿ ಕಾಡಲಿದೆ. ಮಹಾರಾಷ್ಟ್ರದಲ್ಲಿ ಸರ್ಕಾರದ ಮಿತ್ರರಿಂದಲೇ ಅಶಾಂತಿಯಾಗಲಿದೆ. ಕರ್ನಾಟಕದಲ್ಲಿ ಪ್ರತಿಭಟನೆಗಳು ಹೆಚ್ಚಾಗಲಿವೆ. ಸರ್ಕಾರದ ನೇತೃತ್ವದ ವಿಚಾರದಲ್ಲಿ ಸಂಘರ್ಷವಿಲ್ಲದೆ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳುವುದು ಉತ್ತಮ. ಕೋನಾರ್ಕದ ಸೂರ್ಯ ದೇವಸ್ಥಾನಕ್ಕೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹೋಗಿ ದರ್ಶನ ಮಾಡಿದರೆ ದೇಶದಲ್ಲಿ ಕ್ಷೇಮಾಭಿವೃದ್ಧಿ ಉಂಟಾಗುತ್ತದೆ.
ನಕ್ಷತ್ರಗಳ ಫಲಾಫಲ:ಈ ಸಂಕ್ರಮಣದಲ್ಲಿ ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರಿಗೆ ಪ್ರವಾಸ ಸಂಭವವಿದೆ. ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದವರಿಗೆ ಭೋಗಪ್ರಾಪ್ತಿ, ಸುಖ-ಸಂತೋಷ ಲಭಿಸಲಿದೆ. ರೋಹಿಣಿ-ಮೃಗಷಿರಾ-ಆರ್ದಾ ನಕ್ಷತ್ರದವರಿಗೆ ರೋಗಪೀಡೆ, ಋಣ, ಶನಿಪೀಡೆ ಸಾಧ್ಯತೆಯಿದೆ. ಶಿವನ ದೇವಾಲಯದಲ್ಲಿ ಈಶ್ವರನಿಗೆ ತುಪ್ಪದ ಅಭಿಷೇಕ ಮಾಡಿಸಬೇಕು. ಪುನರ್ವಸು, ಪುಷ್ಯ, ಆಶ್ಲೇಷ, ಪೂರ್ವಾಷಾಢ, ಮಘ, ಉತ್ತರಾಷಾಢ ನಕ್ಷತ್ರದವರಿಗೆ ವಸ್ತ್ರಪ್ರಾಪ್ತಿಯಿದೆ. ಇವರು ವಸ್ತ್ರದಾನ ಮಾಡಬೇಕು. ಹಸ್ತ, ಚಿತ್ತ, ಸ್ವಾತಿ ನಕ್ಷತ್ರದವರಿಗೆ ಕೆಲವು ಹಾನಿ, ತೊಂದರೆಗಳಿವೆ. ತ್ರಿಜಕಲ್ಪದಲ್ಲಿ ಸೂರ್ಯನಮಸ್ಕಾರ ಮಾಡಿದರೆ ಧನಹಾನಿ ತಡೆಯಬಹುದು. ಮಾಘ ಮಾಸದ ನಾಲ್ಕು ಭಾನುವಾರ ಸೂರ್ಯ ನಮಸ್ಕಾರ ಮಾಡಿ. ವಿಶಾಖಾ, ಅನುರಾಧಾ, ಜ್ಯೇಷ್ಠ ಹಾಗೂ ಮೂಲ ನಕ್ಷತ್ರದವರಿಗೆ ಹಣ ಲಭಿಸುವ ಅವಕಾಶವಿದೆ. ಮೋದಿಯವರದ್ದು ಅನುರಾಧ ನಕ್ಷತ್ರವಾದ್ದರಿಂದ, ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಒಂದು ಮುಷ್ಠಿ ಎಳ್ಳು ದಾನ ಮಾಡಿದರೆ ಆ ಸಂವತ್ಸರ ಯಾವುದೇ ರೋಗ ಬರುವುದಿಲ್ಲ ಎನ್ನುತ್ತಾರೆ ಹಿರಿಯರು. ಶಿವನ ದೇವಾಲಯದಲ್ಲಿ ಎಳ್ಳಿನ ದೀಪ ಹಚ್ಚಿ ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ. ಘೃತಂ ವರ್ಧತೇ ಬುದ್ಧಿಃ ಎಂಬಂತೆ, ಸರ್ಕಾರದ ಮುಜರಾಯಿ ದೇವಸ್ಥಾನಗಳಲ್ಲಿ ತುಪ್ಪವನ್ನು ಹಚ್ಚಿ ಪೂಜಿಸಲು ಸರ್ಕಾರ ತಿಳಿಸಿದಲ್ಲಿ ಸಮಾಜದಲ್ಲಿ ಶ್ರೇಷ್ಠ ಜ್ಞಾನದ ಸಂವಹನವಾಗುತ್ತದೆ. ರೈತರ ವಿಚಾರದಲ್ಲಿ ಆಲಸ್ಯ ಮಾಡಿದರೆ ಸರ್ಕಾರಕ್ಕೆ ತೊಂದರೆ ಎದುರಾಗುತ್ತದೆ. ಬ್ಯಾಂಕುಗಳು ಕನಿಷ್ಠ ಒಂದು ವರ್ಷ ಸಾಲ ವಸೂಲಿಗೆ ತೆರಳದಂತೆ ಮಾಡಬೇಕು. ನ್ಯಾಯಾಂಗ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸರ್ಕಾರ ದೂರವಿರಬೇಕು. ಮಹಿಳಾ ಸುರಕ್ಷತೆಗೆ ಪ್ರಬಲ ಕಾನೂನು ರೂಪಿಸುವುದರ ಜತೆಗೆ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು.
