ವಿಜಯವಾಣಿ ಸುದ್ದಿಜಾಲ ಮೈಸೂರು
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾ ನಾಥ ಮಂಗಳವಾರ ಸಂಜೆ ಮೈಸೂರಿನಲ್ಲಿ ಇಹಲೋಕ ತ್ಯಜಿಸಿದರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅಜರಾಮರವಾಗಿ ಉಳಿಯುವಂತಹ ಮೇರು ವ್ಯಕ್ತಿತ್ವ ಅವರದ್ದು.
ಉನ್ನತ ಶಿಕ್ಷಣ ಪಡೆದ ಬಳಿಕ ಕೆಲಕಾಲ ಅಧ್ಯಾಪಕ ವೃತ್ತಿ ಮಾಡಿದರು. ನಂತರ ಪೂರ್ಣಪ್ರಮಾಣದ ಸರೋದ್ ವಾದಕರಾದರು. ಕೋಲ್ಕತಾದ ಉಸ್ತಾದ್ ಅಲಿ ಅಕ್ಬರ್ ಖಾನ್​ರಲ್ಲಿ ಶಿಷ್ಯತ್ವ ಸ್ವೀಕರಿಸಿದರು. ನಂತರದಲ್ಲಿ ಪಂಡಿತ್ ರವಿಶಂಕರ್ ಹಾಗೂ ಅವರ ಪತ್ನಿ ಅನ್ನಪೂರ್ಣಾದೇವಿ ಅವರಿಂದಲೂ ಸಂಗೀತ ಶಿಕ್ಷಣ ಪಡೆದರು.
ಬಾಲ್ಯ:ರಾಜೀವ್ ತಾರಾನಾಥರ ತಂದೆ ಪ್ರಸಿದ್ಧ ಸುಧಾರಕ, ಅಧ್ಯಾತ್ಮ ಚಿಂತಕ ಪಂಡಿತ್ ತಾರಾನಾಥರು. ಇವರು ಕೈಲಾಸಂರಂಥ ದಿಗ್ಗಜರಿಗೆ ಗುರುಸ್ಥಾನದಲ್ಲಿದ್ದವರು. ಬಹಳ ದಶಕಗಳು ಬ್ರಹ್ಮಚಾರಿಯಾಗಿದ್ದ ತಾರಾನಾಥರು ಆಶ್ರಮವಾಸಿಯಾದ ಶಿಷ್ಯೆಯನ್ನು ಹರೆಯ ಕಳೆದ ಮೇಲೆ ವಿವಾಹವಾದರು. ಅವರಿಬ್ಬರ ಮಗನೇ ರಾಜೀವ್ ತಾರಾನಾಥ್. ಬಾಲ್ಯವೆಲ್ಲ ರಾಯಚೂರು ಜಿಲ್ಲೆಯ ಕೃಷ್ಣಾನದಿ ದಂಡೆಯ ಮೇಲಿದ್ದ ಪ್ರೇಮಾಯತನ ಆಶ್ರಮದಲ್ಲಿ ಕಳೆಯಿತು (ಜನನ: 1932ರ ಅಕ್ಟೋಬರ್ 17). ಸಂಗೀತ, ಭಜನೆ, ಸಾಹಿತ್ಯ, ತತ್ತ ್ವ ಚಿಂತನೆಗಳು ಅಲ್ಲಿಂದಲೇ ಆರಂಭವಾದವು.
