|ಸದಾ ಜೋಶಿಬೀದರ್
ಜಿದ್ದಾಜಿದ್ದಿನ ಕುಸ್ತಿಯಿಂದ ತೀವ್ರ ಕುತೂಹಲ ಕೆರಳಿಸಿದ್ದ ಬಸವಕಲ್ಯಾಣ ವಿಧಾನಸಭೆ ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಭರ್ಜರಿ ಜಯ ಗಳಿಸಿದ್ದು, ಕ್ಷೇತ್ರದ ಇತಿಹಾಸದಲ್ಲಿ ಎರಡನೇ ಸಲ (2008ರ ಬಳಿಕ) ಕೇಸರಿ ಧ್ವಜ ರಾರಾಜಿಸಿದೆ. ಶರಣು ಸಲಗರ್ ನಿರೀಕ್ಷೆಗೂ ಮೀರಿ 71,012 ಮತ ಪಡೆದು ಸಮೀಪದ ಸ್ಪರ್ಧಿ ಕಾಂಗ್ರೆಸ್​ನ ಮಾಲಾ (ಮಲ್ಲಮ್ಮ) ಬಿ. ನಾರಾಯಣರಾವ್ ಅವರನ್ನು 20,629 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಾಲಾ 50,383 ಮತ ಪಡೆದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ನಾರಾಯಣರಾವ್ ಕಾಂಗ್ರೆಸ್​ನಿಂದ ಗೆದ್ದಿದ್ದರು. ಕಳೆದ ಸೆ.24ರಂದು ಅವರು ಕರೊನಾಕ್ಕೆ ಬಲಿಯಾದ ಕಾರಣ ಕ್ಷೇತ್ರ ಮೊದಲ ಉಪ ಚುನಾವಣೆ ಕಂಡಿತ್ತು. ಮಹಿಳೆಗೆ ಆದ್ಯತೆ ನೀಡಿರುವ ಜತೆಗೆ ಅನುಕಂಪವೂ ಕೈ ಹಿಡಿಯಬಹುದೆಂಬ ನಿರೀಕ್ಷೆಯಿಂದ ಪ್ರಬಲ ಅಭ್ಯರ್ಥಿಗಳನ್ನು ಬದಿಗಿಟ್ಟು ನಾರಾಯಣರಾವ್ ಪತ್ನಿ ಅಖಾಡಕ್ಕಿಳಿಸಿದ ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊರ ಜಿಲ್ಲೆ ಅಭ್ಯರ್ಥಿ ಎಂಬ ಆರೋಪ, ಟೀಕೆಗಳ ನಡುವೆಯೂ ಶರಣು ಸಲಗರ್ ಅವರಿಗೆ ಬಸವನಾಡಿನ ಜನತೆ ಶರಣು ಶರಣೆಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಠಿಕಾಣಿ ಬಳಿಕವೂ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ 11,402 ಮತ ಪಡೆದು ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಕೇವಲ 9,457 ಮತ ಪಡೆದು ಮುಖಭಂಗಕ್ಕೆ ಒಳಗಾಗಿದ್ದಾರೆ. ಸ್ವಾಭಿಮಾನಿಗಳ ಚುನಾವಣೆ ಎಂದು ಗುಲ್ಲೆಬ್ಬಿಸಿ ಬಿಜೆಪಿಗೆ ತಕ್ಕಪಾಠ ಕಲಿಸುವುದಾಗಿ ಹೂಂಕರಿಸಿದ್ದ ಖೂಬಾರನ್ನು ಕಲ್ಯಾಣ ಜನ ತಿರಸ್ಕರಿಸಿದ್ದಾರೆ. ಎಂಐಎಂನ ಬಾಬಾ ಚೌಧರಿ 2174 ಮತ ಪಡೆದಿದ್ದು, ಇವರನ್ನು ಹೊರತುಪಡಿಸಿ ಕಣದಲ್ಲಿದ್ದ ಇತರ ಏಳು ಅಭ್ಯರ್ಥಿಗಳು ನಾಲ್ಕಂಕಿ ದಾಟಿಲ್ಲ.
ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ ಪರ್ಫೆಕ್ಟ್ ಕಾರ್ಯತಂತ್ರ, ಆಡಳಿತಾರೂಢ ಪಕ್ಷದ ಜತೆಗೆ ಸಿಎಂ ಯಡಿಯೂರಪ್ಪ ಮೇಲೆ ನಿರ್ಣಾಯಕ ಲಿಂಗಾಯತ, ಮರಾಠಾ ಸಮಾಜ ಇಟ್ಟಿದ್ದ ನಂಬಿಕೆ ಮತ್ತು ಕರೊನಾ ಲಾಕ್​ಡೌನ್ ವೇಳೆ ಶರಣು ಸಲಗರ್ ಮಾಡಿದಂಥ ಜನಪರ ಕೆಲಸಗಳು ಬಿಜೆಪಿ ಗೆಲುವಿನ ಹಿಂದಿನ ಶಕ್ತಿಗಳಾಗಿ ಪರಿಣಮಿಸಿವೆ. ಅನುಭವ ಮಂಟಪ ಕಾಮಗಾರಿಗೆ ಚಾಲನೆ ಸೇರಿ ಚುನಾವಣೆ ಮುಂಚಿನ ಇತರ ಘೊಷಣೆಗಳು ಸಹ ಪೂರಕವಾಗಿವೆ. ಸಂಘಟಿತ ಪ್ರಯತ್ನ, ತಳಮಟ್ಟದಿಂದ ಟೀಮ್ ವರ್ಕ್ ನಡೆಯದಿರುವುದು, ಸಮರ್ಥ ಉಸ್ತುವಾರಿಗಳು ಇರದಿರುವುದು, ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡುವಲ್ಲಿ ಎಡವಿರುವುದು ಕಾಂಗ್ರೆಸ್ ಸೋಲಿಗೆ ಕಾರಣವೆನಿಸಿವೆ. ಕೊರತೆಗಳನ್ನು ನಿವಾರಿಸಿಕೊಳ್ಳು ವಲ್ಲಿ ವರಿಷ್ಠರು ಸಹ ತೋರಿದ ಉದಾಸೀನತೆ ಯಿಂದ 4 ದಶಕದ ಬಳಿಕ ಕಾಂಗ್ರೆಸ್ ಕೈವಶವಾಗಿದ್ದ ಕ್ಷೇತ್ರವೀಗ ಬಿಜೆಪಿ ಪಾಲಾಗಿದೆ.
ಕೈಬಿಡಲಿಲ್ಲ ಲಿಂಗಾಯತ, ಮರಾಠಾ:ಕ್ಷೇತ್ರದ ನಿರ್ಣಾಯಕ ಲಿಂಗಾಯತ, ಮರಾಠಾ ಸಮಾಜ ಕೈಹಿಡಿದಿರುವುದು ಬಿಜೆಪಿ ಹೆಚ್ಚಿನ ಮತಗಳೊಂದಿಗೆ ಜಯ ಸಾಧಿಸಲು ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ 65 ಸಾವಿರ ಲಿಂಗಾಯತ ಮತ್ತು 40 ಸಾವಿರಕ್ಕೂ ಹೆಚ್ಚು ಮರಾಠಾ ಸಮುದಾಯದ ಮತಗಳಿದ್ದವು. ಬಿಜೆಪಿ ಈ ಮತದ ಮೇಲೆ ಭರಪೂರ ಅವಲಂಬಿಸಿತ್ತು. ಶರಣು ಸಲಗರ್ ಲಿಂಗಾಯತ ಸಮಾಜದವರು. ತಮ್ಮ ಸಮಾಜದ ಜತೆಗೆ ಮರಾಠಾ ಸಹ ಬೆನ್ನಿಗೆ ನಿಂತಿರುವುದು ಪ್ಲಸ್ ಎನಿಸಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗಿಂತ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಹೆಚ್ಚು ಮತ ಪಡೆದಿದ್ದಾರೆ. ಇದರ ಲಾಭ ಸಹ ಬಿಜೆಪಿಗೆ ಆಗಿದೆ. ಅಹಿಂದ ವರ್ಗ ಮತ್ತೆ ಕಾಂಗ್ರೆಸ್ ಕೈಹಿಡಿದಿದೆ.
ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಟಿಕೆಟ್ ನೀಡಿ ಶಾಸಕನಾಗಿ ಮಾಡುವ ಏಕೈಕ ಪಕ್ಷ ಬಿಜೆಪಿ ಎಂಬುದಕ್ಕೆ ನಾನೇ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಅಭಿವೃದ್ಧಿಪರ ಆಡಳಿತದ ಗೆಲುವು ಇದು.
|ಶರಣು ಸಲಗರ್ಬಸವಕಲ್ಯಾಣ ಶಾಸಕ
‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + sixteen =
Remember me
