| ಡಾ. ಎ.ಬಿ.ವಗ್ಗರ, ರಾಮದುರ್ಗ
ಕಿತ್ತೂರು ಬ್ರಿಟಿಷ್ ಅವಧಿಯಲ್ಲಿ ದಕ್ಷಿಣ ಮಹರಟ್ಟಾ ದೇಶದಲ್ಲಿನ ಒಂದು ಚಿಕ್ಕ ಸಂಸ್ಥಾನವಾಗಿತ್ತು. ದತ್ತು ಅನುಮತಿಗಾಗಿ ಬ್ರಿಟಿಷರೊಂದಿಗೆ ನಡೆದ ಸಂಘರ್ಷದಿಂದಾಗಿ ಸಂಸ್ಥಾನ ಅವಸಾನ ಹೊಂದಿತು. 1824ರಲ್ಲಿ ನಡೆದ ಸಂಘರ್ಷದಲ್ಲಿ ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯನ್ನು ಕೊಲ್ಲಲಾಯಿತು. ಈ ಕಿತ್ತೂರಿನ ದಂಗೆಯಿಂದ ಬ್ರಿಟಿಷ್ ಅಧಿಕಾರಿಗಳು ಎಷ್ಟು ಭಯಭೀತರಾಗಿದ್ದರೆಂದರೆ, ದಂಗೆ ಕೊನೆಗೊಂಡರೂ ಅವರಲ್ಲಿ ಭಯ ಹೋಗಿರಲಿಲ್ಲ. ಅವರ ಕನಸಿನಲ್ಲಿಯೂ ಕಾಡುತ್ತಿದ್ದ ಈ ಭಯದ ಮನಸ್ಥಿತಿಯಲ್ಲಿಯೇ ಸಿವೆಲ್ ಮರಣ ಹೊಂದಿದನು.
ರಾಯಣ್ಣ ರೋಗನ್ನವರ ಸಂಗೊಳ್ಳಿ ಗ್ರಾಮದವನು. ಕಿತ್ತೂರು ಸಂಸ್ಥಾನದ ಮರುಸ್ಥಾಪನೆಗಾಗಿ ತಂಡ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ರಾಯಣ್ಣ ದಂಗೆಯನ್ನು ಮುಂದುವರಿಸಿದನು. 1824-1825ರಲ್ಲಿ ನಡೆದ ಹೋರಾಟಗಳಿಗಿಂತ ರಾಯಣ್ಣನ ಹೋರಾಟ ವಿಶಿಷ್ಟವಾದುದು, ಯಾಕೆಂದರೆ, 1824ರ ಹೋರಾಟದಲ್ಲಿ ಪ್ರಭುತ್ವದ ಪ್ರತಿಮೆ (ಐಟ್ಞ)ಯಾಗಿ, ಹೋರಾಟಗಾರರಿಗೆ ಸ್ಪೂರ್ತಿಯಾಗಿ ಸಂಸ್ಥಾನದ ಕುಟುಂಬ ಇತ್ತು. ರಾಯಣ್ಣನ ಹೋರಾಟದ ವೇಳೆ ಚೆನ್ನಮ್ಮ ಇತ್ಯಾದಿಯಾಗಿ ಪ್ರಭುತ್ವದ ವ್ಯಕ್ತಿಗಳು ಬ್ರಿಟಿಷರ ಬಂಧನದಲ್ಲಿದ್ದರು. ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು 1824ರಲ್ಲಿ ಇದ್ದಂತೆ ಸಂಸ್ಥಾನದ ಮುಖಂಡರು ಅಥವಾ ಅಧಿಕಾರಿವರ್ಗ ಇರಲಿಲ್ಲ. ಕೆಲವರು ಶಿಕ್ಷೆಗೆ ಒಳಗಾಗಿದ್ದರೆ, ಇನ್ನೂ ಕೆಲವರು ಆಸ್ತಿ ಕಳೆದುಕೊಂಡು ಸುಮ್ಮನಿದ್ದರು. ಮತ್ತೆ ಕೆಲವರು ಪಿಂಚಣಿ ಪಡೆದುಕೊಂಡು ನಿರ್ಲಿಪ್ತರಾಗಿದ್ದರು. ರಾಯಣ್ಣನ ದಂಗೆಗೆ ಪ್ರಭುತ್ವದ ಆಜ್ಞೆಗಳಾಗಲಿ ಮತ್ತು ಇನಾಂ ಮುಂತಾಗಿ ನೀಡಲಾಗುತ್ತಿದ್ದ ಆಮಿಷಗಳಾಗಲಿ ಇರಲಿಲ್ಲ. ರಾಯಣ್ಣನ ಗುಂಪಿನಲ್ಲಿ ಸಂಸ್ಥಾನದ ಯಾವುದೇ ಸೈನಿಕರಾಗಲಿ, ಇನಾಂ ಪಡೆದ ಸೇವಕರಾಗಲಿ ಇರಲಿಲ್ಲ. ಹಳ್ಳಿಗರನ್ನೇ ಸೈನಿಕರನ್ನಾಗಿಸಿಕೊಂಡು ಮುನ್ನುಗ್ಗಬೇಕಾಗಿತ್ತು. ಅವಶ್ಯಕ ಸಂಪನ್ಮೂಲಗಳನ್ನು ಲೂಟಿ ಮೂಲಕ ಪಡೆಯಬೇಕಿತ್ತು. ಅಲ್ಲದೆ, ಈತನ ಹೋರಾಟಕ್ಕೆ ಅರಣ್ಯವೇ ರಕ್ಷಣಾಕೋಟೆ, ಜನರೇ ಇವನಿಗೆ ಕಾವಲುಗಾರರು. ಒಟ್ಟಿನಲ್ಲಿ ಇಲ್ಲಿ ಕೆಲಸ ಮಾಡಿದ್ದು ರಾಯಣ್ಣ ಮತ್ತು ಎಲ್ಲ ಸಮುದಾಯಗಳ ಈತನ ಸಹಚರರಲ್ಲಿನ ಆತ್ಮವಿಶ್ವಾಸ.

