|ಮಂಜುನಾಥ ಕೋಳಿಗುಡ್ಡಬೆಳಗಾವಿ
ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಅಲ್ಲಿನ ಮುಖ್ಯಮಂತ್ರಿ ಬದಲಾವಣೆಯಾಗಿ, ಏಕನಾಥ ಶಿಂಧೆ ಮುಖ್ಯಮಂತ್ರಿಯಾದ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರದ ಗಡಿ ವಿಷಯ ಮುನ್ನೆಲೆಗೆ ಬರುವ ಕುರಿತು ಚರ್ಚೆ ಆರಂಭವಾಗಿದೆ. ಬೆಳಗಾವಿಯಲ್ಲಿ ಸದಾ ಭಾಷಾ ದ್ವೇಷದ ಕಿಡಿ ಹಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಗಡಿ ಕ್ಯಾತೆಯ ಮುಂದಾಳು ಶಿಂಧೆ ಸಿಎಂ ಆದದ್ದು ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಾದಂತಾಗಿದೆ.
ಗಡಿ, ಭಾಷಾ ವಿವಾದದ ಹೋರಾಟದಿಂದಲೇ ರಾಜಕೀಯ ನೆಲೆ ಗಟ್ಟಿ ಮಾಡಿಕೊಂಡಿರುವ ಶಿಂಧೆ 1980ರಲ್ಲಿ ಬೆಳಗಾವಿ ಸೇರಿ ಕೆಲ ನಗರ, ಪಟ್ಟಣ, ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ದೃಢವಾಗಿ ವಾದಿಸಿದ ಶಿವಸೇನಾ ಕಟ್ಟಾಳು. ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯಕ್ಕಿಳಿದರೂ ಶಿಂಧೆಯ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದೇ ಗಡಿ ಕ್ಯಾತೆ ಹೋರಾಟ. 1986ರಲ್ಲಿ ಬೆಳಗಾವಿ ನಗರದಲ್ಲಿ ನಡೆದ ಮಹಾದಂಗೆಯಲ್ಲಿ ಮುಂಚೂಣಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಏಕನಾಥ ಶಿಂಧೆ ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು.
ಪವಾರ ಕೂಡ ಅಖಾಡಕ್ಕಿಳಿಯಬಹುದು:ಕರ್ನಾಟಕ- ಮಹಾರಾಷ್ಟ್ರ ಗಡಿ ವಿಷಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಏಕನಾಥ ಶಿಂಧೆ, ಬಿಜೆಪಿ ಮತ್ತು ಶಿವಸೇನೆ ಹಾಗೂ ಆಘಾಡಿ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಸೇರಿ ಗಡಿ ಹೋರಾಟಗಾರರ ಜತೆ ನಿರಂತರ ಸಭೆ ನಡೆಸಿಕೊಂಡು ಬರುತ್ತಿದ್ದರು. ಇದೀಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಗಡಿ ವಿವಾದದ ಹೋರಾಟ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮಹಾರಾಷ್ಟ್ರದಲ್ಲಿ ಮರಾಠಿಗರನ್ನು ಸೆಳೆಯಲು, ರಾಜಕೀಯ ನೆಲೆ ಗಟ್ಟಿ ಮಾಡಿಕೊಳ್ಳಲು ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಶರದ ಪವಾರ್ ಅವರೂ ಗಡಿ ವಿಷಯ ಮುನ್ನೆಲೆಗೆ ತರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಉದ್ಧವ್ ವ್ಯಘ್ರ, ಶಿಂಧೆ ಭದ್ರ:ಅಘಾಡಿ ಸರ್ಕಾರ ನೆಲಕಚ್ಚಿದ ಬಳಿಕ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವ್ಯಘ್ರರಾಗಿದ್ದಾರೆ. ತಮ್ಮದೇ ಪಕ್ಷದ ಬಹುತೇಕ ಶಾಸಕರು ಬಂಡೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿ ತಮ್ಮ ಸರ್ಕಾರ ಕೆಡವಿರುವುದು ಸಹಜವಾಗಿಯೇ ಅವರನ್ನು ಕಂಗಾಲಾಗಿಸಿದೆ. ಇತ್ತ ಲಾಟರಿ ಹೊಡೆದಂತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸಿಎಂ ಆಗಿರುವ ಏಕನಾಥ ಶಿಂಧೆ ರಾಜಕೀಯವಾಗಿ ಸದ್ಯಕ್ಕೆ ಭದ್ರವಾಗಿದ್ದಾರೆ. ಏಕನಾಥ ಹಾಗೂ ಉದ್ಧವ್ ಭವಿಷ್ಯದ ರಾಜಕೀಯ ನೆಲೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಗಡಿ ವಿವಾದವನ್ನು ಮುನ್ನೆಲೆಗೆ ತಂದರೆ ಅಚ್ಚರಿ ಏನಿಲ್ಲ. ಏಕೆಂದರೆ, ಶಿಂಧೆ ಹಾಗೂ ಉದ್ಧವ್ ಇಬ್ಬರ ರಾಜಕೀಯ ಅರಳಿದ್ದೇ ಮರಾಠಾ ಅಸ್ಮಿತೆಯ ಹೋರಾಟ ಮತ್ತು ಗಡಿ, ಭಾಷೆಯ ವಿವಾದದ ಸುತ್ತಲೇ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಏದುಸಿರು ಬಿಡುತ್ತಿರುವ ಎಂಇಎಸ್:ಇತ್ತ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಏದುಸಿರು ಬಿಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೂಲೆಗುಂಪಾಗಿದೆ. ಬಿಜೆಪಿ ಹಿಂದುತ್ವದ ಅಸ್ತ್ರ ಪ್ರಯೋಗಿಸಿ ಮರಾಠಿಗರನ್ನು ತನ್ನತ್ತ ಸೆಳೆದುಕೊಂಡದ್ದು ಎಂಇಎಸ್​ಗೆ ಭಾರಿ ಹಿನ್ನಡೆ ತಂದಿದೆ. ಸದಾ ಚಾಲ್ತಿಯಲ್ಲಿರಲು ಎಂಇಎಸ್​ಗೆ ಗುರಾಣಿ ಬೇಕು. ಭಾಷಾ ಹಾಗೂ ಗಡಿ ವಿವಾದವೇ ಅದಕ್ಕೆ ಗುರಾಣಿ. ಒಂದು ಕಾಲದಲ್ಲಿ ಇಂಥದ್ದೇ ಹೋರಾಟದ ಮೂಲಕ ತನ್ನ ಸಿದ್ಧಾಂತಕ್ಕೂ ಹೊಂದಾಣಿಕೆಯಂತಿದ್ದ ಏಕನಾಥ ಶಿಂಧೆ ಅವರೇ ಈಗ ಮಹಾ ಸಿಎಂ ಆಗಿರುವುದು ಎಂಇಎಸ್​ಗೆ ಜೀವ ಬಂದಂತಾಗಿದೆ.
ಈಗಾಗಲೆ ಬೆಳಗಾವಿ ನಗರ, ನಿಪ್ಪಾಣಿ, ಖಾನಾಪುರ, ಕಾಗವಾಡ ಸೇರಿ ವಿವಿಧ ಭಾಗಗಳಲ್ಲಿ ಎಂಇಎಸ್ ಮುಖಂಡರು, ಕಾರ್ಯಕರ್ತರು ಮರಾಠಿ ಭಾಷೆಯಲ್ಲಿಯೇ ಸರ್ಕಾರಿ ದಾಖಲೆ ನೀಡಬೇಕು ಎಂದು ಹೋರಾಟ ಆರಂಭಿಸಿದ್ದಾರೆ. ಅದನ್ನು ಮಹಾರಾಷ್ಟ್ರದ ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಮುಖಂಡರು ಕೂಡ ಬೆಂಬಲಿಸಿದ್ದಾರೆ. ಗಡಿ ವಿಚಾರವಾಗಿ ಅವಕಾಶ ಸಿಕ್ಕಾಗಲೆಲ್ಲ ಭಾಷಾ ದ್ವೇಷದ ಕಿಡಿ ಹಚ್ಚುತ್ತ ಬರುತ್ತಿರುವ ಎಂಇಎಸ್​ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇದು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಕನ್ನಡ ಪರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ರಾಜಕೀಯಕ್ಕಾಗಿ ಗಡಿ ವಿಷಯ ಕೆದಕುವುದು ನಿಶ್ಚಿತ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಬಸವರಾಜ ಬೊಮ್ಮಾಯಿ ಸರ್ಕಾರ ಯಾವ ರೀತಿ ಸಿದ್ಧತೆ ಮಾಡಿಕೊಳ್ಳತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಡಿ ವಿಷಯ ನಿರ್ಲಕ್ಷಿ್ಯಕೊಂಡು ಬರುತ್ತಿದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ.
|ಅಶೋಕ ಚಂದರಗಿಕನ್ನಡಪರ ಹೋರಾಟಗಾರ
ನಿರ್ಲಕ್ಷಿಸಿದ ಕರ್ನಾಟಕ ಸರ್ಕಾರ:1950 ರಿಂದಲೂ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳಸುವ ನಿಟ್ಟಿನಲ್ಲಿ ಸಾಹಿತಿಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರಗಳು ಗಡಿ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿಕೊಂಡು ಬರುತ್ತಿವೆ. 2018ರಿಂದ ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಧರ್ಮಸಿಂಗ್ ಸರ್ಕಾರವು ಗಡಿ ಕಾನೂನು ಸಲಹಾ ಸಮಿತಿ ರಚನೆ ಮಾಡಿತ್ತು. ನಂತರ ಬಂದ ಸರ್ಕಾರಗಳು 2015ರಲ್ಲಿ ಗಡಿ ಸಂರಕ್ಷಣಾ ಆಯೋಗ ರಚನೆ ಮಾಡಿತ್ತು. ಆದರೆ, ಅದಕ್ಕೆ ಮುಖ್ಯಸ್ಥರನ್ನು ನೇಮಕ ಮಾಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಬಿಟ್ಟು ಹೊರ ಬರುತ್ತಿಲ್ಲ. ಇದರಿಂದಾಗಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವ ಗುರುತರ ಕೆಲಸ ಸರ್ಕಾರದಮಟ್ಟದಲ್ಲಿ ಆಗುತ್ತಿಲ್ಲ. ಇದು ಎಂಇಎಸ್​ಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ ಎನ್ನುವುದು ಕನ್ನಡಪರ ಹೋರಾಟಗಾರರ ಕಳವಳ.
2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
