ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಭಾನುವಾರ ಕರೆದಿದ್ದ ಸತ್ಯದರ್ಶನ ಸಭೆಯನ್ನು ಶ್ರೀ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ಸನ್ನಿಧಿಯಲ್ಲಿ ನಡೆಯಲು ಮಠಕ್ಕೆ ಸಂಬಂಧಪಟ್ಟವರು ಬಿಡದೇ ಇದ್ದುದರಿಂದ ಮಠದ ಮಹಾದ್ವಾರದ ಎದುರಿನಲ್ಲಿ ಯಶಸ್ವಿಯಾಗಿ ನಡೆಯಿತು. ಶ್ರೀ ದಿಂಗಾಲೇಶ್ವರರು ಹಲವು ಮಹತ್ವದ ಸಂಗತಿಗಳನ್ನು ಬಹಿರಂಗವಾಗಿ ಹೇಳುವ ಮೂಲಕ ತಮಗಾದ ಅನ್ಯಾಯ, ಅವಮಾನವನ್ನು ಸಾರ್ವಜನಿಕವಾಗಿ ತೆರೆದಿಟ್ಟು, ಭಕ್ತರ ಮನ ಗೆದ್ದರು. ಗಣ್ಯ ಭಕ್ತರೂ ಸ್ವಾಮಿಗಳನ್ನು ಬೆಂಬಲಿಸುವ ಮೂಲಕ ತಾವು ಮಠದ ಉನ್ನತಿಯನ್ನೇ ಬಯಸುತ್ತಿದ್ದೇವೆ ಎಂದು ಒತ್ತಿ ಹೇಳಿದರು.
ಹುಬ್ಬಳ್ಳಿ:ಮೂರುಸಾವಿರ ಮಠದ ಉತ್ತರಾಧಿಕಾರಿ ಮಾಡಿ ಎಂದು ನಾನು ಯಾರಿಗೂ ಗೋಗರೆದಿಲ್ಲ. ಬಾಲ್ಯದಲ್ಲಿಯೇ ಮಠ ಸೇರಿ ಸನ್ಯಾಸ ಸ್ವೀಕರಿಸಿ, ಜೀರ್ಣಾವಸ್ಥೆಯಲ್ಲಿದ್ದ ಚಿಕ್ಕ ಮಠಕ್ಕೆ ನೇಮಕಗೊಂಡು, ಜನರ ಪ್ರೀತಿ ವಿಶ್ವಾಸದಿಂದಲೇ ಬೆಳೆದು ಬಂದವನು ನಾನು. ಮೂರುಸಾವಿರ ಮಠದಲ್ಲಿ ಸಮಸ್ಯೆ ಉಂಟಾಗಿದೆ, ಪರಿಹಾರಕ್ಕೆ ನೆರವಾಗಿ ಎಂದು ಗೋಗರೆದವರೇ ನೀವು. ಮಠ ಮತ್ತು ಜಗದ್ಗುರುಗಳು ಸಂಕಷ್ಟದಲ್ಲಿದ್ದಾಗೆಲ್ಲ ನನ್ನ ನೆರವು ಅಪೇಕ್ಷಿಸಿದಿರಿ.
ನಿಮ್ಮ ನಿರ್ದೇಶನದಲ್ಲಿ ಪರಿಹರಿಸಿದವನು ನಾನು. ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ಆಗಬೇಕು ಎಂದು ಹಠಕ್ಕೆ ಬಿದ್ದು ನನ್ನನ್ನು ಒಪ್ಪಿಸಿದವರೇ ನೀವು. ಗಣ್ಯರ ಮನೆಗೆಲ್ಲ ಕರೆದೊಯ್ದು ಬಾಂಡ್ ಪೇಪರ್​ಗೆ ಸಹಿ ಮಾಡಿಸಿದವರು ನೀವು. ಗಣ್ಯರ ಸಮ್ಮುಖ ನೋಂದಣಿಗೆ ಒಪ್ಪಿದವರು ನೀವು. ಆದರೆ, ಎಲ್ಲ ಹಂತದಲ್ಲಿ ನನಗೆ ಅವಮರ್ಯಾದೆ ಆಗಿದೆ. 6 ವರ್ಷದಿಂದ ನನ್ನ ತೇಜೋವಧೆ ಮಾಡಲಾಗಿದೆ. ನನ್ನ ಅಪೇಕ್ಷೆ ಇರುವುದು ಇಷ್ಟೆ- ಮೂರುಸಾವಿರ ಮಠವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವುದು. ಮಠದ ಸಂಪತ್ತು ಬೇಕಿಲ್ಲ, ಅಧಿಕಾರ ಬೇಕಿಲ್ಲ. ಸೇವೆಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದೇನೆ.
