ಚನ್ನಬಸಪ್ಪ ಮಹಲಿಂಗಪ್ಪ ಉದಾಸಿ ಎಂಬ ಹೆಸರು ಹಾವೇರಿ ಜಿಲ್ಲೆಯಲ್ಲಿ ಹೇಳಿದರೆ ಸಾಕು ಜನರಿಗೇನೋ ಆತ್ಮೀಯ ಮನೋಭಾವ. ಅದಕ್ಕೆ ಕಾರಣ ಉದಾಸಿ ‘ಎಲ್ಲರೂ ನಮ್ಮವರು’ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದುದು. ಒಬ್ಬ ವ್ಯಾಪಾರಿಯಾಗಿ, ರೈತನಾಗಿ, ಶಾಸಕ, ಸಚಿವರಾಗಿ ಹೆಸರು ಮಾಡಿದ ಸೃಜನಶೀಲ, ಕ್ರಿಯಾಶೀಲ ವ್ಯಕ್ತಿ. ಅವರದು ಮೃದು ಮನಸ್ಸು. ಪ್ರತಿಯೊಬ್ಬರನ್ನೂ ಸಮಾನ ದೃಷ್ಟಿಯಿಂದ ಕಂಡು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಉದಾಸಿ ನಿರಂತರ 80 ವರ್ಷಗಳಿಂದ ಜನ ಸೇವೆಯಲ್ಲಿ ನಿರತರಾಗಿದ್ದವರು. ಹಾನಗಲ್ಲ ಸೇರಿದಂತೆ ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಏರಿಳಿತಗಳನ್ನು ನೋಡಿ, ಅಮೋಘ ಅನುಭವ ಹೊಂದಿದ್ದ ಉದಾಸಿ, ನಾಡು ಕಂಡ ವಿಶಿಷ್ಟ ರಾಜಕಾರಣಿ.
ಸಾವಿತ್ರಮ್ಮ ಮಹಾಲಿಂಗಪ್ಪ ಉದಾಸಿ ದಂಪತಿಯ ಮಗನಾಗಿ 1937ರ ಫೆ. 2ರಂದು ಜನಿಸಿದ ಅವರು. ಶಾಲೆಯ ರಜಾ ದಿನಗಳಲ್ಲಿ ತಮ್ಮ ಸ್ನೇಹಿತರೆಲ್ಲರೂ ಸುಖವಾಗಿ ರಜಾ ಅವಧಿ ಕಳೆದರೆ ಇವರ ಗಮನ ಮಾತ್ರ ವ್ಯಾಪಾರದ ಕಡೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣಗಳನ್ನು ಆಗಲೇ ಅಳವಡಿಸಿಕೊಂಡರು. ವ್ಯಾಸಂಗ ಮುಂದುವರಿಸುವುದಕ್ಕೆ ಬಡತನ ಅಡ್ಡಿಯಾಯಿತು. ಹಾನಗಲ್ಲ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ಸಂತೆಯಲ್ಲಿ ಅಕ್ಕಿ ವ್ಯಾಪಾರ ಮಾಡುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರು. ರಾಜಕೀಯ ಸೇರುವ ಉದ್ದೇಶ ಇರಲಿಲ್ಲ. ಇವರ ವ್ಯಕ್ತಿತ್ವವನ್ನು ಗಮನಿಸಿದ ಕೆಲವು ಹಿರಿಯರು ಒತ್ತಡ ಹಾಕಿದ್ದರಿಂದ 1974ರಲ್ಲಿ ಹಾನಗಲ್ಲ ಪುರಸಭೆಗೆ ಸ್ಪರ್ಧಿಸಿ ಗೆದ್ದು, ಅಧ್ಯಕ್ಷರೂ ಆದರು.
