ಬೆಂಗಳೂರು:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಎರಡನೇ ದಿನವೂ ಎರಡು ಸದನಗಳ ಕಲಾಪವನ್ನು ಬಲಿ ಪಡೆಯಿತು. ದೊರೆಸ್ವಾಮಿ ಅವರಿಗೆ ಯತ್ನಾಳ್ ಅವಮಾನ ಮಾಡಿದ್ದಾರೆ. ಅವರನ್ನು ಉಚ್ಛಾಟಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಸೋಮವಾರ ಇಡೀ ದಿನ ಕಲಾಪ ಬಲಿ ಪಡೆದಿದ್ದವು. ಮಂಗಳವಾರ ಕೂಡ ಇದೇ ವಿಷಯ ಹಲವು ಆಯಾಮಗಳನ್ನು ಪಡೆದು ಕಲಾಪಕ್ಕೆ ಅಡ್ಡಿಪಡಿಸಿತು.
ಬೆಳಗ್ಗೆ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಿಕ್ಕಟ್ಟು ಪರಿಹರಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡು ಬಾರಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ನಿಯಮ 363ರಡಿ ನೋಟಿಸ್ ಕೊಡಿ, ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದ್ದರು. ಸ್ಪೀಕರ್ ಆದೇಶದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೂಚನಾ ಪತ್ರ ನೀಡಿದರು. ಅದಾದ ಕೆಲವೇ ನಿಮಿಷಗಳಲ್ಲಿ ಸ್ಪೀಕರ್ ಉಲ್ಟಾ ಹೊಡೆದು, ಈ ನಿಯಮದಡಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ಪ್ರಕಟಿಸಿದರು.
ಇದರಿಂದ ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಎದುರು ಧರಣಿ ನಡೆಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಆರೋಪ-ಪ್ರತ್ಯಾರೋಪ ನಡೆಸಿದ ಕಾರಣ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಆಗ ಸ್ಪೀಕರ್ ಮಧ್ಯಾಹ್ನ 3ಕ್ಕೆ ಸಭೆ ಮುಂದೂಡಿದರು.
ಸದನದಲ್ಲಿ ಕದನ:ಸದನ ಮತ್ತೆ ಆರಂಭಗೊಂಡಾಗ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸದನ ಸುಗಮವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಪ್ರತಿಷ್ಠೆ ಬದಿಗೊತ್ತಿ ಯತ್ನಾಳ್ ಹೇಳಿಕೆ ಬಗ್ಗೆ ರ್ಚಚಿಸಲು ಸ್ಪೀಕರ್ ಸೂಚನೆಯಂತೆ ನೋಟಿಸ್ ನೀಡಿದ್ದೇವೆ. ನೋಟಿಸ್ ಸರಿಯಿಲ್ಲ ಎಂದಿದ್ದಕ್ಕೆ ಮತ್ತೊಂದು ನೋಟಿಸ್ ನೀಡಲಾಗಿದೆ. ನೋಟಿಸ್​ನಲ್ಲಿ ನಾವು ಯತ್ನಾಳ್ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.
ಅವರು ನಿರ್ದಿಷ್ಟ ದಿನಾಂಕದಂದು ನೀಡಿದ್ದ ಹೇಳಿಕೆ ಪ್ರಸ್ತಾಪಿಸಿದ್ದೇವೆ. ದೊರೆಸ್ವಾಮಿ ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದಿದ್ದಾರೆ. ಇದು ಸದನದ ಹಕ್ಕುಚ್ಯುತಿ ಆಗುತ್ತದೆ. ಅದ್ದರಿಂದ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, 363ರಡಿ ಯತ್ನಾಳ್ ನೀಡಿರುವ ಹೇಳಿಕೆಯನ್ನು ರ್ಚಚಿಸಲು ಬರುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಉದಾತ್ತ ಮೌಲ್ಯಗಳನ್ನು ಗೌರವಿಸಬೇಕು ಎಂದು ನಿಯಮ 51 (ಎ) ಹೇಳಿದೆಯೇ ಹೊರತು ಇಲ್ಲಿ ವ್ಯಕ್ತಿಯನ್ನು ಹೇಳಿಲ್ಲ. ಕಾರಣ ಈ ನಿಯಮದಡಿ ರ್ಚಚಿಸಲು ಅವಕಾಶ ನೀಡಬಾರದು ಎಂದು ಸ್ಪೀಕರ್ ಗಮನ ಸೆಳೆದರು.
