ಖ್ಯಾತ ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಕೃತಿಯ ‘ಕರಿನೀರಿನ ಶಿಕ್ಷೆ’ ಅಧ್ಯಾಯದ ಆಯ್ದಭಾಗ
ವಿನಾಯಕ ದಾಮೋದರ್ ಸಾವರ್ಕರ್ ಅವರ ಅಣ್ಣ ಬಾಬಾರಾವ್, 1909ರಿಂದಲೇ ಅಂಡಮಾನಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ತನಗೂ ಜೀವಾವಧಿ ಶಿಕ್ಷೆ ಘೊಷಣೆಯಾದ ದಿನದಿಂದಲೇ, ಅಣ್ಣನನ್ನು ಕಾಣಲು ವಿನಾಯಕರು ಕಾತರರಾಗಿ ಎದುರು ನೋಡುತ್ತಿದ್ದರು. ಅಂಡಮಾನಿನ ಸೆರೆಮನೆಯನ್ನು ಸೇರಿದ ಕೂಡಲೇ, ಅಲ್ಲಿದ್ದ ಸಹಾನುಭೂತಿಪರ ವಾರ್ಡರುಗಳ ಹತ್ತಿರ ಮತ್ತು ಕೆಳಸ್ತರದ ಅಧಿಕಾರಿಗಳ ಹತ್ತಿರ ಬಾಬಾರಾವ್ ಅವರು ಎಲ್ಲಿದ್ದಾರೆಂದು ವಿಚಾರಿಸತೊಡಗಿದರು. ಆದರೆ, ಆ ಸೆರೆಮನೆಯ ರಚನೆಯೂ, ಅಲ್ಲಿ ಬೇರೆ ಯಾರು ಬಂಧಿತರಾಗಿದ್ದಾರೆ ಎನ್ನುವುದು ತಿಳಿಯದ ಹಾಗಿತ್ತು. ಕೆಲ ಸಮಯದ ನಂತರ, ವಾರ್ಡರನೊಬ್ಬನ ಸಹಾಯದಿಂದ ಬಾಬಾರಾವ್ ಅವರನ್ನು ಭೇಟಿ ಮಾಡುವ ಸಂದರ್ಭ ಒದಗಿ ಬಂದಿತು. ಒಂದು ದಿನ ಸಂಜೆ ಎಲ್ಲರೂ ಹಾಜರಿ ಹೇಳಲು ಒಟ್ಟಾಗುವ ಸಮಯದಲ್ಲಿ ಅವರ ಭೇಟಿಯಾಗುವಂತೆ ವಾರ್ಡರ್ ವ್ಯವಸ್ಥೆ ಮಾಡಿದ. ಈ ಸಂದರ್ಭದಲ್ಲಿ ಕೂಡ, ಎಲ್ಲರನ್ನೂ ಒಂದೇ ಸಮಯಕ್ಕೆ ಕರೆಯುತ್ತಿರಲಿಲ್ಲ, ತಂಡಗಳಲ್ಲಿ ಮತ್ತು ಕ್ರಮಾಂಕ ಸಂಖ್ಯೆಯ ಕ್ರಮದಲ್ಲಿ ಕರೆಯಲಾಗುತ್ತಿತ್ತು. ತಂಡಗಳು ಬರುವ ಕ್ರಮವನ್ನು ವಾರ್ಡರುಗಳ ವಿವೇಚನೆಗೆ ಬಿಡಲಾಗಿತ್ತು. ಹೀಗಾಗಿ, ಆ ಸಹಾನುಭೂತಿಪರ ವಾರ್ಡರನು, ಬಾಬಾರಾವ್ ಅವರು ತಮ್ಮ ಹಾಜರಿ ಹೇಳುತ್ತಿದ್ದ ಸಮಯದಲ್ಲೇ ವಿನಾಯಕರ ತಂಡವನ್ನು ಒಳಕ್ಕೆ ಕಳುಹಿಸಿದ.