ಚಿನ್ನದ ಪದಕ ವಿದ್ಯಾರ್ಥಿ:ರಾಜೀವ್ ಓದಿನಲ್ಲೂ ಮುಂದಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿ (ಮೊದಲ ರ್ಯಾಂಕ್) ಪೂರ್ಣಗೊಳಿಸಿದರು. ಮೈಸೂರು ವಿವಿಯಲ್ಲಿ ಎಂ.ಎ. ಇಂಗ್ಲಿಷ್ ವಿಷಯದಲ್ಲಿ ಚಿನ್ನದ ಪದಕ ಸಮೇತ ಮೊದಲ ರ್ಯಾಂಕ್ ಪಡೆದು ಪಾರಮ್ಯ ಮೆರೆದಿ ದ್ದರು. ಪ್ರೊ.ಸಿ.ಡಿ.ನರಸಿಂಹಯ್ಯ ಮಾರ್ಗದರ್ಶನದಲ್ಲಿ ‘ಇಮೇಜ್ ಇನ್ ಪೊಯೆಟ್ರಿ ಆಫ್ ಟಿ.ಎಸ್. ಈಲಿಯೆಟ್’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ವೃತ್ತಿ ಬದುಕಿನಲ್ಲಿ ಸಾಧನೆ:ರಾಯಚೂರಿನಲ್ಲಿ ರಾಜೀವ್ ತಂದೆ ಸ್ಥಾಪಿಸಿದ್ದ ಹಮ್ ದರ್ದ್ ಕಾಲೇಜಿನಲ್ಲಿ 1963ರಲ್ಲಿ ಉಪನ್ಯಾಸಕರಾಗಿ ಬೋಧನಾ ವೃತ್ತಿ ಆರಂಭಿಸಿದರು. ಧಾರವಾಡ ಕರ್ನಾಟಕ ಕಾಲೇಜಿನಲ್ಲಿ 1964ರಲ್ಲಿ ವೃತ್ತಿ ಮುಂದುವರಿಸಿದರು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ (1965ರಿಂದ 1968), ತಿರುಚ್ಚಿಯ ರೀಜನಲ್ ಕಾಲೇಜ್ ಮತ್ತು ಜಮಾಲ್ ಮಹಮ್ಮದ್ ಕಾಲೇಜ್ (1968ರಿಂದ 1974), ಹೈದ್ರಾಬಾದ್​ನ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆಂಡ್ ಫಾರಿನ್ ಲಾಂಗ್ವೇಜಸ್​ನ ಇಂಗ್ಲಿಷ್ ವಿಭಾಗ ಮುಖ್ಯಸ್ಥರಾಗಿ (1974ರಿಂದ 1981) ಸೇವೆ ಸಲ್ಲಿಸಿದರು. ಯೆಮನ್ ದೇಶದ ಏಡನ್​ನಲ್ಲಿ ಆಂಗ್ಲ ಅಧ್ಯಾಪಕರಾಗಿ, ಪುಣೆಯ ಫಿಲ್ಮ್ ಇನ್ಸ್ ಸಿಟ್ಯೂಟ್​ನಲ್ಲಿ ಸಿನಿಮಾ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ರಾಜೀವ್ ಅವರು ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡರು.
ಸಾಹಿತ್ಯ ಲೋಕ:ಕನ್ನಡದಲ್ಲಿ ನವ್ಯಸಾಹಿತ್ಯ ಕಾಲ ಇದ್ದಾಗ ಅಡಿಗ, ಅನಂತಮೂರ್ತಿ, ಕೆ.ನರಸಿಂಹಮೂರ್ತಿ, ಇಂಥವರೊಡನೆ ಸಂಪರ್ಕದಲ್ಲಿದ್ದ ಸಾಹಿತಿ ರಾಜೀವರು. ಗೆಳೆಯರು ಸೇರಿ ಹರಟುವಾಗ ಇವರು ನೀಡಿದ ಕೆಲವು ಹೊಳಹುಗಳನ್ನು ಬಳಸಿ ತಾವು ಸಣ್ಣಕಥೆಗಳನ್ನು ರಚಿಸಿದ್ದಾಗಿ ಯು.ಆರ್. ಅನಂತಮೂರ್ತಿ ದಾಖಲಿಸಿದ್ದಾರೆ. ನಂತರ ಸರೋದ ವಾದನದ ಕಡೆ ವಾಲಿದ ಮೇಲೆ ಗುರುಗಳ ಆಜ್ಞೆಯಂತೆ ಸಾಹಿತ್ಯದ ಓದು, ಬರಹ, ಅಧ್ಯಾಪನವನ್ನು ಸಹ ಸಂಪೂರ್ಣ ಕೈಬಿಟ್ಟು ಸಂಗೀತದಸಾಧನೆಗೆ ತೊಡಗಿಸಿಕೊಂಡರು.
ಸಂಗೀತಕ್ಕೆ ಮೀಸಲು:ತಂದೆಯೇ ಮೊದಲ ಸಂಗೀತ ಗುರು ಇವರಿಗೆ. ಕೇವಲ 9 ವರ್ಷದವರಿದ್ದಾಗ ರಾಜೀವರು ಸಂಗೀತ ಕಛೇರಿ ನೀಡಿದ್ದರು. 20ನೇ ವಯಸ್ಸಿನಿಂದಲೇ ಆಕಾಶ ವಾಣಿಯ ಸಂಗೀತಗಾರರಾದ ಸಾಧನೆ ಇವರದ್ದು. ತಂದೆಯ ಬಳಿ ಕಲಿಯುವುದರೊಂದಿಗೆ ಬಾಲ್ಯದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಸಾಧನೆ ಮಾಡಿದರು.
