|ಕುಸುಮಾ ಆಯರಹಳ್ಳಿ
ಯೋಗ ದಿನ ನಿಮಿತ್ತ ಜೂನ್ 21ರಂದು ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಹಲವು ಕಾರ್ಯಕ್ರಮಗಳಲ್ಲಿ ಕೆಎಸ್​ಎಸ್ ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಉದ್ಘಾಟನೆಯೂ ಸೇರಿದೆ. ಈ ಶಾಲೆಗೆ ತನ್ನದೇ ಆದ ಇತಿಹಾಸವಿದೆ. 1937 ರಲ್ಲಿ ಹಾಸನದ ಹೊಳೆನರಸೀಪುರದ ಬಳಿಯ ಕ್ಯಾತನಹಳ್ಳಿಯ ಸಾಹುಕಾರ್ ಸಿದ್ದಲಿಂಗಯ್ಯನವರು ಈ ಕಟ್ಟಡವನ್ನು ಖರೀದಿಸಿ, ಅದನ್ನು ಸುತ್ತೂರಿನ ರಾಜೇಂದ್ರ ಶ್ರೀಗಳ ಕೈಗೊಪ್ಪಿಸಿದರು. ಸಂಸ್ಕೃತ ಎಲ್ಲರಿಗೂ ಅಲ್ಲ ಎಂಬಂತಿದ್ದ ಕಾಲದಲ್ಲಿ ಅಲ್ಲಿ ಮಠಾಧಿಪತಿಗಳಾಗುವವರಿಗೆ ಮತ್ತು ಆಸಕ್ತರಿಗೆ ಸಂಸ್ಕೃತ ಶಾಲೆಯನ್ನೂ, ಮೈಸೂರಿನಲ್ಲಿ ಓದುವ ದೂರದೂರಿನ ಬಡ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನೂ ಮಾಡುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಯ್ತು. 29-10-1937 ರಂದು ಮಿರ್ಜಾ ಇಸ್ಮಾಯಿಲ್ ಇದನ್ನು ಉದ್ಘಾಟಿಸಿದ್ದರು.
ಹಾಸ್ಟೆಲಿನ ಹಳೆಯ ವಿದ್ಯಾರ್ಥಿ ಮತ್ತು 85 ರ ಹಿರಿಯ ಜೀವ ಕೆ.ಸಿ. ಶಿವಪ್ಪ ಅವರು ಹೊಸ ಕಟ್ಟಡದ ಹಿನ್ನೆಲೆಯಲ್ಲಿ ಹಳೆಯ ನೆನಪುಗಳನ್ನು ಕೆದಕಿದರು. ಈ ಪಾಠಶಾಲೆ ಸಂಸ್ಕೃತ ಕಲಿಕೆಯನ್ನು ಸಾರ್ವತ್ರೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಬಸವರಾಜ ಶಾಸ್ತ್ರಿಗಳು, ಕೃಷ್ಣಾಚಾರ್ಯರು, ವಿಷ್ಣುಮೂರ್ತಿ ಭಟ್ ಮುಂತಾದ ಅನೇಕ ವಿದ್ವಾಂಸರು ಸಂಸ್ಕೃತ ಕಾವ್ಯ, ನಾಟಕಗಳನ್ನು ಸೊಗಸಾಗಿ ಪಾಠ ಮಾಡುತ್ತಿದ್ದರಂತೆ. ಪೂರ್ಣಪ್ರಮಾಣದಲ್ಲಿ ಸಂಸ್ಕೃತ ಕಲಿಯುವವರಲ್ಲದೇ ನಮ್ಮಂತಹವರು ಇಂಟರ್​ವಿುೕಡಿಯಟ್ (ಆಗಿನ ಪಿಯುಸಿ) ಆನರ್ಸ್ (ಆಗಿನ ಡಿಗ್ರಿ) ಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಾಲೇಜಿನಲ್ಲಿ ಕಲಿಯುತ್ತಲೂ, ಬಿಎ, ಬಿ ಎಸ್​ಸಿ, ಎಂಎಸ್​ಸಿ ಇತ್ಯಾದಿ ಓದುತ್ತಲೂ ಬೆಳಗ್ಗೆ ಮತ್ತು ಸಂಜೆ ಸಂಸ್ಕೃತಾಭ್ಯಾಸ ಮಾಡುವ ವಿಶೇಷ ಅವಕಾಶವಿದ್ದ ಕಾರಣ, ಹಾಸ್ಟೆಲಿನ ವಿದ್ಯಾರ್ಥಿಗಳಿಗೆ ಎರಡೆರಡು ಕಲಿಕೆ ಸಾಧ್ಯವಾಗುತ್ತಿತ್ತು.