ವಿದೇಶಗಳಲ್ಲಿ ಸ್ಥಿತಿ:ಕೆಲವೇ ವರ್ಷಗಳಲ್ಲಿ ಅಮೆರಿಕ 2-3ನೇ ಸ್ಥಾನಕ್ಕೆ ಕುಸಿಯುತ್ತದೆ. ಭಾರತದ ಮೇಲಿನ ಭರವಸೆ ಹಾಗೂ ಸಹಕಾರದಿಂದಷ್ಟೆ ಅಮೆರಿಕಕ್ಕೆ ಮತ್ತೆ ಪ್ರಗತಿ ಸಾಧ್ಯ. ರಾಜಕೀಯ ಅಸ್ಥಿರತೆಯಿಂದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬಹುದು, ಅನಾರೋಗ್ಯದ ಕಾರಣಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಪದಚ್ಯುತಿ ಆಗಬಹುದು. ಫ್ರಾನ್ಸ್, ಜರ್ಮನಿ, ಹಾಂಗ್​ಕಾಂಗ್​ನಲ್ಲಿ ಜನಾಂದೋಲನ ಹಾಗೂ ಅಶಾಂತಿ ಉಂಟಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿರುವ ಚೀನಾ ಕಂಡು ಕೇಳರಿಯದ ಸಂಕಷ್ಟ, ನಷ್ಟ ಅನುಭವಿಸುತ್ತದೆ. ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಕಾಡಲಿದೆ. ನೇಪಾಳವು ಒಂದು ದಿನ ಭಾರತಕ್ಕೆ ಶರಣಾಗಲೇಬೇಕು.
ಚಿನ್ನದ ಬೆಲೆ ಏರಿಕೆ:ಹಳದಿ ಬಣ್ಣವನ್ನು ಹೊಂದಿರುವ ಚಿನ್ನ, ಕಡಲೆಬೇಳೆ, ತೊಗರಿಬೇಳೆ, ಗೋಧಿ, ಬಾದಾಮಿ, ಕೇಸರಿ, ಹಳದಿ ವಸ್ತ್ರಗಳ ಬೆಲೆ ಹೆಚ್ಚಾಗುತ್ತದೆ. ಬೆಳ್ಳಿಬೆಲೆ ಹೆಚ್ಚುತ್ತದಾದರೂ ನಂತರ ಸ್ಥಿರವಾಗುತ್ತದೆ. ಆಭರಣ, ವಾಹನ ಖರೀದಿ ಸ್ವಲ್ಪ ಇಳಿಮುಖವಾಗುತ್ತದೆ. ಬ್ರಾಹ್ಮಣರು ತಮ್ಮ ಕರ್ಮಗಳನ್ನು ಬಿಟ್ಟು ಅನವಶ್ಯಕ ವಿಚಾರ, ಹಣದ ಹಿಂದೆ ಬಿದ್ದರೆ ಶನಿ ಶಿಕ್ಷಿಸುತ್ತಾನೆ. ಜಪ-ತಪ, ಹವನ ಮಾಡಿ ಪುಣ್ಯ ಸಂಪಾದಿಸಿ, ದೇಶವನ್ನು ಆಳುವವರಿಗೆ ದಾನ ಮಾಡಬೇಕು. ಧರ್ವಚರಣೆ ವಿಚಾರ ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ. ಪಕ್ಷದಲ್ಲಿ ಯಾರನ್ನಾದರೂ ಬೆಳೆಸಿ, ಯಾರಿಗಾದರೂ ಪಟ್ಟ ಕಟ್ಟಿ. ಆದರೆ ಭಾರತದಲ್ಲಿ ಹಿಂದುತ್ವಕ್ಕೆ ದ್ರೋಹ ಎಸಗಿದವರನ್ನು ಜನರು ಕ್ಷಮಿಸುವುದಿಲ್ಲ. ನ್ಯಾಯಾಂಗವು ಧರ್ಮಮಾರ್ಗದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು.