ಸಿನಿಮಾ ಸಂಗೀತ ನಿರ್ದೇಶನ :ರಾಜೀವರ ಧ್ವನಿಸುರುಳಿಗಳು: ಮನನ ಮೆಡಿಟೇಶನ್: ಬಿಹಾಗ್ ಮತ್ತು ಭೈರವಿ; ಹಾರ್ವೇನಿ: ಸಿಂಧು ಭೈರವಿ ರಾಗಮಾಲಿಕೆ, ಕಾಫಿ ರಾಗದ ಹಲವು ಮುಖಗಳು; ರಸರಂಗ್; ರಿಫ್ಲೆಕ್ಷನ್ಸ್ ಅರೌಂಡ್ ನೂನ್: ತೋಡಿ ಮತ್ತು ಕಾಫಿ ರಾಗಗಳು; ಡೇ ಬ್ರೇಕ್ ಆಂಡ್ ಎ ಕ್ಯಾಂಡಲ್ ಎಂಡ್; ಭಾರತೀಯ ಶಾಸ್ತ್ರೀಯ ಸಂಗೀತ; ರಾಗ ನಟಭೈರವ್, ರಾಗ ಕೌಶಿ ಭೈರವಿ, ಭೈರವಿ; ಓವರ್ ದಿ ಮೂನ್: ರಾಗ ಚಂದ್ರ ನಂದನ; ರಾಗ ಅಹಿರ್ ಭೈರವ್, ರಾಗ ಚಾರುಕೇಶಿ; ಇನ್ ದಿ ಮಾಸ್ಟರ್ಸ್ ಟ್ರೆಡಿಷನ್: ರಾಗ್ ಬಸಂತ್ ಮುಖಾರಿ, ರಾಗ್ ಕೀರವಾಣಿ, ರಾಗ್ ಕೋಮಲ್ ದುರ್ಗಾ, ರಾಗ್ ಪುರಿಯಾ ಧನಶ್ರೀ ಮುಂತಾದವು.
ವಿದ್ವತ್ ಪೂರ್ಣ ಪುಸ್ತಕಗಳು:ರಾಜೀವ್ ತಾರಾನಾಥರ ಜೀವನ ಮತ್ತು ಸಾಧನೆಗಳ ಕುರಿತಾದ ಪುಸ್ತಕ ‘ಸರೋದ್ ಮಾಂತ್ರಿಕ’. ಕನ್ನಡದಲ್ಲಿ ಈ ಕೃತಿಯ ಲೇಖಕಿ ಕತೆಗಾರ್ತಿ ಸುಮಂಗಲಾ. 1989ರಿಂದ 1992ರ ಅವಧಿಯಲ್ಲಿ ರಾಜೀವ್ ತಾರಾನಾಥರು ಫೋರ್ಡ್ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್ ಅಲ್ಲಾಉದ್ದಿನ್ ಘರಾಣಾದ ಸಂಗೀತ ಪದ್ಧತಿಗಳ ಕುರಿತಾಗಿ ಸಂಶೋಧನೆ ನಡೆಸಿ ಆ ಘರಾಣದ ಬೋಧನೆಗಳ ಕುರಿತಾದ ವಿದ್ವತ್ ಪೂರ್ಣ ಗ್ರಂಥವನ್ನು ಪ್ರಕಟಿಸಿದ್ದಾರೆ.
