|ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಕಾಶ್ಮೀರದಲ್ಲಿ ಭಾರತದ ಐತಿಹ್ಯಕ್ಕೆ ಸಂಬಂಧಿಸಿದಂತಹ ದೇವಾಲಯಗಳಿವೆ. ಇವುಗಳಲ್ಲಿ ಶಾರದಾಪೀಠ (ಸರ್ವಜ್ಞಪೀಠ) ದೇವಾಲಯವೂ ಒಂದು. (ಈಗ ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೆ) ಶ್ರೀ ಶಾರದಾ ಪೀಠವಿರುವ ಸ್ಥಳವು ಕೇವಲ ಒಂದು ದೇವಸ್ಥಾನವಷ್ಟೇ ಆಗಿರಲಿಲ್ಲ. ಹಿಂದೆ ದೇಶ ವಿದೇಶಗಳಿಂದ ವಿದ್ಯಾಭ್ಯಾಸವನ್ನು ಪಡೆಯಲು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಈಗಲೂ ಇದನ್ನು ‘ಶಾರದಾ ಗ್ರಾಮ’ ಎನ್ನುವರು. ಸನಾತನ ಹಿಂದೂ ಧರ್ಮದ ಉದ್ಧಾರಕರು ಹಾಗೂ ಅದ್ವೈತ ಪ್ರತಿಪಾದಕರಾಗಿದ್ದ ಶ್ರೀ ಶಂಕರ ಭಗವತ್ಪಾದರು ಈ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಉದ್ಧಾಮ ಪಂಡಿತರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ‘ಸರ್ವಜ್ಞಪೀಠ’ವನ್ನು ಅಲಂಕರಿಸಿದ್ದರೆಂಬುದನ್ನು ಶ್ರೀ ವಿದ್ಯಾರಣ್ಯರ ‘ಶಂಕರ ದಿಗ್ವಿಜಯ’ ಗ್ರಂಥದಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು. ಜಗತ್ತಿನ ಹಲವು ವಿಜ್ಞಾನಿಗಳು, ಗುರುಗಳು, ವಿದ್ವಾಂಸರು, ಸಾಧಕರು ಉನ್ನತ ಶಿಕ್ಷಣಕ್ಕಾಗಿ ಈ ಜ್ಞಾನಕ್ಷೇತ್ರದಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳಲ್ಲಿ ತಿಳಿಸಲಾಗಿದೆ.
ಕಾಶ್ಮೀರ-ಶೃಂಗೇರಿ ಸಂಬಂಧ:ಶೃಂಗೇರಿಗೂ ಮತ್ತು ಕಾಶ್ಮೀರಕ್ಕೂ 1200 ವರ್ಷಗಳಿಂದಲೂ ಸಂಬಂಧವಿರುವುದು. ಕಾರಣ ಏನೆಂದರೆ ಶ್ರೀ ಶಂಕರಾಚಾರ್ಯರು ಕಾಶ್ಮೀರದಲ್ಲಿದ್ದ ಶಾರದಾ ಸರ್ವಜ್ಞಪೀಠವನ್ನು ಆರೋಹಣ ಮಾಡಿದ ನಂತರ ಶ್ರೀ ಶಾರದಾಂಬೆಯನ್ನು ಶೃಂಗೇರಿಗೆ ತಂದು ಶ್ರೀಚಕ್ರದ ಮೇಲೆ ಪ್ರತಿಷ್ಠಾಪಿಸಿದರು. ಆ ವಿಗ್ರಹವು ಶ್ರೀಗಂಧದ ಮರದಿಂದ ಕೆತ್ತಲ್ಪಟ್ಟಿತ್ತು. ನೂರಾರು ವರ್ಷಗಳ ನಂತರ ಆ ವಿಗ್ರಹವನ್ನು ಬದಲಾಯಿಸಿ ಬಂಗಾರಮಿಶ್ರಿತ ಪಂಚಲೋಹದ ಶ್ರೀ ಶಾರದಾಂಬೆಯ ವಿಗ್ರಹವನ್ನು ಜಗದ್ಗುರು ಶ್ರೀ ವಿದ್ಯಾರಣ್ಯರು ಪುನಃ ಪ್ರತಿಷ್ಠಾಪಿಸಿದರು. ಈಗ ನಾವು ನೋಡುತ್ತಿರುವುದು ಇದೇ ವಿಗ್ರಹ. ಶ್ರೀಗಂಧದ ವಿಗ್ರಹವು ವಿದ್ಯಾಶಂಕರ ದೇವಾಲಯದ ಗರ್ಭಗುಡಿಯ ಮುಂದಿನ ಕೋಣೆಯಲ್ಲಿರುವುದು, ಪ್ರತಿದಿನ ಪೂಜೆ ನಡೆಯುವುದು. ಶೃಂಗೇರಿ ಶಾರದಾ ಪೀಠದ ಹಿಂದಿನ ಜಗದ್ಗುರುಗಳು, ಕಾಶ್ಮೀರದ ರಾಜರುಗಳ ನಡುವೆ ಗುರು-ಶಿಷ್ಯರ ಸಂಬಂಧ ಇತ್ತು. ಇದಕ್ಕೆ ಪೂರಕವಾದ ಪತ್ರವ್ಯವಹಾರ ದಾಖಲೆಗಳನ್ನು ಸಹ ಶ್ರೀಮಠದಲ್ಲಿ ಕಾಣಬಹುದು.
ಟೀಟ್ವಾಲ್​ನ ವಿಶೇಷತೆ:ಟೀಟ್ವಾಲ್​ನ ಅತಿದೊಡ್ಡ ವಾಣಿಜ್ಯ ಕೇಂದ್ರವು ಕಿಶನ್ ಗಂಗಾನದಿಯ ದಡದಲ್ಲಿದೆ. ಇದು ಶ್ರೀನಗರದಿಂದ 170 ಕಿ.ಮೀ. ದೂರದಲ್ಲಿದೆ. ಇಲ್ಲಿ ರಸ್ತೆಯ ಮೂಲಕ 6 ಗಂಟೆ ಪ್ರಯಾಣ ಮಾಡಿ, ಸಾಧನಾ ಪಾಸ್ ಮೂಲಕ ಕುಪ್ವಾರ ಜಿಲ್ಲೆಯ ತಂಗ್​ಧಾರ್​ಗೆ ಪ್ರಯಾಣಿಸಬಹುದು. ಟೀಟ್ವಾಲ್ ತಂಗ್​ಧಾರ್​ನಿಂದ ಸುಮಾರು 30 ನಿಮಿಷ ವಾಹನದಲ್ಲಿ ಪ್ರಯಾಣ. ಅಲ್ಲಿನ ಹವಾಮಾನವು ಕಾಶ್ಮೀರ ಕಣಿವೆಯ ಉಳಿದ ಭಾಗಗಳಂತೆಯೇ ಇರುವುದು. ಭೂಲಕ್ಷಣಗಳ ದೃಷ್ಟಿಯಿಂದ ಟೀಟ್ವಾಲ್ ಜಮ್ಮು ಪ್ರದೇಶವನ್ನು ಸ್ವಲ್ಪ ಹೋಲುತ್ತದೆ. ಮುಖ್ಯವಾಗಿ ಈಗ ನಿರ್ವಣವಾಗುತ್ತಿರುವ ದೇವಾಲಯವು ನಿಯಂತ್ರಣ ರೇಖೆಯ ಬಳಿ ಸ್ಪಷ್ಟವಾಗಿ ಗೋಚರಿಸುತ್ತದೆ. ಟೀಟ್ವಾಲ್​ನಿಂದ ಮೂಲ ಶ್ರೀ ಶಾರದಾ ಸರ್ವಜ್ಞಪೀಠ 25 ಕಿ.ಮೀ. ದೂರದಲ್ಲಿದೆ.
