
ಶಿವಾನಂದ ತಗಡೂರು,ಬೆಂಗಳೂರು:ಪಶ್ಚಿಮಘಟ್ಟದಲ್ಲಿ ಕಾಡು ಉಳಿಸಿಕೊಳ್ಳುವ ಸಲುವಾಗಿ ರಸ್ತೆ ಅಗಲೀಕರಣ ಬದಲು ಶಿರಾಡಿ ಘಾಟನಲ್ಲಿ ಸುರಂಗ ನಿರ್ಮಾಣ ಮಾಡಲು ಹೊರಟಿದ್ದ ಸರ್ಕಾರದ ಪ್ರಯತ್ನಕ್ಕೆ ಕೇಂದ್ರದ ಸ್ಪಂದನೆ ಸಿಗದೆ ಇರುವುದರಿಂದ ಸುರಂಗ ಮಾರ್ಗ ಇನ್ನಷ್ಟು ವಿಳಂಬವಾಗುವ ಸಾದ್ಯತೆ ಇದೆ.ಮಂಗಳೂರಿನಿಂದ ಬೆಂಗಳೂರು ಸಂಪರ್ಕಕ್ಕೆ ಚತುಸ್ಪಥ ರಸ್ತೆ ಮಾಡಬೇಕು ಎನ್ನುವ ಯೋಜನೆ ಪೂರ್ಣಗೊಂಡಿಲ್ಲ. ಬೆಂಗಳೂರಿನಿಂದ ಸಕಲೇಶಪುರ ತನಕ ಚತುಸ್ಪಥ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ಸಕಲೇಶಪುರದಿಂದ ಮಂಗಳೂರು ತನಕ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ.ಸಕಲೇಶಪುರದಿಂದ ಗುಂಡ್ಯ ತನಕ ಚತುಸ್ಪಥ ರಸ್ತೆಯನ್ನಾಗಿ ಮಾಡಲು ನಾನಾ ಸವಾಲುಗಳು ಎದುರಾಗಿವೆ. ರಸ್ತೆ ಅಗಲೀಕರಣ ಮಾಡುವುದರಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಗಿಡ ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಭಾರಿ ಅನಾವುತವೇ ಆಗಲಿದೆ ಎನ್ನುವ ಕಾರಣಕ್ಕೆ ಸುರಂಗ ಯೋಜನೆಯೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿದ್ದರಿಂದ ಈ ಯೋಜನೆ ರೂಪುಗೊಂಡಿತ್ತು.ಜಪಾನ್‌ನ ಜೈಕಾ ಕಂಪನಿ ಮೂಲಕ ಈ ಸುರಂಗ ಮಾರ್ಗ ನಿರ್ಮಾಣ ಮಾಡಲು ಮುಂದಾಗಿದ್ದು ಮೊದಲು ಸರ್ವೆ ಪ್ರಕಾರ ಡಿಪಿಆರ್ ಮಾಡಿಸಿದಾಗ ಅದಕ್ಕೆ ಸುಮಾರು 3 ಸಾವಿರ ಕೋಟಿ ರೂ ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಖರ್ಚಿನ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದ್ದು, ಕನಿಷ್ಠ 14,000 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಎಲ್ಲಿಂದ ಎಲ್ಲಿಗೆ ಸುರಂಗ?ರಾಷ್ಟ್ರೀಯ ಹೆದ್ದಾರಿ 75 ರಲ್ಲಿ (ಎನ್‌ಎಚ್ 48) 237 ಕಿ.ಮೀ.ನಿಂದ 263 ಕಿ.ಮೀ.ತನಕ (ಮಾರನಹಳ್ಳಿಯಿಂದ ಅಡ್ಡಹೊಳೆ ತನಕ) ರಸ್ತೆ ಸಂಪರ್ಕಕ್ಕೆ 10 ಕಿ.ಮೀ.ಸುರಂಗ ನಿರ್ಮಾಣದ ಅಗತ್ಯವಿದೆ. 13 ಕಡೆ ಪ್ಲೇ ಔವರಗಳು ನಿರ್ಮಾಣ ಆಗಬೇಕಾಗಿದೆ. ಇದಕ್ಕೆ ದುಬಾರಿ ವೆಚ್ಚವಾಗುವುದರಿಂದ ಇದನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಸುರಂಗ ನಿರ್ಮಾಣ ಮಾಡುವುದರಿಂದ ಭೂ ಸ್ವಾಧೀನ ಉಸಾಬರಿಯ ಹೊರೆ ರಾಜ್ಯ ಸರ್ಕಾರಕ್ಕೆ ತಪ್ಪಲಿದೆ.
ಕೇಂದ್ರಕ್ಕೆ ಸಿಎಂ ಮನವಿಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜೂನ್ 28ಕ್ಕೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಾಡಿ ಘಾಟ್ ಸುರಂಗ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ಸುರಂಗ ಯೋಜನೆ ಸಲುವಾಗಿಯೇ ಹಲವಾರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸೂಕ್ತ ಸ್ಪಂಧನೆ ವ್ಯಕ್ತವಾಗಿಲ್ಲ.