ವಿನಾಯಕರು ನಿರೀಕ್ಷೆ ಮತ್ತು ಆತಂಕದಿಂದ ಒಳಕ್ಕೆ ಧಾವಿಸಿದರು. ಅದೇ ಸಮಯಕ್ಕೆ ಬಾಬಾರಾವ್ ಅವರು ತಮ್ಮ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿದ್ದರು. ಇಬ್ಬರ ಕಣ್ಣುಗಳೂ ಸಂಧಿಸಿದವು. ಇಬ್ಬರೂ ಕಡೆಯ ಸಲ ಭೇಟಿಯಾಗಿದ್ದು ವಿನಾಯಕರು ಲಂಡನ್ನಿಗೆ ಹೊರಡುವಾಗ 1906ರಲ್ಲಿ. ಆ ಸಮಯದಲ್ಲಿ ತನ್ನ ಸಹೋದರನ ಉಜ್ವಲ ಭವಿಷ್ಯದ ಕುರಿತು ಹೆಮ್ಮೆ ಮತ್ತು ಸಂತೋಷವನ್ನು ಬಾಬಾರಾವ್ ಅವರ ಕಣ್ಣುಗಳು ಸೂಸುತ್ತಿದ್ದವು. ಆದರೆ ಇದೀಗ ತನ್ನ ತಮ್ಮನು ನಿಕೃಷ್ಟ ಸ್ಥಿತಿಯಲ್ಲಿ, ತನ್ನೊಡನೆ ಸಹಖೈದಿಯಾಗಿ ಇರುವುದನ್ನು ಕಂಡು ಬಾಬಾರಾವ್ ಅವರ ಮನಸ್ಸು ನುಚ್ಚುನೂರಾಯಿತು. ಅವರ ಮುಖದ ಚಹರೆಯಿಂದ, ಅವರು ಏನನ್ನೋ ಕೇಳಲು ಪ್ರಯತ್ನಿಸುತ್ತಿರುವರು ಎನ್ನುವುದು ತಿಳಿಯುತ್ತಿತ್ತು. ನೀನೇಕೆ ಇಲ್ಲಿದ್ದೀಯ ಮತ್ತು ನೀನು ಹೇಗಿದ್ದೀಯ, ಎಂದು ಅವರು ಕೇಳಲು ಬಯಸಿದ್ದರು. ಭಾವನೆಗಳ ಸೆಳೆತಕ್ಕೆ ಸಿಕ್ಕಿ ಅವರು ಪರಸ್ಪರ ಮಾತನಾಡಿಬಿಡುತ್ತಾರೆ ಎಂದು ವಾರ್ಡನ್​ಗೆ ಅನ್ನಿಸಿತು. ಹಾಗೇನಾದರೂ ಆಗಿದ್ದಲ್ಲಿ ಜೈಲಿನ ಅಧಿಕಾರಿಗಳ ಕೈಗೆ ಆತ ಸಿಕ್ಕಿಕೊಂಡು, ಪರಿಸ್ಥಿತಿ ಗಹನವಾಗುತ್ತಿತ್ತು. ಹೀಗಾಗಿ, ಆತ ಕೂಡಲೇ ಅವರಿಬ್ಬರನ್ನೂ ಬೇರ್ಪಡಿಸಿದ. ತನ್ನ ತಂದೆಯ ಸಮಾನನಾದ ಅಣ್ಣನನ್ನು ಈ ರೀತಿಯ ದಯನೀಯ ಸ್ಥಿತಿಯಲ್ಲಿ ಕಂಡು ವಿನಾಯಕರ ಹೃದಯ ಒಡೆಯಿತು. ಭಾವೋದ್ರೇಕಕ್ಕೊಳಗಾದ ವಿನಾಯಕರಿಗೆ, ತಮ್ಮ ತತ್ಕಾಲೀನ ಪರಿಸ್ಥಿತಿಯನ್ನು ಸಮಚಿತ್ತತೆಯಿಂದ ಎದುರಿಸುವ ಅವರ ನಿರ್ಧಾರ ಸ್ವಲ್ಪ ಕಾಲ ವಿಚಲಿತಗೊಂಡಿತು.