ಇಂದಿನ ಪರಿಸ್ಥಿತಿಯಲ್ಲಿ ‘ನಿಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿಲ್ಲ’ ಎಂದು ಕರ್ತೃ ಗದ್ದುಗೆ ಎದುರು ಘೊಷಿಸಿಬಿಡಿ. ಮತ್ತೆ ಈ ವಿಷಯ ಪ್ರಸ್ತಾಪಿಸದೇ ಬಾಲೇಹೊಸೂರಿಗೆ ಹೊರಟುಹೋಗುತ್ತೇನೆ… ಭಾನುವಾರ ಮಧ್ಯಾಹ್ನ ಸುಡುಬಿಸಿಲಿನಲ್ಲಿ ಸತ್ಯದರ್ಶನ ಸಭೆಯಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೀಗೆ ಘೊಷಿಸಿದರು. ಪ್ರತಿಯೊಂದಕ್ಕೂ ದಾಖಲೆ, ವ್ಯಕ್ತಿ ಸಾಕ್ಷಿಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಸತ್ಯ ಘಟನಾವಳಿಗಳನ್ನು ವಿವರಿಸಿದರು.
ಮಠದ ಆವರಣದಲ್ಲಿ ಸತ್ಯದರ್ಶನ ಮಾಡಲು ಅವಕಾಶ ನೀಡದ ಕಾರಣ ಮಠದ ಎದುರಿಗೆ ವಾಹನವನ್ನೇರಿ ಸುಮಾರು 46 ನಿಮಿಷ ಮಾತನಾಡಿ, ತಮ್ಮನ್ನು ಉತ್ತರಾಧಿಕಾರಿ ಸ್ಥಾನಕ್ಕೆ ನೇಮಕಗೊಳಿಸುವ ಇಚ್ಛೆ ಇರದಿದ್ದರೆ ಮೂಜಗು ಅವರು ನೇರವಾಗಿ ಕರ್ತೃ ಗದ್ದುಗೆ ಎದುರು ಹೇಳಲಿ. ಈಗಲೇ ಇಲ್ಲಿಂದ ಬಾಲೆಹೊಸೂರಿನ ಮಠಕ್ಕೆ ಹೊರಡುತ್ತೇನೆ. ಹೀಗೆ ಬೀದಿಯಲ್ಲಿ ನಿಲ್ಲಿಸಿ ಅವಮಾನ ಮಾಡುವುದು ಬೇಡ ಎಂದರು. ನಾನು ಕರ್ತೃ ಗದ್ದುಗೆ ಎದುರು ಪ್ರಮಾಣ ಮಾಡಿ ಸತ್ಯದರ್ಶನ ಮಾಡಬೇಕೆಂದಿದ್ದೆ. ನಾನು ಸತ್ಯ ಹೇಳುತ್ತೇನೆ. ನನ್ನ ಸತ್ಯವನ್ನು ಸುಳ್ಳು ಎನ್ನುವವರು ಗದ್ದುಗೆ ಮುಂದೆ ಬರಲಿ ಎಂದು ಸವಾಲು ಹಾಕಿದ್ದೆ. ಸುಳ್ಳು ಹೇಳುವವರು ಯಾರೂ ಬರಲಿಲ್ಲ. ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಮೊದಲಿಗೆ ಸತ್ಯ ಯಾವುದೆಂಬುದನ್ನು ತೋರಿಸುವ ಪ್ರಯತ್ನ ಮಾಡಿದರು.
