ಸೇವಾಲಾಲರು ಕರ್ನಾಟಕದ ಪ್ರಮುಖ ದಾರ್ಶನಿಕರಲ್ಲಿ ಒಬ್ಬರು. ಬಂಜಾರರ ಆರಾಧ್ಯದೈವವಾದ ಅವರು, ಜನಾಂಗದಲ್ಲಿ ಅಪಾರ ಬದಲಾವಣೆ ತಂದು ಸಾಂಸ್ಕೃತಿಕ ರಾಯಭಾರಿಯಾದರು. ಸೇವಾಲಾಲ್ ಜಯಂತಿ ಹಿನ್ನೆಲೆಯಲ್ಲಿ ಬಂಜಾರ ಜನಾಂಗದ ವಿಶೇಷತೆ ಹಾಗೂ ಸೇವಾಲಾಲರ ಜೀವನ-ಸಾಧನೆಗಳ ಅವಲೋಕನ ಇಲ್ಲಿದೆ.
ಡಾ.ಬಿ.ಆರ್. ಹರೀಶ ನಾಯಕ
ಕ್ಯಾಪ್ಟನ್ ಜಾನ್ ಬ್ರಿಗ್ ಅವರು ಪರ್ಶಿಯನ್ ಭಾಷೆಯ ಅನುವಾದಕರು, ಹೈದರಾಬಾದಿನವರು. ಅವರು 1814ರ ಜನವರಿಯಲ್ಲಿ ವಿಲಿಯಂ ಬಾಂಬೆ ಅವರಿಗೆ ‘ಬಂಜಾರ ಜನಾಂಗದ ಉಗಮ, ಇತಿಹಾಸ ಮತ್ತು ಜನಾಂಗದ ಮಾನವ ಶಾಸ್ತ್ರ’ ವಿಷಯವಾಗಿ ಸುದೀರ್ಘ ಪತ್ರ ಬರೆದಿದ್ದಾರೆ. ‘ಅಂದಿನ ಡೆಕ್ಕನ್ ಪ್ರದೇಶದಲ್ಲಿ ಅಂದರೆ ಸತ್ಪುರ – ವಿಂಧ್ಯಾಚಲ ಪರ್ವತಗಳಿಂದ ಪ್ರಾರಂಭವಾಗಿ ನರ್ಮದಾ ನದಿಯಿಂದ ಹಿಡಿದು ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ಹಾಗೂ ಈಗಿನ ದಕ್ಷಿಣ ಭಾರತದವರೆಗೆ ಒಂದು ಜನಾಂಗವಿತ್ತು. ಒಂದೇ ಭಾಷೆ, ಅದ್ಭುತವಾದ ಬಣ್ಣ ಬಣ್ಣದ ಉಡುಗೆ ತೊಡುಗೆಗಳು, ನೋಡಲು ರಜಪೂತರಂತೆ ಬಲಿಷ್ಠ ದೇಹ, ಯಾವಾಗಲು ಕೈಯಲ್ಲಿ ಖಡ್ಗಗಳು, ಸಾಮಾನ್ಯವಾಗಿ ಕಾಡುಮೇಡು ಮತ್ತು ಜನವಸತಿ ಪ್ರದೇಶದಿಂದ ಹೊರಗಡೆ ಬಯಲಲ್ಲಿ ಡೇರೆ ಮತ್ತು ಜೋಪಡಿಗಳು, ಲಕ್ಷೋಪಲಕ್ಷ ಸಾಕುದನಗಳು, ಕಾವಲು ಕಾಯಲು ಬಲಿಷ್ಠವಾದ ಕಾಡುಜಾತಿಯ ನಾಯಿಗಳು, ಲಕ್ಷಗಟ್ಟಲೆ ದವಸಧಾನ್ಯಗಳು, ಅಕ್ಕಿ ಮೂಟೆಗಳು, ಸಾಂಬಾರ ಪದಾರ್ಥಗಳು, ಮೀನು ಮತ್ತು ಲವಣಗಳು, ಅಲ್ಲದೆ ಅವರಿಂದ ಕದಿಯಲು ಕಳ್ಳರ ದಂಡು, ಎದುರಿಸಲು ಸದಾ ಪಹರೆ ಕಾಯುವ ಸೈನಿಕರ ದಂಡು, ಅವರಲ್ಲೆ ಒಬ್ಬ ನಾಯಕ, ಆತನ ಆಜ್ಞೆ ಎಲ್ಲರೂ ಪಾಲಿಸಬೇಕು, ಹೆಂಗಸರು ಮತ್ತು ಮಕ್ಕಳು ತುಂಬಾ ಸುಂದರವಾಗಿರುತ್ತಿದ್ದರು, ಮೈತುಂಬ ವಿವಿಧ ಬಣ್ಣಗಳಿಂದ ಅಲಂಕರಿಸಿದ ಆಭರಣಗಳನ್ನು ಧರಿಸುತ್ತಿದ್ದರು’ ಎಂದು ಪತ್ರದಲ್ಲಿ ಬಣ್ಣಿಸಿದ್ದರು.