ವಾರ್ಡರನ ಸಹಾಯದಿಂದ, ಇಬ್ಬರೂ ಸಹೋದರರು ಆಗಾಗ್ಗೆ ಚೀಟಿಯ ಮುಖಾಂತರ ಪರಸ್ಪರ ಸಂದೇಶಗಳನ್ನು ಕಳುಹಿಸತೊಡಗಿದರು. ತನ್ನ ಪ್ರೀತಿಯ ತಾತ್ಯಾ, ಅಭಿನವ ಭಾರತದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾನೆ ಮತ್ತು ಮಾತೃಭೂಮಿಯ ಕೈಂಕರ್ಯದಲ್ಲಿ ತೊಡಗಿದ್ದಾನೆ ಎನ್ನುವ ಭರವಸೆಯೇ, ತನಗೆ ಸೆರೆಮನೆವಾಸವನ್ನು ತಡೆದುಕೊಳ್ಳಲು ಶಕ್ತಿ ನೀಡುತ್ತಿತ್ತು, ಎಂದು ಬಾಬಾರಾವ್ ಸಂದೇಶವೊಂದರಲ್ಲಿ ತಿಳಿಸಿದರು. ಇಲ್ಲಿ ಆತನನ್ನು ನೋಡಿ ಆಘಾತವಾಯಿತು; ತನ್ನ ತಮ್ಮನು ಇಲ್ಲಿಗೆ ಹೇಗೆ ಬಂದ ಎಂದು ಅವರು ಯೋಚಿಸತೊಡಗಿದರು. ಏಕೆಂದರೆ, ಆತನು ಪ್ಯಾರಿಸ್ಸಿನಲ್ಲಿ ಇದ್ದಾನೆನ್ನುವುದು ಅವರಿಗೆ ಸಿಕ್ಕಿದ್ದ ಕಡೆಯ ಸುದ್ದಿ. ವಿನಾಯಕರಿಗೆ ಶಿಕ್ಷೆ ನೀಡಿರುವ ಕುರಿತು ಬಾಬಾರಾವ್ ಅವರಿಗೆ ಯಾವ ಸುಳಿವೂ ಇರಲಿಲ್ಲ. ತಮ್ಮ ಕುಟುಂಬದ ಜೊತೆ ಕೂಡ ಅವರ ಸಂಪರ್ಕ ಬಹಳ ವಿರಳವಾಗಿತ್ತು. ಅಂಡಮಾನಿಗೆ ಶಿಕ್ಷೆ ಅನುಭವಿಸಲು ಕಳುಹಿಸಲ್ಪಟ್ಟಿದ್ದ ವಾಮನರಾವ್ ಜೋಶಿ, ವಿನಾಯಕರ ಕುರಿತು ಅಸ್ಪಷ್ಟ ಸುಳಿವು ನೀಡಿದ್ದ. ಆದರೆ, ಇದೆಲ್ಲವೂ ಊಹಾಪೋಹವಿರಬೇಕು, ವಿನಾಯಕರು ಸುರಕ್ಷಿತವಾಗಿದ್ದಾನೆ, ಎಂದು ಬಾಬಾರಾವ್ ಭಾವಿಸಿದ್ದರು. ಆದರೆ, ಆ ಸಂಜೆ ವಿನಾಯಕರನ್ನು ನೋಡಿದ ಮೇಲೆ ಅವರ ಎಲ್ಲ ನಿರೀಕ್ಷೆಗಳೂ ಸುಳ್ಳಾದವು. ಈಗ ಅಭಿನವ ಭಾರತದ ಕಾರ್ಯವನ್ನು ಯಾರು ನೋಡಿಕೊಳ್ಳುತ್ತಾರೆ, ತಮ್ಮ ಕಿರಿಯ ಸಹೋದರ ಬಾಳನನ್ನು ಯಾರು ಸಲಹುತ್ತಾರೆ, ಎಂದೆಲ್ಲ ಬಾಬಾರಾವ್ ಚಿಂತಿಸತೊಡಗಿದರು.