ಸುರಂಗ ಮಾರ್ಗವೂ ಅಪಾಯಕಾರಿಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳ ಆತಂಕ. ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪ ಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸುರಂಗ ಯೋಜನೆಯ ಪರ ಮತ್ತು ವಿರುದ್ದವಾಗಿಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಸಂಪೂರ್ಣ ಹಾಳಾದ ರಸ್ತೆಮಂಗಳೂರಿನಿಂದ ಸಕಲೇಶಪುರಕ್ಕೆ ರಸ್ತೆ ಪೂರ್ಣ ಹಾಳಾಗಿ ಹೋಗಿದ್ದು, ನಿತ್ಯ ಪ್ರಯಾಣ ಪ್ರಯಾಣಿಕರಿಗೆ ನರಕ ಯಾತನೆಯಾಗಿದೆ. ಮಳೆಗಾಲ ಶುರುವಾದ ಮೇಲೆ ರಸ್ತೆ ಪರಿಸ್ಥಿತಿ ಇನ್ನೂ ಹೆಚ್ಚಾಗಿ ಹದಗೆಟ್ಟಿದೆ. ಮಂಗಳೂರಿನಿಂದ ಸಕಲೇಶಪುರಕ್ಕೆ 2 ಗಂಟೆಯ ಪ್ರಯಾಣಕ್ಕೆ ಐದಾರು ಗಂಟೆಗಳ ಕಾಲ ವ್ಯರ್ಥವಾಗುತ್ತಿದೆ.
ಕೊಡಗಿನ ಎೆಕ್ಟ್ಕೊಡಗಿನ ಅತಿವೃಷ್ಟಿ ಅವಘಡಗಳ ಬಳಿಕ ಎಚ್ಚೆತ್ತುಕೊಂಡಿರುವ ಮಲೆನಾಡಿನ ಜನ ಶಿರಾಡಿ ಘಾಟ್‌ನಲ್ಲಿ ಚತುಸ್ಪಥ ರಸ್ತೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೊಡಗಿನಲ್ಲಿ ಮಳೆರಾಯನ ಆರ್ಭಟಕ್ಕೆ ಗುಡ್ಡಗಳೇ ಕುಸಿದು ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದನ್ನು ನೋಡಿರುವ ಜನ, ಮುಂದೊಂದು ದಿನ ಶಿರಾಡಿ ಘಾಟ್‌ನಲ್ಲಿಯೂ ನಡೆಯಬಹುದು ಎನ್ನುವ ಆತಂಕ ಎದುರಿಸುತ್ತಿದ್ದಾರೆ.
ಏನೇನಾಗಬಹುದು?ಶಿರಾಡಿ ಘಾಟ್‌ನಲ್ಲಿ ಮಾರನಹಳ್ಳಿಯಿಂದ ಮುಂದಕ್ಕೆ ತೀವ್ರವಾದ ತಿರುವು ಮತ್ತು ಗುಡ್ಡಗಳಿವೆ. ಹೊಸದಾಗಿ ಇನ್ನು ಎರಡು ಪಥದ ರಸ್ತೆಯನ್ನು ನಿರ್ಮಾಣ ಮಾಡಬೇಕಾಗಿರುವುದರಿಂದ ಕನಿಷ್ಠ 100 ರಿಂದ 200 ಅಡಿಯಷ್ಟು ಅಗಲವಾಗಿ ಗುಡ್ಡವನ್ನು ಕತ್ತರಿಸಿ ತೆಗೆಯಬೇಕಾಗಿದೆ. ಗುಡ್ಡಗಳನ್ನು ಕತ್ತರಿಸುವುದರಿಂದ ಮುಂದೆ ಕೊಡಗಿನಂತೆಯೇ ಭಾರಿ ಭೂ ಕುಸಿತವಾಗಬಹುದು ಎನ್ನುವುದು ಈಗ ಕಾಡುತ್ತಿರುವ ಮತ್ತೊಂದು ಸವಾಲು.
*ಪಶ್ಚಿಮಘಟ್ಟದಲ್ಲಿ ರಸ್ತೆ ಅಗಲೀಕರಣ ಮಡುವುದಾಗಲಿ, ಸುರಂಗ ಮಾರ್ಗ ನಿರ್ಮಾಣ ಮಾಡುವುದಾಗಲಿ ಎರಡೂ ಪರಿಸರಕ್ಕೆ ಹಾನಿ ಮಾಡುವಂತ ಕ್ರಮಗಳೇ ಆಗಿವೆ. ಆತುರಾತುರದಲ್ಲಿ ಸುರಂಗ ನಿರ್ಮಾಣ ಪ್ರಯತ್ನ ಸರಿಯಲ್ಲ. ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿ ಪರಿಸರ ಪ್ರಿಯರ ಜೊತೆಗೆ ಸಮಾಲೋಚಿಸಿ ಕ್ರಮ ವಹಿಸುವುದು ಸೂಕ್ತ.-ಕೇಸರಿ ಹರವೂ, ಪರಿಸರವಾದಿ
*ಶಿರಾಡಿಯಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಚತುಸ್ಫಥ ರಸ್ತೆಗಾಗಿ ಹಲವು ಗುಡ್ಡಗಳನ್ನು ಕತ್ತರಿಸಿ ರಸ್ತೆ ವಿಸ್ತರಿಸಬೇಕಾಗುವುದರಿಂದ 2 ಲಕ್ಷಕ್ಕೂ ಹೆಚ್ಚು ಮರ ಗಿಡಗಳಿಗೆ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ಆತುರ ತೋರುವುದು ಸರಿಯಲ್ಲ.-ಕಿಶೋರ್ ಕುಮಾರ್,ಅಧ್ಯಕ್ಷರು, ಮಲೆನಾಡು ಜನಪರ ಹೋರಾಟ ಸಮಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 14 =
Remember me
