ವಿಲಾಸ ಮೇಲಗಿರಿ ಬೆಂಗಳೂರುಸಣ್ಣ ಸಣ್ಣ ಮೊತ್ತದ ಕಾಮಗಾರಿ ಹೆಸರಿನಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಕೋಟಿ ಕೋಟಿ ಲೂಟಿ ಮಾಡುವ ದಂಧೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿನ ಕಾರ್ಯ ವಿಧಾನಗಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕರ್ನಾಟಕ ಪಾರದರ್ಶಕತೆ ಕಾಯ್ದೆ ಜಾರಿಗೆ ತಂದರೂ ಗುತ್ತಿಗೆದಾರರು/ಏಜೆನ್ಸಿಗಳು ಟೆಂಡರ್ ಇಲ್ಲದೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಸ್ಥಳೀಯ ಸಂಸ್ಥೆಗಳು ಸುಸ್ತು ಹೊಡೆದಿವೆ.
ಜನ ಜಾಗೃತಿ ಗೋಡೆ ಬರಹಗಳು, ಡಿಜಿಟಲ್ ಲೈಬ್ರರಿಗೆ ಬೇಕಾದ ಮೋಡೆಮ್ ರೌಟರ್, ವಾಟರ್ ಪಾಟ್, ಫಿನಾಯಿಲ್, ಬ್ಲೀಚಿಂಗ್ ಪೌಡರ್, ಕಸ ಸಂಗ್ರಹಣೆ ವಾಹನ, ಡಸ್ಟ್ ಬಿನ್… ಇಂತಹ ಸಣ್ಣಪುಟ್ಟ ಖರೀದಿಯಲ್ಲಿ ಸದ್ದಿಲ್ಲದೆ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಹೆಚ್ಚಾಗಿದೆ.
ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನ ‘ಸ್ಥಳೀಯ ಸ್ವಯಂ ಸರ್ಕಾರಗಳು’ ಎಂದು ವ್ಯಾಖ್ಯಾನಿಸಿದೆ. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳು ಅಧಿಕಾರಶಾಹಿ ಹಿಡಿತಕ್ಕೆ ಸಿಕ್ಕಿ ನಲುಗುತ್ತಿವೆ. ಉನ್ನತಾಧಿಕಾರಿ, ಸಚಿವರು ಇನ್ನೂ ಕೆಲ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಫಾರಸಿನ ಅನ್ವಯ ಕಾನೂನಿನ ನೆರಳಲ್ಲೇ ಯಾವುದೇ ಟೆಂಡರ್ ಇಲ್ಲದೆ ಕೋಟಿ ಕೋಟಿ ಮೊತ್ತದ ಖರೀದಿ ನಡೆಯುತ್ತಲೇ ಇದೆ. ಮೇಲಧಿಕಾರಿಗಳೇ ತಮ್ಮ ಹಂತದಲ್ಲಿ ತಮಗೆ ಸರಿ ಎನಿಸುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಪರಿಕರ/ಉಪಕರಣ/ಸಾಮಗ್ರಿಗಳನ್ನು ಸರಬರಾಜು ಮಾಡುವ ಏಜೆನ್ಸಿಗಳನ್ನು ನೇಮಿಸಿ, ಅವರಿಂದಲೇ ವಸ್ತುಗಳನ್ನು ಖರೀದಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಅಚ್ಚರಿ ಎಂದರೆ, ಗ್ರಾಮ ಪಂಚಾಯಿತಿಗಳ ಅನುಮತಿಯಿಲ್ಲದೇ ಸಾಮಗ್ರಿಗಳನ್ನು ತಂದಿಳಿಸಿ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅವುಗಳ ಹಣ ಪಾವತಿಸುವಂತೆ ಮಾಡುತ್ತಿದ್ದಾರೆ.
ರಾಜ್ಯಮಟ್ಟದಲ್ಲೇ ಟೆಂಡರ್: ರೂಫ್ ಟಾಪ್ ಸೋಲಾರ್ ಪವರ್ ಯುನಿಟ್​ಗಳಿಗಾಗಿ ರಾಜ್ಯಮಟ್ಟದಲ್ಲೇ ಟೆಂಡರ್ ಕರೆಯಲಾಗಿತ್ತು. ಆದರೆ, ಇವುಗಳಿಗೆ ಹಣವನ್ನು ಪಂಚಾಯಿತಿಗಳು ಭರಿಸಿವೆ. ಈಗಾಗಲೇ ಅನುಷ್ಠಾನ ಮಾಡಿರುವ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಮ್ಮದಲ್ಲದ ತಪ್ಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಬೆಲೆತೆರುವಂತಾಗಿದೆ. ಅಂತೆಯೇ, ಡಿಜಿಟಲ್ ಲೈಬ್ರರಿ ಯೋಜನೆಯನ್ನು ಮೇಲಿನ ಹಂತದಲ್ಲೇ ರೂಪಿಸಿ ಅನುಷ್ಠಾನಗೊಳಿಸುವಂತೆ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.