ಈ ರೀತಿಯ ಪತ್ರಕ್ಕೆ ಏನು ಉತ್ತರ ಬರೆಯುವುದೆನ್ನುವುದು ವಿನಾಯಕರಿಗೆ ತೋಚಲಿಲ್ಲ. ತನ್ನ ಮನಸ್ಥಿತಿಯನ್ನು ಸರಿಪಡಿಸಿಕೊಂಡು, ಮಾನಸಿಕವಾಗಿ ಕುಸಿಯುತ್ತಿದ್ದ ತನ್ನ ಅಣ್ಣನಲ್ಲೂ ಉತ್ಸಾಹವನ್ನು ತುಂಬಲು, ವಿನಾಯಕರು ಹೀಗೆ ಬರೆದರು:
‘ಬಾಬಾ, ಯಶಸ್ಸು ಮತ್ತು ವೈಫಲ್ಯಗಳು ಕೇವಲ ಆಕಸ್ಮಿಕಗಳು. ನಮ್ಮ ಮೊದಲ ಹೋರಾಟದಲ್ಲಿ ವಿಫಲರಾದರೆ, ಅದು ನಮ್ಮ ತಪ್ಪಲ್ಲ. ವಿಫಲಗೊಂಡಾಗಲೂ ನಾವು ಅಚಲರಾಗಿ ನಿಲ್ಲಲು ಸಾಧ್ಯವಾಗಿದ್ದನ್ನು ನಮ್ಮ ಅದೃಷ್ಟವೆಂದೇ ಹೇಳಬೇಕು. ಬೇರೆಯವರಿಗೆಲ್ಲ ಕಷ್ಟಕಾರ್ಪಣ್ಯಗಳನ್ನು ಧೈರ್ಯವಾಗಿ ಎದುರಿಸಬೇಕೆಂದು ಹಿಂದೆ ಉಪದೇಶಿಸಿದ್ದೆವು. ನಾವು ಧೈರ್ಯವಾಗಿ ಎಲ್ಲ ಕಷ್ಟಗಳನ್ನೂ ಸಹಿಸಿದ್ದು ನಮಗೆ ಹೆಮ್ಮೆ ಎನಿಸಬೇಕು. ಈ ಸೆರೆಮನೆಯಲ್ಲಿ ಜೀವನಪೂರ್ತಿ ಇರಬೇಕಾಗಿದೆ. ನಾವು ಯಾರಿಗಾಗಿ ಹೋರಾಟ ಮಾಡಿದೆವೋ ಅವರ ನಿಂದನೆಗಳನ್ನೂ ನಾವು ಸ್ವೀಕರಿಸಬೇಕು, ಸ್ವತಂತ್ರವಾಗಿದ್ದುಕೊಂಡು, ಹೋರಾಡುವಾಗಲೇ ಕೀರ್ತಿಯನ್ನು ಗಳಿಸುವುದು ಶ್ರೇಷ್ಠವೇ ಇರಬಹುದು. ಆದರೆ, ಯಾರಿಗೂ ತಿಳಿಯದೆ ಪ್ರಾಣತ್ಯಾಗ ಮಾಡುವುದು ಮತ್ತು ನಿಂದನೆಗಳನ್ನು ಅನುಭವಿಸುವುದು ಕೂಡ ಅಷ್ಟೇ ಶ್ರೇಷ್ಠ. ಅಂತಿಮ ವಿಜಯವನ್ನು ಸಾಧಿಸಲು, ಕೇವಲ ಹೋರಾಡುವುದು ಹಾಗೂ ಪ್ರಸಿದ್ಧರಾಗುವಷ್ಟರಿಂದಲೇ ಸಾಧ್ಯವಿಲ್ಲ. ಆದರೆ, ಅಪರಿಚಿತನಾಗಿ, ಯಾರಿಗೂ ತಿಳಿಯದೆ ಸಾಯುವುದೂ ಅದಕ್ಕೆ ಅಗತ್ಯ. ನಮ್ಮ ಉದ್ದೇಶಕ್ಕೆ ಆಗಿರುವ ನಷ್ಟಕ್ಕೆ ಸಂಬಂಧಿಸಿದಂತೆ ನಾನು ಹೇಳಲು ಬಯಸುವುದೇನೆಂದರೆ, ನಮ್ಮ ಅನುಪಸ್ಥಿತಿಯ ಕಾರಣಕ್ಕಾಗಿ ಸ್ವಾತಂತ್ರ್ಯ ಹೋರಾಟ ನಿಲ್ಲುವುದಿಲ್ಲ. ನಮ್ಮ ಹೋರಾಟಗಾರರು ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ಶ್ರೀಕೃಷ್ಣ ಮತ್ತು ಶ್ರೀರಾಮರಂಥವರನ್ನು ರಥಿಕರಾಗಿ ಉಳ್ಳ ನಮ್ಮವರು, ನಾವಿಲ್ಲ ಎಂಬ ಕಾರಣಕ್ಕೆ ಹೋರಾಟವನ್ನು ನಿಲ್ಲಿಸುವುದಿಲ್ಲ!’
