ಬೆಂಗಳೂರು:ಶಿಕ್ಷಣ ಸಚಿವನಾಗಿ ನಾನು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ದೊಡ್ಡ ಸಮಸ್ಯೆಯೆಂದರೆ, ಖಾಸಗಿ ಶಾಲೆಗಳು ಹಾಗೂ ಪಾಲಕ ನಡುವಿನ ಶುಲ್ಕದ ವಿಚಾರ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮತ್ತು ಪಾಲಕರ ಸಹಕಾರ ನೀಡಿದರಷ್ಟೇ ಇದನ್ನು ಸರಿಪಡಿಸಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಒಂದು ಕಡೆ ಅನುಕೂಲ ಮಾಡಿಕೊಡುತ್ತಿಲ್ಲ ಎಂಬ ಖಾಸಗಿ ಶಾಲೆಗಳ ಆರೋಪ. ಮತ್ತೊಂದೆಡೆ ಖಾಸಗಿ ಶಾಲೆಗಳಿಗೆ ಅಂಕುಶ ಹಾಕುತ್ತಿಲ್ಲವೆಂದು ಪಾಲಕರ ದೂರು. ಇಬ್ಬರ ಮಧ್ಯೆ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಈ ಸವಾಲನ್ನು ಎದುರಿಸುವಲ್ಲಿ ನನಗೆ ಪಾಲಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿ ಇಬ್ಬರೂ ಆರೋಗ್ಯಕರ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕರೊನಾದಿಂದ ಎಲ್ಲ ಕ್ಷೇತ್ರಗಳು ಆರ್ಥಿಕವಾಗಿ ಜರ್ಜರಿತವಾಗಿವೆ. ರಾತ್ರಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳಿಗೆ ಸೀಟು ಪಡೆದುಕೊಂಡ ಪಾಲಕರು ಇಂದು ಆದೇ ಶಾಲೆಯ ವಿರುದ್ಧ ಮಾತನಾಡುತ್ತಿದ್ದಾರೆ. ಏಕೆಂದರೆ, ಶುಲ್ಕ ಪಾವತಿಸುವುದು ಕಷ್ಟವಾಗಿದೆ. ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಪಾಲಕರು ಶುಲ್ಕ ಕಟ್ಟುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳುತ್ತಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ನನಗೆ ಪಾಲಕರ ಕಷ್ಟದ ಅರಿವೂ ಇದೆ. ಎಷ್ಟೋ ಜನ ಕಳೆದ ಎಂಟು ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಶುಲ್ಕ ಕಟ್ಟಲು ಅಸಾಧ್ಯವಾಗಿದೆ.ವೇತನವಿಲ್ಲದೆ ಖಾಸಗಿ ಶಾಲಾ ಶಿಕ್ಷಕರು ದಿನಗೂಲಿ ಮಾಡುತ್ತಿದ್ದಾರೆ. ಇಂತಹವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣಕಾಸಿನ ಸಹಾಯದ ನೀಡಬೇಕೆಂಬುದು ಒಂದು ಆಗ್ರಹ. ಅದಕ್ಕಾಗಿ ಸರ್ಕಾರದಲ್ಲಿ ಬೇರೆ ಬೇರೆ ಕ್ರಮಗಳ ಬಗ್ಗೆ ಯೋಚಿಸಿದರೂ ಅದು ಕಾರ್ಯಗತವಾಗಲಿಲ್ಲ. ಏಕೆಂದರೆ ಸರ್ಕಾರದಲ್ಲಿ ಹಣಕಾಸಿನ ಪರಿಸ್ಥಿತಿ ಬಹಳ ಆಶಾದಾಯಕವಾಗಿಲ್ಲ. ಶ್ರೀಮಂತ ಶಾಲೆಗಳನ್ನು ಹೊರತುಪಡಿಸಿ, ಬಜೆಟ್ ಶಾಲೆಗಳೆಂದು ಕರೆಯಲ್ಪಡುವ ಮಧ್ಯಮ ದರ್ಜೆ ಶಾಲೆಗಳು ಎದುರಿಸುತ್ತಿರುವ ಕಷ್ಟವೂ ಅಪಾರವಾಗಿದೆ. ಒಟ್ಟಿನಲ್ಲಿ ಈ ಸಮಸ್ಯೆ ದೊಡ್ಡ ಸವಾಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಮಾರ್ಚ್​ನಲ್ಲಿಲ್ಲ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ಎಂದಿನಂತೆ ಈ ವರ್ಷ ಮಾರ್ಚ್​ನಲ್ಲಿ ನಡೆಯುವುದಿಲ್ಲವೆಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಕರೊನಾದಿಂದ ಶೈಕ್ಷಣಿಕ ವರ್ಷ ಕಡಿತವಾಗಿದೆ. ಜ.1ರಿಂದ ಶಾಲೆ-ಕಾಲೇಜುಗಳು ಆರಂಭ ಆಗುತ್ತಿರುವುದರಿಂದ ಈ ಬಾರಿ ಎಂದಿನಂತೆ ಮಾರ್ಚ್​ನಲ್ಲಿ ಪರೀಕ್ಷೆ ನಡೆಯುವುದಿಲ್ಲ. ವಿದ್ಯಾರ್ಥಿಗಳು ಈ ವಿಚಾರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲವೆಂದು ಮಾಧ್ಯಮದವರಿಗೆ ತಿಳಿಸಿದ್ದಾರೆ. ಎರಡು ಪರೀಕ್ಷೆಗಳ ವೇಳಾಪಟ್ಟಿಯನ್ನು ಮುಂದಿನ ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ. ಸದ್ಯ ವೇಳಾಪಟ್ಟಿ ರೂಪಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲದೆ, ಶೈಕ್ಷಣಿಕ ಅವಧಿಯ ಅನುಗುಣವಾಗಿ ಪಠ್ಯಕ್ರಮ ಕಡಿತ ಮಾಡಲಾಗುತ್ತಿದೆ ಎಂದಿದ್ದಾರೆ.
