ಭಕ್ತಿಪಂಥ ಕಾಲದಲ್ಲಿ ಸಮಾಜದ ವ್ಯವಸ್ಥೆ ತಿದ್ದಲು, ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಲವರು ಶ್ರಮಿಸಿದ್ದಾರೆ. ಅವರಲ್ಲಿ ಸಂತ ಶ್ರೀ ಸೇವಾಲಾಲರು ಒಬ್ಬರು. ತಾನು ಪಡೆದ ದೈವಿಕ ಶಕ್ತಿಯಿಂದ ಸಂತಾನ ಹೀನರಿಗೆ ಸಂತಾನಭಾಗ್ಯ, ರೋಗ ರುಜಿನಗಳ ನಿವಾರಣೆ, ಹಸಿದವರಿಗೆ ಅನ್ನದಾನ, ಹೀಗೆ ಜನೋಪಕಾರಿ ಸೇವೆಗಳನ್ನು ಮಾಡಿ ಬಂಜಾರ ಸಮುದಾಯದ ಆರಾಧ್ಯದೈವವಾಗಿದ್ದಾರೆ.
| ಡಾ. ಸಣ್ಣರಾಮ
ಕರ್ನಾಟಕದಲ್ಲಿ ಶರಣ ಚಳವಳಿ ನಂತರ ದಲ್ಲಿ ದಾಸ ಪರಂಪರೆ ಹುಟ್ಟಿಕೊಂಡಿತು. ಅದನ್ನು ಭಕ್ತಿಪಂಥ ಎಂದೂ ಕರೆಯಬಹುದು. ಭಕ್ತಿಪಂಥಕ್ಕೆ ಶಿವಮೊಗ್ಗ ಜಿಲ್ಲೆ ನೇರವಾಗಿ ಪ್ರವೇಶ ಪಡೆಯದಿರುವುದು ಆಶ್ಚರ್ಯ. ಆದರೂ ಅಲ್ಲಲ್ಲಿ ಏಕಾಂಗಿಯಾಗಿ ವ್ಯವಸ್ಥೆ ತಿದ್ದಲು, ಜನರ ಸಮಸ್ಯೆಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿದವರೂ ಇದ್ದಾರೆ. ಬುಡಕಟ್ಟು ಅಥವಾ ಇತರ ಸಮುದಾಯಗಳನ್ನು ಶೋಧಿಸಿದರೆ ಎಲೆಮರೆ ಕಾಯಿಯಂತಿದ್ದು, ಪ್ರಭುತ್ವ ಮತ್ತು ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು ಕಾಣಸಿಗುತ್ತಾರೆ. ಅಂತಹವರಲ್ಲಿ ಸಂತ ಶ್ರೀ ಸೇವಾಭಾಯ, ದೊಂಡಿಯ ವಾಘ, ಕನ್ನೇಶ್ವರರಾಯ, ಜುಂಜಪ್ಪ ಪ್ರಮುಖರು. ಇವರು ಇತಿಹಾಸದಲ್ಲಿ ದಾಖಲಾಗಿರುವುದಕ್ಕಿಂತ ಹೆಚ್ಚಾಗಿ ಜನಪದ ಸಾಹಿತ್ಯ ಮತ್ತು ಆಚರಣೆ ರೂಪದಲ್ಲಿ ದಾಖಲಾಗಿರುವುದೇ ಹೆಚ್ಚು.