ಇದೆಲ್ಲ ಆಗಿ ಈಗ 83 ವರ್ಷಗಳಾಗಿವೆ. 15 ವಿದ್ಯಾರ್ಥಿಗಳಿಂದ ಆರಂಭವಾದ ಪಾಠಶಾಲಾದಲ್ಲಿ ಹಾಸ್ಟೆಲಿನಲ್ಲಿ ಈವರೆಗೆ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿತಿದ್ದಾರೆ. ನೂರು ವರ್ಷಗಳಷ್ಟು ಹಳೆಯದಾಗಿದ್ದ ಕಟ್ಟಡದ ಜಾಗದಲ್ಲಿ ಈಗ ಐದು ಅಂತಸ್ತುಗಳ, 24510 ಚದರ ಅಡಿಗಳಷ್ಟು ವಿಸ್ತೀರ್ಣದ, ಸುಸಜ್ಜಿತ ಹೊಸಕಟ್ಟಡ ಬಂದಿದೆ. ಅಲ್ಲಿ 450 ವಿದ್ಯಾರ್ಥಿಗಳು ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಧ್ಯಯನ ನಡೆಸಬಹುದಾಗಿದೆ.
ಆಗ ಸಿದ್ದಲಿಂಗಯ್ಯನವರಂತಹ ಎಷ್ಟೋ ಶ್ರೀಮಂತರೂ ಇದ್ದರು. ಆದರೆ ಎಲ್ಲರೂ ಹೀಗೆ ಸಮಾಜಮುಖಿಯಾಗಿ ಯೋಚಿಸಿರಲಿಕ್ಕಿಲ್ಲ. ಇವತ್ತಿಗಾದರೆ ಪ್ರಜಾಪ್ರಭುತ್ವವಿದೆ, ಸರ್ಕಾರಗಳಿವೆ, ನಮಗೆ ಉತ್ತಮ ಶಿಕ್ಷಣ ಮತ್ತು ಬದುಕನ್ನು ಕೇಳುವ ಹಕ್ಕಿದೆ, ಕೊಡುವ ಕರ್ತವ್ಯ ಅವರಿಗೂ ಇದೆ. ಆದರೆ ಅವತ್ತಿಗೆ ಜನರ ಬಳಿ ಹಣವಿರಲಿಲ್ಲ. ವಿದ್ಯಾಭ್ಯಾಸದ ಆಸೆ ಇದ್ದರೂ ನಗರಗಳಲ್ಲಿ ಉಳಿದು ಓದಲು ಸೌಲಭ್ಯಗಳಿರಲಿಲ್ಲ. ಮಠಗಳು ಕೂಡ ಸಮಾಜದ ಆರ್ಥಿಕ ಸ್ಥಿತಿಯ ಬಿಂಬಗಳೇ ಆಗಿದ್ದವು. ಅಂತಹ ಕಾಲದಲ್ಲಿ ಸ್ವಲ್ಪ ಸುಸ್ಥಿತಿಯಲ್ಲಿದ್ದ ಸಿದ್ದಲಿಂಗಯ್ಯ, ಗುಬ್ಬಿಯ ತೋಟದಪ್ಪ ತರಹದವರು ಒಂದಿಷ್ಟು ಮನಸು ಮಾಡಿದ್ದರಿಂದ, ಶಿಕ್ಷಣದ ವಿಷಯದಲ್ಲಿ ದೂರದೃಷ್ಟಿಯಿಂದ ಯೋಚಿಸಿದ್ದರಿಂದ ಎಷ್ಟೋ ಜನ ವಿದ್ಯಾಭ್ಯಾಸ ಮೂಲಕ ಬದುಕನ್ನೂ ಕಂಡುಕೊಳ್ಳುವಂತಾಯ್ತು. ಜೆಎಸ್​ಎಸ್ ಸಂಸ್ಥೆಯು ಸಿದ್ದಲಿಂಗಯ್ಯನವರ ಆ ನಿಸ್ವಾರ್ಥ ನಡೆಯ ನೆನಪಿಗಾಗಿ ಈ ಕಟ್ಟಡವನ್ನು ಕೆಎಸ್​ಎಸ್ ಆಗಿಯೇ ಉಳಿಸಿಕೊಂಡಿದೆ.