ಸಂಗೀತ ನಿರ್ದೇಶನದ ಮೂಲಕವೂ ರಾಜೀವ್ ತಾರಾನಾಥ ಎಲ್ಲರ ಗಮನ ಸೆಳೆದಿದ್ದರು. ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಅನುರೂಪ, ಪೇಪರ್ ಬೋಟ್ಸ್, ಶೃಂಗಾರ ಮಾಸ, ಆಗುಂತಕ, ಮಲೆಯಾಳಂ ಸಿನಿಮಾಗಳಾದ ಕಡವು, ಪೊಕ್ಯೂವೇಯಿಲ್, ಕಾಂಚನಸೀತಾ ಸಿನಿಮಾಗಳಿಗೆ ಸಂಗೀತ ನೀಡಿ ಚಿತ್ರರಸಿಕರ ಮನಗೆದ್ದಿದ್ದರು. ಸರೋದ್ ವಾದನದ ಮೇಲೆ ಪ್ರಭುತ್ವ ಸಾಧಿಸಿದ್ದ ರಾಜೀವ್ ಅವರು, ಸಿಡ್ನಿಯ ಪ್ರಸಿದ್ಧ ಅಪೆರಾ ಹೌಸ್​ನಲ್ಲಿ ಸರೋದ್ ನುಡಿಸಿದ ಮೊದಲ ಭಾರತೀಯ ಎಂಬ ಹಿರಿಮೆಗೆ ಭಾಜನರಾಗಿದ್ದರು. ಯೆಮನ್ ದೇಶದ ಎಡನ್ ನಗರದ ದೂರದರ್ಶನ ಕೇಂದ್ರ ರಾಜೀವ್ ಅವರ ಕುರಿತು ‘ಫಿನ್ನನ್ ಮಿನ್- ಅಲ್-ಹಿಂದ್’ (ಭಾರತದ ಕಲಾಕಾರ) ಎಂಬ ಸಾಕ್ಷ ್ಯತ್ರ ನಿರ್ವಿುಸಿ ಗೌರವಿಸಿತ್ತು. ಇದು ಅವರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ರಾಗಗಳ ಜತೆ ಮಾಧುರ್ಯ:ರಾಜೀವರ ಸಂಗೀತ ಕಛೇರಿಗಳೆಂದರೆ ಅದು ನಾದದ ಹರಿವು ಮಾತ್ರವಲ್ಲ, ಸಾಗರದ ಭೋರ್ಗರೆತವೂ ಆಗಿತ್ತು. ಅವರು ಮೀಟುವ ರಭಸಕ್ಕೆ ಎಷ್ಟೋ ಸಲ ಸರೋದ್ ತಂತಿಗಳು ಸಂಪೂರ್ಣ ಶರಣಾಗಿಬಿಡುತ್ತಿದ್ದವು. ಕೇಳುಗರ ಹೃದಯದ ತಂತಿಯನ್ನು ಮೆಲುವಾಗಿ ಮೀಂಟಿ ರೋಮಾಂಚನಗೊಳಿಸುವಂಥ ಸಂಗೀತ ಅವರದು. ಅಲ್ಲಿ ಅಂತರಾತ್ಮದ ಹುಡುಕಾಟ, ಅಧ್ಯಾತ್ಮದ ಅನುಭವ, ನಾದದ ಅನಂತತೆಯೆಲ್ಲದರ ಅನಾವರಣವಾಗುತ್ತಿತ್ತು. ತಾರವು ಹೊರಹೊಮ್ಮಿಸುವ ರಾಗಗಳ ಕುರಿತಾಗಿ ಆಳವಾದ ಜ್ಞಾನ ಅವರದು. ಹೀಗಾಗಿ ರಾಗಗಳ ಜೊತೆ ಅವರು ಸಾಗುವಾಗ ಮಾಧುರ್ಯಕ್ಕೆ ಅಲ್ಲಿ ಬರವಿರುತ್ತಿರಲಿಲ್ಲ. ರಾಜೀವರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳು. ಅವರು ದಕ್ಷಿಣ ಭಾರತದಿಂದ ಜಾಗತಿಕ ಮನ್ನಣೆ ಗಳಿಸಿದ ಏಕೈಕ ಸರೋದವಾದಕ. 60ರ ದಶಕದಲ್ಲಿ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕರಾಗಿಯೂ ಗಮನಸೆಳೆದಿದ್ದರು.
ಪ್ರಶಸ್ತಿ-ಪುರಸ್ಕಾರ :ರಾಜೀವ್ ತಾರಾನಾಥರ ಮಹೋನ್ನತ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಅರಸಿ ಬಂದಿದ್ದವು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ, (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ರಾಜ್ಯ ಸರ್ಕಾರದ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (1998), ಗಾಯನ ಸಮಾಜದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2000), ಹಂಪಿ ಕನ್ನಡ ವಿವಿಯ ನಾಡೋಜ ಗೌರವ ಡಾಕ್ಟರೇಟ್ (2018), ಮೈಸೂರು ದಸರಾದಲ್ಲಿ ಪ್ರದಾನಿಸುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸಿ ್ತ (2018), ಕೇಂದ್ರ ಸರ್ಕಾರದ ಪದ್ಮಶ್ರೀ (2019), ಚಿತ್ರದುರ್ಗದ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ (2019)ಗೆ ಅವರು ಭಾಜನರಾಗಿದ್ದರು.