ಹಾಗೆಯೇ ಕ್ಯಾಪ್ಟನ್ ಬ್ರಿಗ್ ಹೇಳುವಂತೆ ಬಂಜಾರ ಜನಾಂಗವು 14 ನೇ ಶತಮಾನದಲ್ಲಿ ಉತ್ತರ ಭಾರತ ಅದರಲ್ಲೂ ದೆಹಲಿ ಸುಲ್ತಾನರ ಆಳ್ವಿಕೆ ಸಂದರ್ಭದಲ್ಲಿ ಹಲವು ಹಿಂದೂ ರಾಜರ ಬಳಿ ಸೈನಿಕರಾಗಿದ್ದರಲ್ಲದೆ ಯಾವುದೇ ರಾಜ – ಮಹಾರಾಜರು ಯುದ್ಧ ಕೈಗೊಳ್ಳಬೇಕು ಎಂದು ನಿರ್ಣಯಿಸಿದಲ್ಲಿ ನೂರಾರು ದಿನ ನಡೆಯುವ ಯುದ್ಧಕ್ಕೆ ದವಸ ಧಾನ್ಯಗಳು, ಆಯುಧಗಳು, ಬಟ್ಟೆಬರೆ ಇತ್ಯಾದಿಯನ್ನು ಸಾವಿರಾರು ಕಿಲೋಮಿಟರ್​ಗಟ್ಟಲೆ ದೂರದ ದುರ್ಗಮ ಹಾದಿ ಕ್ರಮಿಸಿ ಕಳ್ಳಕಾಕರಿಂದ ರಕ್ಷಿಸಿಕೊಂಡು ದನಗಳ ಮೇಲೆ ಸಾಗಿಸಿ ಊರೂರು ತಲುಪುತ್ತಿದ್ದರು. ಇವರಲ್ಲಿನ ಸಾಹಸ ಗುಣದಿಂದಾಗಿ ನೂರಾರು ರಾಜರುಗಳು ಯುದ್ಧಗಳನ್ನು ಗೆದ್ದರು. ಅಲ್ಲದೆ ದೆಹಲಿಯ ಮೊಹಮದ್ ತುಘಲಕ್ ದೌಲತಾಬಾದಿನಿಂದ ಡೆಕ್ಕನ್ ಅಂದರೆ ರಾಜಸ್ತಾನ – ಗುಜರಾತ್, ಪುಣೆ-ನಾಗಪುರದ ಪೇಶ್ವೆಗಳು, ಹೈದರಾಬಾದ್ ಮುಂತಾದ ಕಡೆ ದಂಡಯಾತ್ರೆ ಕೈಗೊಂಡಾಗ ಪ್ರಮುಖವಾಗಿ ಬಂಜಾರರೇ ಅಡ್ಡ ಬರುತ್ತಿದ್ದರು. ಇದನ್ನು ಅರಿತ ಔರಂಗಜೇಬನು ಬಂಜಾರರನ್ನು ತನ್ನ ಸೈನ್ಯದಲ್ಲಿ ಬಲವಂತವಾಗಿ ಸೇರಿಸಿಕೊಳ್ಳುತ್ತಾನೆ. ಒಪ್ಪದಿದ್ದಾಗ ಮಾರಣಹೋಮ ಮಾಡುತ್ತಾನೆ. 14ನೆ ಶತಮಾನದಿಂದ ರಾಜಮಹಾರಾಜರ ಪ್ರಮುಖ ಜೀವನಾಡಿಯಾಗಿದ್ದ ಬಂಜಾರರು, ದೇಶದ ಉದ್ದಕ್ಕೂ ಆಗಾಗ್ಗೆ ಬರುವ ಬರಗಾಲ ಅತಿವೃಷ್ಟಿ ಅನಾವೃಷ್ಟಿ ಸಂದರ್ಭದಲ್ಲಿ ದವಸ ಧಾನ್ಯಗಳು ಮತ್ತು ಅಕ್ಕಿಯನ್ನು ಸರಬರಾಜು ಮಾಡುತ್ತಿದ್ದರು.