ಮೂಜಗು ಕರೆ:2006ರಲ್ಲಿ ಮೂಜಗು ಅವರು ನನಗೆ ಫೋನ್ ಮಾಡಿ, ನಾನು ಬಹಳ ತೊಂದರೆಯಲ್ಲಿದ್ದೇನೆ. ಯಾವುದೇ ಮಠಾಧೀಶರು ನನ್ನೊಂದಿಗೆ ಮಾತನಾಡುತ್ತಿಲ್ಲ, ಗೌರವ ಕೊಡುತ್ತಿಲ್ಲ. ಮಠಕ್ಕೆ ಭಕ್ತರೂ ಬರುತ್ತಿಲ್ಲ. ನೀವು ನನಗೆ ಬೆನ್ನೆಲುಬಾಗಿ ನಿಲ್ಲಿ. ಉತ್ತರಾಧಿಕಾರಿ ವಿವಾದದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆರ್ಥಿಕ ಸಮಸ್ಯೆಯೂ ಇದೆ. ಕಾನೂನು, ಸಾಮಾಜಿಕ ಮುಗ್ಗಟ್ಟು ಕಾಡುತ್ತಿವೆ. ಸಮಸ್ಯೆ ಬಗೆಹರಿಸಿ ಎಂದು ದುಃಖ ತೋಡಿಕೊಂಡಿದ್ದರು. ನಾನು ಆಗ ಬಸವ ಜಯಂತಿ ನಿಮಿತ್ತ ಮುಂಬೈನಲ್ಲಿ ಪ್ರವಚನ ನೀಡುತ್ತಿದ್ದೆ.
‘ನಾನು ಸಣ್ಣವ, ನಂಗೇಕೆ ಈ ಜವಾಬ್ದಾರಿ ಎಂದೆ. ನೀವೇ ಮಠದ ಸಮಸ್ಯೆ ಬಗೆಹರಿಸಲು ಸಮರ್ಥರು. ಬೇರೆ ಯಾರೂ ಬರುವುದಿಲ್ಲ’ ಎಂದು ಮೂಜಗು ಒತ್ತಾಯಿಸಿದರು. ಮುಂಬೈನ ಕಾರ್ಯಕ್ರಮ ಮೊಟಕುಗೊಳಿಸಿ, 2006ರ ಮೇ 30ಕ್ಕೆ ಮೂರುಸಾವಿರ ಮಠಕ್ಕೆ ಬಂದೆ. ಅಲ್ಲಿಂದ 2009 ಆ. 4ರವರೆಗೆ ಮಠದ ನ್ಯಾಯ ಬಗೆಹರಿಸಲು ಮೂಜಗು ಅವರ ಬೆನ್ನೆಲುಬಾಗಿ ನಿಂತುಕೊಂಡಿದ್ದೆ.
ಸಿರಿಗೆರೆ ಶ್ರೀ ಪ್ರವೇಶ:ನಾನು ಸಣ್ಣವನಾಗುತ್ತೇನೆ. ದೊಡ್ಡವರು ಯಾರಾದರೂ ಮಾರ್ಗದರ್ಶನಕ್ಕೆ ಬೇಕೆಂದು ಆ ಸಂದರ್ಭದಲ್ಲಿ ಮೂಜಗು ಅವರಿಗೆ ಸಲಹೆ ನೀಡಿದ್ದೆ. ಸಿರಿಗೆರೆಯ ಜಗದ್ಗುರುಗಳ ಬಳಿ ಮೂಜಗು ಅವರನ್ನು ಕರೆದುಕೊಂಡು ಹೋಗಿ, ಮೂರುಸಾವಿರ ಮಠದ ನ್ಯಾಯ ಇತ್ಯರ್ಥ ಪಡಿಸುವಂತೆ ಪ್ರಾರ್ಥಿಸಿದ್ದೆ. ಆಗ ಅವರು , ನೀವೆಲ್ಲ ಬದ್ಧತೆಯಿಂದ ಇರುವ ಸ್ವಾಮಿಗಳಲ್ಲ. ನಿಮ್ಮಂತವರೊಂದಿಗೆ ಏನೇ ಮಾಡಿದರೂ ಕಷ್ಟ ಎಂದು ಹಿಂಜರಿದರು. ಉತ್ತರ ಕರ್ನಾಟಕದವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಒಂದು ಅವಕಾಶ ನೀಡುವಂತೆ ಅವರ ಮನವೊಲಿಸಿದೆ. ನಂತರ ಅವರ ಮಾರ್ಗದರ್ಶನದಲ್ಲಿ ವ್ಯಾಜ್ಯ ಪರಿಹಾರ ನಡೆದಿತ್ತು.