1824ರ ಹೋರಾಟಕ್ಕೆ ಸಂಬಂಧಿಸಿದಂತೆ ಕೆಲವು ಲಿಖಿತ ದಾಖಲೆಗಳು ಸಿಗಬಹುದು, ಆದರೆ, ರಾಯಣ್ಣ ಹೋರಾಟ ಕುರಿತು ಯಾವುದೇ ಪತ್ರವ್ಯವಹಾರಗಳಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೆ, 1824ರಲ್ಲಿ ಬ್ರಿಟಿಷರನ್ನು ಮಾತ್ರ ಎದುರಿಸಬೇಕಾಗಿತ್ತು. ರಾಯಣ್ಣನ ತಂಡ-ಬ್ರಿಟಿಷ್, ಬ್ರಿಟಿಷರ ಹಸ್ತಕರಾಗಿದ್ದ ಸ್ಥಳೀಯರು ಮತ್ತು ಕಿತ್ತೂರಿನ ಅಧಿಕಾರ ಪಡೆಯಬೇಕೆಂಬ ಇರಾದೆ ಹೊಂದಿದವರೊಂದಿಗೆ ಹೋರಾಡಬೇಕಿತ್ತು. ಈ ನಿಟ್ಟಿನಲ್ಲಿ ರಾಯಣ್ಣ ಎಲ್ಲ ತಳಸಮುದಾಯದ ಜನರನ್ನು ಸೇರಿಸಿಕೊಂಡು ಸಹಪಂಕ್ತಿ ಭೋಜನದ ಮೂಲಕ ಒಟ್ಟಾಗಿ ಹೋರಾಟ ಮಾಡಿದನು.
1824ರ ಡಿಸೆಂಬರ್ 5ರಂದು ಮುಂಜಾನೆ 8 ಗಂಟೆಗೆ ರಾಯಣ್ಣ ಶರಣಾಗತನಾದ. ರಾಯಣ್ಣನನ್ನು ಸಂಪಗಾಂವಿ ಜೈಲಿನಲ್ಲಿಡಲಾಗಿತ್ತು. ನಂತರ ಈತನಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ್ದರು. ಕಿತ್ತೂರಿನ ಸ್ವಾತಂತ್ರ್ಯ ಮರುಸ್ಥಾಪಿಸಲು ರಾಯಣ್ಣ ಬಂಡಾಯ ಮುಂದುವರಿಸಿದ. ಪ್ರಮುಖ ಘಟನೆಗಳೆಂದರೆ, 400-500 ಬಂಡಾಯಗಾರರು 1830ರ ಜನವರಿ 5ರಂದು ಬೀಡಿಯ ಮಮ್ಲತದಾರನ ಕಚೇರಿಯನ್ನು ಸುಟ್ಟು ಖಜಾನೆಯಲ್ಲಿನ 1900 ರೂಪಾಯಿಗಳನ್ನು ಲೂಟಿ ಮಾಡಿದರು. ಜನವರಿ 12ರ ಮುಂಜಾನೆ ಸಂಪಗಾಂವ ಮೇಲೆ ದಾಳಿ ಮಾಡಿ ದರು. ದೇವಲಾಪುರದ 15-20 ಸಿಪಾಯಿಗಳು ರಾಯಣ್ಣನ ತಂಡ ಸೇರಿಕೊಂಡರು. ಜಕ್ಕ ನಾಯಕನಕೊಪ್ಪದ ಘಟನೆಯಲ್ಲಿ 8 ಜನ ಬಂಡಾಯಗಾರರು ಮೃತಪಟ್ಟರು, 30 ಜನ ಗಾಯಗೊಂಡರು. ಜನವರಿ 14ರಂದು ರಾತ್ರಿ 12 ಗಂಟೆಗೆ ರಾಯಣ್ಣ ಮತ್ತು ಒಂಟಿಗತ್ತಿ ಚೆನ್ನಬಸಯ್ಯ ಇವರ ನೇತೃತ್ವದಲ್ಲಿ ಸಂಗೊಳ್ಳಿ ಗ್ರಾಮದ ಮೇಲೆ ದಾಳಿ ಮಾಡಲಾಯಿತು. ಅಲ್ಲಿ ಟಪಾಲ್ ರನ್ನರ್ ಆಗಿದ್ದ ಅಬ್ದುಲ್ಲಾ ಮತ್ತು ಬಾವಲೊ ಇವರ ಮನೆಯನ್ನು ಸುಟ್ಟು, ಅವರನ್ನು ಥಳಿಸಿ, ಅವರಲ್ಲಿದ್ದ ಬಿಲ್ಲೆ (ಬ್ರಿಟಿಷರು ಕಂಪನಿ ಸೇವಕರಿಗೆ ನೀಡುತ್ತಿದ್ದ ಬ್ಯಾಡ್ಜ್) ಕಿತ್ತುಕೊಂಡರು.
