ಬೆಂಗಳೂರು:ಫೆಬ್ರವರಿ 17ರಿಂದ ಆರಂಭವಾಗಿರುವ ವಿಧಾನಸಭೆ ಅಧಿವೇಶನದ ಮುಂದುವರಿದ ಭಾಗ ಸೋಮವಾರ ಆರಂಭಗೊಳ್ಳಲಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಕದನ ನಡೆಯುವುದು ಬಹುತೇಕ ಖಚಿತವಾಗಿದೆ.
ಈ ಮೊದಲು ಮಂಗಳೂರು ಗೋಲಿಬಾರ್ ವಿಚಾರ ಮುಂದಿಟ್ಟುಕೊಂಡು ಸರ್ಕಾರ ವಿರುದ್ಧ ಕಣಕ್ಕಿಳಿದಿದ್ದ ಪ್ರತಿಪಕ್ಷ, ಈಗ ಶಾಸಕ ಬಸನಗೌಡ ಯತ್ನಾಳ್, ಸಚಿವ ಆನಂದ್ ಸಿಂಗ್ ಪ್ರಕರಣ, ಪೌರತ್ವ ಕಾಯ್ದೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಿಜೆಪಿಯನ್ನು ಹಣಿಯಲು ಕಾರ್ಯತಂತ್ರ ರೂಪಿಸಿದೆ. ಬಜೆಟ್ ಅಧಿವೇಶನದ ಆರಂಭದಲ್ಲೇ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್, ಜೆಡಿಎಸ್ ತುದಿಗಾಲಲ್ಲಿ ನಿಂತಿವೆ. ಸರ್ಕಾರ ಕೂಡ ಪ್ರತಿಪಕ್ಷವನ್ನು ಎದುರಿಸಲು ಸನ್ನದ್ಧ ವಾಗಿದೆ. ಮಾ. 5ರಂದು ಬಜೆಟ್ ಮಂಡನೆಯಾಗಲಿದೆ. ಇದಕ್ಕೆ ಪೂರ್ವ ಭಾವಿಯಾಗಿ ಮಾ. 2, 3 ಮತ್ತು 4ರಂದು ‘ಸಂವಿಧಾನ’ ವಿಚಾರವಾಗಿ ಚರ್ಚೆಗಳು ನಡೆಯುವುದು ನಿಶ್ಚಯವಾಗಿದೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಅಂಗೀಕರಿಸುವ ಚರ್ಚೆ ಈಗಾಗಲೇ ಮುಕ್ತಾಯವಾಗಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಸೋಮವಾರ ಉತ್ತರ ನೀಡಬೇಕಾಗಿದೆ.
ಪ್ರತಿಪಕ್ಷ ನಾಯಕರು, ಶಾಸಕರು, ರಾಜ್ಯಪಾಲರ ಭಾಷಣದ ಮೇಲೆ ವಿವಿಧ ವಿಚಾರ ಪ್ರಸ್ತಾಪಿದ್ದು, ಅದಕ್ಕೆಲ್ಲ ಸಿಎಂ ಉತ್ತರ ನೀಡಲಿದ್ದಾರೆ. ಆದರೆ ಪ್ರತಿಪಕ್ಷ ಉತ್ತರ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಸರ್ಕಾರಕ್ಕೆ ತಿರುಗೇಟು ನೀಡಲು ಹಲವು ಅಸ್ತ್ರಗಳನ್ನು ಈಗಾಗಲೇ ಸಿದ್ಧಪಡಿಸಿದೆ. ಶಾಸಕ ಬಸನಗೌಡ ಯತ್ನಾಳ್ ಅವರು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ನೀಡಿದ ಹೇಳಿಕೆಯ ವಿಚಾರವನ್ನು ಪ್ರಸ್ತಾಪಿಸಿ, ಅವರಿಂದ ಕ್ಷಮೆ ಕೋರಿಸಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಯತ್ನಾಳ್ ಗುರಿ ಎನಿಸಿದರೂ ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತ. ಆದರೆ ಆಡಳಿತ ಪಕ್ಷ ಅಷ್ಟು ಸುಲಭವಾಗಿ ಮಣಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಸಚಿವ ಸಂಪುಟದ ಹಲವು ಹಿರಿಯ ಸಚಿವರು ಯತ್ನಾಳ್ ಬೆನ್ನಿಗೆ ನಿಂತಿದ್ದು, ದೊರೆಸ್ವಾಮಿಯವರ ಬಗ್ಗೆ ಯತ್ನಾಳ್ ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ವಕೀಲಿಕೆ ಮಾಡಿದ್ದಾರೆ. ಹೀಗಾಗಿ ಸದನದೊಳಗೆ ಮಾತಿನ ಕದನ ನಿಶ್ಚಿತವಾಗಿದೆ.