ಮುಂದೆ ಬೆಂಗಳೂರು ಹೈಕೋರ್ಟ್​ನಿಂದ ವ್ಯಾಜ್ಯ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತು. ಸುಪ್ರಿಂ ಕೋರ್ಟ್ ಕೋಲ್ಕತ್ತಾದ ಚಿತ್ತತೋಷ ಮುಖರ್ಜಿ ಎಂಬುವವರನ್ನು ಆರ್ಬಿಟ್ರೇಟರ್ ನೇಮಿಸಿ, ವಾದ-ವಿವಾದ ಆಲಿಸಿ ತೀರ್ಮಾನ ನೀಡುವಂತೆ ಸೂಚಿಸಿತು. ಮಠದ ಉತ್ತರಾಧಿಕಾರಿ ಸಮಸ್ಯೆ ಮುಂದಿಟ್ಟು ಶ್ರೀ ರುದ್ರಮುನಿ ಸ್ವಾಮಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಇನ್ನುಳಿದ ಪೂಜ್ಯರ ಮಾರ್ಗದರ್ಶನದಲ್ಲಿ ಮಠದ ವಿವಾದ ಬಗೆಹರಿಸುವ ಪ್ರಸಂಗ ಬಂತು.
ಹಣ ಕೊಡಿಸಿದೆ:ನಾನು ನ್ಯಾಯ ಬಗೆಹರಿಸುವ ವೇಳೆ ಹಣಕಾಸಿನ ವ್ಯವಹಾರ ಬಂತು. ರುದ್ರಮುನಿ ಸ್ವಾಮಿ ಅವರಿಗೆ 1 ಕೋಟಿ ರೂ. ಕೊಡಬೇಕು, ತಿಪಟೂರಿನ ಮಠ ಬಿಟ್ಟುಕೊಡಬೇಕೆಂದು ನಿರ್ಣಯ ಆಗಿತ್ತು. ಮೂರುಸಾವಿರ ಮಠದಲ್ಲಿ 1 ಲಕ್ಷ ರೂ. ಸಹ ಇರಲಿಲ್ಲ. ಆಗ ಮೂಜಗು ಅವರು, ನೀವೇ ಇದಕ್ಕೆ ಸಮರ್ಥರು. ಹಣಕಾಸಿನ ಸಮಸ್ಯೆಯನ್ನೂ ಬಗೆಹರಿಸಿ ಎಂದು ನಮ್ಮಲ್ಲಿ ದುಂಬಾಲು ಬಿದ್ದರು.
ನಾನು ಹಾವೇರಿ ಮತ್ತು ಬ್ಯಾಡಗಿಯ ಇಬ್ಬರು ಭಕ್ತರಿಗೆ ಫೋನ್ ಮಾಡಿದೆ. ಅವರು 50 ಲಕ್ಷ ರೂ. ಕೊಟ್ಟರು. ಮುಂಬೈನ ಒಬ್ಬ ಭಕ್ತರು 15 ಲಕ್ಷ ರೂ. ನೀಡಿದರು. ಲಕ್ಷೆ್ಮೕಶ್ವರದಲ್ಲಿ ಇಬ್ಬರು ಹಿರಿಯರಿಂದ 15 ಲಕ್ಷ ರೂ., ಹಾವೇರಿಯ ಒಬ್ಬ ದೊಡ್ಡ ವ್ಯಾಪಾರಿಯಿಂದ 5 ಲಕ್ಷ ರೂ., ಬೆಳಗಾವಿ ಭಕ್ತರಿಂದ 5 ಲಕ್ಷ ರೂ., ನೂಲ್ವಿಯ ಭಕ್ತರೊಬ್ಬರಿಂದ 5 ಲಕ್ಷ ರೂ., ಬಾಲೆಹೊಸೂರಿನ ಒಬ್ಬ ರೈತನಿಂದ 5 ಲಕ್ಷ ರೂ. ಪಡೆದು, ಒಟ್ಟು 1 ಕೋಟಿ ರೂ. ನೀಡಿ ಮಠದ ನ್ಯಾಯ ಬಗೆಹರಿಸಿದ್ದೇನೆ.