ಕಂದಾಯ ದಾಖಲೆಗಳ ಪ್ರಕಾರ ಬೇಸ್ ಕ್ಯಾಂಪ್ ಮತ್ತು ಪಕ್ಕದ ಗುರುದ್ವಾರದ ಭೂಮಿಯು 6210 ಚದರ ಅಡಿ. 3510 ಚದರ ಅಡಿಗಳಷ್ಟು ಶಾರದಾ ದೇವಸ್ಥಾನ ಮಧ್ಯದಲ್ಲಿ ಗರ್ಭಗುಡಿ ಅಪೋ›ಚ್ ರಸ್ತೆಯ ಮುಖ್ಯರಸ್ತೆಯಿಂದ 750 ಗಜಗಳಷ್ಟು ದೂರದಲ್ಲಿದೆ ಮತ್ತು 8 ಅಡಿ ಅಗಲವಿದೆ. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಇನ್ನೊಂದು ಬದಿಯಲ್ಲಿ ಅಪೋ›ಚ್ ರಸ್ತೆ ನಿರ್ವಿುಸಲು ಕಂದಾಯ ಇಲಾಖೆಗೆ ತಿಳಿಸಿರುವರು.
ಶಾರದಾ ಯಾತ್ರೆ:ಪ್ರತಿವರ್ಷ ಶಾರದಾ ಯಾತ್ರೆ ಟೀಟ್ವಾಲ್​ನಿಂದಲೇ ಆರಂಭವಾಗುತ್ತಿತ್ತು. 1947ಕ್ಕಿಂತ ಮೊದಲು ಟೀಟ್ವಾಲ್​ನಲ್ಲಿ ಒಂದು ಸಣ್ಣ ಗುರುದ್ವಾರ ಮತ್ತು ಧರ್ಮಶಾಲೆಯು ಶಾರದಾ ಯಾತ್ರಾರ್ಥಿಗಳಿಗೆ ಮೂಲ ಶಿಬಿರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಶಾರದಾ ಸರ್ವಜ್ಞಪೀಠ ಪುನರುತ್ಥಾನ ಸಮಿತಿಯ ಮುಖ್ಯಸ್ಥರು ಹಾಗೂ ಅಧ್ಯಕ್ಷರಾದ ಶ್ರೀ ರವೀಂದ್ರ ಪಂಡಿತ ಹಾಗೂ ಕಮಿಟಿಯ ಎಲ್ಲ ಸದಸ್ಯರು ಮತ್ತು ಕಾಶ್ಮೀರದ ಶಾರದಾಂಬೆಯ ಭಕ್ತರುಗಳು ಸೇರಿ ಟೀಟ್ವಾಲ್​ನಲ್ಲಿ ಶ್ರೀ ಶಾರದಾಂಬೆ ದೇವಾಲಯ ಆಗಬೇಕು ಎಂದು ತೀರ್ವನಿಸಿದರು. ಪ್ರತಿ ವರ್ಷ ಸೆಪ್ಟೆಂಬರ್ 15ರಂದು ‘ಶಾರದಾ ದಿವಸ’ ಆಚರಿಸುತ್ತಾರೆ. ಈಚೆಗೆ ಅಂದರೆ 14-8-2021 ರಂದು ‘ಶಾರದಾ ದಿವಸ’ ಭಾರತೀಯ ಸೇನೆ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಟೀಟ್ವಾಲ್​ನಲ್ಲಿ ‘ಶಾರದಾಂಬೆ ದೇವಾಲಯ’ ಸ್ಥಾಪಿಸುವ ವಿಷಯ ಪ್ರಸ್ತಾಪನೆ ಮಾಡಿ ಸಮಿತಿಯು ವೇಗವಾಗಿ ಕೆಲಸವನ್ನು ಪ್ರಾರಂಭಿಸಿತು. ಆ ಪ್ರಯತ್ನದಿಂದಲೇ ಈಗ ಇಲ್ಲಿ ಶ್ರೀ ಶಾರದಾಂಬೆಯ ಗರ್ಭಗುಡಿಯ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿಂದೆ ಜಗದ್ಗುರುಗಳು ಹಾಗೂ ಆಡಳಿತಾಧಿಕಾರಿ ಗೌರಿಶಂಕರ ಅವರು ತಿಳಿಸಿದಂತೆ, ಟೀಟ್ವಾಲ್​ನಲ್ಲಿ ನಿರ್ವಣವಾಗುತ್ತಿರುವ ಶಾರದಾ ದೇವಾಲಯಕ್ಕೆ ಶ್ರೀ ಶಾರದಾಪೀಠದಿಂದ ಶಾರದಾಂಬೆ ವಿಗ್ರಹವನ್ನು ವಿಜಯದ ಸಂಕೇತವಾದ ವಿಜಯದಶಮಿ ದಿನದಂದು ಶಾರದಾ ಸೇವಾ ಸಮಿತಿಗೆ ಹಸ್ತಾಂತರಿಸಲಾಯಿತು.