ವಿನಾಯಕರು ಅಂಡಮಾನಿಗೆ ಬಂದ ಹನ್ನೊಂದನೆಯ ದಿನದಿಂದ, ಅಂದರೆ 1911 ಮಾರ್ಚ್ 15 ರಿಂದ, ಮುಂದಿನ ಆರು ತಿಂಗಳುಗಳ ಕಾಲ ಅವರನ್ನು ಏಕಾಂಗಿಯಾಗಿ ಸೆರೆಮನೆಯ ಕೋಣೆಯಲ್ಲಿ ಬಂಧಿಸಿಡಲಾಯಿತು. ತೆಂಗಿನ ನಾರಿನಿಂದ ಹಗ್ಗ ಹೊಸೆಯುವುದು, ಎಣ್ಣೆಯ ಗಾಣದಿಂದ ಎಣ್ಣೆ ತೆಗೆಯುವುದು, ಇತ್ಯಾದಿಗಳು ಶಾರೀರಿಕ ಶ್ರಮದ ಕೆಲಸಗಳಾದರೆ, ಆರು ತಿಂಗಳ ಕಾಲ ಯಾರೊಬ್ಬರನ್ನೂ ನೋಡದೆ ಕಾಲ ಕಳೆಯುವುದು ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಕುರಿತು ವಿನಾಯಕರ ನೋವಿನ ನುಡಿಗಳು ಹೀಗಿವೆ:
‘ಯಾರೊಡನೆಯೂ ಮಾತನಾಡುವಂತಿಲ್ಲ, ಯಾರೊಡನೆಯೂ ರ್ಚಚಿಸುವಂತಿಲ್ಲ ಮತ್ತು ನನ್ನ ಕೊಳಕಾದ, ಧೂಳು ಮೆತ್ತಿಕೊಂಡಿರುವ, ಇಡೀ ದಿವಸ ಗಾಣದ ಕೆಲಸ ಮಾಡಿ ಬೆವತು ನಾರುತ್ತಿರುವ ದೇಹವನ್ನೇ ದೃಷ್ಟಿಸುತ್ತಿರಬೇಕು. ದೇಹದ ಎಲ್ಲೆಡೆ ಬೆವರು, ಗಾಣದ ಚಕ್ರ ಒಣಕೊಬ್ಬರಿಯನ್ನು ಪುಡಿಗೈದಾಗ ಧೂಳು ಮೇಲೆದ್ದು, ಬೆವರುತ್ತಿರುವ ದೇಹಕ್ಕೆ ಅಂಟಿಕೊಳ್ಳುವುದು – ಇದರಿಂದ ಮನಸ್ಸಿಗೆ ಹೇಸಿಗೆ, ಜಿಗುಪ್ಸೆ. ಗಂಟೆಯಿಂದ ಗಂಟೆಗೆ, ದಿನದಿಂದ ದಿನಕ್ಕೆ, ಎಷ್ಟು ತಿಂಗಳುಗಳು ಹೀಗೆ ಕಳೆದೆನೋ, ವರ್ಷಗಳೇ ಉರುಳಿದವು. ನನ್ನನ್ನೇ ನಾನು ದ್ವೇಷಿಸಲು ಪ್ರಾರಂಭಿಸಿದೆ’.
