ಬೆಂಗಳೂರು:ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದ ಜನಾಂಗಗಳ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಣಯಾತ್ಮಕ ಹೆಜ್ಜೆಯಿಟ್ಟಿದ್ದು, 2020-21ರ ಬಜೆಟ್​ನಲ್ಲಿ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸಿಎಂ ಆದೇಶ ಹೊರ ಬೀಳುತ್ತಿದ್ದಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಾರ್ಯಪ್ರವೃತ್ತರಾಗಿದ್ದು, ಬಜೆಟ್​ಗೆ ಸೇರಿಸಬೇಕಾದ ಪ್ರಸ್ತಾವನೆ ಸಿದ್ಧಪಡಿಸಲು ಅಗತ್ಯ ಕ್ರಮವಹಿಸಬೇಕೆಂದು ಸಮಾಜ ಕಲ್ಯಾಣ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅನುಕೂಲವೇನು? ಪ್ರತ್ಯೇಕ ಸಚಿವಾಲಯ ಸೃಜಿಸುವುದರಿಂದ ಪರಿಶಿಷ್ಟ ವರ್ಗದ ಕುಂದು-ಕೊರತೆಗಳಿಗೆ ತ್ವರಿತ ಪರಿಹಾರ, ಕಡತಗಳ ಶೀಘ್ರ ವಿಲೇವಾರಿ, ಆಡಳಿತಾತ್ಮಕ ಹಾಗೂ ಆರ್ಥಿಕ ನಿರ್ಧಾರಗಳಲ್ಲಿ ವೇಗ ಹೆಚ್ಚಲಿದ್ದು, ಅನುದಾನ ಸಮರ್ಪಕ ಬಳಕೆ ಹಾಗೂ ಪರಿಣಾಮಕಾರಿ ಅಭಿವೃದ್ಧಿಗೆ ನೆರವಾಗಲಿದೆ.
ಸಚಿವಾಲಯಕ್ಕೆ ಪ್ರತ್ಯೇಕವಾಗಿ ಐಎಎಸ್ ಅಧಿಕಾರಿ ಶ್ರೇಣಿಯ ಕಾರ್ಯದರ್ಶಿ ಹಾಗೂ ಸಂಬಂಧಿತ ಸಿಬ್ಬಂದಿಗಳು ಲಭ್ಯವಾಗಲಿದ್ದು, ನಿರ್ದಿಷ್ಟ ಕೆಲಸದ ಕಡತ ಯಾವ ಹಂತದಲ್ಲಿದೆ ಎಂದು ಫಲಾನುಭವಿಗಳಿಗೆ ಸುಲಭವಾಗಿ ತಿಳಿಯುತ್ತದೆ. ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಪಡೆಯುವುದು ಮತ್ತಷ್ಟು ಸಲೀಸಲಾಗುತ್ತದೆ.
ರಾಜಕೀಯ ಲಾಭದ ಲೆಕ್ಕಾಚಾರ:ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪರಿಶಿಷ್ಟ ಪಂಗಡಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಾಲ್ಮೀಕಿ ಮಠದ ಪೀಠಾಧಿಪತಿ ಸಹಿತ ಸಮುದಾಯದ ಅನೇಕ ಮುಖಂಡರು ಪದೇ ಪದೆ ಒತ್ತಡ ಹೇರಿದ್ದು, ಇದಕ್ಕಾಗಿ ಸಚಿವ ಶ್ರೀರಾಮುಲು ಹಾಗೂ ರಮೇಶ ಜಾರಕಿಹೊಳಿ ಪ್ರಬಲ ಲಾಬಿ ನಡೆಸಿದ್ದರು.
ಪ್ರಬಲ ಸಮುದಾಯದ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದರಿಂದ ಬಿಜೆಪಿ ವರಿಷ್ಠರ ಆಣತಿಯಂತೆ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದನ್ನು ಸಿಎಂ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಸಚಿವಾಲಯ ಸೃಷ್ಟಿಸುವ ಮೂಲಕ ಕೋಪ ಶಮನದ ತಂತ್ರ ಹೂಡಿದ್ದಾರೆ.
ಅಲ್ಲದೇ ನ್ಯಾ.ರಾಮಮೋಹನ ದಾಸ್ ವರದಿ ಕೈಸೇರಿದ ತಕ್ಷಣ ಪರಿಶಿಷ್ಟ ಪಂಗಡದ ಮೀಸಲು ಶೇ.3 ರಿಂದ 7.5ಕ್ಕೆ ಹೆಚ್ಚಿಸುವುದಾಗಿ ಬಿಎಸ್​ವೈ ಭರವಸೆ ನೀಡಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಆಗಿ ಕ್ರಮೇಣ ಪರಿವರ್ತನೆಯಾಗಿರುವ ಪರಿಶಿಷ್ಟ ಪಂಗಡದ ಜನಾಂಗಗಳನ್ನು ಹಿಡಿದಿಟ್ಟುಕೊಳ್ಳುವ ರಾಜಕೀಯ ತಂತ್ರವಾಗಿದೆ.
ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಅನುದಾನ ನಿಗದಿ ಹಾಗೂ ಬಳಕೆಗೆಂದು ಪ್ರತ್ಯೇಕ ಶಾಸನ ರೂಪಿಸಿ ಜಾರಿಗೊಳಿಸಿದ್ದೇವೆ ಎಂದು ಕಾಂಗ್ರೆಸ್​ನ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದು, ಪ್ರತ್ಯುತ್ತರದ ಅಸ್ತ್ರವಾಗಿ ಪರಿಶಿಷ್ಟ ವರ್ಗದ ಸಚಿವಾಲಯವನ್ನು ಬಿಜೆಪಿ ಬಳಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಭರವಸೆ ಈಡೇರಿಕೆ
ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಪೀಠ ಫೆ.9ರಂದು ಏರ್ಪಡಿಸಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದ ಸಿಎಂ ಬಿಎಸ್​ವೈ, ಪರಿಶಿಷ್ಟ ಪಂಗಡದ ಕುಂದು-ಕೊರತೆ ಪರಿಹರಿಸಲು, ಅಭಿವೃದ್ಧಿ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರು. ಸಾರ್ವಜನಿಕ ಸಮಾರಂಭದಲ್ಲಿ ನುಡಿದಂತೆಯೇ ಸಿಎಂ ಹೆಜ್ಜೆಯಿಟ್ಟಿದ್ದು, ಪ್ರತ್ಯೇಕ ಸಚಿವಾಲಯದ ಬೇಡಿಕೆಗೆ ಹೆಚ್ಚು ದಿನ ಕಾಯಬೇಕಾಗಿಲ್ಲವೆಂಬ ಸಂದೇಶವನ್ನು ರವಾನಿಸಿದ್ದಾರೆ. ಸಿಎಂ ಸೂಚನೆ ಪ್ರಕಾರ ಉನ್ನತಾಧಿಕಾರಿಗಳು ಬೇಕಾದ ತಯಾರಿ ನಡೆಸಿದ್ದು, ಮುಂದಿನ ಬಜೆಟ್​ನಲ್ಲಿ ನಾಯಕ ಸಮುದಾಯದ ಬಹು ವರ್ಷಗಳ ಕನಸು ನನಸಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
