|ಅಜ್ಜಮಾಡ ರಮೇಶ್ ಕುಟ್ಟಪ್ಪಕೊಡಗು
ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಹಾಗೂ ಟಿಕೆಟ್ ಆಕಾಂಕ್ಷಿಗಳು ಈಗಾಗಲೆ ತಾಲೀಮು ಆರಂಭಿಸಿದ್ದಾರೆ. 20 ವರ್ಷಗಳಿಂದ ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ. ಅದಕ್ಕೂ ಮೊದಲು ಕಾಂಗ್ರೆಸ್ ನೆಲೆಯೂರಿತ್ತು. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳನ್ನು ಮಾತ್ರ ಹೊಂದಿರುವ ಈ ಪುಟ್ಟ ಜಿಲ್ಲೆಯಲ್ಲಿ ಪ್ರಸ್ತುತ ರಾಜಕೀಯ ಚಟುವಟಿಕೆ ಗರಿಗೆದರಿವೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆದ ಬಳಿಕ ನಡೆದಿರುವ ಮೂರು ಚುನಾವಣೆಗಳಲ್ಲೂ ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಜಿಲ್ಲೆಯಲ್ಲಿ ಆಗಿರುವ ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಜನರು ಎದುರಿಸುತ್ತಿರುವ ಮೂಲಸೌಕರ್ಯ ಕೊರತೆಯಂಥ ವಿಷಯಗಳಿಗಿಂತ ಜಾತಿ- ಧರ್ಮದ ವಿಚಾರ ಹಾಗೂ ಪಕ್ಷ ಸಂಘಟನೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ನಿರ್ಧಾರ ತೆಗೆದುಕೊಂಡ ಬಳಿಕ ಆ ವಿಷಯ ಪ್ರತಿ ಚುನಾವಣೆಯಲ್ಲೂ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕ ವಿಷಯಗಳಿಗೆ ಕೊಡವರು ಮನ್ನಣೆ ನೀಡುತ್ತಾರೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ನೆಲೆಗಟ್ಟಿನಲ್ಲಿ ಹೆಚ್ಚು ಚರ್ಚೆ ನಡೆಯುತ್ತದೆ. ಸಂಘಟನಾತ್ಮಕ ದೃಷ್ಟಿಯಲ್ಲಿ ಬಿಜೆಪಿ ಇತರೆಲ್ಲ ಪಕ್ಷಗಳಿಗಿಂತ ಹೆಚ್ಚು ಪ್ರಬಲವಾಗಿದೆ. ಕ್ಷೇತ್ರ ಕಸಿಯಲು ಕಾಂಗ್ರೆಸ್ ಹಂಬಲಿಸುತ್ತಿದ್ದರೆ, ಜೆಡಿಎಸ್ ಇಲ್ಲಿ ಹೇಳಿಕೊಳ್ಳುವಷ್ಟು ಬಲ ಹೊಂದಿಲ್ಲ.