ಮೂಜಗು ಅವರಿಗೆ ಕೆಲವರು ಕೈಗಡ ಕೊಟ್ಟಿದ್ದರು. ಕೋಲ್ಕತ್ತಾಕ್ಕೆ ಹೋಗಿ ಬರುವ ಖರ್ಚು ಎಲ್ಲ ಸೇರಿ ಬಾಲೆಹೊಸೂರಿನ ಮಠದ ಸ್ವಂತ ಹಣ 25 ಲಕ್ಷ ರೂ.ಗಳನ್ನೂ ಕೊಟ್ಟಿದ್ದೇನೆ. ಈ ಹಣವನ್ನು ಮಠಕ್ಕೆ ದೇಣಿಗೆಯೆಂದು ಕೊಟ್ಟಿರಲಿಲ್ಲ. ಮಠದ ವಿವಾದ ಮುಗಿದ ಮೇಲೆ ಮೂಜಗು ಅವರು ವಾಪಸ್ ಕೊಡುವುದಾಗಿ ಹೇಳಿದ್ದರು. 15 ದಿನಗಳ ನಂತರ ಮೂಜಗು ಅವರನ್ನು ಭೇಟಿಯಾಗಿ, ಹಣ ಪಡೆದವರಿಂದ 1 ತಿಂಗಳು ಗಡುವು ಪಡೆದಿದ್ದೆ ಎಂದು ಹೇಳಿದೆ.
ಅದು 2006ನೇ ಇಸವಿ ಮೂಜಗು ಅವರು ನೀವು ಈ ಮಠದಲ್ಲಿ ಕೂತರೆ ಈ ಮಠದ ಸಮಸ್ಯೆ ಸೇರಿ ರಾಜ್ಯದ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ನೀವೇ ಈ ಮಠಕ್ಕೆ ಉತ್ತರಾಧಿಕಾರಿ ಎಂದರು. ನನಗೆ ಮನಸ್ಸಿಲ್ಲವೆಂದು ಅಂದೇ ನಾನು ಮೂಜಗು ಅವರ ಬಳಿ ಹೇಳಿದ್ದೆ.
ಪಟ್ಟು ಹಿಡಿದವರು ಯಾರು?:ವಿವಾದ ಬಗೆಹರಿಸಿದ ತೃಪ್ತಿ ನನಗಿದೆ. ನನಗೆ ಅಷ್ಟೇ ಸಾಕು, ಮಠದ ಉತ್ತರಾಧಿಕಾರಿಯಾಗುವ ಮನಸ್ಸಿಲ್ಲ. ನಾನು ಈ ಮಠದ ವಿದ್ಯಾರ್ಥಿ. ಮಠದ ಅಭಿಮಾನಿಯಾಗಿ ಇರುತ್ತೇನೆ. ಉತ್ತರಾಧಿಕಾರಿ ಬೇಡ ಎಂದಿದ್ದೆ. ಪ್ರಕ್ರಿಯೆ ಮುಂದುವರಿಸಲು ಒಬ್ಬ ಸ್ವಾಮೀಜಿ ಬಳಿ ಹೋದರು. ಆ ಸ್ವಾಮೀಜಿ ಮಠ ನಾಶ ಮಾಡುವ ಗುರಿ ಇಟ್ಟುಕೊಂಡಂತೆ ಕಂಡುಬಂದರು.