ವಿನಾಯಕರ ಮನಸ್ಸಿಗೆ ಆಘಾತ ನೀಡುವ ಮತ್ತೊಂದು ಘಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು. 1911 ಆಗಸ್ಟ್ 14 ರಂದು ಮುಂಬೈ ವಿಶ್ವವಿದ್ಯಾಲಯದಿಂದ ಪತ್ರವೊಂದು ಬಂದಿತು. ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಬರೆದಿದ್ದ ಆ ಪತ್ರದಲ್ಲಿ, ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆಯ ಪರಿಚ್ಛೇದ 18ರ ಅಡಿಯಲ್ಲಿ, ವಿನಾಯಕರಿಗೆ ನೀಡಲಾಗಿದ್ದ ಬಿಎ ಪದವಿಯನ್ನು ರದ್ದುಗೊಳಿಸಲಾಗಿತ್ತು. 1911 ಜುಲೈ 1ರಂದು ಸಭೆ ಸೇರಿದ್ದ ಮುಂಬೈ ವಿಶ್ವವಿದ್ಯಾಲಯದ ಸೆನೇಟ್, ನಾಸಿಕ್ ಪಿತೂರಿ ಪ್ರಕರಣದ ಅಡಿಯಲ್ಲಿ ಸಾಬೀತಾಗಿದ್ದ ವಿನಾಯಕರ ಅಪರಾಧ ಮತ್ತು ನೀಡಲಾಗಿದ್ದ ಶಿಕ್ಷೆಯ ಅನ್ವಯ, ಈ ನಿರ್ಣಯವನ್ನು ಕೈಗೊಂಡಿತ್ತು. ವಿನಾಯಕರ ವಿಚಾರಣೆ ನಡೆಸಿ, ಅವರಿಗೆ ಶಿಕ್ಷೆಯನ್ನು ನೀಡಿದ ಮೂವರು ನ್ಯಾಯಾಧೀಶರ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಚಂದ್ರಶೇಖರ್ ಅವರು, ವಿನಾಯಕರ ಪದವಿ ವ್ಯಾಸಂಗದ ಸಮಯದಲ್ಲಿ ಮುಂಬೈ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು ಮತ್ತು ಅವರೇ ಶಿಕ್ಷೆಯನ್ನು ಅನುಮೋದಿಸಿದರು. ವಿನಾಯಕರು ಬಹಳಷ್ಟು ಶ್ರಮವಹಿಸಿ, ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸಿ, ಅತ್ಯುತ್ತಮ ಅಂಕಗಳಿಂದ ಸಂಪಾದಿಸಿದ್ದ ಪದವಿಯನ್ನು, ಅತ್ಯಂತ ನಿರ್ದಯವಾಗಿ ಕಿತ್ತೆಸೆಯಲಾಗಿತ್ತು. ಇದು ವಿನಾಯಕರ ಮಾನಸಿಕ ಕ್ಲೇಶವನ್ನು ಮತ್ತಷ್ಟು ಹೆಚ್ಚಿಸಿತು.