ಎಲ್ಲ ಸರಿ, ಈಗ ಸಂಸ್ಕೃತವೇಕೆ ಬೇಕು? ಎಂಬ ಪ್ರಶ್ನೆಯನ್ನೂ ಶಿವಪ್ಪನವರನ್ನೂ, ಇತರ ಕೆಲ ಹಿರಿಯರನ್ನೂ ಕೇಳಲಾಯ್ತು. ಜಗತ್ತಿನ ಇತರ ಎಲ್ಲ ಭಾಷೆಗಳಂತೆ ಸಂಸ್ಕೃತವೂ ಒಂದು ಭಾಷೆ. ಧರ್ಮಗ್ರಂಥಗಳ ದೃಷ್ಟಿಯಿಂದಲ್ಲ, ಅದರ ವಿಪುಲ ಸಾಹಿತ್ಯದ ದೃಷ್ಟಿಯಿಂದಲೂ ಸಂಸ್ಕೃತವನ್ನು ನೋಡಬೇಕು. ಶೇಕ್ಸ್​ಪಿಯರನ ನಾಟಕಗಳನ್ನು ಭಾಷಾತೀತವಾಗಿ ಓದುವಂತೆ ಕಾಳಿದಾಸನೂ ನಮಗೆ ಮುಖ್ಯ. ಹರಿಶ್ಚಂದ್ರ ಕಾವ್ಯವೂ ಮುಖ್ಯ. ಸಾಹಿತ್ಯವನ್ನು ಇತಿಹಾಸ ಎಂಬ ದೃಷ್ಟಿಯಿಂದ ನೋಡಿದಾಗಲೂ ಆ ಕಾಲದ ಜನಜೀವನದ ಚಿತ್ರಣಕ್ಕಾಗಿ ಓದಬೇಕು. ಮತ್ತು ಆಯುರ್ವೆದ, ಕೃಷಿ ಪರಾಶರದಲ್ಲಿ ಬರುವ ಅಂದಿನ ಬೇಸಾಯದ ವಿಷಯಗಳು ಮುಂತಾದವನ್ನು ಅಧ್ಯಯನದ ದೃಷ್ಟಿಯಿಂದ, ಸಂಶೋಧನೆ ದೃಷ್ಟಿಯಿಂದ ನೋಡಬೇಕು ಎಂಬ ಅಭಿಪ್ರಾಯಗಳು ಬಂದವು.
ಧಾರ್ವಿುಕ ಸಂಸ್ಥೆಗಳ ಸಂಸ್ಕೃತ ಕಲಿಕೆಯ ಉದ್ದೇಶ ಒಂದಾದರೆ, ಶಾಲೆಗಳಲ್ಲಿ ಮಕ್ಕಳು ಅದನ್ನು ಕಲಿಯುವ ಉದ್ದೇಶ ಬೇರೆ. ಜಗತ್ತಿನ ಯಾವುದೇ ಭಾಷೆ ಬಳಸದಿದ್ದರೆ, ಕಲಿಯದಿದ್ದರೆ ಸಾಯುತ್ತದೆ. ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿಸಿ, ಎಲ್ಲರೂ ಅದನ್ನು ಕಲಿತು ಉಳಿದ ಭಾಷೆಗಳನ್ನೆಲ್ಲ ಮುಗಿಸಿಬಿಡಬೇಕಿಲ್ಲ. ಹಾಗೆಂದು ಅದೊಂದು ಮೃತಭಾಷೆ ಎಂದು ಸಂಸ್ಕೃತವನ್ನು ಆಡಿಕೊಳ್ಳುವುದರಲ್ಲೂ ಅರ್ಥವಿಲ್ಲ. ತೀರಾ ಕಡಿಮೆ ಜನ ಮಾತಾಡುವ ಯಿದ್ದಿಶ್ ಭಾಷೆಯ ಕತೆಗಾರ ಸಿಂಗರ್ ಇವತ್ತು ಕನ್ನಡ ನೆಲದಲ್ಲಿ ಕನ್ನಡದ ಕತೆಗಾರರಷ್ಟೆ ಪರಿಚಿತ. ಯಾವ ಭಾಷೆಯಲ್ಲೆ ಆಗಲಿ ಜ್ಞಾನ, ಸಾಹಿತ್ಯ, ಮಾಹಿತಿ ಇರುವುದಾದರೆ ಅದನ್ನು ಕಲಿಯಲು ಆಸಕ್ತರು ಇದ್ದಾರೆಂದರೆ ಅದು ಉಳಿಯಬೇಕು. ಕೆಎಸ್​ಎಸ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಕೃತ ಕಲಿಕಾ ಕೇಂದ್ರವಾಗಲಿ ಎಂಬುದು ಅದರ ಹಳೆಯ ವಿದ್ಯಾರ್ಥಿಗಳ ಮತ್ತು ಹಿರಿಯರ ಆಶಯ.
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