1850ರ ಸಮಯ ಬ್ರಿಟಿಷರು ಆದಿವಾಸಿಗಳನ್ನು ಹದ್ದುಬಸ್ತಿನಲ್ಲಿಡಲು ಕ್ರಿಮಿನಲ್ ಟ್ರೖೆಬ್ ಆಕ್ಟ್ – ತಂದರು. ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಬಂಜಾರರು ಮಗ್ಗುಲಮುಳ್ಳಾಗಿದ್ದರಿಂದ ಇವರ ಮೇಲೆ ಕ್ರಿಮಿನಲ್ ಟ್ರೖೆಬ್ ಆಕ್ಟ್ ಪ್ರಯೋಗ ಮಾಡುತ್ತಾರೆ. ಉತ್ತಮ ಸ್ಥಿತಿಯಲ್ಲಿದ್ದ ಬಂಜಾರ ಜನಾಂಗದವರು ಬ್ರಿಟಿಷರ ಕ್ರೂರ ನೀತಿಯಿಂದ ಕಾಡುಮೇಡು ಬೆಟ್ಟಗುಡ್ಡಗಳಲ್ಲಿ ವಲಸೆ ಹೋಗುತ್ತಾರೆ ಮತ್ತು ಸಂಪೂರ್ಣವಾಗಿ ವ್ಯಾಪಾರ ವಹಿವಾಟನ್ನು ಬಂದ್ ಮಾಡುತ್ತಾರೆ. ಹೀಗೆ ಒಂದು ಜನಾಂಗವು ನಾಗರಿಕತೆಯಿಂದ ದೂರವಾಗಿದ್ದನ್ನು ರಾಯ್ ಬರ್ಮನ್ ಎಂಬ ಇತಿಹಾಸಕಾರ ಉಲ್ಲೇಖಿಸುತ್ತಾರೆ. ಹತ್ತನೆಯ ಶತಮಾನದಿಂದಲೂ ಇರುವ ಪ್ರಾಚಿನ ಬುಡಕಟ್ಟು ಜನಾಂಗವೆಂದರೆ, ಬಂಜಾರರು ಅಥವಾ ಲಂಬಾಣಿಗರು. ನೋಡಲು ಬಹುರೂಪಿಗಳಂತೆ ಕಾಣುವ ಇವರನ್ನು ಬಂಜಾರ, ಗೋರ್ ಬಂಜಾರ, ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ, ಲಭಾನಾ, ಲಂಬಾಡ, ಲದಣಿಯಾ, ಗವಾರಿಯಾ, ಗೋರಮಾಟಿ, ಬಾಜಿಗಾರ ಬಂಜಾರ, ಸಿಖ್ ಬಂಜಾರ, ವಂಜಾರಾ ಎಂಬ ಅನ್ವರ್ಥನಾಮದಿಂದ ಗುರುತಿಸಲಾಗುತ್ತದೆ. ಬಂಜಾರರ ಭಾಷೆ, ಸಂಸ್ಕೃತಿಯು ಲಿಖಿತವಾಗಿಲ್ಲದಿದ್ದರಿಂದ ಮತ್ತು ಕೇವಲ ಮೌಖಿಕ ಸಾಹಿತ್ಯವಿದ್ದುದರಿಂದ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ರಾಜಸ್ತಾನ, ಗುಜರಾತ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ್ಲ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.