ಸತತ ಮೂರು ಅವಧಿಯಿಂದ ಮಡಿಕೇರಿ ಕ್ಷೇತ್ರವನ್ನು ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿನಿಧಿಸುತ್ತಿದ್ದಾರೆ. ಅದಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಸೋಮವಾರಪೇಟೆ ಕ್ಷೇತ್ರವನ್ನು ರಂಜನ್ 2 ಬಾರಿ ಪ್ರತಿನಿಧಿಸಿದ್ದರು. 6 ಚುನಾವಣೆ ಎದುರಿಸಿ 5 ಬಾರಿ ಗೆಲುವು ಸಾಧಿಸಿರುವ ರಂಜನ್ ಮತ್ತೊಂದು ಅವಧಿಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ಪ್ರಬಲವಾಗಿ ವ್ಯಕ್ತವಾಗುತ್ತಿದ್ದು, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಬಿ. ಭಾರತೀಶ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ರಂಜನ್ ಬಳಿಕ ತಾನೇ ಅಭ್ಯರ್ಥಿ ಎಂಬ ನಿರೀಕ್ಷೆಯೊಂದಿಗೆ ಭಾರತೀಶ್ ತಾಳ್ಮೆಯಿಂದ ಕಾಯುತ್ತಿದ್ದಾರೆ. ಕೊಡಗು ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ನಡುಕ ಹುಟ್ಟಿಸಿದ್ದ ಡಾ.ಮಂಥರ್ ಗೌಡ ಮುಂದಿನ ಎಂಎಲ್​ಎ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹಂಬಲದೊಂದಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಈ ಸಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಕೆ.ಪಿ.ಚಂದ್ರಕಲಾ ಮತ್ತೊಮ್ಮೆ ಸ್ಪರ್ಧೆ ಇಚ್ಛೆ ಹೊಂದಿದ್ದಾರೆ. ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಹರಪಳ್ಳಿ ರವೀಂದ್ರ, ಮಿಥುನ್ ಗೌಡ, ವಿ.ಪಿ.ಶಶಿಧರ್ ಹೀಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ನಾಪಂಡ ಮುತ್ತಪ್ಪ ಟಿಕೆಟ್ ನಿರೀಕ್ಷೆಯೊಂದಿಗೆ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಕೂಡ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.
ಕೆ.ಜಿ. ಬೋಪಯ್ಯ ಸತತ ಮೂರು ಅವಧಿಯಿಂದ ವಿರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೊದಲು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಈ ಕ್ಷೇತ್ರ ಮರುವಿಂಗಡಣೆ ಸಂದರ್ಭ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಮರು ವಿಂಗಡಣೆಗೆ ಮುನ್ನ ಬೋಪಯ್ಯ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದರು. ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ಕೂಗು ಕೊಡವರಿಂದ ನಿರಂತರವಾಗಿ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಮತ್ತೊಂದು ಅವಧಿಗೆ ಸ್ಪರ್ಧಿಸಲು ಕೆ.ಜಿ. ಬೋಪಯ್ಯ ತಮ್ಮದೇ ಶೈಲಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಟಿಕೆಟ್​ಗೆ ಕರ್ನಾಟಕ ಪಶ್ಚಿಮಘಟ್ಟ ಕಾರ್ಯಪಡೆ ಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ, ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಉಪಾಧ್ಯಕ್ಷ ಗುಮ್ಮಟೀರ ಕಿಲನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಕುಶ್ವಂತ್ ಕೋಳಿಬೈಲು, ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಹೆಸರು ಕೂಡ ಚರ್ಚೆಯಲ್ಲಿದೆ. ರಾಜ್ಯ ರಾಜಕೀಯದಲ್ಲಿ ವಿಶೇಷ ಛಾಪು ಮೂಡಿಸಿರುವ ಎ.ಕೆ. ಸುಬ್ಬಯ್ಯ ಅವರ ಪುತ್ರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿ ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕೂಡ ಕಾಂಗ್ರೆಸ್​ನ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಕಳೆದ ಬಾರಿ ಸ್ಪರ್ಧಿಸಿದ್ದರು. ಪ್ರಸ್ತುತ ಸಂಕೇತ್ ರಾಜಕೀಯವಾಗಿ ತಟಸ್ಥರಾಗಿದ್ದಾರೆ. ಉಳಿದಂತೆ ಪಕ್ಷದಿಂದ ಸ್ಪರ್ಧೆಗೆ ಯಾರೂ ಒಲವು ತೋರಿದಂತಿಲ್ಲ.
ಸ್ಫೋಟಕ್ಕೀಡಾದ ಕಾರ್ಖಾನೆ ಅನಧಿಕೃತ; ಗುಟ್ಟಾಗಿ ಫ್ಯಾಕ್ಟರಿ ಆರಂಭಿಸಿದ್ದ ಮಾಲೀಕ ಪರಾರಿ..

ರಾಜಕುಮಾರ ಟಾಕಳೆ ವಿರುದ್ಧ ಎಫ್​ಐಆರ್​; ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ ಪ್ರಕರಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
