ಬೆಂಗಳೂರು:ಮನುಷ್ಯ ಸಾಧಿಸಲು ಹೊರಟಾಗ ಅಡೆ-ತಡೆ, ಏಳು-ಬೀಳುಗಳು ಸಹಜ. ಆದರೆ ನಮ್ಮ ಗುರಿ ಅಚಲವಾಗಿದ್ದರೆ ಇವುಗಳನ್ನು ಮೆಟ್ಟಿನಿಂತು ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿರುವ ಸಾಧಕ ಎಪಿಐಟಿ ಸಂಸ್ಥಾಪಕ ಮತ್ತು ನಿರ್ದೇಶಕ ಶಶಿಕುಮಾರ್ ತಿಮ್ಮಯ್ಯ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022 ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 40 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೈಸ್ ಡಾಕ್ಟರ್ ಎಂದೇ ಹೆಸರುವಾಸಿಯಾಗಿರುವ ಶಶಿಕುಮಾರ್ ತಿಮ್ಮಯ್ಯ ಸತತ ಪ್ರಯತ್ನದ ನಂತರ ಅಗ್ರಿ ಪ್ರೊಸೆಸ್ ಇನ್ನೋವೇಷನ್ ಆಂಡ್ ಟೆಕ್ನಾಲಜಿ (ಎಪಿಐಟಿ) ಎಂಬ ಸಂಸ್ಥೆ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅಕ್ಕಿ ಸಂಸ್ಕರಣೆಗಾಗಿಯೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಎಪಿಐಟಿ ಕಂಪನಿ ಹುಟ್ಟು ಹಾಕಿದ್ದಾರೆ.
ಜಗತ್ತಿನ ಹಲವು ದೇಶಗಳನ್ನು ಸುತ್ತಿರುವ ಇವರು 40 ಸಮಾವೇಶಗಳಲ್ಲಿ ಅಕ್ಕಿ ಸಂಸ್ಕರಣೆ ಕುರಿತು ಮಾತನಾಡಿದ್ದಾರೆ. 10 ಲಕ್ಷ ರೂ. ಬಂಡವಾಳ ಮತ್ತು 4 ಸಿಬ್ಬಂದಿಯಿಂದ ಆರಂಭವಾದ ಈ ಸಂಸ್ಥೆ ಇಂದು ವಾರ್ಷಿಕ 100 ಕೋಟಿ ರೂ.ವಹಿವಾಟು ನಡೆಸುವಷ್ಟು ಹೆಮ್ಮರವಾಗಿ ಬೆಳೆದು ನೂರಾರು ಮಂದಿ ನೌಕರರಿಗೆ ನೆರಳನ್ನು ನೀಡುತ್ತಿದೆ. ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ 500 ಜನರಿಗೆ ಉದ್ಯೋಗ ನೀಡಲು ಶಶಿಕುಮಾರ್ ಯೋಜನೆ ರೂಪಿಸಿದ್ದಾರೆ. ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಡಿಪ್ಲೊಮಾದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಓದಿದ ಶಶಿಕುಮಾರ್ ರಾಜ್ಯಕ್ಕೆ 4 ನೇ ರ್ಯಾಂಕ್​ನಲ್ಲಿ ಪಾಸಾಗಿದ್ದರು.
ಸಾಧನೆಗಾಗಿ ಸರ್ಕಾರಿ ಕೆಲಸವನ್ನೇ ಬಿಟ್ಟರು:ಸರ್ಕಾರಿ ಕೆಲಸ ಸಿಕ್ಕರೆ ಸಾಕು ನೆಮ್ಮದಿಯಾಗಿ ಇರಬಹುದು ಎಂಬ ಜನರ ಮಧ್ಯೆ ಶಶಿಕುಮಾರ್ ಭಿನ್ನವಾಗಿ ಆಲೋಚನೆ ಮಾಡಿ, ಅಂತಹ ಸರ್ಕಾರಿ ನೌಕರಿಗೆ ಗುಡ್ ಬೈ ಹೇಳಿದವರು. ಸರ್ಕಾರಿ ನೌಕರಿಯಲ್ಲಿಯೇ ಇದ್ದರೆ ನನ್ನ ಜೀವನಕ್ಕೆ ಒಂದು ಚೌಕಟ್ಟು ಇರುತ್ತದೆ. 58 ವರ್ಷದ ಹೊತ್ತಿಗೆ ಏನು ಸಂಪಾದನೆ ಮಾಡುತ್ತೇನೆ ಎಂಬುದನ್ನು ಲೆಕ್ಕಚಾರ ಹಾಕಿದ್ದಾಗ ಜೀವನದಲ್ಲಿ ಏನೂ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಮನಗಂಡಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಸೇವೆ ಮಾಡಬಹುದು. ಆದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೊದಲು ಸಾಧನೆ ಮಾಡಬೇಕು ಆ ನಂತರ ಸೇವೆ ಮಾಡಬೇಕು ಎಂದು ನಿರ್ಧರಿಸಿ ಸರ್ಕಾರಿ ಹುದ್ದೆಯನ್ನು ತೊರೆದಿದ್ದರು.
ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟಿಲ್ಲ:ಕೆಲಸಬಿಟ್ಟು ಸ್ವಂತ ಕಂಪನಿ ಮಾಡಲು ಮುಂದಾದ ಸಂದರ್ಭದಲ್ಲಿಯೇ ನೋಟು ಅಮಾನ್ಯೀಕರಣ ಆಗುತ್ತದೆ. ಸಂಸ್ಥೆ ಆರಂಭಿಸಲು ಹಣದ ಸಹಾಯ ಮಾಡುತ್ತೇವೆ ಎಂದು ಹೇಳಿದ ಹೂಡಿಕೆದಾರರು ಹಣ ಹೂಡಿಕೆ ಮಾಡುವುದರಿಂದ ಹಿಂದೆ ಸರಿಯುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಸಾಕಷ್ಟು ಹರಸಾಹಸ ಪಟ್ಟು ಮತ್ತೊಬ್ಬ ಪಾರ್ಟನರ್ ಜತೆ ಸೇರಿ 10 ಲಕ್ಷ ರೂ. ಹಣ ಹೊಂದಿಸಿ 2016 ರಲ್ಲಿ ಸ್ವಂತ ಎಪಿಐಟಿ ಕಂಪನಿ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ.
ರೈತರಿಗೆ ಹೆಚ್ಚು ಸಹಕಾರಿ:ಅಕ್ಕಿ ಅಥವಾ ಭತ್ತ ಸಂಸ್ಕರಣಾ ಘಟಕದ ವಿಭಾಗದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಜತೆಗೆ ಡಿಜಿಟಲ್ ಸೈನ್ಸ್ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿ ನೀಡುವಲ್ಲಿ ಎಪಿಐಟಿ ಕಂಪನಿಯೇ ಮೊದಲನೆಯದಾಗಿದೆ. ಇದುವರೆಗೂ ಇದನ್ನು ಯಾರೊಬ್ಬರು ಮಾಡಿರಲಿಲ್ಲ. ಹೀಗಾಗಿ ಇದರಿಂದ ಈ ಕಂಪನಿಯ ಬೆಳವಣಿಗೆ ಬಹಳ ವೇಗವಾಗಿ ಆಗಿದೆ. ಭತ್ತದ ಸಂಸ್ಕರಣೆಯಲ್ಲಿ ಬರುವಂತಹ ಸಂಸ್ಕರಣಾಗಾರರು, ಟ್ರೇಡರ್ಸ್, ಗ್ರಾಹಕರು, ರೈತರಿಗೂ ಸಹ ಇದು ತುಂಬಾ ಸಹಕಾರಿಯಾಗಿದೆ. ರೈತರ ಭತ್ತ ಬೆಳವಣಿಗೆಯಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಅದಕ್ಕೆ ಥರ್ಮನಲ್ ಟ್ರೀಟ್​ವೆುಂಟ್ ಮಾಡುವ ಮೂಲಕ ಅಕ್ಕಿಯ ಗುಣಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಭತ್ತವನ್ನು ರೈತರು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೆಚ್ಚು ಸಹಕಾರಿಯಾಗಿದೆ. ರೆಸಿಪಿ ಇಂಟಲಿಜೆನ್ಸಿ ಎಂಬ ಸಾಫ್ಟ್ ವೇರ್ ಮೂಲಕ ಒಂದು ದಿನದ ಭತ್ತವನ್ನು ಒಂದು ವರ್ಷದ ಹಳೆಯ ಭತ್ತವನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಎಪಿಐಟಿ ಹೊಂದಿದೆ. ಇದನ್ನು ಸೂಪರ್ ಎಜಿಂಗ್ ಟೆಕ್ನಾಲಜಿ ಎಂದು ಕರೆಯುತ್ತಾರೆ.
800ಕ್ಕೂ ಅಧಿಕ ಮಂದಿಗೆ ಉದ್ಯೋಗ:ದೊಡ್ಡಬಳ್ಳಾಪುರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಎಪಿಐಟಿ ಪ್ಲಾಂಟ್ ಇದೆ. ನೌಕರರು ಸಿಬ್ಬಂದಿ ಸೇರಿ ಸುಮಾರು 500 ಜನರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಎಪಿಐಟಿ ಆಟೋಮೆಷನ್ ಕಂಪನಿ ತೆರೆದು 70 ಜನಕ್ಕೆ ಕೆಲಸ ನೀಡಲಾಗಿದೆ. ಕನಕಪುರದ ಹಾರೋಹಳ್ಳಿ ಎಪಿಐಟಿ ಮೆಷಿನರಿ ಪ್ರೖೆ.ಲಿ ಸಂಸ್ಥೆ ಸ್ಥಾಪಿಸಲಾಗಿದ್ದು, ಇಲ್ಲಿ ಆಹಾರ ತಯಾರಿಸುವ ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತದೆ. ಇದು ಉದ್ಘಾಟನೆಗೆ ಸಿದ್ಧವಾಗಿದೆ ಇಲ್ಲಿ 150 ಜನರಿಗೆ ಉದ್ಯೋಗ ದೊರೆಯಲಿದೆ. ಆಫ್ರಿಕಾ, ಸೆಂಟ್ರಲ್ ಅಮೆರಿಕಾ, ಬ್ರೆಜಿಲ್ ಸೇರಿ ಹಲವು ದೇಶಗಳಿಗೆ ಎಪಿಐಟಿ ವತಿಯಿಂದ ಪ್ಲಾಂಟ್ ನೀಡಿದ್ದಾರೆ. ಕೃಷ್ಣಮ್ಮಸೇವಾ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ 10 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ 1 ರಿಂದ 10 ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಎಸ್​ಆರ್ ಫಂಡ್​ನಲ್ಲಿ 10 ಲಕ್ಷ ರೂ. ಮೀಸಲಿಟ್ಟು ವಿದ್ಯಾರ್ಥಿಗಳಿಗೆ ನೆರವು ನೀಡಲು ನಿರ್ಧರಿಸಿದ್ದಾರೆ.
ರೈಸ್ ಡಾಕ್ಟರ್ ಶಶಿಕುಮಾರ್ ತಿಮ್ಮಯ್ಯ ಅವರಿಗೆ ನಟಿ ಶರ್ವಿುಳಾ ಮಾಂಡ್ರೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಇದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