ಟೀಟ್ವಾಲ್ ದೇವಾಲಯ ಸ್ವರೂಪ:ಟೀಟ್ವಾಲ್​ನಲ್ಲಿ ನೂತನವಾಗಿ ನಿರ್ವಿುಸಿರುವ ದೇವಾಲಯವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಪುರಾತನ ಶಾರದಾ ಸರ್ವಜ್ಞಪೀಠದ ದೇವಾಲಯದ ವಾಸ್ತುಶಿಲ್ಪದ ವೈಭವವನ್ನು ಹೋಲುವಂತಿರುವುದು. ಈ ದೇವಾಲಯ ನಾಲ್ಕು ಬಾಗಿಲುಗಳು ಹೊಂದಿರುತ್ತದೆ. ಮೂಲ ಸರ್ವಜ್ಞಪೀಠದ ದೇವಾಲಯವೂ ನಾಲ್ಕು ಬಾಗಿಲುಗಳನ್ನು ಹೊಂದಿತ್ತು. ನಾಲ್ಕು ಬಾಗಿಲಿನ ಮೇಲೆ ಮಹಾವಾಕ್ಯವಾದ ‘ಪ್ರಜ್ಞಾನಂ ಬ್ರಹ್ಮ ತತ್ತ್ವಮಸಿ ಅಯಮಾತ್ಮ ಬ್ರಹ್ಮ’ ಹಾಗೂ ‘ಅಹಂ ಬ್ರಹ್ಮಾಸ್ಮಿ’ ಎಂದು ಕೆತ್ತಲಾಗಿದೆ. ದೇವಾಲಯದ ಪಕ್ಕದಲ್ಲಿ ಗುರುದ್ವಾರವನ್ನೂ ನಿರ್ವಿುಸಲಾಗಿದೆ.
4000 ಕಿ.ಮೀ. ಯಾತ್ರೆ:ಕಾಶ್ಮೀರದ ಟೀಟ್ವಾಲ್​ನಲ್ಲಿ ನಿರ್ವಣವಾಗುತ್ತಿರುವ ಶ್ರೀ ಶಾರದಾಂಬೆಯ ದೇವಾಲಯಕ್ಕೆ ದೇವಿಯ ರಥಯಾತ್ರೆಯ ಮೂಲಕ ಪ್ರಯಾಣ ಮಾಡಲಾಗುವುದು. ಈ ರಥಯಾತ್ರೆಯು 24-1-2023 ರಂದು ಶೃಂಗೇರಿಯಿಂದ ಆರಂಭವಾಗಿ ಬೆಂಗಳೂರು, ಪುಣೆ, ಬಾಂಬೆ, ಚಂಡೀಗಢ, ದೆಹಲಿ, ಅಮೃತಸರ, ಜೈಪುರ, ಜಮ್ಮು ನಂತರ ಶ್ರೀ ನಗರದ ಮೂಲಕ ಸಂಚರಿಸುವುದು. ರಥಯಾತ್ರೆಯು ಸುಮಾರು 4000 ಕಿ.ಮೀ. ದೂರ ಪ್ರಯಾಣವಾಗುವುದು. ಶ್ರೀ ನಗರಕ್ಕೆ ಬಂದು ನಂತರ ಕಾಶ್ಮೀರದ ಟೀಟ್ವಾಲ್ ಸೇರಲಿದೆ.