ಫೆ.17ರಿಂದ ನಡೆದ ಅಧಿವೇಶನದಲ್ಲಿ ಮಂಗಳೂರು ಗೋಲಿಬಾರ್, ಶಾಸಕರ ಅನುದಾನ ಕಡಿತ, ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆರವು ಸಿಗದಿರುವುದು, ಯೋಜನೆಗಳಿಗೆ ಹಣದ ಕೊರತೆ ಇನ್ನಿತರ ವಿಷಯ ಪ್ರಸ್ತಾಪಿಸಿ ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ನೆರೆ ಸಂತ್ರಸ್ತರಿಗೆ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗದ ವಿಚಾರವನ್ನಿಟ್ಟುಕೊಂಡು ತಿವಿಯಲು ಪ್ರತಿಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಸಿಕ್ಕಿರುವ ಅವಕಾಶದಲ್ಲಿ ನೆರೆ ಪರಿಹಾರದ ಜತೆಗೆ ಅರಣ್ಯ ಖಾತೆ ವಹಿಸಿಕೊಂಡ ಆನಂದ್ ಸಿಂಗ್ ಮೇಲೆ ಪ್ರಕರಣ ಇರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಬಾಯಿ ಬಿಡುತ್ತಾರಾ ಅರ್ಹರು:ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ‘ಅರ್ಹ’ ಶಾಸಕರು ಸಂಪುಟ ಸೇರಿ ಒಂದು ತಿಂಗಳು ಸಮೀಪಿಸುತ್ತಿದೆ. ಇವರೆಲ್ಲ ಈಗ ಸರ್ಕಾರದ ಭಾಗವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಇದೇ ವೇಳೆ ಪ್ರತಿಪಕ್ಷದ ಒಳಹೊರಗು ಗೊತ್ತಿರುವ ಈ ಅರ್ಹರು ಆಡಳಿತ ಪಕ್ಷಕ್ಕೆ ಯಾವ ರೀತಿಯಲ್ಲಿ ವರವಾಗುತ್ತಾರೆಂಬ ಕುತೂಹಲವಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬಸನಗೌಡ ಯತ್ನಾಳ್ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಮತ್ತು ಪೌರತ್ವ ಕಾಯ್ದೆ ವಿಚಾರದಲ್ಲಿ ಶಾಸಕರೆಲ್ಲ ಯಾವ ರೀತಿ ಸರ್ಕಾರದ ವಿರುದ್ಧ ನಿಲುವು ತಾಳಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.
ಸಂಸತ್​ನ ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರ ಆರಂಭವಾಗಲಿದ್ದು, ದೆಹಲಿ ಗಲಭೆ, ಪೌರತ್ವ ತಿದ್ದುಪಡಿ ಕಾಯ್ದೆ, ಆರ್ಥಿಕ ಹಿಂಜರಿತ ವಿಚಾರ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ದೆಹಲಿ ಗಲಭೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟುಹಿಡಿಯುವ ಸಾಧ್ಯತೆ ಇದೆ. ಮೂರನೇ ತ್ರೖೆಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 4.7 ಮಾತ್ರ ವೃದ್ಧಿಯಾಗಿದೆ. ಆರ್ಥಿಕತೆ ಮಂದಗತಿ ನಿವಾರಣೆಗೆ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಇನ್ನಿತರ ಪಕ್ಷಗಳು ಆರೋಪಿಸಲು ಸಜ್ಜಾಗಿವೆ.
ಪೌರತ್ವ ಕಾಯ್ದೆ ವಿಚಾರದಲ್ಲಿ ಹಲವು ರಾಜ್ಯಗಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಕರ್ನಾಟಕದಿಂದಲೂ ಕಾಯ್ದೆ ಅನುಷ್ಠಾನ ವಿರೋಧಿಸಿ ನಿರ್ಣಯ ಮಂಡಿಸಬೇಕೆಂಬ ಉತ್ಸುಕತೆ ಕಾಂಗ್ರೆಸ್​ನದ್ದು. ಆದರೆ, ಕಾಯ್ದೆ ಪರವಾಗಿ ನಿರ್ಣಯ ಮಂಡಿಸಬೇಕೆಂಬ ಆಶಯ ಬಿಜೆಪಿಯದ್ದಾಗಿದೆ. ಈ ಮೂಲಕ ದೇಶಕ್ಕೊಂದು ಸಂದೇಶ ಕಳಿಸುವ ಆಲೋಚನೆ ರಾಜ್ಯ ಬಿಜೆಪಿಯದ್ದಾಗಿದೆ. ಸೋಮವಾರ ಬೆಳಗ್ಗೆ ಈ ಸಂಬಂಧ ಎರಡೂ ಪಕ್ಷದ ನಿರ್ಧಾರ ಅಂತಿಮಗೊಳ್ಳಲಿದೆ.
ಮಾರ್ಚ್ 2: ಬಜೆಟ್ ಅಧಿವೇಶನ ಆರಂಭ
ಮಾ. 2ರಿಂದ 4: ಸಂವಿಧಾನ ಕುರಿತು ಚರ್ಚೆ
ಮಾ. 5: ಬಜೆಟ್ ಮಂಡನೆ
ಮಾ. 6ರಿಂದ 31: ಬಜೆಟ್ ಮೇಲೆ ಚರ್ಚೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
