ಬೆಂಗಳೂರು:ಕಾಮಗಾರಿಯ ವರ್ಕ್ ಆರ್ಡರ್ ನೀಡಲು ಕಮಿಷನ್ ಕೇಳುತ್ತಿದ್ದಾರೆಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಧಾನಿವರೆಗೂ ದೂರು ಒಯ್ದಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ ಸಚಿವ ಈಶ್ವರಪ್ಪ ‘ತಲೆದಂಡ’ಕ್ಕೆ ಒತ್ತಡ ಹೆಚ್ಚತೊಡಗಿದೆ.
ಆತ್ಮಹತ್ಯೆಗೆ ಮುನ್ನ ಸಂತೋಷ ಪಾಟೀಲ್ ಕಳುಹಿಸಿದ್ದಾರೆನ್ನಲಾದ ವಾಟ್ಸಪ್ ಸಂದೇಶ ಈಶ್ವರಪ್ಪ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಪರಿಸ್ಥಿತಿ ನಿಭಾಯಿಸುವ ಸಂಬಂಧ ಬಿಜೆಪಿ ದೆಹಲಿ ನಾಯಕರು ಮಾಹಿತಿ ತರಿಸಿಕೊಂಡಿದ್ದಾರೆ. ಶೇ.40 ಕಮಿಷನ್ ಆರೋಪ ಹೊರಿಸಿದ ಗುತ್ತಿಗೆದಾರನ ಅಸಹಜ ಸಾವಿನ ವ್ಯತಿರಿಕ್ತ ಪರಿಣಾಮದ ಬಗ್ಗೆ ಬಿಜೆಪಿಯಲ್ಲಿ ಆಂತರಿಕ ಚಿಂತನ-ಮಂಥನ ನಡೆದಿದ್ದರೆ, ಪ್ರತಿಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೇರತೊಡಗಿವೆ.
ರಾಜಭವನಕ್ಕೆ ಕೈಪಡೆ:ಪರ್ಸೆಂಟೇಜ್ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಬಲ ನೀಡಿದ್ದು, ವಿಷಯ ತಿಳಿಯುತ್ತಲೇ ಬೀದಿಗೆ ಇಳಿದು ಬಿಜೆಪಿ ಮೇಲೆ ಒತ್ತಡ ತಂತ್ರ ಪ್ರಯೋಗಿಸಿದೆ. ಬುಧವಾರ ರಾಜಭವನದ ಕದ ತಟ್ಟಲಿದೆ. ಇನ್ನು ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡುವುದು ಲೇಸು ಎಂದು ಜೆಡಿಎಸ್ ನಾಯಕರು ಮೃದುಭಾಷೆಯಲ್ಲಿ ಒತ್ತಾಯಿಸಿರುವುದರಿಂದ ಬಿಜೆಪಿ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಮಧ್ಯೆ ಸಂತೋಷ್ ವಿರುದ್ಧ ನ್ಯಾಯಾಲಯದಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆಯೇ ಈಶ್ವರಪ್ಪಗೆ ‘ಮುಳುಗುವವನಿಗೆ ಹುಲ್ಲು ಕಡ್ಡಿ ಸಹಾಯ’ ಆದಂತಿದೆ ಎಂದೂ ಹೇಳಲಾಗುತ್ತಿದೆ.