ಕರ್ನಾಟಕದ ಕೊಡುಗೆ ಅಪಾರ:ಟೀಟ್ವಾಲ್​ನಲ್ಲಿ ನಿರ್ವಣವಾಗುತ್ತಿರುವ ಶ್ರೀ ಶಾರದಾಂಬೆಯ ದೇವಾಲಯಕ್ಕೆ ಕರ್ನಾಟಕದ ಕೊಡುಗೆ ಬಹಳ ವಿಶೇಷವಾಗಿದೆ. ಬೆಂಗಳೂರಿನ ‘ಬಿಡದಿ’ ಸಮೀಪದ ಶಿಲ್ಪಿಗಳು ಕುಸುರಿ ಕೆಲಸ ಮಾಡಿರುವರು. ದೇವಾಲಯ ನಿರ್ವಣಕ್ಕೆ ಕಲ್ಲು ಸಾಗಾಣಿಕೆ, ಕಲ್ಲು ಕೆತ್ತನೆಗೆ ಸುಮಾರು 1 ಕೋಟಿ ರೂ. ಅಂದಾಜು ವೆಚ್ಚವಾಗಿದೆ. ದೇವಾಲಯದ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ‘ಸಾಗರ್ ಗುಡಿಗಾರ್’ ತಂಡ ನಿರ್ವಹಿಸಿದ್ದರು. ಟೀಟ್ವಾಲ್​ಗೆ ಬೆಂಗಳೂರಿನಿಂದಲೇ ಕಲ್ಲುಗಳನ್ನು 4 ಲಾರಿಗಳ ಮೂಲಕ ಕಳಿಸಲಾಗಿತ್ತು. ದೇವಾಲಯ ನಿರ್ಮಾಣ ಕಾರ್ಯ ಶೇ.90 ಮುಗಿದಿದೆ. ಶ್ರೀ ಶಾರದಾಂಬೆಯ ಪ್ರತಿಷ್ಠಾಪನೆ ಕಾರ್ಯವು ತಾ. 22-3-2023 ರಂದು ನೆರವೇರಲಿದೆ. ದೇವಾಲಯದ ನಿರ್ವಣದ ವೆಚ್ಚವನ್ನು ಶೃಂಗೇರಿ ಶ್ರೀ ಮಠವೇ ಭರಿಸಿದೆ.
100 ಕೆಜಿ ವಿಗ್ರಹ:ಟೀಟ್ವಾಲ್​ನಲ್ಲಿ ಪ್ರತಿಷ್ಠಾಪನೆಗೊಳ್ಳುವ ಶಾರದಾಂಬೆಯ ವಿಗ್ರಹವು ಪಂಚಲೋಹದಲ್ಲಿ ನಿರ್ವಿುತವಾಗಿದೆ. ಈ ವಿಗ್ರಹವು 100 ಕೆ.ಜಿ. ತೂಕವಿರುವುದು. ಶೃಂಗೇರಿಯಲ್ಲಿ ಸ್ಥಾಪಿಸಿರುವ ಶ್ರೀ ಶಾರದಾಂಬೆಯ ವಿಗ್ರಹದ ಹಾಗೇ ಇದೆ. ಇದನ್ನು ಬೆಂಗಳೂರಿನ ಶಿಲ್ಪಿಗಳು ನಿರ್ವಿುಸಿದ್ದಾರೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)
ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
