ಬೆಂಗಳೂರು:ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಕೈಬಿಡಲು ಕಾರಣವೇನು ? ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ಮುಂದಾಗಿದ್ದು, ಬಡವರ ಮಕ್ಕಳು ಓದುವ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾತ್ರ ಎಸ್‌ಇಪಿ ಅನ್ವಯವೆ ? ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ.
ಪೀಪಲ್ಸ್ ಫೋರಂ ಫಾರ್ ಎಜ್ಯುಕೇಷನ್ ಕರ್ನಾಟಕ ವೇದಿಕೆಯು ‘ಪಠ್ಯಪುಸ್ತಕ ಹಾಳುಗೆಡವಿದ ಸರ್ಕಾರ’ ಘೋಷ ವಾಕ್ಯದಡಿ ರಚಿಸಿದ ಅಣಕು ಚಿತ್ರ (ಮೀಮ್ಸ್)ಗಳನ್ನು ಶಾಸಕರ ಭವನದ ಸಭಾಂಗಣದಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಈಶ್ವರ್ ಖಂಡ್ರೆ, ಶಾಮನೂರು ಮಲ್ಲಿಕಾರ್ಜುನ, ಎಂ.ಬಿ.ಪಾಟೀಲ್ ಮತ್ತಿತರಿಗೆ ಸೇರಿದ ಖಾಸಗಿ ಶಾಲೆಗಳು ಒಳಗೊಂಡು ರಾಜ್ಯದಲ್ಲಿ ಏಕರೂಪವಾಗಿ ಎಸ್‌ಇಪಿ ಜಾರಿಗೊಳಿಸುವ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಇಪಿ ರೂಪಿಸುವುದಕ್ಕೆ ಈಗಾಗಲೇ ತಯಾರಿ ನಡೆಸಿದೆ. ಪ್ರಸ್ತಾವಿತ ಹೊಸ ನೀತಿಯ ರೀತಿ- ರಿವಾಜು ತಿಳಿಸಲು ಕೋರಿ ಅನೇಕ ಶಿಕ್ಷಣ ತಜ್ಞರಿಗೆ ಪತ್ರ ಬರೆದಿದೆ. ಹೀಗಿರುವಾಗ ಪಠ್ಯಪುಸ್ತಕ ಪರಿಷ್ಕರಣೆಗೆ ಮತ್ತೊಂದು ತಜ್ಞರ ಸಮಿತಿ ರಚಿಸುವ ಔಚಿತ್ಯವೇನು ? ಗೊತ್ತಾಗುತ್ತಿಲ್ಲ ಎಂದರು.
ಪಠ್ಯಪುಸ್ತಕದಲ್ಲಿ ರಾಜಕೀಯ ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ. ಬರಗೂರು ಸಮಿತಿ ರಚಿಸಿದ್ದ ಪಠ್ಯ ಪುಸ್ತಕಗಳಿಗೆ ಹೆಚ್ಚಿನ ಪ್ರಮಾಣದ ಆಕ್ಷೇಪಣೆ ವ್ಯಕ್ತವಾಗಿದ್ದವು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಈ ಪುಸ್ತಕಗಳನ್ನು ಎನ್‌ಸಿಇಆರ್‌ಟಿಗೆ ಕಳುಹಿಸಲಾಗಿತ್ತು. ಎನ್‌ಸಿಇಆರ್‌ಟಿ ನೀಡಿದ್ದ 70 ಪುಟಗಳ ವರದಿಯಲ್ಲಿ ಬರಗೂರು ಸಮಿತಿ ಪಠ್ಯ ಕಳಪೆಮಟ್ಟದ್ದಾಗಿದೆ ಎಂದು ತಿಳಿಸಿತ್ತು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಚಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ತಜ್ಞರ ಸಮಿತಿ ಒಂದು ವರ್ಷ ಕಾಲ ಅಧ್ಯಯನ ನಡೆಸಿ, ಕೆಲವು ವಿಷಯಗಳ ಆಯ್ದ ಪಠ್ಯಗಳಲ್ಲಿ ಬದಲಾವಣೆ, ಪರಿಷ್ಕರಣೆಗೆ ಸೂಚಿಸಿತ್ತು, ಅದರಂತೆಯೇ ಕ್ರಮವಹಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ತಜ್ಞರ ಸಮಿತಿ ಕೂಡ ರಚಿಸದೆ ತರಾತುರಿಯಲ್ಲಿ ಪಠ್ಯಪರಿಷ್ಕರಿಸಿದ್ದು, ಕಾರಣಗಳನ್ನು ಬಹಿರಂಗಪಡಿಸಿಲ್ಲ.