ಈ ಬಗ್ಗೆ ಹೇಳಿದರೂ ಮೂಜಗು ನಂಬಿರಲಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಉತ್ತರಾಧಿಕಾರಿ ಮಾಡಬಾರದೆಂದು ವಾತಾವರಣ ಕೆಡಿಸಿದರು ಆ ಸ್ವಾಮೀಜಿ. ಆದರೂ ಮೌನವಾಗಿ ಉಳಿದೆ. 2013ರ ಜನವರಿಯಲ್ಲಿ ನೆಹರು ಮೈದಾನದಲ್ಲಿ 1 ತಿಂಗಳು ಪ್ರವಚನ ಮಾಡಿದೆ. ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಹೆಸರಿನಲ್ಲಿ ಹುಬ್ಬಳ್ಳಿಯ ಬಡಾವಣೆಗಳಲ್ಲಿ ಪಾದಯಾತ್ರೆ ಮಾಡಿದೆ. ಎಲ್ಲಿಯೂ ಮೂರುಸಾವಿರ ಮಠದ ಹೆಸರು ಪ್ರಸ್ತಾಪಿಸಲಿಲ್ಲ. 2014ರಲ್ಲಿ ಮತ್ತೆ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನನ್ನನ್ನು ನೇಮಿಸುವ ಪ್ರಕ್ರಿಯೆ ಪ್ರಾರಂಭ ಗೊಂಡಿತು. 2009ರಲ್ಲಿ ಸಾಕಷ್ಟು ಅವಮಾನ ಮಾಡಿದ್ದೀರಿ. ಈಗ ಉತ್ತರಾಧಿಕಾರಿಯಾಗಲು ಇಷ್ಟವಿಲ್ಲ ಎಂದೆ. ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಅವರು ಮೂಜಗು ಅವರೊಂದಿಗೆ ನನ್ನನ್ನು ಅವರ ತೋಟಕ್ಕೆ ಕರೆಯಿಸಿ, ಮೂರೂವರೆ ತಾಸು ನನ್ನ ಮನವೊಲಿಸುವ ಪ್ರಯತ್ನ ನಡೆಸಿದರು. ಈಗಿನ ಸಚಿವ ಜಗದೀಶ ಶೆಟ್ಟರ್ ಸಹ ನೀವು ಬಂದರೆ ಮಠ ಉಳಿಯುತ್ತೆ, ಬೆಳೆಯುತ್ತೆ.
2009ರ ಘಟನೆ ಪುನರಾವರ್ತನೆ ಆಗುವುದಿಲ್ಲ. ಇಡೀ ರಾಜ್ಯ ನಿಮ್ಮ ಬೆನ್ನಿಗೆ ಇದೆ ಎಂದರು. ದೊಡ್ಡ ನಾಯಕರು ಮನವೊಲಿಸುತ್ತಿದ್ದಾರೆಂದು ಉತ್ತರಾಧಿಕಾರಿಯಾಗಲು ಒಪ್ಪಿಕೊಂಡೆ. ಮೂಜಗು ಅವರು ಸಹ ಕರ್ತೃ ಗುರುಸಿದ್ಧೇಶ್ವರರ ಹಾಗೂ ಹಾನಗಲ್ ಕುಮಾರಸ್ವಾಮಿಯವರ ಆಣೆ ಮಾಡಿ, ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಘನತೆಗೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇನೆಂಬ ಭರವಸೆ ನೀಡಿದ್ದರು. ನಂತರ ಭಕ್ತರ ಸಭೆ ಏರ್ಪಡಿಸಿ, ನನ್ನ ಮನವೊಲಿಸುವ ಯತ್ನ ನಡೆಸಿದರು. ಈಗ ನನ್ನನ್ನು ವಿರೋಧಿಸುವವರು ಸಹ ಆ ಸಭೆಯಲ್ಲಿದ್ದರು. ನನ್ನ ಉತ್ತರಾಧಿಕಾರಿ ನೇಮಕದ ಬಗ್ಗೆ ಪ್ರತಿಯೊಬ್ಬರನ್ನೂ ಕೇಳಿದ್ದೆ. ಎಲ್ಲರೂ ಸಮ್ಮತಿಸಿದ್ದರು.