ಬಂಜಾರರ ವಿಶೇಷವೆಂದರೆ ದೇಶಾದ್ಯಂತ ಏಕಭಾಷೆ. ಅದನ್ನು ಗೋರ್​ಬೊಲಿ (ಲಿಪಿ ಇಲ್ಲದ ಭಾಷೆ)ಎನ್ನುತ್ತಾರೆ. ಆಚಾರ, ವಿಚಾರ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ವಾಗಿದೆ. ಅಲ್ಲದೆ ದೇಶದುದ್ದಕ್ಕೂ ಒಂದೇ ತೆರನಾದ ಉಡುಗೆ ತೊಡುಗೆಗಳನ್ನು ಧರಿ ಸುವ ಏಕೈಕ ಜನಾಂಗವಾಗಿದೆ. ವಿವಿಧ ರಾಜ್ಯಗಳಲ್ಲಿ ಬಂಜಾರರು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿಸಲ್ಪಟ್ಟಿದ್ದು ಅಂದಾಜು 10 ಕೋಟಿ ಜನಸಂಖ್ಯೆ ಇದೆ.
(ಲೇಖಕರು ಹಿರಿಯ ಕೆಎಎಸ್ ಅಧಿಕಾರಿ ಮತ್ತು ಕರ್ನಾಟಕ ಬಂಜಾರ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ)
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನ ಕೊಪ್ಪದ ಭೀಮಾನಾಯ್ಕ- ಭೀಮಣಿಯಾಡಿ ದಂಪತಿಗೆ 1739ರ ಫೆಬ್ರವರಿ 15 ರಂದು ಸೇವಾಲಾಲರು ಜನಿಸುತ್ತಾರೆ. ಈ ದಂಪತಿ ಶಿರಸಿ ಮಾರಿಕಾಂಬೆ ದೇವಿಯ ಪರಮಭಕ್ತರಾಗಿದ್ದರು. ಬಾಲ್ಯದಿಂದಲೂ ಚುರುಕಾಗಿದ್ದ ಸೇವಾಲಾಲರು ಮರಿಯಮ್ಮದೇವಿ ಆಶೀರ್ವಾದದಿಂದ ಸಕಲವನ್ನು ಬಲ್ಲ ತತ್ವಜ್ಞಾನಿಯಾದರು.