1983ರಲ್ಲಿ ಹಾವೇರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ವಿಜಯಿಯಾದರು. ಆ ಸಮಯದಲ್ಲಿಯೆ ರಾಜ್ಯ ಸರ್ಕಾರದ ಲೆಕ್ಕ ಪತ್ರ ಸಮಿತಿ ಸದಸ್ಯರು, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರು. ಗ್ರಾನೈಟ್ ಹಗರಣದ ವ್ಯವಹಾರಕ್ಕೆ ಸಂಬಂಧಿಸಿದ ತನಿಖಾ ತಂಡದ ಜಂಟಿ ಸದಸ್ಯರು ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. 1989ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಜಿತರಾದರು. 1990ರಲ್ಲಿ ಧಾರವಾಡ ಜಿಲ್ಲೆ ಜನತಾದಳದ ಅಧ್ಯಕ್ಷರಾದರು. 1994ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಜೆ. ಎಚ್ ಪಟೇಲರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರಾದರು. ಕೇವಲ 8ನೇ ತರಗತಿ ಓದಿದ ಉದಾಸಿ ಈ ಮಟ್ಟಕ್ಕೆ ಬೆಳೆದಿದ್ದನ್ನು ಕಂಡು ಹಲವರು ನಿಬ್ಬೆರಗಾದರು. 1999ರ ಚುನಾವಣೆಯಲ್ಲಿ ಸೋಲನ್ನಪ್ಪಿದರು. ಆದರೂ ಬರದಿಂದ ಕಂಗೆಟ್ಟಿದ್ದ ರೈತರ ಪರವಾಗಿ ಹೋರಾಡಿ 100ಕೋಟಿ ರೂ.ಗಳ ಬೆಳೆವಿಮೆ ದೊರಕಿಸಿಕೊಟ್ಟರು. ಆ ಹೋರಾಟ ಇಂದಿಗೂ ಅವಿಸ್ಮರಣೀಯ.
2006ರ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಚಿಹ್ನೆಯಿಂದ ಸ್ಪರ್ಧಿಸಿ ಗೆಲುವಿನ ನಗೆಬೀರಿದ ಉದಾಸಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು, ಯಡಿಯೂರಪ್ಪವನರ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2009ರಲ್ಲಿ ರಾಜ್ಯದಲ್ಲಿ ನಡೆದ ಹಲವು ರಾಜಕೀಯ ಮಹತ್ವದ ಘಟನೆಗಳಲ್ಲಿ ಉದಾಸಿಯವರ ಪಾತ್ರ ಬಹುಮುಖ್ಯವಾಗಿತ್ತು. ಉದಾಸಿಯವರು ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಆಧುನಿಕ ತಂತ್ರಜ್ಞಾನದ ಬಗ್ಗೆಯೂ ಹೆಚ್ಚು ಆಸಕ್ತಿ ಹೊಂದಿದ್ದರು. ರಾಜಕೀಯ ಒತ್ತಡದ ಮಧ್ಯೆಯೂ ಜನಸಾಮಾನ್ಯರ ಕಷ್ಟಗಳನ್ನಾಲಿಸುವ ವಿಷಯದಲ್ಲಿ ಉದಾಸಿ ಎಲ್ಲ ಪಕ್ಷದ ರಾಜಕಾರಣಿಗಳಿಗೂ ರೋಲ್‌ಮಾಡೆಲ್ ಆಗಿದ್ದರು.
ಅದು 1952ರ ಕಾಲಘಟ್ಟ ಕಡುಬಡತನದ ಕುಟುಂಬದ ಮಹಾಲಿಂಗಪ್ಪನವರ 7ಜನ ಮಕ್ಕಳಲ್ಲಿ ಸಿ.ಎಂ. ಉದಾಸಿಯವರು ಎರಡನೇ ಮಗ, ಹಿರಿಯ ಅಣ್ಣ ದುಡಿಮೆಗಾಗಿ ಪರಸ್ಥಳಕ್ಕೆ ಹೋಗಿದ್ದರಿಂದ 8ನೇ ತರಗತಿಗೆ ಶಿಕ್ಷಣ ಸ್ಥಗಿತಗೊಳಿಸಿ, ಮನೆತನದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಉದಾಸಿ ಬಾಡಿಗೆ ಜಾಗದ ತಾತ್ಕಾಲಿಕ ಶೆಡ್‌ನಲ್ಲಿ ಬದುಕು ಸಾಗಿಸುತ್ತಿದ್ದರು. ಹಾನಗಲ್ಲಿನಲ್ಲಿ ಒಂದೇ ಕಿರಾಣಿ ಅಂಗಡಿಯಾಗಿದ್ದ ಪಕ್ಕಣ್ಣ ಮಹಾರಾಜಪೇಟೆ ಎಂಬುವವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಉದಾಸಿಯವರು ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾದರು.