ಉತ್ತರಾಧಿಕಾರಿ ನೇಮಕದ ಕಾಗದಪತ್ರ ಸಿದ್ಧಪಡಿಸುವ ಜವಾಬ್ದಾರಿಯನ್ನು ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅವರಿಗೆ ನೀಡಲಾಗಿತ್ತು. ಸಾವಕಾರ ಅವರು 52 ಜನರ ಸಹಿ ಮಾಡಿಸಿಕೊಂಡ ನಂತರ, ನೇಮಣೂಕಿ ಪತ್ರವನ್ನು ನನಗೆ ತೋರಿಸಿದ್ದರು. ನೇಮಣೂಕಿ ಪತ್ರ ನೋಂದಣಿ ಮಾಡಿಸುವ ಜವಾಬ್ದಾರಿಯನ್ನು ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರಿಗೆ ವಹಿಸಲಾಗಿತ್ತು. ಇಬ್ಬರೂ ಸ್ವಾಮೀಜಿಯವರನ್ನು ಒಂದು ಸ್ಥಳದಲ್ಲಿ ಕರೆಯಿಸಿ, ಅಲ್ಲಿಗೆ ನೋಂದಣಾಧಿಕಾರಿಯನ್ನು ಕರೆಯಿಸಲೂ ಸಿದ್ಧತೆ ಆಗಿತ್ತು.
ಅದು 2014ರ ಆಗಸ್ಟ್ ಕೊನೆಯ ವಾರ. ದಸರಾ ಅಂಗವಾಗಿ ಸರಣಿ ಸರ್ಕಾರಿ ರಜೆಗಳಿದ್ದವು. ಮೂರುಸಾವಿರ ಮಠದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಮುಗಿಸಿ, ಹಾನಗಲ್​ಗೆ ತೆರಳಿ ವಿಶ್ರಾಂತಿ ಪಡೆದು ಬರುತ್ತೇನೆ. ನೀವೂ ಬಾಲೆ ಹೊಸೂರಿಗೆ ಹೋಗಿಬನ್ನಿ ಎಂದು ಮೂಜಗು ಅವರು ನನಗೆ ಸೂಚಿಸಿದ್ದರು. ನಂತರ ಉತ್ತರಾಧಿಕಾರಿ ಪತ್ರ ನೋಂದಣಿ ಮಾಡಿಸುವ ಕಾರ್ಯ ಮಾಡೋಣ ಎಂದು ಮೂಜಗು ಹೇಳಿದ್ದರು. ಆ ಸಮಯದಲ್ಲಿ ಬಾಲೆಹೊಸೂರಿನ ಭಕ್ತರು ಮೂರುಸಾವಿರ ಮಠಕ್ಕೆ ಹೋಗದಂತೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಮೂಜಗು ಅವರು ಬಾಲೆಹೊಸೂರಿಗೆ ಬಂದು, ಭಕ್ತರಿಗೆ ತಿಳಿಹೇಳುವುದಾಗಿ ಹೇಳಿದ್ದರು. ಆದರೆ ನಾನೇ ಹಾನಗಲ್​ಗೆ ಬರುತ್ತೇನೆ ಎಂದು ಅವರಿಗೆ ಹೇಳಿದ್ದೆ.