ಸಿಇಒ/ಇಒ ಶಾಖಾ ಕಚೇರಿಗಳು:ಜಿಲ್ಲಾ, ತಾಲೂಕು ಹಂತದಲ್ಲಿ ಬಹುತೇಕ ಸಿಇಒ, ಇ.ಒ.ಗಳು ಗ್ರಾಮ ಪಂಚಾಯಿತಿಗಳನ್ನು ತಮ್ಮ ಶಾಖಾ ಕಚೇರಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ವಾಟರ್ ಪಾಟ್, ಮೋಡೆಮ್ ಫಿನಾಯಿಲ್, ಬ್ಲೀಚಿಂಗ್ ಪೌಡರ್, ಕಸ ಸಂಗ್ರಹಣೆ ವಾಹನ, ಡಸ್ಟ್ ಬಿನ್ ಖರೀದಿ ಹೀಗೆ…. ಅನೇಕ ವಸ್ತುಗಳನ್ನು ತಮ್ಮ ನಿರ್ದೇಶನದಂತೆ ಖರೀದಿಸಲು ಪಿಡಿಒಗಳಿಗೆ ಮೌಖಿಕವಾಗಿ ಅದೇಶಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಸರ್ಕಾರೇತರ ಸಂಸ್ಥೆಗಳ ದರ್ಬಾರು:ಅನೇಕ ಸರ್ಕಾರೇತರ ಸಂಸ್ಥೆಗಳೂ ತಮ್ಮ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯಿತಿಗಳ ಹಣ ಖರ್ಚುಮಾಡುವಂತೆ ಅಧಿಕಾರಿಗಳ ಮೂಲಕ ಅದೇಶ ಮಾಡಿಸುತ್ತಿವೆ. ಶಾಸಕರ ಜನಸ್ಪಂದನ ಕಾರ್ಯಕ್ರಮ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ.. ಸೇರಿ ಮೇಲಿನ ಹಂತದ ಜನಪ್ರತಿಧಿಗಳೂ ಗ್ರಾಮ ಪಂಚಾಯಿತಿಗಳನ್ನು ತಮ್ಮ ಕೈಕೆಳಗೆ ಕಾರ್ಯ ನಿರ್ವಹಿಸುವ ಕಚೇರಿಗಳಂತೆ ಬಳಸಿಕೊಳ್ಳುತ್ತಿದ್ದಾರೆ.
ಅಧಿಕಾರ ಕೇಂದ್ರಿತ ವಿಕೇಂದ್ರೀಕರಣ:ಪ್ರಜಾಸತ್ತಾತ್ಮಕವಾಗಿ ಸ್ಥಾಪಿತವಾಗಿರುವ ಗ್ರಾಮ ಪಂಚಾಯಿತಿಗಳು ಅಧಿಕಾರಿಗಳ ಹಿಡಿತಕ್ಕೆ ಸಿಕ್ಕು ನಲುಗುತ್ತಿವೆ. ಜನರ ಕೈಲಿರಬೇಕಾದ ಅಧಿಕಾರ ಅಧಿಕಾರಿಗಳ ಸ್ವತ್ತಾಗಿದೆ. ವಿಕೇಂದ್ರೀಕರಣವು ‘ಅಧಿಕಾರಿ’ ಕೇಂದ್ರಿತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಅವಧಿ ಮುಗಿದರೂ ವಿಸ್ತರಣೆ:ಸೋಲಾರ ಟೆಂಡರ್ ಅವಧಿ 2022ಕ್ಕೆ ಮುಗಿದಿದ್ದರೂ ಅಧಿಕಾರಿಗಳು 2024ರವರೆಗೆ ಮತ್ತೆ ವಿಸ್ತರಿಸಿ ಕೊಟ್ಟಿದ್ದಾರೆ. 15ನೇ ಹಣಕಾಸು ಅಯೋಗದ ಅನುದಾನವನ್ನು ಅಯುಕ್ತಾಲಯದಲ್ಲಿ ತಮಗೆ ಬೇಕಾದಂತೆ ಹಂಚಿಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವ್ಯವಹಾರ ಕುದುರುವುದು ಹೇಗೆ..?: ಯಾರೋ ಒಬ್ಬ ವ್ಯಕ್ತಿ, ಏಜೆನ್ಸಿಯವರು ಮುಖ್ಯಮಂತ್ರಿ/ ಸಚಿವರು/ಶಾಸಕರು/ ಇಲಾಖೆಗಳ ಉನ್ನತಾಧಿಕಾರಿಗಳ ಮೂಲಕ ಸಣ್ಣ ಮೊತ್ತದ ಕಾಮಗಾರಿಗೆ ಶಿಫಾರಸು ಪಡೆಯುತ್ತಾರೆ. ಉದಾಹರಣೆಗೆ ಹೇಳುವುದಾದರೆ, ಜನಜಾಗೃತಿ ಗೋಡೆ ಬರಹ ಒಂದಕ್ಕೆ ಏಜೆನ್ಸಿಗಳೇ ಮೊತ್ತ (8000 ರೂ.)