ಯಾಕುಂದೇಂದು ತುಷಾರ ಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ
ಯಾ ವೀಣಾವರದಂಡ ಮಂಡಿತಕರಾ ಯಾ ಶ್ವೇತಪದ್ಮಾಸನಾ|
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪ ಹಾ||
‘ಯಾವ ದೇವಿಯು ಕುಂದ ಪುಷ್ಪ, ಚಂದ್ರ, ತುಷಾರ ಅಂದರೆ ಹಿಮದ ಹಾಗೆ ಅತ್ಯಂತ ಶುಭ್ರಳಾಗಿ ಕಾಣಿಸುವಳೋ, ಯಾವ ದೇವಿಯು ವೀಣಾದಂಡವನ್ನು ಕರದಲ್ಲಿ ಹಿಡಿದು ಶೋಭಿಸುತ್ತಿರುವಳೋ, ಯಾವ ದೇವಿಯು ಶ್ವೇತಪದ್ಮಾಸನಳಾಗಿದ್ದಾಳೆಯೋ, ಯಾವ ದೇವಿಯು ಬ್ರಹ್ಮ, ಅಚ್ಯುತ, ಶಂಕರ ಮೊದಲಾದ ದೇವತೆಗಳಿಂದ ನಿರಂತರ ಪೂಜಿಸಲ್ಪಡುವಳೋ ಅಂತಹ ದೇವಿ ಸರಸ್ವತಿ ನನ್ನೆಲ್ಲ ಜಾಡ್ಯಗಳನ್ನು ದೂರಮಾಡಿ ನನ್ನನ್ನು ಕಾಪಾಡಲಿ.’
ನವರಾತ್ರಿಯ ಸಪ್ತಮಿಯಂದು ಸರಸ್ವತಿಯ ಆರಾಧನೆ ಕೂಡ ನಡೆಯುತ್ತದೆ. ನಕ್ಷತ್ರಗಳ ಪ್ರಕಾರ ಅಂದು ಮೂಲಾನಕ್ಷತ್ರ ಬಂದಿದ್ದರೆ ಅದು ಇನ್ನೂ ಶ್ರೇಷ್ಠವೆಂದು ಪರಿಗಣಿತವಾಗಿದೆ. ಸರಸ್ವತಿ ಶುದ್ಧಜ್ಞಾನಸ್ವರೂಪಳು. ಅಜ್ಞಾನವೆಂಬ ಅಂಧಕಾರವನ್ನು ತೊಳೆದು ಜ್ಞಾನದ ಬೆಳಕನ್ನು ನೀಡುವ ಶುದ್ಧಸ್ವರೂಪಿಣಿಯಾದ ಸರಸ್ವತಿದೇವಿಗೆ ಚತುರ್ಭಜಗಳು ಅಂದರೆ ನಾಲ್ಕು ಕೈಗಳಿದ್ದು ಅವುಗಳಲ್ಲಿ ವೀಣೆ, ಜಪಮಾಲೆ, ಪುಸ್ತಕ, ಹಸಿರು ಗಿಳಿಯನ್ನು ಹಿಡಿದಿರುವ ಅವಳು ಸಮಸ್ತ ಸೃಷ್ಟಿಯ ಜನ್ಮದಾತೆ. ‘ಸರಸ್ವತಿ’ ಎಂದರೆ ಹರಿಯುವಳು ಎಂಬರ್ಥ. ಶಾರದಾ, ವಾಗೀಶ್ವರೀ, ಬ್ರಾಹ್ಮೀ, ಮಹಾವಿದ್ಯಾ ಎಂದೆಲ್ಲ ಕರೆಸಿಕೊಳ್ಳುವ ಈಕೆ ಹಂಸವಾಹಿನಿ. ಪುರಾಣಗಳಲ್ಲಿ ಕೆಲವೆಡೆ ನವಿಲನ್ನು ವಾಹನವಾಗಿ ತೋರಿಸಿರುವುದು ಕಂಡುಬರುತ್ತದೆ. ಶಾರದೆ ಹಾಗೂ ಸರಸ್ವತಿಯಲ್ಲಿ ಅಂತಹ ವ್ಯತ್ಯಾಸಗಳಿಲ್ಲ ಎಂಬುದು ವಿದ್ವಾಂಸರ ಅಭಿಮತ. ಅವಳು ವಿದ್ಯಾಜ್ಞಾನದ ಜೊತೆಯಿರುವಾಗ ಶಾರದೆಯಾದರೆ ಸಂಗೀತವೇ ಮೊದಲಾದ ಕಲಾಜ್ಞಾನದ ಜೊತೆಯಿರುವಾಗ ಸರಸ್ವತಿಯಾಗುತ್ತಾಳೆ.
