ಬೆಂಗಳೂರು:ಕರೊನಾ ಆತಂಕದ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.
ಕರೊನಾ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, 6 ರಿಂದ 9ನೇ ತರಗತಿವರೆಗೆ ಶಾಲಾ ಆವರಣದಲ್ಲೇ ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಕೂಡ ಆರಂಭವಾಗಲಿದೆ. ವಿದ್ಯಾಗಮದಲ್ಲಿ ಸಾಂಪ್ರದಾಯಿಕ ಶಿಕ್ಷಣದ ಬದಲು ಅಕ್ಟಿ್ಟಟಿ ಮೂಲಕ ನಡೆಸಲಾಗುತ್ತದೆ. ಇಲ್ಲಿ ದೈನಂದಿನ ಶಾಲಾ ಚಟುವಟಿಕೆ ಇರುವುದಿಲ್ಲ. ಆದರೆ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮ್ಯಾಂಡೇಟರಿ ಅಲ್ಲ. ಸ್ವಯಂ ಪ್ರೇರಿತರಾಗಿ ಕಳುಹಿಸಬೇಕು ಹಾಗೂ ತರಗತಿಗೆ ಹಾಜರಾಗುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯ.
53 ಸಾವಿರ ಸರ್ಕಾರಿ ಶಾಲೆ ಸಜ್ಜು:ರಾಜ್ಯದ 53 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು, 20 ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳು, 5,300 ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಬರಲು 3 ಅಡಿಗೊಂದು ವೃತ್ತಗಳನ್ನು ಹಾಕಲಾಗಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯ ಪ್ರಮುಖ ಸ್ಥಳಗಳಲ್ಲಿ ಕರೊನಾ ನಿಯಮಗಳನ್ನು ನೆನಪಿಸುವ ಪೋಸ್ಟರ್​ಗಳನ್ನು ಅಂಟಿಸಲಾಗಿದೆ. ಕೆಲ ಕಡೆಗಳಲ್ಲಿ ಮಕ್ಕಳ ತಪಾಸಣೆಗಾಗಿ ಶಾಲೆಗಳೇ ನರ್ಸ್​ಗಳನ್ನು ನೇಮಕ ಮಾಡಿಕೊಂಡಿವೆ. ಆದರೆ, ಕರೊನಾ ಭೀತಿ ಹಿನ್ನೆಲೆ ಯಲ್ಲಿ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಾರೆಂದು ನೋಡಬೇಕಿದೆ.
ಪ್ರತಿಷ್ಠೆ ಅಲ್ಲ, ನಮ್ಮಬದ್ಧತೆ: ‘ಕರೊನಾ ಓಡಿಸೋಣ….ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ..’ ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲಾ ತರಗತಿ ಪ್ರಾರಂಭಿಸುವುದು ಶಿಕ್ಷಣ ಇಲಾಖೆಗೆ ಪ್ರತಿಷ್ಠೆಯ ವಿಷಯವಲ್ಲ. ಬದಲಾಗಿ ಅದು ನಮ್ಮ ಬದ್ಧತೆ ಎಂದು ಶಿಕ್ಷಣ ಸಚಿವ ಸುರೇಶ್​ಕುಮಾರ್ ಸ್ಪಷ್ಟಪಡಿಸಿದರು. ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅನೇಕ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಇಲಾಖೆ ಉನ್ನತ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಪೋಷಕರು, ಶಿಕ್ಷಕರಿಂದ ಫೀಡ್ ಬ್ಯಾಕ್ ಪಡೆದಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಪೋಷಕರು ಆತಂಕ ಇಟ್ಟುಕೊಳ್ಳಬೇಡಿ ಎಂದು ಹೇಳಿದರು. ಕರೊನಾ ಸೋಂಕಿನ ಸಂಖ್ಯೆ ಕಡಿಮೆ ಆಗುತ್ತಿದೆ. ಆದಾಗ್ಯೂ ನಾವು ಶಾಲೆ ಆವರಣದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ನಿಮ್ಮಂತೆಯೇ ನಾವು ಮಕ್ಕಳನ್ನು ಜೋಪಾನ, ಜತನದಿಂದ ನೋಡಿಕೊಳ್ಳುತ್ತೇವೆ. ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಿಕ್ಷಕರ ಬಿಡುಗಡೆಗೆ ಆಗ್ರಹ: ಶಾಲೆ, ಪಿಯು ಕಾಲೇಜುಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣ ಕಾರ್ಯಗಳಿಗೆ ನಿಯೋಜಿಸಲಾಗಿದ್ದ ಶಿಕ್ಷಕರನ್ನು ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರೂ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರನ್ನು ಬಿಡುಗಡೆ ಮಾಡಿಲ್ಲ. ಶಿಕ್ಷಕರ ವಲಯದಲ್ಲಿ ಈ ಬಗ್ಗೆ ತೀವ್ರ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಪರೀಕ್ಷೆ ತರಾತುರಿ ಇಲ್ಲ ಎಂದಿನಂತೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ಮಾಡುವಿರಾ ಎಂದು ಕೆಲವರು ಕೇಳುತ್ತಾರೆ. ನಾವು ಈ ವರ್ಷ ಎಸ್ಸೆಸ್ಸೆಲ್ಸಿ, ಪಿಯು ಮಕ್ಕಳಿಗೆ ಒತ್ತಡ ಇಲ್ಲದ ಹಾಗೆ ಓದಲು ಸಾಕಷ್ಟು ಸಮಯ ಕೊಡುತ್ತೇವೆ. ತದನಂತರ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುತ್ತೇವೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಈ ವಿಚಾರದಲ್ಲಿ ಆತಂಕಪಡಬೇಕಿಲ್ಲ ಎಂದು ಸುರೇಶ್​ಕುಮಾರ್ ಸ್ಪಷ್ಟಪಡಿಸಿದರು.