ಸಂತ ಶ್ರೀ ಸೇವಾಭಾಯ ಲಂಬಾಣಿ ಬುಡಕಟ್ಟಿನ ಆರಾಧ್ಯ ದೈವ. ಇವರ ಜನ್ಮಸ್ಥಳ, ದಿನಾಂಕ ಕುರಿತು ಅಧಿಕೃತ ದಾಖಲಾತಿ ಎಲ್ಲಿಯೂ ಲಭ್ಯವಿಲ್ಲ. ಬಂಜಾರರ ಮೌಖಿಕ ಪರಂಪರೆಯಲ್ಲಿ ಸಂತ ಶ್ರೀ ಸೇವಾಭಾಯರನ್ನು ಕುರಿತು ಸಿಗುವ ಕಥನವೇ ಆಧಾರ. ಬಹುಪಾಲು ಬುಡಕಟ್ಟು ಸಾಂಸ್ಕೃತಿಕ ವೀರರ ಹುಟ್ಟಿನ ಹಿಂದೆ ಪವಾಡ ಸದೃಶ್ಯ ಐತಿಹ್ಯಗಳಿರುತ್ತವೆ. ಅಂತೆಯೇ ಸಂತ ಶ್ರೀ ಸೇವಾಭಾಯರ ಜನನವೂ ಪವಾಡದಿಂದ ಕೂಡಿದೆ.
ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಒಂದು ಚಿಕ್ಕ ಗ್ರಾಮ. ಇದಕ್ಕೆ ಸಮೀಪವಿರುವ ಭಾಯಾಗಡ್ ಶ್ರೀ ಸೇವಾಭಾಯರ ಜನ್ಮಸ್ಥಾನ. ಅಲೆಮಾರಿ ಬಂಜಾರ ಜನಾಂಗದ ಧರ್ಮಣಿಮಾತಾ ಮತ್ತು ಭೀಮಾನಾಯ್ಕ ದಂಪತಿಗೆ ಹಲವಾರು ವರ್ಷ ಮಕ್ಕಳಾಗುವುದಿಲ್ಲ. ಜಗನ್ಮಾತೆ ಮರಿಯಮ್ಮದೇವಿಗೆ ಹರಕೆ ಹೊತ್ತು ಪಡೆದ ಮಗುವಿಗೆ ಸೇವಾಲಾಲ ಎಂದು ನಾಮಕರಣ ಮಾಡುತ್ತಾರೆ. ಇವರ ಜನ್ಮದಿನಾಂಕ ನಿಖರವಾಗಿ ಲಭ್ಯವಾಗಿಲ್ಲವಾದರೂ 1739ರ ಫೆ.15 ಎಂದು ಹೇಳಲಾಗುತ್ತದೆ. ಬಾಲಕ ಸೇವಾಭಾಯ ಶಿವನ ಆರಾಧಕ. ಗೋವುಗಳನ್ನು ಕಾಯುವುದು, ಅವುಗಳಿಗೆ ಹುಲ್ಲು ಕೊಯ್ದು ತಂದು ಹಾಕುವುದು ಅವನ ಕಾಯಕವಾಗಿರುತ್ತದೆ. ಸೇವಾಭಾಯರಿಗೆ 12 ವರ್ಷ ತುಂಬುತ್ತಲೇ ತಂದೆ-ತಾಯಿಗೆ ತಾವು ಜಗನ್ಮಾತೆಗೆ ಕಟ್ಟಿಕೊಂಡ ಹರಕೆ ನೆನಪಿಗೆ ಬರುತ್ತದೆ. ಅದೇನೆಂದರೆ ತಮಗೆ ಹುಟ್ಟುವ ಹಿರಿಯ ಮಗನನ್ನು ದೇವಿ ಸೇವೆಗೆ ಬಿಡುವುದೆಂಬುದು. ಆದರೆ ಸೇವಾಭಾಯರ ಮೇಲಿನ ವ್ಯಾಮೋಹದಿಂದ ಅವರು ಜಗನ್ಮಾತೆ ಮರಿಯಮ್ಮ ದೇವಿಯ ಸೇವಕನನ್ನಾಗಿ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಅವರಿಗೆ ಹಲವಾರು ಕಂಟಕ ಪ್ರಾರಂಭವಾಗುತ್ತವೆ. ವ್ಯಾಪಾರದಲ್ಲಿ ನಷ್ಟ, ಗೋವುಗಳ ಕಣ್ಮರೆ, ಮಕ್ಕಳ ಅನಾರೋಗ್ಯ ಇತ್ಯಾದಿಗಳನ್ನು ನೋಡಿದ ದಂಪತಿಗೆ ತಪ್ಪಿನ ಅರಿವಾಗುತ್ತದೆ. ವಿಷಯವನ್ನು ಸೇವಾಭಾಯರಿಗೆ ತಿಳಿಸಿದಾಗ ಅವರು ತಂದೆ-ತಾಯಿಯ ಮಾತನ್ನು ಮೊದಮೊದಲು ತಿರಸ್ಕರಿಸುತ್ತಾರೆ. ಆದರೆ ತಂದೆ-ತಾಯಿ ಒತ್ತಡ ಹೆಚ್ಚಾದಾಗ ಒಪ್ಪಿಕೊಳ್ಳುತ್ತಾರೆೆ. ಅದಕ್ಕಾಗಿ ತಾವು ವಸತಿ ಮಾಡಿದ ಪ್ರದೇಶದಲ್ಲಿ ಜಗನ್ಮಾತೆಯ ದೇವಸ್ಥಾನವನ್ನು ಕಟ್ಟಿಸಿ ಪೂಜೆ ಮಾಡಲು ಪ್ರಾರಂಭಿಸುತ್ತಾರೆ. ಜಗನ್ಮಾತೆಯ ಅನುಗ್ರಹ ಮತ್ತು ಕಠಿಣ ಭಕ್ತಿಯಿಂದ ಸೇವಾಭಾಯ ದಿವ್ಯಶಕ್ತಿ ಪಡೆಯುತ್ತಾರೆ. ತಾನು ಪಡೆದ ದೈವಿಕ ಶಕ್ತಿಯನ್ನು ಜನಸೇವೆಗೆ, ದೀನದುರ್ಬಲರ ಸೇವೆಗೆ ಮುಡಿಪಾಗಿಡುತ್ತಾರೆ. ಬೆಳೆವ ಮರವನ್ನು ಮೊಳಕೆಯಲ್ಲಿ ಕಾಣು ಎಂಬಂತೆ ಸೇವಾಭಾಯ ನಿಷ್ಠಾವಂತ ಭಕ್ತನಾಗಿರುತ್ತಾರೆೆ. 17ನೇ ಶತಮಾನದಲ್ಲಿ ಬಂಜಾರ ಜನಾಂಗವು ದನಗಾಹಿ ಮತ್ತು ಅಲೆಮಾರಿ ವ್ಯಾಪಾರಿಗಳಾಗಿರುತ್ತದೆೆ. ಭಕ್ತ ಸೇವಾಭಾಯರ ಕಾಯಕ ದನಕಾಯುವುದಾಗಿರುತ್ತದೆ. ದನದ ಮಂದೆಯನ್ನು ನದಿಯ ತಟದಲ್ಲಿ ಮೇಯಲು ಬಿಟ್ಟು ಮರಳಲ್ಲಿ
ದೇವರ ಮೂರ್ತಿ ಮಾಡಿ, ಭಕ್ತಿಯಿಂದ ಪೂಜೆಮಾಡಿ ತನಗೆ ಉಣ್ಣಲು ಕಟ್ಟಿಕೊಟ್ಟಿದ್ದ ಬುತ್ತಿಯನ್ನೇ ನೈವೇದ್ಯವಾಗಿ ದೇವರಿಗೆ ಅರ್ಪಿಸಿ ತನ್ನ ಸಹಚರರಿಗೆ ಹಂಚುತ್ತಿದ್ದರಂತೆ. ಸೇವಾಭಾಯ ಮರಿಯಮ್ಮ ದೇವಿಯ ಆರಾಧಕರಾದ ಮೇಲೆ ಅವರ ಭಕ್ತಿಯು ಪರಾಕಷ್ಠೆ ಮುಟ್ಟುತ್ತದೆ. ಜಗನ್ಮಾತೆಯ ಮಂದಿರ ಕಟ್ಟಿಕೊಂಡು ದಿನವಿಡೀ ಪೂಜೆ, ಧ್ಯಾನದಲ್ಲೇ ಮುಳುಗಿರುತ್ತಿ ದ್ದರಂತೆ. ಅಖಂಡ ಬ್ರಹ್ಮಚಾರಿಯಾಗಿದ್ದ ಸೇವಾಭಾಯರಿಗೆ ಭೂತ-ಭವಿಷ್ಯತ್ತನ್ನು ಅರಿಯುವ ಸಾಮರ್ಥ್ಯವೂ ಪ್ರಾಪ್ತಿ ಯಾಗುತ್ತದೆ. ತಾನು ಪಡೆದ ದೈವಿಕ ಶಕ್ತಿಯನ್ನು ಸಂತಾನ ಹೀನರಿಗೆ ಸಂತಾನಭಾಗ್ಯ, ರೋಗ ರುಜಿನಗಳ ನಿವಾರಣೆ, ಹಸಿದವರಿಗೆ ಅನ್ನದಾನ, ಹೀಗೆ ಜನೋಪಕಾರಿಯಾಗಿ ಕೆಲಸಗಳಿಗೆ ಬಳಸುತ್ತಾರೆ. ಕೈಚಾಚಿ ಬಂದವರಿಗೆ ಎಂದೂ ನಿರಾಶೆಯನ್ನುಂಟು ಮಾಡು ವುದಿಲ್ಲ. ಅಷ್ಟರ ಮಟ್ಟಿಗೆ ಸೇವಾಭಾಯ ಸಿದ್ಧಿಪುರುಷರಾಗಿ ಪರಿವರ್ತಿತರಾಗುತ್ತಾರೆೆ. ಭಕ್ತಿಪಂಥದ ಚಳವಳಿಯನ್ನು ಪರಾಮಶಿಸಿ ನೋಡಿದಾಗ ಆ ಕಾಲದಲ್ಲಿ
ಕರ್ನಾಟಕವೂ ಸೇರಿ ಇತರ ಭಾಗದ ಬಹುಪಾಲು ಸಂತರು ಪವಾಡ ಮೆರೆದಿದ್ದಾರೆ. ಅವರ ಪವಾಡಗಳೇ ಅವರನ್ನು ದೈವೀ ಪುರುಷರನ್ನಾಗಿ ಮಾಡಿದೆ. ಸಂತ ಸೇವಾಲಾಲರ ಅನೇಕ ಪವಾಡಗಳನ್ನು ಇಲ್ಲಿ ಪ್ರಾಸ್ತಾಪಿಸಬಹುದು. ಸೇವಾಲಾಲರು ಸಿದ್ಧಿಪುರುಷರು ಎಂದು ಖ್ಯಾತಿ ಪಡೆದಾಗ ಕೆಲ ಪಡ್ಡೆ ಹುಡುಗರು ಅವರನ್ನು ಪರೀಕ್ಷಿಸಲು ಮುಂದಾಗುತ್ತಾರೆ. ಒಬ್ಬ ಹುಡುಗನಿಗೆ ಹುಡುಗಿಯ ವೇಷಭೂಷಣ ತೊಡಿಸಿ ಸೇವಾಭಾಯರ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಈ ಹುಡುಗಿಗೆ ಮದುವೆಯಾಗಿ 12 ವರ್ಷ ಸಂದಿದ್ದು, ಮಕ್ಕಳಾಗಿಲ್ಲವೆಂದು, ಇವಳ ವಂಶ ಬೆಳೆಯುವಂತಾಗಲು ತಾವು ದಾರಿ ತೋರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ. ಸೇವಾಭಾಯರಿಗೆ ಈ ಹುಡುಗರ ಕುತಂತ್ರ ತಿಳಿಯುತ್ತದೆ. ಅವರು ಈ ಹುಡುಗಿಗೆ ಮಕ್ಕಳಾಗುತ್ತವೆ ಮತ್ತು ಇವಳ ವಂಶ ಅನಾದಿ ಕಾಲದವರೆಗೆ ಬಾಳುತ್ತದೆ ಎಂದು ಆಶೀರ್ವದಿಸಿ ಕಳುಹಿಸಿ ಕೊಡುತ್ತಾರೆ. ಹಿಂದಿರುಗಿ ಯುವಕರು ಗಹಗಹಿಸಿ ನಗುತ್ತ, ಸೇವಾಭಾಯರನ್ನು ಹಿಯಾಳಿಸುತ್ತ ಗ್ರಾಮದ ಕಡೆಗೆ ತೆರಳುತ್ತಾರೆ. ಮಾರ್ಗ ಮಧ್ಯೆ ಹುಡುಗಿ ವೇಷಧಾರಿಗೆ ತಾನು ಹೆಣ್ಣಾಗಿ ಪರಿವರ್ತನೆ ಯಾಗಿರುವುದು ಗೊತ್ತಾಗುತ್ತದೆ. ಅವಳು ಬೊಬ್ಬೆ ಹೊಡೆಯಲು ಎಲ್ಲರೂ ಬೆಚ್ಚಿ ಬಿದ್ದು ಮತ್ತೆ ಸೇವಾಭಾಯರ ಬಳಿಗೆ ಓಡುತ್ತಾರೆ. ತಮ್ಮ ತಪ್ಪನ್ನು ಮನ್ನಿಸಲು ಬೇಡಿಕೊಳ್ಳುತ್ತಾರೆ. ಆಗ ಸೇವಾಭಾಯರು ತಾವು ಒಮ್ಮೆ ನುಡಿದ ನುಡಿ ಹುಸಿಯಾಗುವುದಿಲ್ಲ. ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ನಾನು ನುಡಿದಂತೆ ಇವಳಿಗೆ ಮಕ್ಕಳಾಗಿ ವಂಶ ಬೆಳೆಯುತ್ತದೆ ಎಂದು ಹೇಳಿ ಅವರನ್ನು ಕಳುಹಿಸುತ್ತಾರೆ. ಇಲ್ಲಿ ಸೇವಾಭಾಯರ ಸತ್ಯ, ಕಾಳಜಿ, ನಿಷ್ಠೆ ಎಲ್ಲವೂ ಅಭಿವ್ಯಕ್ತಗೊಂಡಿವೆ.
ಸೇವಾಲಾಲರ ಜಯಂತ್ಯುತ್ಸವ
ದಾವಣಗೆರೆ:ಬಂಜಾರ ಸಮುದಾಯದ ಆರಾಧ್ಯದೈವ ಸಂತ ಸೇವಾಲಾಲರ 281ನೇ ಜಯಂತ್ಯುತ್ಸವ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಗುರುವಾರ ಆರಂಭವಾಗಿದ್ದು, ಮೂರು ದಿನ ನಡೆಯಲಿದೆ. ಶುಕ್ರವಾರ ಮುಖ್ಯಕಾರ್ಯಕ್ರಮವಿದ್ದು, ಮಾಲಾಧಾರಿಗಳು ಸೇವಾಲಾಲ್- ಮರಿಯಮ್ಮ ದೇವರ ದರ್ಶನ ಪಡೆಯುವರು. ಗಂಗಾಪೂಜೆ, ಅಭಿಷೇಕ, ಮಹಾ ಮಂಗಳಾರತಿ, ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ, ಇರುಮುಡಿಗಳ ಸಮರ್ಪಣೆ, ಮಾಲಾ ವಿಸರ್ಜನೆ ನಡೆಯಲಿವೆ. ಶುಕ್ರವಾರ ಮಧ್ಯಾಹ್ನ 2ಕ್ಕೆ ಸೇವಾಲಾಲರ ಜಯಂತ್ಯುತ್ಸವವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಡಿಸಿಎಂಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸುವರು. ಸಂಜೆ 6.30ಕ್ಕೆ ಚಿಂತನಾ ಸಭೆ, ಫೆ.15ರ ಬೆಳಗ್ಗೆ 9ಕ್ಕೆ ಮಹಾಭೋಗ್ ನೆರವೇರಲಿದೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತಿತರ ರಾಜ್ಯಗಳಿಂದ ಮಾಲಾಧಾರಿಗಳು ಬರುತ್ತಾರೆ. ಭಕ್ತರಿಗೆ ವಸತಿ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
(ಲೇಖಕರು: ಸಾಹಿತಿ)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine − one =
Remember me