ನಡ್ಡಾಗೂ ವಿವರಣೆ:ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ವಿರುದ್ಧ ಕೇಂದ್ರ ಸರ್ಕಾರಕ್ಕೆ ನೇರವಾಗಿ ದೂರು ಸಲ್ಲಿಸಿದ್ದರು. ವರ್ಕ್ ಆರ್ಡರ್​ಗೆ ಶೇ.40 ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂರ್ಪಸಿ ವಿವರಣೆ ಪಡೆದುಕೊಂಡಿದ್ದರು. ಅಲ್ಲದೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಲಿಖಿತ ಸಮಜಾಯಿಷಿ ನೀಡಿದ್ದರು. ಜತೆಗೆ ಈಶ್ವರಪ್ಪ ಅವರು ಏ.10ರಂದು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಗಿರಿರಾಜ್ ಸಿಂಗ್ ಅವರಿಗೆ ದೂರಿನ ಹಿನ್ನೆಲೆ ಬಗ್ಗೆ ವಿವರಿಸಿ, ಆರೋಪದಲ್ಲಿ ಹುರುಳಿಲ್ಲವೆಂಬ ಸ್ಪಷ್ಟನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
*ನಿರ್ವಹಿಸಿದ ಕೆಲಸಕ್ಕೆ ವರ್ಕ್ ಆರ್ಡರ್ ನೀಡಲು ಈಶ್ವರಪ್ಪ ಶೇ.40 ಕಮಿಷನ್ ಕೇಳಿದ್ದರು. ಕೊಡದಿದ್ದಕ್ಕೆ ವರ್ಕ್ ಆರ್ಡರ್ ತಿರಸ್ಕರಿಸಿದ್ದರೆಂದು ಆರೋಪಿಸಿದ್ದ ಸಂತೋಷ್ ಪಾಟೀಲ್
*ಈ ವಿಚಾರಕ್ಕೆ ಈಶ್ವರಪ್ಪ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು
*ಸಂತೋಷ್ ಪಾಟೀಲ್​ಗೆ ಯಾವುದೇ ಕಾಮಗಾರಿ ನೀಡಿಲ್ಲವೆಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಇಲಾಖೆಯಿಂದ ಸಮಜಾಯಿಷಿ
*ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಈಶ್ವರಪ್ಪ
*ಮಾನನಷ್ಟ ದಾವೆಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯದಿಂದ ನೋಟಿಸ್ ರವಾನೆ
*ದೂರು, ದಾವೆ ವಿದ್ಯಮಾನದ ಬಳಿಕ ಸಂತೋಷ್ ಪಾಟೀಲ್ ಸಾವು ಸಂಭವಿಸಿದೆ
*ಸಂತೋಷ್ ಕಳಿಸಿದ್ದ ಡೆತ್​ನೋಟ್ ಗಮನಿಸಿ ಪೊಲೀಸರಿಂದ ಹುಡುಕಾಟ
*ಮೊಬೈಲ್ ಲೊಕೇಶನ್ ಆಧಾರದಲ್ಲಿ ಉಡುಪಿಯಲ್ಲಿ ಇರುವ ಮಾಹಿತಿ
*ಪೊಲೀಸರು ಸ್ಥಳಕ್ಕಾಮಿಸಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಖಾತ್ರಿ
* ಘಟನಾ ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರು, ಎಫ್​ಎಸ್​ಎಲ್ ತಂಡದಿಂದ ಪರಿಶೀಲನೆ
* ಸೋಮವಾರ ಸಂಜೆ ಎರಡು ರೂಂ ಬುಕ್ ಮಾಡಿರುವುದು ಖಾತ್ರಿ
*ಸಂತೋಷ್ ಜತೆ ಇಬ್ಬರು ಸ್ನೇಹಿತರು ಉಡುಪಿಗೆ ಬಂದಿದ್ದರು
*ಹೊಟ್ಟೆನೋವೆಂದು ಸಂತೋಷ್ ರೂಂ ಸೇರಿದ್ದರು
ಸಂತೋಷ ಪಾಟೀಲ್ ಆತ್ಮಹತ್ಯೆಗೆ ಹೊಣೆಗಾರರಲ್ಲದ ಈಶ್ವರಪ್ಪ ಸಚಿವ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಡಬೇಕು? ಸಾಕ್ಷ್ಯ, ಪುರಾವೆಗಳಿಲ್ಲದ ಪ್ರಕರಣವನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿರುವುದು ಆ ಪಕ್ಷದ ಹತಾಶ ಮನಸ್ಥಿತಿ ಎತ್ತಿತೋರಿಸುತ್ತದೆ.
|ಎನ್.ರವಿಕುಮಾರ್,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ.
ಉಡುಪಿ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗುತ್ತಿಗೆದಾರರಿಂದ ಕಾಮಗಾರಿ ಮೊತ್ತದಲ್ಲಿ ಶೇ.40 ಲಂಚ ಪಡೆಯುತ್ತಾರೆ ಎಂದು ಆರೋಪಿಸಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ನಗರದ ಲಾಡ್ಜ್​ನಲ್ಲಿ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ತಡರಾತ್ರಿ ಬೆಳಗಾವಿಯ ಮಾಧ್ಯಮ ಪತ್ರಿನಿಧಿಗಳಿಗೆ ವಾಟ್ಸ್​ಆಪ್ ಮೂಲಕ ಡೆತ್​ನೋಟ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ರವಾನಿಸಿದ್ದರು. ಡೆತ್​ನೋಟ್ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸಂತೋಷ್ ಪಾಟೀಲ್​ಗಾಗಿ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಮೊಬೈಲ್ ಲೊಕೇಶನ್ ಆಧಾರದಲ್ಲಿ ಉಡುಪಿಯಲ್ಲಿ ಇರುವ ಮಾಹಿತಿ ಲಭಿಸಿತು. ಪೊಲೀಸರು ಸ್ಥಳಕ್ಕೆ ತೆರಳುವ ಮುನ್ನವೇ ಜೀವ ಹೋಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಪಕ್ಕದ ಕೊಠಡಿಯಲ್ಲೇ ಇದ್ದ ಗೆಳೆಯರು:ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಹವ್ಯಾಸ ಹೊಂದಿದ್ದ ಸಂತೋಷ್ ಪಾಟೀಲ್, ಇಬ್ಬರು ಆತ್ಮೀಯ ಸ್ನೇಹಿತರಾದ ಸಂತೋಷ್ ಮೇದಪ್ಪ ಹಾಗೂ ಪ್ರಶಾಂತ್ ಶೆಟ್ಟಿ ಜತೆಗೆ ಬೆಂಗಳೂರು ದಕ್ಷಿಣದ ನೋಂದಣಿ ಹೊಂದಿರುವ ಕಾರಿನಲ್ಲಿ ಉಡುಪಿಗೆ ಬಂದಿದ್ದರು. ಅವರು ಸೋಮವಾರ ಸಾಯಂಕಾಲ 5 ಗಂಟೆಗೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಹೋಟೆಲೊಂದರಲ್ಲಿ ಎರಡು ರೂಂ ಬುಕ್ ಮಾಡಿ ತಂಗಿದ್ದರು. ಮೂವರು ರಾತ್ರಿ ಊಟಕ್ಕೆಂದು ಹೊರಗಡೆ ಹೋಗಿದ್ದು, ಸಂತೋಷ್ ಪಾಟೀಲ್ ತನಗೆ ಹೊಟ್ಟೆ ಸರಿ ಇಲ್ಲ ಎಂದು ಸ್ನೇಹಿತರಿಗೆ ಹೇಳಿ ವಾಪಸ್ ರೂಮ್ೆ ಬಂದಿದ್ದರು. ಸ್ನೇಹಿತರು ಪಾಟೀಲ್​ರನ್ನು ಬಿಟ್ಟು ಮತ್ತೆ ಹೊರಗಡೆ ಹೋಗಿದ್ದರು. ತಡರಾತ್ರಿ ಹೋಟೆಲ್​ಗೆ ಆಗಮಿಸಿದ್ದ ಗೆಳೆಯರಿಬ್ಬರು ಪ್ರತ್ಯೇಕ ರೂಮ್ಲ್ಲಿ ಮಲಗಿದ್ದರು.
ಆತ್ಮಹತ್ಯೆಯ ಸುಳಿವಿರಲಿಲ್ಲ:ಧಾರವಾಡದಲ್ಲಿ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್ ಶೆಟ್ಟಿ ಮಂಗಳವಾರ ಬೆಳಗ್ಗೆ ಟಿವಿ ವೀಕ್ಷಿಸಿದಾಗ ನಾಪತ್ತೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿದು ಕೂಡಲೇ ಸಂತೋಷ್ ತಂಗಿದ್ದ ರೂಮ್ 2ನೇ ಕೀ ಬಳಸಿ ಬಾಗಿಲು ತೆರೆದರು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ರವಾಸಕ್ಕೆ ಹೋಗೋಣವೆಂದು ಉಡುಪಿಗೆ ಬಂದಿದ್ದೆವು. ಸಂತೋಷ್​ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಲಕ್ಷಣವೂ ಕಾಣಿಸಿರಲಿಲ್ಲ ಎಂದು ಸ್ನೇಹಿತರಿಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಕಾರಿನಲ್ಲಿ ವಿಧಾನಸೌಧ ಪಾಸ್:ಉಡುಪಿಯ ಲಾಡ್ಜ್ ಪಾರ್ಕಿಂಗ್​ ಏರಿಯಾದಲ್ಲಿ ನಿಲ್ಲಿಸಲಾದ ಕಾರಿನಲ್ಲಿ ವಿಧಾನಸೌಧ ಪ್ರವೇಶದ ಪಾಸ್, ಬೈಂದೂರಿನಲ್ಲಿ ಚಪ್ಪಲಿ ಖರೀದಿಸಿದ ಬ್ಯಾಗ್, ಕುಂದಾಪುರದಲ್ಲಿ ಬಟ್ಟೆ ಖರೀದಿಸಿದ ಬ್ಯಾಗ್ ಪತ್ತೆಯಾಗಿದೆ.