ಅಡಕೆ ಬೆಳೆಗೆ ರಕ್ಷಣೆ ಬೇಕು:ಅಡಕೆ, ಕಾಫಿ, ಟೀ, ಏಲಕ್ಕಿ ಬೆಳೆಗಳು ನಷ್ಟ ಹೊಂದಿ ರೈತರು ಕಷ್ಟಪಡುವಂತಾಗಬಹುದು. ಆ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನಹರಿಸಬೇಕು. ‘ಅಡಕೆ ಆರೋಗ್ಯಕ್ಕೆ ಹಾನಿಕಾರಕ’ ಎಂಬ ಕೆಲವು ಸಂಶೋಧನೆಗಳ ವಾದವನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಜ್ಜಾಗಬೇಕು. ಮುಂಬರುವ ದಿನಗಳಲ್ಲಿ ಶೀತಗಾಳಿ ಬೀಸಿ ಅಡಕೆ ಬೆಳೆಗೆ ಹಾನಿಯಾಗುವ ಅಪಾಯ ಇದೆ. ಎಪಿಎಂಸಿ ಸೆಸ್​ಗಳ ಆದಾಯದಲ್ಲಿಯೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಲಾಗೂ ಮಾಡಲು ಆವರ್ತ ನಿಧಿಯನ್ನು ಸಂಗ್ರಹಿಸುವ ವ್ಯವಸ್ಥೆ ಜಾರಿಯಾಗಬೇಕು. ಸೆಸ್​ನ ಒಟ್ಟು ಸಂಗ್ರಹದಲ್ಲಿ ಒಂದು ಪ್ರಮಾಣವನ್ನು ಮೀಸಲಿಡುವ ಮಾದರಿ ಜಾರಿಯಾಗಬೇಕು. ಆ ನಿಧಿ ಸೆಂಟ್ರಲ್ ಅಗ್ರಿಕಲ್ಚರ್ ಮಾಕೆಂಟಿಂಗ್ ಬೋರ್ಡ್ ಮೂಲಕ ಮೇಲುಸ್ತುವಾರಿ ನೋಡುವಂತಾಗಬೇಕು. ಎಲ್ಲ ಬೆಳೆಗಳ ವಹಿವಾಟಿನ ಸೆಸ್​ನಲ್ಲಿ ಇಷ್ಟು ಶೇಕಡ ಮೊತ್ತ ಆಯಾ ಬೆಳೆಗಳ ಆವರ್ತ ನಿಧಿಗೆ ಸೇರ್ಪಡೆಯಾಗುವಂತೆ ನಿಯಮ ರೂಪಿಸಬೇಕು. ಆಗ ಅಡಿಕೆಯಂಥ ಆರ್ಥಿಕ ಬೆಳೆಯ ವಿಚಾರದಲ್ಲಿ ಸೆಸ್ ಒಳ್ಳೆಯ ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ, ಸಂಕಷ್ಟ ಕಾಲದಲ್ಲಿ ಸರ್ಕಾರದ ಹೆಚ್ಚುವರಿ ಸಹಾಯ ಅಗತ್ಯ ಬೀಳದೆ ಈ ಆವರ್ತ ನಿಧಿಯಿಂದಲೇ ಬೆಂಬಲ ಬೆಲೆ ನೀಡುವ ಅಗತ್ಯವನ್ನು ಪೂರೈಸಬಹುದು.
ಸಂಕಷ್ಟ ನಿವಾರಣೆ ಸೂತ್ರಗಳು:ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಾತ್ರವೇ ರಥಸಪ್ತಮಿ ದಿನದಂದು ವೈಕುಂಠದ ಬಾಗಿಲು ತೆರೆಯಲಾಗುತ್ತದೆ. ವೈಕುಂಠ ಏಕಾದಶಿಯಲ್ಲಿ ವೈಕುಂಠದ ಬಾಗಿಲು ಪ್ರವೇಶ ಸಾಧ್ಯವಾಗಿಲ್ಲವಾದರೆ ರಥಸಪ್ತಮಿಗೆ ಶ್ರೀರಂಗಪಟ್ಟಣದಲ್ಲಿ ಅವಕಾಶವಿದೆ. ರಥಸಪ್ತಮಿಯಂದು ಮುಖ್ಯಮಂತ್ರಿಗಳ ಹೆಸರಿನಲ್ಲೇ ಪ್ರಥಮ ಪೂಜೆ ನಡೆಯಲಿ. ಗಾಣಗಾಪುರದಲ್ಲಿ ಗುರುವಿನ ದರ್ಶನದಿಂದ ರೋಗಬಾಧೆ, ದಾರಿದ್ರ್ಯ ತೊಲಗುತ್ತದೆ. ತಮಿಳುನಾಡಿನಲ್ಲಿ ಸುಬ್ರಹ್ಮಣ್ಯನ ಆರು ಪುಣ್ಯ ಕ್ಷೇತ್ರಗಳಾದ ತಿರುಚ್ಚಂದೂರು, ಪಳನಿ, ಸ್ವಾಮಿಮಾಲೈ, ತಿರುತ್ತಣ್ಣಿ, ತಿರುಪಾರಂಕುಂಡ್ರಂ ಹಾಗೂ ಪಳಮುದಿಚೋಳೈಗಳಿಗೆ ಪ್ರಧಾನಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ಕನಿಷ್ಠ ಒಂದು ಕ್ಷೇತ್ರಕ್ಕೆ ಭೇಟಿ ನೀಡಿದರೂ ಶತ್ರುಬಾಧೆ ಬಾರದಂತೆ ಸುಬ್ರಹ್ಮಣ್ಯನು ಕಾಪಾಡುತ್ತಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 10 =
Remember me