ರೈಸ್‌ಮಿಲ್‌ನಲ್ಲಿ ಲೆಕ್ಕಪತ್ರ ನಿರ್ವಹಣೆ:1957-58ರಲ್ಲಿ ಅಂದಿನ ಹಾನಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ತೆರಿಗೆ ಸಂಗ್ರಹಕರಾಗಿ ಕೆಲಸ ನಿರ್ವಹಿಸಿದ್ದರು. ನಂತರ ಪಟ್ಟಣದಲ್ಲಿರುವ ಸವದತ್ತಿ ಚನ್ನಮಲ್ಲಪ್ಪನವರ ರೈಸ್ ಮಿಲ್‌ನಲ್ಲಿ ಲೆಕ್ಕಪತ್ರ ನಿರ್ವಹಿಸುವ ಪ್ರಮುಖ ಹುದ್ದೆಯನ್ನು ಉದಾಸಿಯವರು ಮಾಡಿದ್ದರು. 1961ರಲ್ಲಿ ತಾವೇ ಸ್ವತಃ ಅಕ್ಕಿ ಮತ್ತು ಭತ್ತದ ವ್ಯಾಪಾರ ಪ್ರಾರಂಭಿಸಿದ್ದರು. ಅವರಲ್ಲಿದ್ದ ಉತ್ಸಾಹವೇ ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿತ್ತು.
ಬಹುಭಾಷೆಯ ಮಾತುಗಾರ:ಅಕ್ಕಿ ವ್ಯಾಪಾರಕ್ಕಾಗಿ ನೆರೆಯ ಮಹಾರಾಷ್ಟ್ರ, ಗೋವಾ, ತಮಿಳನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಿಗೆ ಉದಾಸಿ ಹೋಗಿ ಬಂದಿದ್ದರಿಂದ ಇಂದು 5ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿ.ಎಂ ಉದಾಸಿ ಮಾತನಾಡಬಲ್ಲವರಾಗಿದ್ದರು. ಇಂಗ್ಲಿಷ್, ಉರ್ದು, ಹಿಂದಿ, ಮರಾಠಿ, ಕೊಂಕಣಿ ಭಾಷೆಗಳನ್ನು ಹುಬ್ಬೇರಿಸುವಂತೆ ಉದಾಸಿ ಮಾತನಾಡಬಲ್ಲವರಾಗಿದ್ದರು.