ಆಪ್ತ ಸಮಾಲೋಚಕರಾಗಿ…:ಎಣ್ಣೆಯ ಗಾಣದಲ್ಲಿ ಕೆಲಸ ಮಾಡುವ ಸಮಯದಲ್ಲಿ ಕೆಲವೊಮ್ಮೆ ಇತರ ರಾಜಕೀಯ ಖೈದಿಗಳೊಡನೆ ಮಾತನಾಡುವ ಅವಕಾಶ ಸಿಗುತ್ತಿತ್ತು. ಅಲ್ಲಿ ಅನೇಕ ಯುವ ಕ್ರಾಂತಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದರು. ಅವರು ಧೈರ್ಯವಂತರಾಗಿದ್ದರು, ಅವರಲ್ಲಿ ಉತ್ಸಾಹವಿತ್ತು. ಆದರೆ ಅವರಿಗಿದ್ದ ಒಂದೇ ಒಂದು ಕೊರತೆಯೆಂದರೆ, ಅವರಿಗೆ ರಾಜಕೀಯವಾಗಲೀ, ಇತಿಹಾಸವಾಗಲೀ, ಆರ್ಥಿಕತೆ ಅಥವಾ ಅಂತರಾಷ್ಟ್ರೀಯ ವ್ಯವಹಾರಗಳ ವಿಷಯವಾಗಲೀ ಕಿಂಚಿತ್ತೂ ತಿಳಿದಿರಲಿಲ್ಲ. ಅವರ ಹೋರಾಟದ ಸ್ಪೂರ್ತಿ ಅಥವಾ ದೇಶಭಕ್ತಿಯಲ್ಲಿ ಈ ಕಾರಣದಿಂದಾಗಿ ಯಾವುದೇ ಕೊರತೆ ಆಗಿರದಿದ್ದರೂ, ಆ ವಿಷಯಗಳನ್ನು ತಿಳಿದುಕೊಂಡರೆ, ತಾವು ಯಾವುದಕ್ಕಾಗಿ ಹೋರಾಡುತ್ತಿದ್ದೇವೆ ಎನ್ನುವುದು ಅವರಿಗೆ ಸ್ಪಷ್ಟವಾಗುತ್ತದೆ ಮತ್ತು ಅವರ ಬದ್ಧತೆ ಹೆಚ್ಚುತ್ತದೆ, ಎಂದು ವಿನಾಯಕರಿಗನ್ನಿಸಿತು. ತಾನು ಈ ಎಲ್ಲ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಿರುವುದರಿಂದ, ಅವರಿಗದನ್ನು ಕಲಿಸುವುದು ತನ್ನ ಕರ್ತವ್ಯ ಎಂದು ಅವರು ಭಾವಿಸಿದರು. ಸೆರೆಮನೆಯಲ್ಲಿ ದೀರ್ಘಕಾಲ ಕಳೆದ ಅನೇಕ ಯುವ ಕ್ರಾಂತಿಕಾರಿಗಳು ಹತಾಶ ಸ್ಥಿತಿಯನ್ನು ತಲುಪಿದ್ದರು. ವಿನಾಯಕರು ಅವರ ಆಪ್ತ ಸಮಾಲೋಚಕರಾಗಿ ಮಾರ್ಗದರ್ಶನ ಮಾಡಿದರು.
ಇಂದು ಲೋಕಾರ್ಪಣೆ:ಖ್ಯಾತ ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಸಾವರ್ಕರ್ ಬಗ್ಗೆ ಬರೆದಿರುವ ಇಂಗ್ಲಿಷ್ ಕೃತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಕನ್ನಡದಲ್ಲಿ ತಂದಿದೆ. ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್​ನಲ್ಲಿ ಫೆ. 18ರಂದು (ಭಾನುವಾರ) ಬೆಳಗ್ಗೆ 10ಕ್ಕೆ ಪುಸ್ತಕ ಲೋಕಾರ್ಪಣೆ ಯಾಗಲಿದೆ. ‘ಸಾವರ್ಕರ್ ವಿಸ್ಮೃತಿಗೆ ಸರಿದ ಗತಕಾಲದ ಮಾರ್ದನಿಗಳು- ಕ್ರಾಂತಿಸೂರ್ಯನ ಮೇಲೆ ಕ್ಷ-ಕಿರಣ’ ಕೃತಿಯನ್ನು ಖ್ಯಾತ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಲೋಕಾರ್ಪಣೆ ಮಾಡಲಿದ್ದು, ಹಿರಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ವಿಕ್ರಮ್ ಸಂಪತ್ ಹಾಗೂ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ನರೇಂದ್ರಕುಮಾರ್ ಎಸ್.ಎಸ್., ಸಾಹಿತ್ಯ ಪ್ರಕಾಶನದ ಮುಖ್ಯಸ್ಥರಾದ ಎಂ.ಎ. ಸುಬ್ರಹ್ಮಣ್ಯ ಉಪಸ್ಥಿತರಿರಲಿದ್ದಾರೆ.
ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
