ಎಸ್​ಇಪಿ ಅಳವಡಿಕೆ ರಾಜ್ಯದಲ್ಲಿ ಮಕ್ಕಳನ್ನು ವಿಭಜಿಸುವ ಪ್ರಯತ್ನವಾಗಲಿದೆ. ಕಾರಣ ಸಿಬಿಎಸ್​ಇ ಹಾಗೂ ಇತರ ಕೇಂದ್ರ ಬೋರ್ಡ್​ಗಳಲ್ಲಿ ಅಭ್ಯಾಸ ನಡೆಸುತ್ತಿರುವ ಮಕ್ಕಳಿಗೆ ಯಾವುದೇ ದ್ವಂದ್ವವಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಖಾಸಗಿ ಶಾಲೆಗಳು ಬೋರ್ಡ್​ಗಳನ್ನು ಬದಲಿಸುವ ನಿರ್ಣಯ ತೆಗೆದುಕೊಂಡರೆ ಹಾಗೆಯೇ ಸರ್ಕಾರಿ ಶಾಲೆಗಳಿಂದ ಬಿಡಿಸಿ ಕೇಂದ್ರ ಬೋರ್ಡ್​ಗಳಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಸೇರಿಸಿದರೂ ಅಚ್ಚರಿಯೇನಿಲ್ಲ.
|ಪ್ರೊ. ನಂದಿನಿ ಲಕ್ಷ್ಮೀಕಾಂತ
ಮಾಧ್ಯಮಗಳಲ್ಲಿ ಶಿಕ್ಷಣ ನೀತಿ ಕುರಿತಾಗಿ ವರದಿಗಳುಮತ್ತೆ ಪ್ರಚಲಿತಕ್ಕೆ ಬಂದಿವೆ. ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಬೆಂಬಲಿಸಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಷನ್ ವೇದಿಕೆ ರಾಜ್ಯದಾದ್ಯಂತ ನಡೆಸಿದ ಸಹಿ ಸಂಗ್ರಹದ ಪ್ರಯತ್ನವೊಂದು ಜನಾಂದೋಲನದ ಮಾದರಿಯಲ್ಲಿ ನಡೆದು ಕೇವಲ ಒಂದು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಸಹಿ ಪಡೆದುಕೊಂಡಿದೆ. ಈ ಸಹಿ ಸಂಗ್ರಹ ಆಂದೋಲನದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಕುರಿತು ಆಸಕ್ತರಿರುವವರ ಮತ್ತು ಶಿಕ್ಷಣ ಕ್ಷೇತ್ರದ ಭಾಗಿದಾರರ ಪಾಲ್ಗೊಳ್ಳುವಿಕೆ ಕಂಡು ಬಂದಿದೆ. ಅದರಲ್ಲೂ ಸುಮಾರು 8 ಲಕ್ಷಕ್ಕೂ ಮೀರಿದ ಸಹಿಗಳನ್ನು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಂಗ್ರಹಿಸಿದ್ದಾರೆ ಎಂದರೆ ಶಿಕ್ಷಕ- ಪಾಲಕರಿಗಿರಲಿ ವಿದ್ಯಾರ್ಥಿಗಳಿಗೂ ತಮ್ಮ ಭವಿಷ್ಯದ ಬಗ್ಗೆ ಕಳವಳದ ಪರಿಸ್ಥಿತಿ ಬಂದಿದೆಯೆಂದರೆ ಅದಕ್ಕೆ ನೇರ ಕಾರಣ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಯೇರಿದ ಸರ್ಕಾರದ ಮನಸ್ಥಿತಿ. ಶಿಕ್ಷಣ ಕ್ಷೇತ್ರವನ್ನೂ ಬಿಡದ ರಾಜಕೀಯ. ರಾಜ್ಯದ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ಖಾಸಗಿ ಶಾಲೆಯ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಶಿಕ್ಷಣದತ್ತ ಕಾಳಜಿ ವಹಿಸಿ ಸಹಿ ಸಂಗ್ರಹಿಸಿ ಹಿರಿತನ ತೋರಿದ್ದು ನಿಜಕ್ಕೂ ಹೆಮ್ಮೆಯ ವಿಷಯ.
ಸಹಿ ಸಂಗ್ರಹದಲ್ಲಿ ಶಿಕ್ಷಣ ಕ್ಷೇತ್ರದ ಭಾಗೀದಾರರ ಸಮಗ್ರ ಪಾಲ್ಗೊಳ್ಳುವಿಕೆಗೆ ಕಾರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು. ರಾಜ್ಯದ ಸಂಸ್ಕೃತಿಯ ಪರಿಚಯ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಧ್ಯವಿಲ್ಲವೆಂಬ ನೆಪವೊಡ್ಡಿ, ರಾಜ್ಯದ ಸರ್ಕಾರಿ ಮತ್ತು ರಾಜ್ಯ ಸರ್ಕಾರದ ಮಂಡಳಿಗಳ ಅಧೀನಕ್ಕೆ ಒಳಪಟ್ಟ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಬಲ್ಲ ರಾಜ್ಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸಲು ರಚಿಸಿರುವ ಸಮಿತಿ ನಡೆಸುತ್ತಿರುವ ಸಭೆಗಳ ಅಥವಾ ಅದಕ್ಕೆ ಬೆಂಬಲಿತ ಸಭೆಗಳ ಕುರಿತಾದ ವರದಿಗಳೇ ಈ ಸಹಿಸಂಗ್ರಹದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಕಾರಣವಾಯಿತು ಎಂದರೆ ಅತಿಶಯವಾಗಲಾರದು.
ರಾಜ್ಯದ ಹಿರಿಯ ಶಿಕ್ಷಣ ತಜ್ಞರನ್ನು ಕಡೆಗಣಿಸಿ ಸಮಿತಿಯನ್ನು ರಚಿಸಿದ ಸರ್ಕಾರ, ಸಮಿತಿಯ ನಾಯಕತ್ವವನ್ನು ನೆರೆ ರಾಜ್ಯದವರಾದ, ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹಿಂದಿನ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರಿಗೆ ನೀಡಿತು. ಅಷ್ಟೇ ಅಲ್ಲ, ತಂಡದಲ್ಲಿ ಎಂಟು ಜನರು ಹೊರರಾಜ್ಯದವರು. ಅಂದರೆ ರಾಜ್ಯ ಶಿಕ್ಷಣ ಸಮಿತಿಯಲ್ಲಿ ರಾಜ್ಯದ ಶಿಕ್ಷಣ ತಜ್ಞರ ಸಂಖ್ಯೆ ಹೊರಗಿನವರಿಗೆ ಹೋಲಿ ಸಿದರೆ ಕಡಿಮೆ. ವಿಪರ್ಯಾಸ ನೋಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ರಚಿಸಲು ಮುಂದಾಳತ್ವ ನಮ್ಮ ರಾಜ್ಯದವರಿಗೆ ದೊರೆತರೆ, ರಾಜ್ಯ ಶಿಕ್ಷಣ ನೀತಿ (ಎಸ್​ಇಪಿ) ರಚಿಸಲು ನಮಗೆ ಕನ್ನಡ ಸಂಸ್ಕೃತಿ ಅರಿತ(?) ಹೊರ ರಾಜ್ಯದವರು ಬೇಕಾಯಿತು!
ಇನ್ನು, ನಡೆಯುತ್ತಿರುವ ಸಭೆಗಳ ವರದಿಗಳನ್ನು ಓದಿದಾಗ, ಎನ್​ಇಪಿ- 2020 ಕರಡು ಸಿದ್ಧಪಡಿಸುವುದಕ್ಕೂ ಮುಂಚಿನ ಪೊಸಿಷನ್ ಪೇಪರ್​ಗಳ ಮತ್ತು ಎನ್​ಇಪಿ ಕುರಿತ ಚರ್ಚೆಗಳಲ್ಲಿ, ಗೋಷ್ಠಿಗಳಲ್ಲಿ ತಯಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ರಾಜ್ಯದ ಶಿಕ್ಷಕರ ದೊಡ್ಡ ವೃಂದವೇ ತಾವು ಎನ್​ಇಪಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಸುಳ್ಳೇ ಎನ್ನುವಷ್ಟು ಗೊಂದಲದ ವಾತಾವರಣ ನಿರ್ಮಾಣ ಮಾಡುವ ಉದ್ದೇಶವೇ ಅನ್ನಿಸದಿರದು. ನೂರು ಬಾರಿ ಸುಳ್ಳು ಹೇಳಿದರೆ ಸುಳ್ಳೇ ಸತ್ಯವಾಗುತ್ತದೆ ಎಂಬ ಹೇಳಿಕೆಯೇ ಇದೆಯಲ್ಲ! ಎಸ್​ಇಪಿ ಸಮಿತಿ ನಡೆಸುವ ಸಭೆಗಳ ಅಥವಾ ಆ ನಿರ್ಣಯಕ್ಕೆ ಪೂರಕವಾಗಿ ನಡೆಯುವ ಸಭೆಗಳ ವರದಿಗಳು ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಗೊಂದಲದ ಸ್ಥಿತಿಗೆ ತಳ್ಳುತ್ತಿವೆ.