ಶುಲ್ಕದ ಕುರಿತು ಚರ್ಚೆ
ಖಾಸಗಿ ಸಂಸ್ಥೆಗಳ ಸಂಘಟನೆಗಳು ನನ್ನ ಜತೆ ಮಾತನಾಡಿವೆ. ಶುಲ್ಕದ ವಿಚಾರದಲ್ಲಿ ಪೋಷಕರಿಗೆ ಹೊರೆ ಆಗದ ಹಾಗೆ ಸೂತ್ರ ಮಾಡುವುದಾಗಿ ಸುರೇಶ್ ಕುಮಾರ್ ಹೇಳಿದ್ದಾರೆ. ನಾವೂ ಕೂಡ ಈ ಬಗ್ಗೆ ಸಭೆ ಮಾಡುತ್ತೇವೆ. ಅನೇಕರಿಗೆ ಹಿಂದಿನಂತೆ ಫೀಸ್ ಕೊಡುವ ಶಕ್ತಿ ಇಲ್ಲ. ಈ ಕುರಿತು ಪೋಷಕರು ಮತ್ತು ಶಾಲೆಗಳು ಚರ್ಚೆ ಮಾಡಬೇಕು ಎಂದು ಸುರೇಶ್​ಕುಮಾರ್ ತಿಳಿಸಿದರು. ಶಾಲಾ ಪಠ್ಯ ವಸ್ತುವಿನ ಬಗ್ಗೆ ನಮಗೆ ಗೊಂದಲವಿಲ್ಲ. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಪರೀಕ್ಷೆಗೆ ಎಷ್ಟು ಸಿಲೆಬಸ್ ಇರುತ್ತೆ ಎಂಬುದು ಮುಖ್ಯ. ಆರೇಳು ದಿನದಲ್ಲಿ ಸಿಲೆಬಸ್ ನಿರ್ಧರಿಸಲಾಗುತ್ತದೆ ಎಂದು ಸುರೇಶ್​ಕುಮಾರ್ ಹೇಳಿದರು.
9 ಸೋಂಕಿತರು ಸಾವು
ರಾಜ್ಯದಲ್ಲಿ 9 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 12,090 ತಲುಪಿದೆ. 952 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 9.19 ಲಕ್ಷಕ್ಕೆ ತಲುಪಿದೆ. ಮತ್ತೊಂದೆಡೆ 1,282 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು ಗುಣಮುಖರ ಸಂಖ್ಯೆ 8.96 ಲಕ್ಷಕ್ಕೆ ಏರಿಕೆಯಾಗಿದೆ. 11,291 ಸೋಂಕಿತರಲ್ಲಿ 194 ಮಂದಿ ಐಸಿಯುನಲ್ಲಿದ್ದಾರೆ.
ಶಿಕ್ಷಕರಿಗೆ ಕಿವಿ ಮಾತು
ಶಿಕ್ಷಕರು ಶುಕ್ರವಾರ ಮೊದಲ ಅವಧಿ ಮಕ್ಕಳ ಜತೆ ಮಾತನಾಡಬೇಕು. ಅವರ ಭಾವನೆ ಅರಿತುಕೊಳ್ಳಬೇಕು. ಕರೊನಾ ಬಗ್ಗೆ ಮಾರ್ಗದರ್ಶನ ಮಾಡಬೇಕು. ಕರೊನಾ 2ನೇ ಅಲೆ, ಬ್ರಿಟನ್ ವೈರಾಣು ಕರೊನಾಕ್ಕಿಂತ ಅಪಾಯಕಾರಿ ಅಲ್ಲ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು ಇದಕ್ಕೆ ಸಾಕು ಎಂಬುದನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ವಿದ್ಯಾಭ್ಯಾಸದ ಮಹತ್ವದ ಘಟ್ಟಗಳು. ಇದನ್ನು ತಿಳಿಹೇಳುವ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಂತೆ ತಿಳಿಸಿದರು. ವಿದ್ಯಾರ್ಥಿಗಳು ಕಳೆದ ವರ್ಷದ ಬಸ್ ಪಾಸ್ ಬಳಸಿ ಓಡಾಡಬಹುದು. ಎಲ್ಲ ರೂಟ್​ಗಳಲ್ಲಿ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಸಮ್ಮತಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