ಮಧ್ಯ ಪ್ರವೇಶಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ವೀರ ಸಾವರ್ಕರ್ ವಿರುದ್ಧ ದೊರೆಸ್ವಾಮಿ ಕೀಳಾಗಿ ಮಾತನಾಡಿದ್ದಾರೆ. ನನ್ನನ್ನು ಸೇರಿ ಈ ಸದನದ ಕೆಲವು ಸದಸ್ಯರನ್ನು ಗೂಂಡಾಗಳು ಎಂದು ಕರೆದಿದ್ದಾರೆ. ಅಂತಹವರನ್ನು ಪ್ರತಿಪಕ್ಷಗಳು ಸಮರ್ಥಿಸಿಕೊಳ್ಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಸ್ಪೀಕರ್ ಉಲ್ಟಾ:ಈ ನಡುವೆ ರೂಲಿಂಗ್ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕರು 363ರ ಅಡಿ ಕೊಟ್ಟ ನೋಟಿಸ್ ಪ್ರಕಾರ ಚರ್ಚೆಗೆ ಅವಕಾಶವಿಲ್ಲ. ಆದರೂ ವಿವೇಚನಾಧಿಕಾರ ಬಳಸಿ ರ್ಚಚಿಸಲು ಒಪ್ಪಿದ್ದೆ. ಆದರೆ ಅವರು ಸದನದ ಸದಸ್ಯರೊಬ್ಬರ ಮೇಲೆ ಆಪಾದನೆ ಮಾಡುತ್ತಿರುವುದರಿಂದ ನಿಯಮ 328ರ ಮೇರೆಗೆ ಸೂಚನೆ ಕೊಡಬೇಕಾಗಿತ್ತು ಮತ್ತು ಸೂಚನೆಯ ಪ್ರತಿಯೊಂದನ್ನು ಆ ಸದಸ್ಯರಿಗೆ, ಸಂಸದೀಯ ವ್ಯವಹಾರಗಳ ಸಚಿವರಿಗೆ ನೀಡಬೇಕಾಗಿತ್ತು.
ಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿವೆ. ಹಾಗಾಗಿ ಪ್ರತಿಪಕ್ಷದ ನಾಯಕರು ನೀಡಿರುವ ಸೂಚನೆಯನ್ನು ಪರಿಗಣಿಸಲು ಬರುವುದಿಲ್ಲ. ಅದನ್ನು ತಿರಸ್ಕರಿಸಿರುವುದಾಗಿ ತೀರ್ಪು ನೀಡಿದರು. ಆಗ ಸಿದ್ದರಾಮಯ್ಯ, ಇದು ಪಕ್ಷಪಾತ ತೀರ್ವನ. ಇದನ್ನು ವಿರೋಧಿಸುತ್ತೇವೆ. ಯತ್ನಾಳ್ ಇಡೀ ಸ್ವಾತಂತ್ರ್ಯ ಸಂಗ್ರಾಮವನ್ನೇ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಬೆಂಬಲಿಸುತ್ತಿದ್ದಾರೆ. ಇದುವರೆಗೆ ಯತ್ನಾಳ್ ಹೇಳಿಕೆಯನ್ನು ಮುಖ್ಯಮಂತ್ರಿ ಖಂಡಿಸಿಲ್ಲ. ಇದು ಸಂಘ ಪರಿಹಾರ, ಆರ್​ಎಸ್​ಎಸ್​ನವರು ಹೇಳಿಸಿದ ಹೇಳಿಕೆಯಾಗಿದೆ ಎಂದು ಟೀಕಿಸಿದರು. ಪ್ರತಿಪಕ್ಷದ ಗದ್ದಲ ಹೆಚ್ಚಾದಾಗ ಸ್ಪೀಕರ್ ಸದನವನ್ನು ಮುಂದೂಡಿದರು.
ದೊರೆಸ್ವಾಮಿ ರಾಜಕಾರಣಿ
ಸೋಮವಾರದಿಂದ ಸದನ ಸರಿಯಾಗಿ ನಡೆದಿಲ್ಲ. ವಂದನಾ ನಿರ್ಣಯದ ಮೇಲಿನ ಚರ್ಚೆಗೂ ಸರಿಯಾಗಿ ಅವಕಾಶ ಸಿಕ್ಕಿಲ್ಲ ಎಂದ ಜೆಡಿಎಸ್​ನ ಎಚ್.ಡಿ.ರೇವಣ್ಣ, ದೊರೆಸ್ವಾಮಿ ಅವರನ್ನು ಬಾಯಿ ತಪ್ಪಿ ರಾಜಕಾರಣಿ ಎಂದು ಸಂಬೋದಿಸಿದರು. ಆಗ ಬಿಜೆಪಿ ಸದಸ್ಯರು, ಹೌದು ದೊರೆಸ್ವಾಮಿ ರಾಜಕಾರಣಿ.
ನೀವು ಸರಿಯಾಗಿ ಹೇಳಿದ್ದೀರಿ ಎಂದು ಘೊಷಣೆ ಕೂಗಿದರು. ಅದಕ್ಕೆ ಸ್ಪಷ್ಟನೆ ನೀಡಿದ ರೇವಣ್ಣ, ದೊರೆಸ್ವಾಮಿ ರಾಜಕಾರಣಿಯಲ್ಲ, ಅವರು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವವನಿದ್ದೆ, ಅದನ್ನು ಹೇಳಲೂ ನೀವು ಬಿಡುತ್ತಿಲ್ಲ. ನೀವಿಬ್ಬರೂ ಸೇರಿ ನಾಟಕವಾಡುತ್ತಿದ್ದೀರಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ವಿರುದ್ಧ ಬೇಸರ ಹೊರಹಾಕಿದರು. ಇದಕ್ಕೂ ಮುನ್ನ ಪದೇಪದೆ ಸಭಾತ್ಯಾಗ ಮಾಡುವ ಬೆದರಿಕೆ ಹಾಕಿದ ರೇವಣ್ಣ ಸ್ಪೀಕರ್​ರಿಂದ ಮಾತಿಗೆ ಅವಕಾಶ ಗಿಟ್ಟಿಸಿಕೊಂಡರು.
ಆರ್​ಎಸ್​ಎಸ್ ಕೈವಾಡ
ಮೇಲ್ಮನೆಯಲ್ಲಿ ರವಿಕುಮಾರ್ ದೊರೆಸ್ವಾಮಿಗೆ ಧಿಕ್ಕಾರ ಕೂಗಿರುವುದರ ಹಿಂದೆ ಆರ್​ಎಸ್​ಎಸ್​ನವರಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಆಗ ಡಿಸಿಎಂ ಗೋವಿಂದ ಕಾರಜೋಳ, ಆರ್​ಎಸ್​ಎಸ್ ಪದವನ್ನು ಕಡತದಿಂದ ತೆಗೆಸಬೇಕು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಗದ್ದಲದ ನಡುವೆಯೇ ಧ್ವನಿ ಎತ್ತಿದ ಬಿಜೆಪಿಯ ರೇಣುಕಾಚಾರ್ಯ, ದೊರೆಸ್ವಾಮಿ ಬಗ್ಗೆ ಚರ್ಚೆಯಾಗಬೇಕಾದರೆ, ಪ್ರಧಾನಿ ಮೋದಿ ಅವರನ್ನು ನರಹಂತಕ ಎಂದಿದ್ದೂ ಚರ್ಚೆಯಾಗಬೇಕಲ್ಲವೇ? ಎಂದರು. ಅದನ್ನು ಬೆಂಬಲಿಸಿದ ಕೆ.ಎಸ್.ಈಶ್ವರಪ್ಪ, ಮೋದಿ ಕೊಲೆಗಡುಕ ಎಂದವರಿಗೆ ಈಗ ಮಾತನಾಡಲು ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ದೊರೆಸ್ವಾಮಿಗೆ ಪರಿಷತ್​ನಲ್ಲಿ ಧಿಕ್ಕಾರ
ವಿಧಾನಪರಿಷತ್ ವಿಪಕ್ಷ ಸದಸ್ಯರು ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಎನ್.ರವಿಕುಮಾರ್, ದೊರೆಸ್ವಾಮಿ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಬೇಕು ಎಂಬರ್ಥದ ಮಾತನ್ನಾಡಿದ್ದಾರೆ. ಅಂತಹವರಿಗೆ ನನ್ನ ಕಡೆಯಿಂದ ಧಿಕ್ಕಾರ ಎಂದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ರವಿಕುಮಾರ್ ಕ್ಷಮೆಗೆ ಆಗ್ರಹಿಸಿದರು.