ಬಾಲಬ್ರಹ್ಮಚಾರಿಯಾಗಿ ತಪಸ್ಸು ಧ್ಯಾನ, ಭಕ್ತಿಯಿಂದ ಅಧ್ಯಾತ್ಮದ ಕಡೆ ವಾಲುತ್ತಾರೆ. ಬಂಜಾರರು ಊರಿಂದ ಊರಿಗೆ ಹೋಗುತ್ತಿದ್ದರಿಂದ ಧಾರ್ವಿುಕ ಭಾವನೆಗಳಿಗೆ ಮನ್ನಣೆ ಕೊಡುತ್ತಿರಲಿಲ್ಲ. ಇವರಲ್ಲಿನ ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಯತ್ನಿಸಿದ ಸೇವಾಲಾಲರು ವಿದ್ಯಾಭ್ಯಾಸ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಪ್ರೇರೇಪಿಸುತ್ತಾರೆ. ಸೇವಾಲಾಲರು ಕುಟುಂಬದೊಂದಿಗೆ ಒಂದು ಕಡೆ ನೆಲೆ ನಿಲ್ಲದೆ ತೋಳಾರಾಮ ಎಂಬ ಕುದುರೆಯನ್ನೇರಿ ಲೋಕಸಂಚಾರ ಕೈಗೊಳ್ಳುತ್ತಾರೆ. ಕರ್ನಾಟಕದ ಭಾಯಾಗಡ್​ನಲ್ಲಿ ಬಾಲ್ಯವನ್ನು ಕಳೆದು ತದನಂತರ ಆಂಧ್ರದ ಗುತ್ತಿಯಲ್ಲಿ ಸೇವಾಗಡ್ ಸ್ಥಾಪಿಸಿ, ಬಳ್ಳಾರಿಯಲ್ಲಿ ಸ್ವಲ್ಪ ಕಾಲ ನೆಲೆ ನಿಂತು ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಪೋರಾಗಡ್​ನಲ್ಲಿ ಮಟ್ಟೊ ಸ್ಥಾಪಿಸುತ್ತಾರೆ. ದೆಹಲಿಯಲ್ಲಿ ಅದಾಗಲೆ ಲಕಿಶಾಗಡ್ ಎಂಬ ಸ್ಥಳವಿದ್ದು ಸೇವಾಲಾಲ್​ರ ಕೃಪೆಯಿಂದ ನಾಲ್ಕು ಪುಣ್ಯ ಕ್ಷೇತ್ರಗಳನ್ನು ಚಾರ್​ಧಾಮ್ ಮಾದರಿಯಲ್ಲಿ ಸ್ಥಾಪಿಸುತ್ತಾರೆ.
ಅನೇಕ ಪವಾಡಗಳನ್ನು ಮಾಡುತ್ತಾರೆ. ಹೈದರಾಬಾದಿನ ನಿಜಾಮರಲ್ಲಿ ಭಕ್ತಿಸುಧೆ ಹರಿಸುತ್ತಾರೆ. ನಿಜಾಮರು ಹೈದರಾಬಾದಿನ ಬಂಜಾರ ಹಿಲ್ ಅನ್ನು ಬಳುವಳಿಯಾಗಿ ನೀಡುತ್ತಾರೆ. ಕಾಲಕ್ರಮೇಣ ಮಹಾರಾಷ್ಟ್ರದತ್ತ ವಲಸೆ ಹೋಗುವ ಸೇವಾಲಾಲರು ಅಲ್ಲಿ ಭಕ್ತಿಕ್ರಾಂತಿ ಮಾಡುತ್ತಾರೆ. ಬಂಜಾರರು ಹುಟ್ಟು ಮಾಂಸಾಹಾರಿಗಳು. ಆದರೆ ಸೇವಾಭಾಯ್ರು ಜೀವನಪೂರ್ತಿ ಅವಿವಾಹಿತರಾಗಿ ಸಸ್ಯಾಹಾರಿಗಳಾಗಿದ್ದರು ಮತ್ತು ಕುಡಿತದಿಂದ ದೂರವಿದ್ದರು ಎಂಬುದು ಚರಿತ್ರಾರ್ಹ. ತ್ರಿಕಾಲಜ್ಞಾನಿಯಾಗಿದ್ದರಿಂದ ಆಧ್ಯಾತ್ಮದ ಭೋಧನೆ ಮತ್ತು ಚಿಂತನೆಗಳಿಂದ ವಿವಿಧ ರಾಜ್ಯಗಳ ಬಂಜಾರರಲ್ಲಿ ಏಕತೆ ಸ್ಥಾಪಿಸಲು ಯಶಸ್ವಿಯಾದರು.