ರಾಯಣ್ಣ ತನ್ನ ಸಹಚರರೊಂದಿಗೆ ಬಾಲಗುಡ್ಡ ಗ್ರಾಮದ ಹಿಂಬದಿಯ ಅರಣ್ಯದಲ್ಲಿ ನೆಲೆಸಿದ್ದ. ಜ.19ರಂದು ಲೆಪ್ಟಿನೆಂಟ್ ರಸ್ಸಲ್​ನ ನೇತೃತ್ವದ ಸೈನ್ಯ ಇವರ ಮೇಲೆ ದಾಳಿ ಮಾಡಿತು. ಆಗ ಬಂಡಾಯಗಾರರು ಅಭಯಾರಣ್ಯದಲ್ಲಿ ಹಿಮ್ಮೆಟ್ಟಿದರು. ಇದರಲ್ಲಿ ರಾಯಣ್ಣನ ಏಳು ಜನ ಸಹಚರರು ಮೃತರಾದರು ಮತ್ತು ಹಲವಾರು ಜನ ಗಾಯಗೊಂಡರು. 1830ರ ಜನವರಿ 21ರ ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಗೆ ರಾಯಣ್ಣ ಮತ್ತು ಅವನ ಹಿಂಬಾಲಕರು ಗುಂಡೊಳ್ಳಿಯಲ್ಲಿ ಕಹಳೆ ಮತ್ತು ತುತ್ತೂರಿಗಳನ್ನು ಊದುತ್ತ ಬ್ರಿಟಿಷರ ಮೇಲೆ ಮದ್ದುಗುಂಡುಗಳಿಂದ ದಾಳಿ ಮಾಡಿದರು. ರಾಯಣ್ಣ ವಿವಿಧ ಕಡೆಗಳಲ್ಲಿ ನಡೆಸಿದ ದಾಳಿ ಮತ್ತು ಕಿತ್ತೂರು ಪ್ರಾಂತದ ಎಲ್ಲ ಜನರು ರಾಯಣ್ಣನ ಬಂಡಾಯಗಾರರ ಪರವಾಗಿರುವುದನ್ನು ಕಂಡು-ಕಿತ್ತೂರು ದೇಸಾಯಿಯ ಅಧಿಕಾರ ಪುನರ್ ಸ್ಥಾಪಿಸಬಹುದು ಎಂಬ ಸಂದೇಹದ ಸ್ಥಿತಿಯಲ್ಲಿ ಬ್ರಿಟಿಷರಿದ್ದರು. ಕೊನೆಗೂ 1830ರ ಏಪ್ರಿಲ್ 8ರಂದು ಬಾಳಗುಂದ ಬೆಟ್ಟದ ಡೊರಿ ಹಳ್ಳದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಖೋದಾನಪುರ ಲಿಂಗನಗೌಡ ಮತ್ತು ನೇಗಿನಹಾಳ ವೆಂಕನಗೌಡ ಇವರ ಮೋಸಕ್ಕೆ ಬಲಿಯಾಗಿ ರಾಯಣ್ಣ ಬ್ರಿಟಿಷರ ವಶವಾದನು. ಡಿಸೆಂಬರ್ 16ರಿಂದ 20ರವರೆಗೆ 13 ಜನರ ವಿಚಾರಣೆ ನಡೆಸಿ ಅದರಂತೆ: ರಾಯಣ್ಣ ರೋಗನ್ನವರ ತಂದೆ ಭರಮಪ್ಪ, ಬಾಳ ನಾಯಕ ತಂದೆ ಮಲ್ಲ ನಾಯಕ, ಬಸಲಿಂಗಪ್ಪ ತಂದೆ ಶಂಕರಪ್ಪ, ಕುಲಬಸಪ್ಪ ತಂದೆ ಕಲ್ಲಪ್ಪ, ಭೀಮಾ ತಂದೆ ಕಲ್ಯಾ, ಕೆಂಚಪ್ಪ ತಂದೆ ರುದ್ರಪ್ಪ, ಅಪ್ಪಾಜಿ ತಂದೆ ಕೆಂಚಪ್ಪ ಇವರನ್ನು 1831ರ ಜನವರಿ 26ರಂದು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ರುದ್ರನಾಯಕ ತಂದೆ ನೀಲನಾಯಕ, ಯಲ್ಲಾನಾಯಕ ತಂದೆ ಬುದ್ದಣ್ಣ, ಅಪೋ›ಜಿ ತಂದೆ ದಾದಾಸಾಹೇಬ್, ರಾಣೋಜಿ ತಂದೆ ಭಾಳಪ್ಪ, ಕೊನೇರಿ ತಂದೆ ಯಲ್ಲಪ್ಪ ಮತ್ತು ನೇಮಣ್ಣ ತಂದೆ ಪಾಯಪ್ಪ ಇವರಿಗೆ ಜೀವಮಾನ ಕರಿನೀರಿನ ಶಿಕ್ಷೆ ನೀಡಲಾಯಿತು.
ರಾಯಣ್ಣ ಹೋರಾಟದ ಬ್ರಿಟಿಷ್ ದಾಖಲೆಗಳು, ಸ್ಥಳೀಯ ಮೌಖಿಕ ಆಕರ, ಜನಪದ ಸಾಹಿತ್ಯ ಇವುಗಳಿಂದ ನೂತನ ಯಶೋಗಾಥೆಯ ವಿಶ್ಲೇಷಣೆ ಮತ್ತು ಅಹಿಂದ ಮಾದರಿಯ ಸಮಾಜನಿರ್ವಣಕ್ಕೆ ನಾಂದಿಯಾಗಬಹುದು. ಯಾಕೆಂದರೆ, ಇವನ ಹೋರಾಟದಲ್ಲಿ ಬೇಡರು, ಮುಸ್ಲಿಂ, ಮರಾಠ, ಜೈನ್, ವಡ್ಡರು, ಲಿಂಗಾಯತ, ಕುರುಬ ಮುಂತಾದ ವರ್ಗಕ್ಕೆ ಸೇರಿದವರಿದ್ದರು. ಇವರೆಲ್ಲರೊಂದಿಗೆ ಎಲ್ಲ ಜಾತಿ ಕಟ್ಟಳೆಗಳನ್ನು ಮುರಿದು, ಸಹಪಂಕ್ತಿ ಭೋಜನ ಮಾಡುವ ಮೂಲಕ ಜಾತ್ಯತೀತನಾದವನು, ದಂಗೆಯ ಸಂದರ್ಭದಲ್ಲಿ ಕಿತ್ತೂರಿನ ಅಂಗಡಿಗಳನ್ನು ಮುಚ್ಚಿಸುವ ಮೂಲಕ ಹರತಾಳವನ್ನು ಪರಿಚಯಿಸಿದನು. ರಾಯಣ್ಣನ ಹೋರಾಟ ಒಂದು ವರ್ಗ, ಪ್ರದೇಶಕ್ಕೆ ಸೀಮಿತಗೊಳ್ಳದೆ, ಶೋಷಿತ ನಾಡಿನ ಹೆಮ್ಮೆಯ ಪ್ರೇರಣೆಯಾಗಲಿ, ನಾಡಪ್ರೇಮಕ್ಕೆ ಸ್ಪೂರ್ತಿಯಾಗಲಿ.
(ಲೇಖಕರು ಸಹಾಯಕ ಪ್ರಾಧ್ಯಾಪಕರು)
ರಾಯಣ್ಣಗೆ ಗೌರವ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನವಾದ ಆಗಸ್ಟ್ 15 ಹಾಗೂ ಹುತಾತ್ಮರಾದ ಜನವರಿ 26 ರಂದು ರಾಜಧಾನಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ದಿಲ್ಲಿಯ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ಪ್ರಧಾನಿ ಮೋದಿಯಿಂದ ರಾಷ್ಟ್ರಧ್ವಜಾರೋಹಣ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