ನಮೂದಿಸಿ ಶಿಫಾರಸು ಪತ್ರಕ್ಕೆ ಸಹಿ ಪಡೆಯಲಾಗುತ್ತದೆ. ಶಿಫಾರಸು ನೀಡುವವರೂ ಕೂಡ ಸಣ್ಣ ಮೊತ್ತ ಎಂದುಕೊಂಡು ಮಾಡುತ್ತಾರೆ. ಒಂದು ಗೋಡೆ ಬರಹ, ಊರಿಗೊಂದಾಗುತ್ತದೆ. ಅದು ಬೇರೆ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲೆಗಳಿಗೆ ವಿಸ್ತರಿಸುತ್ತಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂದಾಜು 96,000 ರೂ. ಕ್ಕೆ ತಲುಪಿರುತ್ತದೆ. ಬೆಳೆಯುತ್ತ ಬೆಳೆಯುತ್ತ ಜಿಲ್ಲಾಮಟ್ಟದಲ್ಲಿ 2 ಕೋಟಿ ಮುಟ್ಟುತ್ತದೆ. ರಾಜ್ಯಮಟ್ಟಕ್ಕೆ ವ್ಯಾಪಿಸಿಕೊಂಡಲ್ಲಿ ಯಾವುದೇ ಟೆಂಡರ್ ಇಲ್ಲದೆ 50-60 ಕೋಟಿ ರೂ. ಸಂಸ್ಥೆ ಅಥವಾ ವಿವಿಧ ಸಂಸ್ಥೆಗಳ ಪಾಲಾಗಿರುತ್ತದೆ.
ಏಜೆಂಟರ ಕೈವಾಡ?:ತುಂಡು ಗುತ್ತಿಗೆ/ ಸಣ್ಣ ಮೊತ್ತದ ಕಾಮಗಾರಿ/ ಉಪಕರಣ, ಸಾಮಗ್ರಿಗಳನ್ನು ಖರೀದಿಗೆ ಕೊಡಿಸುವ ಏಜೆಂಟರು ಹುಟ್ಟಿಕೊಂಡಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರ ತೆರಿಗೆ ಹಣ ಸೋರಿಕೆ ತಡೆಗಟ್ಟಲಾಗದು.
ಟೆಂಡರ್ ಕಾಯ್ದೆಗೆ ಮಣ್ಣು:1 ಲಕ್ಷ ರೂ. ಒಳಗಿನ ಕಾಮಗಾರಿಗೆ ಯಾವುದೇ ಟೆಂಡರ್ ಕರೆಯಬೇಕಿಲ್ಲ. ಇದನ್ನೇ ಅಸ್ತ್ರ ವಾಗಿಸಿಕೊಂಡು ತುಂಡು ಗುತ್ತಿಗೆ ಮಾದರಿ ಯಲ್ಲಿ ಏಜೆನ್ಸಿಗಳು ಗ್ರಾಮ ಪಂಚಾಯಿತಿಗಳನ್ನು ಕೊಳ್ಳೆ ಹೊಡೆಯುತ್ತಿವೆ.
ಪಿಡಿಒಗಳ ಪರದಾಟ:ಮೇಲಧಿಕಾರಿಗಳು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ರೂಪದ ಸೂಚನೆ ನೀಡಿ ತರುವಾಯ ಮೌಖಿಕವಾಗಿ ಇಂತಹವರಿಗೇ ಕೆಲಸ ನೀಡಬೇಕು/ ಪೇಮೆಂಟ್ ಮಾಡಬೇಕು ಎಂದು ಒತ್ತಡ ಹಾಕುತ್ತಾರೆ. ಮೇಲಧಿಕಾರಿಗಳ ಮಾತು ಕೇಳದೇ ಇದ್ದರೆ ನಾನಾ ರೀತಿಯ ಕಿರುಕುಳ/ ಬೆದರಿಕೆ ಹಾಕುವಂತಹ ಘಟನೆಗಳೂ ನಡೆಯುತ್ತವೆ. ಇದನ್ನು ಹೇಳಿಕೊಳ್ಳದೆ ಪಿಡಿಒಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯಲ್ಲಿ ಬೇರೆಯವರಿಗೆ ಮಧ್ಯ ಪ್ರವೇಶಿಸುವ ಅಧಿಕಾರವಿಲ್ಲ. ನಾವು ಸೋಷಿಯಲ್ ಆಡಿಟ್ ಬಲವರ್ಧನೆಗೊಳಿಸುತ್ತೇವೆ. ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಖರೀದಿ ಮಾಡಿದ್ದು ಕಂಡು ಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ.
| ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