ಹಂತ ಹಂತವಾಗಿ ಶಾಲೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಲ್ಲದಿರುವ ತಾಲೂಕುಗಳಲ್ಲಿ ಹಂತ ಹಂತವಾಗಿ ಎಂದಿನಂತೆಯೇ ಶಾಲೆಗಳನ್ನು ಪುನರಾರಂಭಿಸುವ ವಿಚಾರ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಸೂಚಿಸಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಆನ್​ಲೈನ್ ಶಿಕ್ಷಣಕ್ಕೆ ಅನುಕೂಲವಾಗುವಂತೆ ಲ್ಯಾಪ್​ಟಾಪ್, ಟ್ಯಾಬ್ಲೆಟ್ ಇನ್ನಿತರ ಡಿಜಿಟಲ್ ಉಪಕರಣಗಳನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎ.ಎ.ಸಂಜೀವ್ ನರೇನ್ ಮತ್ತಿತರರು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಜ.1ರಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುರಕ್ಷತಾ ಕ್ರಮಗಳೊಂದಿಗೆ ‘ವಿದ್ಯಾಗಮ’ ಕಾರ್ಯಕ್ರಮ ಪುನರಾರಂಭಿಸಲಾಗುವುದು ಎಂದು ತಿಳಿಸಿ, ಈ ಸಂಬಂಧ ಡಿ.15ರಂದು ಹೊರಡಿಸಿದ್ದ ಸುತ್ತೋಲೆ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಗಮನ ಹರಿಸಬೇಕು. ಬಾಲಕಾರ್ವಿುಕ ಪದ್ಧತಿ, ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತು.
ಹೆಚ್ಚುವರಿ ಶುಲ್ಕ ಪಡೆದವರಿಗೆ ಎಚ್ಚರಿಕೆ
ಬೆಂಗಳೂರು: ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಈ ಬಗ್ಗೆ ದೂರು ಬಂದರೆ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಮೇಲ್ವಿಚಾರಣಾ ಸಮಿತಿ ಎಚ್ಚರಿಕೆ ನೀಡಿದೆ. ವಿಜಯವಾಣಿಯಲ್ಲಿ ಡಿ.7ರಂದು ಪ್ರಕಟವಾಗಿದ್ದ ‘ಹೆಚ್ಚುವರಿ ಶುಲ್ಕ ಲೂಟಿ’ ವರದಿಗೆ ಸಂಬಂಧಿಸಿದಂತೆ ಪ್ರವೇಶ ಮೇಲ್ವಿಚಾರಣಾ ಸಮಿತಿ ಕಾಲೇಜುಗಳಿಗೆ ಪತ್ರ ಬರೆದಿದ್ದು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅಧಿನಿಯಮದ ಪ್ರಕಾರ ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಹೊರತಾಗಿ ಯಾವುದೇ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವಂತಿಲ್ಲ. ಸರ್ಕಾರ ನಿಗದಿ ಪಡಿಸಿರುವ ಶುಲ್ಕದಲ್ಲಿ ಬೋಧನಾ ಶುಲ್ಕ, ವಿಶ್ವವಿದ್ಯಾಲಯದ ಶುಲ್ಕ ಮತ್ತು ಇತರೆ ಶುಲ್ಕ ಎಲ್ಲವೂ ಸೇರಿದೆ. ಈ ಬಗ್ಗೆ ದೂರು ಸ್ವೀಕಾರವಾದರೆ, ಕಾಲೇಜಿನ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನು ಸಮಿತಿಯ ಅಧ್ಯಕ್ಷ ಬಿ.ಮನೋಹರ್ ನೀಡಿದ್ದಾರೆ.
ಹಾಸ್ಟೆಲ್ ಶುಲ್ಕ ಏನು ಮಾಡಬೇಕು?:ಕನಕಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮಗ ಅದೇ ಕಾಲೇಜಿನ ಹಾಸ್ಟೆಲ್​ನಲ್ಲಿ ವಾಸವಾಗಿದ್ದಾನೆ. ಕರೊನಾ ವೇಳೆ ಹಾಸ್ಟೆಲ್ ಖಾಲಿ ಮಾಡಿದ್ದರೂ, ಇದೀಗ ಶುಲ್ಕ ಕೇಳುತ್ತಿದ್ದಾರೆ. ಈ ಬಗ್ಗೆ ಸಮಿತಿ ಅಥವಾ ಸರ್ಕಾರ ಕ್ರಮವಹಿಸಬೇಕೆಂದು ಪಾಲಕರೊಬ್ಬರು ‘ವಿಜಯವಾಣಿ’ಗೆ ಪತ್ರ ಬರೆದು ಈ ಮೂಲಕ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