ರಾಯಚೂರು ನಂಟು:ಸ್ವಾತಂತ್ರ್ಯ ಹೋರಾಟದ ವೇಳೆಯೇ ಎಲ್ಲರಿಗೆ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ರಾಯಚೂರಿನಲ್ಲಿ ಹಮ್ ದರ್ದ್ ಶಾಲೆ ಸ್ಥಾಪಿಸಿ ಹೆಸರಾದವರು ಪಂಡಿತ್ ತಾರಾನಾಥರು. ರಾಜೀವ್ ತಾರಾನಾಥರಿಗೂ ರಾಯಚೂರು ಕಡೆಯ ನಂಟಿದೆ. ಪಂ.ತಾರಾನಾಥರು ಆಂಧ್ರದ ತುಂಗಭದ್ರಾ ಗ್ರಾಮವನ್ನು ವಾಸಸ್ಥಾನವಾಗಿಸಿಕೊಂಡಾಗ ಅಲ್ಲಿಗೂ ಪಂ.ರಾಜೀವ್ ತಾರಾನಾಥರು ಭೇಟಿ ನೀಡುತ್ತಿದ್ದರು. ರಾಯಚೂರಿನಲ್ಲಿ ಪಂ.ತಾರಾನಾಥ ಅವರ ಹೆಸರಿನಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, ಹಮ್ ದರ್ದ್ ಶಾಲೆ ಶತಮಾನೋತ್ಸವ ವರ್ಷಾಚರಣೆ ಸಂದರ್ಭ ಪಂ.ರಾಜೀವ್ ತಾರಾನಾಥ ಅವರನ್ನು 2019ರ ಡಿಸೆಂಬರ್ 27ರಂದು ನಗರದ ರಂಗಮಂದಿರದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಗೌರವಿಸಲಾಗಿತ್ತು. ಅದೇ ವೇಳೆ ಅವರು ಸರೋದ್ ನುಡಿಸುವ ಮೂಲಕ ರಾಯಚೂರಿನ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದ್ದರು.
ಪಂಡಿತ್ ರಾಜೀವ್ ತಾರಾನಾಥ್ ಅವರು ನಿಧನರಾದ ಸುದ್ದಿ ಕೇಳಿ ದುಖವಾಯಿತು. ಕನ್ನಡಿಗರಾದ ತಾರಾನಾಥ್ ಅವರು ತಮ್ಮ ಸರೋದ್ ಮಾಂತ್ರಿಕತೆಯಿಂದ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಅವರ ಅಗಲಿಕೆಯಿಂದ ಸಂಗೀತ ಲೋಕ ಬಡವಾದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
| ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ
ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ್ ರಾಜೀವ್ ತಾರಾನಾಥ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕರ್ನಾಟಕದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ. ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರುವೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜೀವ್ ತಾರಾನಾಥ್ ಕರ್ನಾಟಕದ ಹೆಮ್ಮೆಯ ದಿಗ್ಗಜ ಕಲಾವಿದರಲ್ಲಿ ಒಬ್ಬರು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯು ವಂತಹದ್ದು. ಅಂತಹ ಅದ್ಭುತ ಕಲಾವಿದ ವಿಧಿವಶರಾಗಿದ್ದು ನಮ್ಮ ದುರ್ದೈವ, ಅವರ ನಿಧನದಿಂದ ಕರ್ನಾಟಕದ ಸಾಂಸ್ಕೃತಿಕ ಲೋಕ ನಷ್ಟ ಅನುಭವಿಸಿದೆ.
| ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಖ್ಯಾತ ಸರೋದ್ ವಾದಕ, ಪಂಡಿತ್ ರಾಜೀವ್ ತಾರಾನಾಥ್ ಅವರು ತಮ್ಮ ಬದುಕಲ್ಲಿ ಬಹಳಷ್ಟು ಬಡಮಕ್ಕಳು ಹಾಗೂ ಶೋಷಿತ ವರ್ಗದ ಪ್ರತಿಭೆಗಳಿಗೆ ಉಚಿತವಾಗಿ ಸಂಗೀತ ಹೇಳಿಕೊಟ್ಟ ಮಹಾನ್ ಕಲಾವಿದರಾಗಿದ್ದರು. ಇತ್ತೀಚೆಗಷ್ಟೇ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ, ಸರ್ಕಾರದ ವತಿಯಿಂದ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬವರ್ಗದವರಿಗೆ ದೊರೆಯಲಿ.
| ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಬಿಡಿ: ಪ್ರಧಾನಿ ಮೋದಿ ಮನವಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × four =
Remember me