ಉದಾಸಿ ಇನ್ನಿಲ್ಲ:ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಹಾಲಿ ಶಾಸಕ ಸಿ.ಎಂ. ಉದಾಸಿ ಮಂಗಳವಾರ ನಿಧನರಾದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು 15 ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ ನೀಲಮ್ಮ, ಪುತ್ರ ಸಂಸದ ಶಿವಕುಮಾರ್ ಉದಾಸಿ ಮತ್ತು ಪುತ್ರಿ ಜಯಶ್ರೀ ಇದ್ದಾರೆ. ಹಾನಗಲ್ ಕ್ಷೇತ್ರದಿಂದ 1983 ರಿಂದ 9 ಬಾರಿ ಸ್ಪರ್ಧಿಸಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಧನಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಅಂತ್ಯಕ್ರಿಯೆ:ಸಿ.ಎಂ. ಉದಾಸಿ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ 12ಕ್ಕೆ ಹಾನಗಲ್ಲಗೆ ಆಗಮಿಸಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಳಿಕ ವಿರಕ್ತಮಠ ಆವರಣದ ಕುಮಾರೇಶ್ವರ ವೇದಿಕೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2ಕ್ಕೆ ಕುಮಾರೇಶ್ವರ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಕೋವಿಡ್ ನಿಯಮಾವಳಿ ಪಾಲಿಸಿ ಅಂತ್ಯಕ್ರಿಯೆ ಹಾಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.ಶಿವಭಕ್ತ ದಂಪತಿ
ಸಿ.ಎಂ ಉದಾಸಿ ಬಿಡುವಿನ ಸಮಯದಲ್ಲಿ ಪತ್ನಿ ನೀಲಮ್ಮ ಅವರೊಂದಿಗೆ ದೇವರ ಚರಿತ್ರೆಗಳನ್ನು ಓದಿ ಅದರ ಮಹತ್ವವನ್ನು ಮನೆಯಲ್ಲಿ ಪುಟ್ಟಮಕ್ಕಳಿಗೆ ತಿಳಿಸುತ್ತಿದ್ದರು. ಉದಾಸಿ ಅವರು ಪತ್ನಿ, ಸಹೋದರಿಯರ ಜತೆಗೂಡಿ ಪುರಾಣ, ಪ್ರವಚನ ಕೇಳಲು ಸಮಯ ಮೀಸಲಿಡುತ್ತಿದ್ದರು.ಮುತ್ಸದ್ದಿ ರಾಜಕಾರಣಿಯಾಗಿದ್ದ ಸಿ.ಎಂ.ಉದಾಸಿ ಆರು ಬಾರಿ ಹಾನಗಲ್ಲ ಕ್ಷೇತ್ರದಿಂದ ಆಯ್ಕೆಯಾಗಿ ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ, ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಿದ್ದನ್ನು ಮರೆಯಲಾಗದು. ಯಾವಾಗಲೂ ಕ್ರಿಯಾಶೀಲ ಚಿಂತನೆಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ರಂಭಾಪುರಿ ಪೀಠದೊಂದಿಗೆ ನಿಕಟ ಸಂಬಂಧ ಹೊಂದಿ ಹಲವು ಧಾರ್ವಿುಕ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. 85ನೇ ವಯಸ್ಸಿನಲ್ಲಿ ಶಿವೈಕ್ಯರಾದ ಅವರಿಗೆ ಪರಮಾತ್ಮ ಚಿರಶಾಂತಿ ನೀಡಲಿ.
|ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳುಬಾಳೆಹೊನ್ನೂರು
ಸಜ್ಜನ ರಾಜಕಾರಣಿ, 5 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದ ಸಿ.ಎಂ.ಉದಾಸಿ ನಿಧನ ಅತೀವ ದುಃಖ ತಂದಿದೆ. 85ನೇ ವಯಸ್ಸಿನಲ್ಲಿಯೂ ಇತರರಿಗೆ ಸ್ಪೂರ್ತಿಯ ಸೆಲೆಯಾಗಿ ಕೆಲಸ ಮಾಡಿದ್ದರು. ಬೆಳಗಾವಿಯ ಸುವರ್ಣಸೌಧ ಕಟ್ಟಡ ಕಾಮಗಾರಿಯ ಸಮಯದಲ್ಲಿ ಸಲಹೆ, ಸೂಚನೆ ನೀಡಿ ನನ್ನ ಜತೆಗೆ ಕಾರ್ಯ ಮಾಡಿರುವುದು ಶಾಶ್ವತವಾಗಿ ನನ್ನ ನೆನಪಿನಂಗಳದಲ್ಲಿ ಉಳಿದಿದೆ. ಪ್ರಾಮಾಣಿಕ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಸ್ವಚ್ಛ ಹಾಗೂ ಪ್ರಾಮಾಣಿಕ ಆಡಳಿತಕ್ಕೆ ಮಾದರಿಯಾಗಿದ್ದರು.
|ಡಾ.ಪ್ರಭಾಕರ ಕೋರೆಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