ಇದೇ ವೇಳೆ ಕ್ರಿಯಾಲೋಪವೆತ್ತಿದ್ದ ಜೆಡಿಎಸ್​ನ ಶ್ರೀಕಂಠೇಗೌಡ, ಯಾರ ಬಗ್ಗೆ ಮಾತನಾಡುತ್ತಿದ್ದೇವೋ ಅವರ ವಿರುದ್ಧವೇ ಘೋಷಣೆ ಕೂಗುವುದು ಸರಿಯಲ್ಲ. ಹೀಗಾಗಿ ರವಿಕುಮಾರ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಆಗ ಮತ್ತೆ ಎದ್ದುನಿಂತ ರವಿಕುಮಾರ್, ದೇಶದ ಪ್ರಧಾನಿಯನ್ನು ಸಾಯಿಸುವ ಮಾತನಾಡಿದವರ ವಿರುದ್ಧ ಧಿಕ್ಕಾರ ಕೂಗಿದ್ದೇನೆ. ಅದಕ್ಕಾಗಿ ಕ್ಷಮೆ ಕೋರುವುದಿಲ್ಲ ಎಂದರು.
ಇದರಿಂದ ಮತ್ತಷ್ಟು ಸಿಟ್ಟಾದ ಪ್ರತಿಪಕ್ಷದ ಸದಸ್ಯರು, ಸಭಾಪತಿ ಪೀಠದ ಎದುರಿಗೆ ಬಂದು ಪ್ರತಿಭಟಿಸಿದರು. ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಸಭಾಪತಿ ಕಲಾಪವನ್ನು ಮೂಂದೂಡಿದರು. ಮಧ್ಯಾಹ್ನ 3ಕ್ಕೆ ಮತ್ತೆ ಆರಂಭವಾದರೂ, ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆಗ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರವಿಕುಮಾರ್ ಸ್ಪಷ್ಟೀಕರಣ ಕೊಡಲು ಅವಕಾಶ ನೀಡಿ. ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು. ಅದಕ್ಕೂ ವಿಪಕ್ಷ ಸದಸ್ಯರು ಒಪ್ಪಲಿಲ್ಲ. ಪರಿಸ್ಥಿತಿ ಹತೋಟಿಗೆ ಬಾರದಿದ್ದ ಕಾರಣ, ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.
ಅರುಣ್-ಸಭಾಪತಿ ವಾಗ್ವಾದ
ಕಾಂಗ್ರೆಸ್​ನ ಐವಾನ್ ಡಿಸೋಜಾ ಮಾತನಾಡುವಾಗ ಬಿಜೆಪಿಯ ಅರುಣ್ ಶಹಪುರ ಮಾತನಾಡಲು ಅವಕಾಶ ಕೇಳಿದರು. ಅದಕ್ಕೆ ಸಭಾಪತಿ ಅನುಮತಿ ನೀಡಲಿಲ್ಲ. ಆಗ ಅರುಣ್ ಮತ್ತು ಸಭಾಪತಿಗಳ ನಡುವೆ ವಾಗ್ವಾದ ನಡೆಯಿತಲ್ಲದೆ, ನೀವು ಹೇಳಿದ್ದನ್ನೆಲ್ಲ ಕೇಳುವುದಕ್ಕೆ ಆಗುವುದಿಲ್ಲ ಎಂದು ಅರುಣ್ ಏರುಧ್ವನಿಯಲ್ಲಿ ಹೇಳಿದರು. ಅದಕ್ಕೆ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ, ಏನು ಮಾಡುತ್ತೀರಿ. ನಿಮ್ಮ ಇಷ್ಟದಂತೆ ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಪಾಕಿಸ್ತಾನಕ್ಕೆ ಜೈ
ಬಾಯಿ ಮಾತಿಗೆ ಭಾರತ್ ಮಾತಾಕಿ ಜೈ ಎಂದರೆ ಸಾಕಾಗುವುದಿಲ್ಲ. ಸ್ವಾತಂತ್ರ್ಯ ಪಡೆಯಲು ಹೋರಾಡಿದ ಹೋರಾಟಗಾರರಿಗೆ ಬೆಲೆ ನೀಡುವುದನ್ನು ಕಲಿಯಬೇಕು ಎಂದು ಕಾಂಗ್ರೆಸ್​ನ ಎಚ್.ಎಂ.ರೇವಣ್ಣ ಕೆಣಕಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ತೇಜಸ್ವಿನಿ, ಭಾರತ್ ಮಾತಾಕಿ ಜೈ ಎನ್ನದೆ, ಪಾಕಿಸ್ತಾನಕ್ಕೆ ಜೈ ಎನ್ನಬೇಕು. ಹಾಗೆ ಹೇಳುವವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ ಹೊರತು, ಬಿಜೆಪಿಯಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