ಹಿಂದಿನ ಪಠ್ಯ ಕಿತ್ತು ಬಿಸಾಕಿದ್ದೇವೆ, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪದೇ ಪದೆ ಹೇಳಿದ್ದಾರೆ. ರಾಜಕೀಯ ಹುನ್ನಾರದ ಭಾಗವಾಗಿ ಪರಿಷ್ಕರಿಸಿದೆಯೇ ಹೊರತು ಮಕ್ಕಳಿಗೆ ಉತ್ತಮ ಶಿಕ್ಷಣ, ಒಳ್ಳೆಯ ಭವಿಷ್ಯ ಕಟ್ಟಿಕೊಡುವ ಉದ್ದೇಶಕ್ಕಲ್ಲ ಎಂಬುದು ನಿಚ್ಚಳವಾಗಿದೆ ಎಂದರು.
ಮಕ್ಕಳ ಭವಿಷ್ಯದೊಂದಿಗೆ ಹುಡುಗಾಟವಾಡುತ್ತಿರುವ ಸರ್ಕಾರದ ಧೋರಣೆ, ಜಾತಿ ವಿಷ ಬೀಜ ಬಿತ್ತಿ, ಜಾತಿಗಳ ಮಧ್ಯೆ ಹೊಡೆದಾಟಕ್ಕೆ ಹಚ್ಚುವ ಸಂಚು, ಒಂದು ಕೋಮಿನ ಓಲೈಕೆ, ಇನ್ನಿತರ ಲೋಪಗಳು ಪರಿಷ್ಕೃತ ಪಠ್ಯಾಂಶದಲ್ಲಿರುವುದು ಸ್ಪಷ್ಟವಾಗಿದೆ.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜ್ಯುಕೇಷನ್ ನಿರಂತರ ಸಭೆ, ಚರ್ಚೆ, ತಜ್ಞರೊಂದಿಗೆ ವಿಚಾರ ವಿನಿಯಮ ನಡೆಸಿ ಈ ದೋಷಗಳನ್ನು ಎತ್ತಿಹಿಡಿದಿದೆ. ಮಕ್ಕಳು, ಪೋಷಕರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಮೀಮ್ಸ್‌ಗಳ ಮುಖೇನ ಪರಿಚಯಿಸಿ ಜಾಗೃತಿ ಮೂಡಿಸಲಿದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ಪಠ್ಯಪುಸ್ತಕ ಹಾಳು
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜ್ಯುಕೇಷನ್ ಸಂಚಾಲಕ ರಾಮಚಂದ್ರಶೆಟ್ಟಿ ಮಾತನಾಡಿ ಶಿಕ್ಷಣ ರಾಜಕೀಯದ ವಸ್ತುವಲ್ಲ, ರಾಜ್ಯ ಸರ್ಕಾರವು ಶಾಲಾ ಪಠ್ಯಪುಸ್ತಕಗಳನ್ನು ಹಾಳು ಮಾಡಿದೆ. 5-6ನೇ ತರಗಿ ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತುವ ಪಠ್ಯ ಸೇರಿಸಲಾಗಿದೆ.
ಈ ಬಗ್ಗೆ ಜಾಗೃತಿ ಮೂಡಿಸಲು ಜನರ ಬಳಿಗೆ ತೆರಳಲಿದ್ದು, ಮಕ್ಕಳ ಮೇಲಾಗುವ ದುಷ್ಪರಿಣಾಮ ಮನವರಿಕೆ ಮಾಡಿಕೊಡುತ್ತೇವೆ. ತಜ್ಞರು ಶಿಾರಸು ಮಾಡಿದ ರಚನಾತ್ಮಕ ಪಠ್ಯವನ್ನು ಶಾಲೆಗಳಲ್ಲಿ ಬೋಧನೆಗೆ ಕ್ರಮವಹಿಸಲು ಸರ್ಕಾರಕ್ಕೆ ಒತ್ತಡ ತರುತ್ತೇವೆ ಎಂದು ರಾಮಚಂದ್ರಶೆಟ್ಟಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 12 =
Remember me