ಗ್ರಾಮದ ಸ್ತರದಿಂದ ಸಮಾಜದ ಎಲ್ಲ ವರ್ಗದ ಜನ, ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು, ಶಿಕ್ಷಕರು, ಉನ್ನತ ಶಿಕ್ಷಣದ ಅಧಿಕಾರಿಗಳು, ಶಿಕ್ಷಕರ ಸಂಘ ಸಂಸ್ಥೆಗಳು, ಆಡಳಿತ ಮಂಡಳಿಗಳು, ಸ್ಥಾಯಿಸಮಿತಿಗಳು ಎಲ್ಲರೊಂದಿಗೆ ಸತತ ನಾಲ್ಕು ವರ್ಷಗಳ ಕಾಲದ ಚಿಂತನ ಮಂಥನ ಸುಳ್ಳು ಎಂಬ ಭಾವ ಮೂಡಿಸುವಂತೆ ‘ಎನ್​ಇಪಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಯಿತು, ಅಧ್ಯಯನ ಸಾಲದು’ ಎಂಬರ್ಥ ಬರುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ದೊರೆತ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ದಾಖಲೆಗಳನ್ನು ಶೋಧಿಸಿ, ಸಿದ್ಧಪಡಿಸಿದ ಎನ್​ಇಪಿಗೆ, ಕೆಲವೇ ತಿಂಗಳ ಸಮಯದಲ್ಲಿ ಸಿದ್ಧವಾಗುವ ಎಸ್​ಇಪಿ ಎಲ್ಲಿಯ ಹೋಲಿಕೆ? ಅಷ್ಟು ಬೃಹತ್ ಕಾರ್ಯವನ್ನೇ ‘ಅಧ್ಯಯನ ಸಾಲದು’ ಎನ್ನುವವರು ಕೆಲವೇ ಶಿಕ್ಷಣ ತಜ್ಞರ ಹೇಳಿಕೆಗಳನ್ನು ಕ್ರೋಡೀಕರಿಸಿ ರಾಜ್ಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸಿದರೆ ಹೇಗೆ ಒಪ್ಪುವರು? ಇದೆಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿದ್ದರೆ, ಸಮಿತಿ ಆಯ್ದು ಮಾತನಾಡಿಸುತ್ತಿರುವ ಶಿಕ್ಷಣ ತಜ್ಞರೂ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿ ಕೊಡಲು ಸಿದ್ಧರಿರುವಂತೆ ಶಿಕ್ಷಕ ವಲಯಕ್ಕೆ ಕಾಣುತ್ತಿದ್ದಾರೆ.