ಉಡುಪಿಗೆ ಬಂದ ಸೋದರ:ಸಂತೋಷ್ ಸಹೋದರ ಗಿರೀಶ್ ಪಾಟೀಲ್ ಪೊಲೀಸ್ ಇನ್​ಸ್ಪೆಕ್ಟರ್ ಆಗಿದ್ದು, ಮಂಗಳವಾರ ರಾತ್ರಿ ಉಡುಪಿಗೆ ಬಂದಿದ್ದಾರೆ. ಕುಟುಂಬಿಕರಿಗೆ ನಗರ ಠಾಣೆಯಲ್ಲಿ ಪ್ರಾಥಮಿಕ ಹಂತದ ಮಾಹಿತಿ ಒದಗಿಸಲಾಯಿತು. ಬುಧವಾರ ಬೆಳಗ್ಗೆ ಪಂಚನಾಮೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಸಂಗ್ರಹಿಸಲಿದ್ದಾರೆ. ನಂತರ ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ನಡುವೆ ಮೃತನ ಪತ್ನಿ ಜಯಶ್ರೀ, ‘ನಾನು ಮಂಗಳೂರಿಗೆ ಬರುವವರೆಗೂ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಸಂತೋಷ್ ಪಾಟೀಲ್ ಸಂಬಂಧಿಕರು ಬಂದ ಬಳಿಕವೇ ಇಲಾಖೆ ಮುಂದಿನ ಕ್ರಮಕೈಗೊಳ್ಳಲಿದೆ. ಸೂಕ್ಷ್ಮ ಪ್ರಕರಣ ಆಗಿರುವುದರಿಂದ ತಜ್ಞರ ತಂಡ ತನಿಖೆ ನಡೆಸಲಿದೆ. ಕೊಠಡಿಯನ್ನು ಸೀಲ್ ಮಾಡಲಾಗಿದ್ದು, ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
–ದೇವಜ್ಯೋತಿ ರೇಪಶ್ಚಿಮ ವಲಯ ಐಜಿಪಿ
ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣವು ಭ್ರಷ್ಟಾಚಾರ, ಪರ್ಸೆಂಟೇಜ್ ಆರೋಪಕ್ಕೆ ಮತ್ತೊಂದು ತಿರುವು ನೀಡಿದ್ದು, ಬಿಜೆಪಿ ವರಿಷ್ಠರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವಂತೆ ಮಾಡುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಬಳಸಿಕೊಂಡು ಬಿಜೆಪಿಗೆ ತಿರುಮಂತ್ರ ಹಾಕಲು ಕಾಂಗ್ರೆಸ್ ಹವಣಿಸಿದ್ದು, ಸೂಕ್ತ ಸಾಕ್ಷ್ಯ ಹಾಗೂ ಪ್ರಬಲ ಪುರಾವೆ ಲಭಿಸಿದರೆ ಪಕ್ಷದ ದೆಹಲಿ ನಾಯಕರು ಸಂದೇಶ ರವಾನಿಸಬಹುದು ಎಂದು ಮೂಲಗಳು ಹೇಳಿವೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸಂತೋಷ್ ಪಾಟೀಲ್​ಗೆ ಯಾವುದೇ ಕಾಮಗಾರಿ ಗುತ್ತಿಗೆ ನೀಡಿಲ್ಲ. ಹೀಗಿರುವಾಗ ಅವರಿಂದ ಕಮಿಷನ್ ಪಡೆಯುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ? ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ.
|ಕೆ.ಎಸ್.ಈಶ್ವರಪ್ಪಗ್ರಾಮೀಣಾಭಿವೃದ್ಧಿ ಸಚಿವ
ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಡೆತ್​ನೋಟ್ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿದೆ.
|ಬಸವರಾಜ ಬೊಮ್ಮಾಯಿಸಿಎಂ
40% ಕಮಿಷನ್ ಆರೋಪ ಸ್ವಪಕ್ಷದ ಕಾರ್ಯ ಕರ್ತನನ್ನೇ ಬಲಿಪಡೆದಿದೆ. ಆತನ ಮನವಿಗೆ ಪ್ರಧಾನಿ ಉತ್ತರಿಸಿಲ್ಲ. ಈ ಘಟನೆಗೆ ಪ್ರಧಾನಿ, ಸಿಎಂ ಹೊಣೆಗಾರರು.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 7 =
Remember me