ದೇಶಾದ್ಯಂತ ಏಕಭಾಷೆ, ಒಂದೇ ಸಂಸ್ಕೃತಿ, ಮದುವೆ, ಗೋತ್ರ, ಆಚಾರ ವಿಚಾರ, ಉಡುಗೆ ತೊಡುಗೆ ಅನುಸರಿಸುವ ಬಂಜಾರ ಜನಾಂಗವನ್ನು ಭಾರತೀಯ ಹಿಂದು ಸಂಸ್ಕೃತಿಯಲ್ಲಿ ಅಸ್ಮಿತೆ ಕಂಡುಕೊಂಡು ಭ್ರಾತೃತ್ವದಿಂದ ಬಾಳುವಂತೆ ಸೇವಾಲಾಲರು ಪ್ರೇರಣೆ ನೀಡುತ್ತಾರೆ. ಬಂಜಾರ ಸಮಾಜದಲ್ಲಿ ಬಡತನ ಹಾಸು ಹೊಕ್ಕಾಗಿದ್ದರೂ ಕಷ್ಟಪಟ್ಟು ದುಡಿದು ಎಲ್ಲ ಜಾತಿ, ಜನಾಂಗದವರ ಜತೆ ಶಾಂತಿ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಸೇವಾಲಾಲರ ಮಾರ್ಗದರ್ಶನ. 300 ವರ್ಷಗಳ ಹಿಂದೆ ಜನಾಂಗದ ಆರಾಧ್ಯದೈವವಾಗಿದ್ದ ಸೇವಾಭಾಯ್ ಅವರ ದೇವಸ್ಥಾನಗಳು ಅಂದರೆ ‘ಮಟ್ಟೊ’ ದೇಶದ ಪ್ರತಿ ತಾಂಡಗಳಲ್ಲೂ ಇದೆ.
ಬುದ್ಧ, ಬಸವ, ಕಬೀರ, ಗುರುನಾನಕರಂತೆ ಸೇವಾಲಾಲರು ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಜೀವನದ ಮೌಲ್ಯಗಳನ್ನು ಜಗತ್ತಿಗೆ ಸಾರಿ ಹೇಳಿದರೂ ಇತಿಹಾಸದ ಪುಟಗಳಲ್ಲಿ ದಾಖಲಾಗದಿರುವುದು ದುರದೃಷ್ಟಕರ. ಅಂತಿಮವಾಗಿ, ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಪೋರಾಗಡ್ ಎಂಬಲ್ಲಿ ಸೇವಾಲಾಲರು ಸಂಧ್ಯಾಕಾಲ ಕಳೆದು ದೇಹ ತ್ಯಜಿಸುತ್ತಾರೆ. ಅವರ ಪೂರ್ವಿಕರಾದ ಶ್ರೀ ರಾಮರಾಜ ಮಹಾರಾಜರು ಅವರ ಪರಂಪರೆ ಮುಂದುವರಿಸಿದ್ದು ಕಳೆದ ವರ್ಷ ನಿರ್ವಾಣರಾಗಿದ್ದಾರೆ. ಮಹಾರಾಷ್ಟ್ರ ಸರಕಾರವು 500 ಕೋಟಿ ರೂ. ಬಿಡುಗಡೆ ಮಾಡಿ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿದೆ.
ರಾಜಋಷಿ, ರಾಜಗುರು, ಲಾಲ್ ಮೊತಿವಾಳೊ, ಹೀರಾ ಮೊತಿ ವಾಳೊ, ಬಂಜಾರರ ಆರಾಧ್ಯ ದೈವದಂತಿದ್ದ ಸೇವಾಲಾಲರು ಸಮುದಾಯದ ಸೂರ್ಯನಂತಿದ್ದರು. ಅವರ ಅವತಾರಗಳು ಯಶೋಗಾಥೆಗಳು, ಜೀವನ ತತ್ವಗಳು ಲಂಬಾಣಿಗರ ಹಾಡುಗಳಲ್ಲಿ, ಸಾಹಿತ್ಯದಲ್ಲಿ ಕುಣಿತದಲ್ಲಿ ಹಾಸುಹೊಕ್ಕಾಗಿವೆ. ಅವರ ಒಂದು ವಚನ ಬಂಜಾರ ಬೋಲಿಯಲ್ಲಿ ಹೀಗಿವೆ.