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು. ಎನ್​ಇಪಿ ಅಳವಡಿಸಲು ಮೂಲ ಸೌಲಭ್ಯಗಳ ಕೊರತೆಯತ್ತ ಗಮನ ಹರಿಸದೇ ಹಿಂದಿನ ಸರ್ಕಾರ ತುರಾತುರಿಯಲ್ಲಿ ಎನ್​ಇಪಿಯನ್ನು ಅಳವಡಿಸುವ ನಿರ್ಧಾರ ತೆಗೆದುಕೊಂಡಿದೆ, ಹೀಗಾಗಿ ನಾವು ಎನ್​ಇಪಿಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ಇಂದಿನ ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದೂ ನೆನಪಿದೆ. ಶಿಕ್ಷಕರ ನೇಮಕಾತಿಯೂ ಸೇರಿದಂತೆ, ಶಾಲೆಗಳ ಕಟ್ಟಡ ನಿರ್ವಹಣೆ, ಶೌಚಾಲಯ ವ್ಯವಸ್ಥೆ ಮತ್ತು ಅವುಗಳ ಸ್ವಚ್ಛತೆಯ ಕುರಿತು ಸಚಿವಾಲಯದವರು ಮಾಹಿತಿ ಸಂಗ್ರಹಿಸಿದ್ದಾರಾದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಉದ್ದೇಶಿಸಿರುವ ಎಸ್​ಇಪಿ ಅಳವಡಿಕೆಗೆ ಮುನ್ನ ಮೂಲ ಸೌರ್ಕಯವನ್ನು ನೀಡಲು ಸಿದ್ಧರಿದ್ದಾರೆ ಎಂದಾಯಿತು. ಇನ್ನೇನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚೇನೂ ಸಮಯವಿಲ್ಲ, ಕೊರತೆ ಯಾವ ಮಟ್ಟದಲ್ಲಿತ್ತು ಮತ್ತು ಅದನ್ನು ಯಾವ ಮಟ್ಟಕ್ಕೆ ಸಮಗ್ರವಾಗಿ ಪೂರೈಸಿಕೊಡಲಾಗಿದೆ, ಬಾಕಿಯಿರುವ ಇನ್ನೆಷ್ಟು ಕೆಲಸವನ್ನು ಎಂದಿಗೆ ಪೂರ್ಣಗೊಳಿಸುವರು ಎಂಬ ಮಾಹಿತಿಯನ್ನು ಶಿಕ್ಷಣ ಸಚಿವರು ನೀಡಬೇಕಾಗುತ್ತದೆ.
ಎಸ್​ಇಪಿ ಅಳವಡಿಕೆ ರಾಜ್ಯದಲ್ಲಿ ಮಕ್ಕಳನ್ನು ವಿಭಜಿಸುವ ಪ್ರಯತ್ನವಾಗಲಿದೆ. ಕಾರಣ ಸಿಬಿಎಸ್​ಇ ಹಾಗೂ ಇತರ ಕೇಂದ್ರ ಬೋರ್ಡ್​ಗಳಲ್ಲಿ ಅಭ್ಯಾಸ ನಡೆಸುತ್ತಿರುವ ಮಕ್ಕಳಿಗೆ ಯಾವುದೇ ದ್ವಂದ್ವವಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಖಾಸಗಿ ಶಾಲೆಗಳು ಬೋರ್ಡ್​ಗಳನ್ನು ಬದಲಿಸುವ ನಿರ್ಣಯ ತೆಗೆದುಕೊಂಡರೆ ಹಾಗೆಯೇ ಸರ್ಕಾರಿ ಶಾಲೆಗಳಿಂದ ಬಿಡಿಸಿ ಕೇಂದ್ರ ಬೋರ್ಡ್​ಗಳಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಸೇರಿಸಿದರೂ ಅಚ್ಚರಿಯೇನಿಲ್ಲ. ಈ ಹಿಂದೆ ಅನ್ವಯವಾದ ಎರಡೂ ಶಿಕ್ಷಣ ನೀತಿಗಳನ್ನು ಯಾವುದೇ ರಾಜ್ಯ ತಿರಸ್ಕರಿಸದಿರಲು ಸಾಂವಿಧಾನಿಕ ಕಾರಣವೂ ಇದೆ. ಆದರೆ ನಮ್ಮ ರಾಜ್ಯದ ಸರ್ಕಾರ, ರಾಜಕೀಯ ಜಿದ್ದಾಜಿದ್ದಿಯನ್ನು ಮುಂದಿಟ್ಟುಕೊಂಡಿದೆ. ಎನ್​ಇಪಿ ಅಳಡಿಸಲು ಸಮಯ ಮತ್ತು ಬುದ್ಧಿಯನ್ನು ವ್ಯಯಿಸಿ, ಸಿದ್ಧ ಮಾಡಿಕೊಂಡಿದ್ದ ಶಿಕ್ಷಣ ವ್ಯವಸ್ಥೆಯ ಕೈ ಕಟ್ಟಿಹಾಕಿ ಮುಂದಕ್ಕೆ ಹೋಗಲಾರದೇ ಅತಂತ್ರ ಪರಿಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ರಾಜಕೀಯ ರಹಿತ ಪೋ›ತ್ಸಾಹ ಬೇಕಿದೆ.
(ಲೇಖಕರು ಶಿಕ್ಷಣ ತಜ್ಞರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