ಮೂಜಗು ಅಪಹರಿಸಿದರು
ರಾತ್ರಿ ಸುಮಾರು 3 ಗಂಟೆಗೆ ತಿಪಟೂರಿ ರುದ್ರಮುನಿ ಸ್ವಾಮೀಜಿ, ಗಂಗಾವತಿ ಕಲ್ಲುಮಠದ ಕೊಟ್ಟೂರು ಸ್ವಾಮೀಜಿ, ಹಿರಿನಾಗವಾದ ಶ್ರೀ ಶಾಂತಸ್ವಾಮೀಜಿ ಮೂಜಗು ಅವರನ್ನು ತಿಪಟೂರು ಮಠಕ್ಕೆ ಕರೆದುಕೊಂಡು ಹೋದರು. ಮೂಜಗು ಅವರಿಗೆ ಕರೆ ಮಾಡಿದಾಗ, ಅವರು ತಾವು ಕೆಟ್ಟ ಪರಿಸ್ಥಿತಿಯಲ್ಲಿದ್ದು, ನನ್ನನ್ನು ಅಪಹರಿಸಲಾಗಿದೆ ಎಂದು ಅಳತೊಡಗಿದರು. ಆ ಸಮಯದಲ್ಲಿಯೂ ನನಗೆ ಉತ್ತರಾಧಿಕಾರ ಬೇಡವೆಂದು ಸಚಿವ ಜಗದೀಶ ಶೆಟ್ಟರ್ ಬಳಿ ಹೇಳಿಕೊಂಡೆ. ಆದರೆ ಶೆಟ್ಟರ್ ಅವರು, ತಾಳ್ಮೆ ಮತ್ತು ನಂಬಿಕೆ ಇರಲಿ ಎಂದು ಹೇಳಿದರು. ಅದೇ ಸಮಯದಲ್ಲಿ ಉತ್ತರಾಧಿಕಾರ ಪ್ರಕ್ರಿಯೆ ಮುಂದುವರಿಯದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದರು. ಕಳೆದ ಜ. 21ಕ್ಕೆ ತಡೆಯಾಜ್ಞೆ ಹಾಗೂ 2 ಮಧ್ಯಂತರ ಆದೇಶಗಳು ಕೋರ್ಟ್ ನಿಂದ ವಜಾಗೊಂಡವು. ಅಗತ್ಯವಿದ್ದರೆ ಮುಂದಿನ ಕೋರ್ಟ್​ಗೆ ಹೋಗುವಂತೆ ದಾವೆದಾರರಿಗೆ ಸ್ಥಳೀಯ ಕೋರ್ಟ್ ಸೂಚಿಸಿತು.
ವ್ಯಾಜ್ಯ ಬಗೆಹರಿಯುತ್ತಿರಲಿಲ್ಲ
ನಾನು ದೊಡ್ಡ ಮಠಕ್ಕೆ ಸ್ವಾಮಿ ಆಗಬೇಕೆಂದುಕೊಂಡಿರಲಿಲ್ಲ. ದೊಡ್ಡ ಮಟ್ಟದ ಸ್ವಾಮಿ ಆಗಬೇಕೆಂದುಕೊಂಡಿದ್ದೆ. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಮೂಜಗು ಅವರು ಇನ್ನೂ ವ್ಯಾಜ್ಯ ಬಗೆಹರಿಸುವುದರಲ್ಲಿಯೇ ಕೋರ್ಟ್​ಗೆ ಓಡಾಡುತ್ತಿದ್ದರು. ಈ ಮಠಕ್ಕೆ ಪೀಠಾಧಿಕಾರಿ ಆಗುತ್ತಿರಲಿಲ್ಲ.
ಉತ್ತರಾಧಿಕಾರಿಯಾಗಿ ನನ್ನ ನೇಮಕದ ನಂತರ ಮೂಜಗು ಅವರು ಪೀಠ ತ್ಯಾಗ ಮಾಡದಂತೆ ಬೇಡಿಕೊಂಡೆ. ಪೀಠತ್ಯಾಗ ಮಾಡಿದರೆ ಉತ್ತರಾಧಿಕಾರಿಯಾಗಿ ಮಠದ ಅಧಿಕಾರ ತೆಗೆದುಕೊಳ್ಳುವುದಿಲ್ಲ. ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ. ನಾನು ಮಾಡುವ ಕಾರ್ಯಗಳನ್ನು ನೋಡಿ, ಸಂತೋಷವಾಗಿರಿ ಎಂದು ಬೇಡಿಕೊಂಡಿದ್ದೆ. ಮೂಜಗು ಅವರೂ ಒಪ್ಪಿದ್ದರು.
| ಶ್ರೀ ದಿಂಗಾಲೇಶ್ವರ ಸ್ವಾಮೀಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