ಸರಸ್ವತಿದೇವಿಯ ಅವತಾರದ ಹಿನ್ನೆಲೆ ಬಹಳ ವಿಶಿಷ್ಟವಾಗಿದೆ. ಇಡೀ ಬ್ರಹ್ಮಾಂಡದಲ್ಲಿ ಅಜ್ಞಾನವು ತುಂಬಿ ತುಳುಕುತ್ತಿರುವಾಗ ಭಕ್ತರಿಗೆ ಅಜ್ಞಾನದ ಅಂಧಕಾರ ಹೋಗಲಾಡಿಸಿ ಜ್ಞಾನ, ವಿದ್ಯೆಯನ್ನು ಕಲಿಸಲು ಸರಸ್ವತಿಯ ಅವತಾರವಾಯಿತು. ದೇವಿಯ ಪೂಜಾವಿಧಾನ ವಿಶೇಷವಾಗಿದೆ. ಅಂದು ಸರಸ್ವತಿಯನ್ನು ಹಸಿರು ಬಣ್ಣದ ಸೀರೆ, ಕುಪ್ಪಸ ತೊಡಿಸಿ, ಹಸಿರು ಬಣ್ಣದ ಹೂಗಳಿಂದ ಅಲಂಕರಿಸಲಾಗುವುದು. ವಿಶೇಷವಾಗಿ ತಾವರೆ ಹೂ ಸರಸ್ವತಿಗೆ ಪ್ರೀತಿ. ಅಕ್ಷತೆ, ಗೆಜ್ಜೆವಸ್ತ್ರಗಳಿಂದ ಪೂಜಿಸಬೇಕೆಂಬುದು ನಿಯಮ. ಪುಸ್ತಕ ಹಾಗೂ ಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ದೇವಿಯ ಮುಂದಿಟ್ಟು ಪೂಜಿಸಬೇಕು. ದೇವಿಗೆ ಖರ್ಜೂರದ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು. ಸರಸ್ವತಿಯ ಅಲಂಕಾರ ಮಾಡಬೇಕು. ಸರಸ್ವತಿದೇವಿಯನ್ನು ಪೂಜಿಸುವುದರಿಂದ ಜ್ಞಾನ ಹಾಗೂ ವಿದ್ಯಾಪ್ರಾಪ್ತಿಯಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಜಯಪ್ರಾಪ್ತಿಯಾಗುತ್ತದೆ. ಮನಸ್ಸಿನಲ್ಲಿ ಧೈರ್ಯ, ಸ್ಥೈರ್ಯ, ಸಾಹಸ ಭಾವಗಳು ಮೂಡುತ್ತವೆ. ಮೋಕ್ಷಪ್ರಾಪ್ತಿಯಾಗುತ್ತದೆ.