ಕೊರಗೋರೆನ್ ಸಾಯಿವೇಸ/ ಜೇವ ಜಿನಗಾಗಿನ ಸಾಯಿವೇಸ/ ಕಿಡಿಮಕೊಡಾನ ಸಾಯಿವೇಸ/ ಸಾರಿ ಜಗೇನ ಸಾಯಿವೇಸ ‘ಪ್ರತಿ ಮನುಷ್ಯನಿಗೂ, ಪ್ರಾಣಿ ಪಕ್ಷಿಗಳಿಗೂ ಮತ್ತು ಸಕಲ ಜೀವಾತ್ಮರಿಗೂ ಒಳ್ಳೆಯದಾಗಲಿ, ಸಾಮರಸ್ಯ ಸಹಬಾಳ್ವೆಯಿಂದ ಬದುಕಲಿ’ ಮತ್ತೊಂದು ವಚನದಲ್ಲಿ ಹೀಗೆ ಹಾರೈಸುತ್ತಾರೆ
ಸತ್ಯ ಧಮೇನ ಆಂಗ ಲಾವೋ/ ಭೂಕೆ ಜೇನ ಖಾಣೊ ಖರಾವೊ/ ತರಸೇವಾಳೆನ ಪಾಣಿ ಪರಾವೋ/ ಕಾಮ ಕ್ರೊದೇರಿ ಧೂಣಿ ಬಾಳೋ
‘ಸತ್ಯಧರ್ಮ ನಿಮ್ಮ ಉಸಿರಾಗಿರಲಿ. ಹಸಿದವರಿಗೆ, ಬಾಯಾರಿದವರಿಗೆ ಅನ್ನ ನೀರು ಕೊಡಿ, ಕಾಮಕ್ರೋಧವನ್ನು ಸುಟ್ಟು ಬೂದಿ ಮಾಡಿ’
ಭಾಯಗಡ್ ಎಂಬ ಕೂಡಲ ಸಂಗಮ
ಸೇವಾಲಾಲರು ಕರ್ನಾಟಕದ ದಾರ್ಶನಿಕರಲ್ಲಿ ಒಬ್ಬರು. ಬಸವತತ್ವವನ್ನು ಬೋಧಿಸಿದ ಅವರು ಸರ್ವರ ಶ್ರೇಯಸ್ಸಿಗೆ ದುಡಿದರು. ಕರ್ನಾಟಕ ಸರ್ಕಾರವು 2018 ರಿಂದ ಅಧಿಕೃತವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸೇವಾಲಾಲ್ ಜಯಂತ್ಯುತ್ಸವ ಹಮ್ಮಿಕೊಳ್ಳುತ್ತಿದೆ. ಅವರ ಜನ್ಮಸ್ಥಳವಾದ ಹೊನ್ನಾಳಿ ತಾಲೂಕಿನ ಸೂರಗೊಂಡನ ಕೊಪ್ಪವನ್ನು ಕೂಡಲ ಸಂಗಮದಂತೆ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ಫೆಬ್ರವರಿ 15ರಂದು ಅಪಾರ ಭಕ್ತಾದಿಗಳು ಸೇವಾಲಾಲರ ದರ್ಶನ ಪಡೆಯುತ್ತಾರೆ. ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಸಹ್ಯಾದ್ರಿ ಶ್ರೇಣಿಯಲ್ಲಿ ಬರುವ ಭಾಯಗಡ್ ಲಂಬಾಣಿಗರ ಯಾತ್ರಾಸ್ಥಳದ ಜತೆಗೆ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