ಬಲ ಹಾಗೂ ಸಂಪತ್ತುಗಳನ್ನು ಸರಿಯಾದ ರೀತಿಗಳಲ್ಲಿ ಬಳಸಿಕೊಂಡು ಐಹಿಕ ಜಗತ್ತಿನಿಂದ ಪಾರಮಾರ್ಥಿಕ ಜಗತ್ತಿಗೆ ತೆರಳಲು ಬೇಕಾದ ಮೋಕ್ಷಮಾರ್ಗದ ಕಲ್ಪನೆ ಜ್ಞಾನದಿಂದ ಮಾತ್ರವೇ ಸಾಧ್ಯ. ಅಂತಹ ಜ್ಞಾನವು ವಿದ್ಯೆಯನ್ನಾಧರಿಸಿದೆ. ಆ ಕಾರಣಕ್ಕಾಗಿಯೇ ನವರಾತ್ರಿಯಲ್ಲಿ ವಿದ್ಯಾಧಿದೇವತೆಯಾದ ಸರಸ್ವತಿಯ ಆರಾಧನೆಯೂ ಅಷ್ಟೇ ಮುಖ್ಯವಾಗಿದೆ. ಬಲ ಹಾಗೂ ಸಂಪತ್ತುಗಳು ವಿದ್ಯೆಯಿಂದಲೇ ಪರಿಪೂರ್ಣತೆಯನ್ನು ಪಡೆಯುತ್ತವೆ. ಆದ್ದರಿಂದ ವಿದ್ಯಾಪ್ರಾಪ್ತಿಗಾಗಿ ವಿದ್ಯಾಧಿದೇವತೆ ಸರಸ್ವತಿಯ ಆರಾಧನೆ ಮಾಡಬೇಕು. ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ವಿವೇಕಪ್ರಾಪ್ತಿ. ಹೀಗೆ ಸತ್ಯಾಸತ್ಯಗಳ ವಿವೇಕಶಾಲಿಯಾಗುವುದು ವಿದ್ಯೆಯಿಂದ ಮಾತ್ರವೇ ಸಾಧ್ಯ. ವಿವೇಕವಿದ್ದರೆ ಮಾತ್ರ ಮನುಷ್ಯ ತಾನು ಗಳಿಸಿದ ಬಲವನ್ನೂ, ಸಂಪತ್ತನ್ನೂ ಸದುಪಯೋಗಪಡಿಸಿಕೊಳ್ಳುತ್ತಾನೆ; ಅದಿಲ್ಲದಿದ್ದರೆ ದುರ್ವಿನಿಯೋಗ ಮಾಡಿಕೊಳ್ಳಬಹುದು. ಜ್ಞಾನದ ಮಹತ್ವವನ್ನರಿತು ತನ್ನ ಬಲ ಹಾಗೂ ಸಂಪತ್ತನ್ನು ಉಪಯೋಗಿಸಿದರೆ ಮಾತ್ರವೇ ಅದು ಮೋಕ್ಷಸಾಧನೆಗೆ ಪೂರಕವಾದೀತು. ಸಂಪತ್ತು ಮಾತ್ರವೇ ದೊರಕಿದರೆ ಅದರಿಂದ ಸಿಗಬಹುದಾದ ಸುಖಗಳನ್ನನುಭವಿಸುತ್ತ ಜ್ಞಾನಸಂಪಾದನೆಯನ್ನು ಮರೆತುಬಿಡಬಹುದು. ಆದ್ದರಿಂದಲೇ ಐಹಿಕ ಜೀವನದ ಪರಿಪೂರ್ಣತೆ, ಸಾರ್ಥಕತೆ ಮತ್ತು ನಿಯಂತ್ರಣಕ್ಕಾಗಿ ವಿದ್ಯೆ ಹಾಗೂ ಜ್ಞಾನದ ಅವಶ್ಯಕತೆಯಿರುವ ಕಾರಣದಿಂದಲೇ ಸಾರ್ವದೇಶಿಕವಾಗಿ ಹಾಗೂ ಸಾರ್ವಕಾಲಿಕವಾಗಿ ಸರಸ್ವತಿಯ ಆರಾಧನೆ ನಡೆಯುತ್ತದೆ.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 7 =
Remember me
